Site icon Vistara News

ಒಂದರ ಜತೆಗೆ ಮೂರನ್ನೂ ಆಚರಿಸಿ ಎಂದ ಬಿಜೆಪಿ ವರಿಷ್ಠರು: ಸಿದ್ದರಾಮೋತ್ಸವ ರೀತಿ ಆಗದಂತೆ ಎಚ್ಚರ

siddaramotsava and janotsava

ಬೆಂಗಳೂರು: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ʻಜನೋತ್ಸವʼ ಆಚರಣೆಗೆ ಸಿದ್ಧತೆ ನಡೆದಿದೆ. ವಿಧಾನಸಭೆ ಚುನಾವಣೆಗೂ ಮುನ್ನ ತಮ್ಮ ಆಡಳಿತದ ಕುರಿತು ಧನಾತ್ಮಕ ಭಾವನೆಯನ್ನು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾದರೂ, ಸಿದ್ದರಾಮೋತ್ಸವ ರೀತಿ ಇದು ಆಗದಿರಲಿ ಎಂಬ ಎಚ್ಚರಿಕೆಯನ್ನು ಬಿಜೆಪಿ ವರಿಷ್ಠರು ವಹಿಸಿದ್ದಾರೆ.

ಸರ್ಕಾರಕ್ಕೆ ಒಂದು ವರ್ಷ ಸಂದ ದಿನವನ್ನು ದೊಡ್ಡಬಳ್ಳಾಪುರದಲ್ಲಿ ಆಚರಣೆ ಮಾಡಲಾಗುತ್ತದೆ. ಜುಲೈ 28ರಂದು ನಡೆಯುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿತ್ತು. ಮೋದಿ ಆಗಮನ ಖಚಿತ ಎಂದೂ ಹೇಳಲಾಗಿತ್ತು. ಅದೇ ಕಾರ್ಯಕ್ರಮದ ಮೂಲಕ ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಲಾಗುತ್ತದೆ ಎಂದು ತಿಳಿಸಲಾಗಿತ್ತು.

ಇದೀಗ ಮೂರು ದಿನದ ಪ್ರವಾಸಕ್ಕೆ ನವ ದೆಹಲಿಯಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಈ ಕುರಿತು ಖಚಿತಪಡಿಸಿಕೊಳ್ಳಲು ಮುಂದಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬದಲಿಗೆ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಪ್ರವಾಸ ಖಚಿತವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸಿದ್ದರಾಮೋತ್ಸವದ ರೀತಿ ಬೇಡ

ಬಸವರಾಜ ಬೊಮ್ಮಾಯಿ ಅವರ ಆಡಳಿತಕ್ಕೆ ಒಂದು ವರ್ಷವಾಗುತ್ತಿದೆ ಎಂಬ ಕಾರ್ಯಕ್ರಮ ರೂಪಿಸಲು ನಿರ್ಧಾರ ಮಾಡಲಾಯಿತು. ಈ ಸಮಯದಲ್ಲೇ ಕೆಲವು ಬಿಜೆಪಿ ವರಿಷ್ಠರು ಈ ಕುರಿತು ಎಚ್ಚರಿಸಿದ್ದರು. ಈಗಾಗಲೆ ಕಾಂಗ್ರೆಸ್‌ನಲ್ಲಿ ಸಿದ್ದರಾಮೋತ್ಸವ ಆಚರಣೆ ಮಾಡುವ ವಿಚಾರ ಚಾಲ್ತಿಯಲ್ಲಿದೆ. ಇದರ ಕುರಿತು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ನಡುವೆ ವೈಮನಸ್ಯಕ್ಕೆ ಕಾರಣವಾಗಿದೆ. ಬಿಜೆಪಿಯಲ್ಲಿ ಆ ರೀತಿ ಒಡಕು ಮೂಡುವುದಿಲ್ಲವಾದರೂ, ನಾವೂ ಹೀಗೆಯೇ ಮಾಡಿದರೆ ಸಿದ್ದರಾಮೋತ್ಸವವನ್ನು ಟೀಕೆ ಮಾಡುವ ಅವಕಾಶವನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ ಎಂದು ಬಿಜೆಪಿ ಮುಖಂಡರು ಚಿಂತಿಸಿದ್ದಾರೆ.

ಇದನ್ನೂ ಓದಿ | ಸಿದ್ದರಾಮೋತ್ಸವ Vs ಶಿವಕುಮಾರೋತ್ಸವ? ಸಿದ್ದು, ಡಿಕೆಶಿ ಬೆಂಬಲಿಗರ ಪೈಪೋಟಿ ಶುರು

ಹೇಗಿದ್ದರೂ ಮುಂದಿನ ಚುನಾವಣೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೆ ಎದುರಿಸಲಾಗುತ್ತದೆ ಎಂದು ನಿರ್ಧರಿಸಲಾಗಿದೆ. ಇದರ ಜತೆಗೆ ಬಿಜೆಪಿ ಸರ್ಕಾರದ ಮೂರು ವರ್ಷದ ಆಚರಣೆಯನ್ನೂ ಸೇರಿಸಿಕೊಂಡರೆ, ಒಟ್ಟಾರೆ ಅನೇಕ ಯೋಜನೆಗಳ ಉದಾಹರಣೆಯನ್ನು ಜನರ ಮುಂದೆ ಇಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಬಿ.ಎಸ್‌. ಯಡಿಯೂರಪ್ಪ ಅವರ ಆಡಳಿತದ ಉತ್ತಮ ಅಂಶಗಳನ್ನೂ ಮುನ್ನೆಲೆಗೆ ತರಬಹುದು. ಯಡಿಯೂರಪ್ಪ ಅವರನ್ನು ಪಕ್ಷ ಕೈಬಿಟ್ಟಿಲ್ಲ ಎಂಬ ಸಂದೇಶವನ್ನು ರವಾನೆ ಮಾಡಿದಂತಾಗುತ್ತದೆ. ಹಾಗೂ ಪಕ್ಷದಲ್ಲಿ ವ್ಯಕ್ತಿಪೂಜೆ ಇಲ್ಲ ಎಂಬುದನ್ನೂ ಸ್ಪಷ್ಟಪಡಿಸಿದಂತಾಗುತ್ತದೆ ಎಂದು ಸಲಹೆ ನೀಡಲಾಗಿತ್ತು ಎಂದು ಬಿಜೆಪಿ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

ಈ ಕುರಿತು ನವ ದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಬಿಜೆಪಿ ವರಿಷ್ಠರು ಚರ್ಚಿಸಿದ್ದಾರೆ. ಎಲ್ಲ ದೃಷ್ಟಿಕೋನದಲ್ಲಿಯೂ, ಸರ್ಕಾರದ ಮೂರು ವರ್ಷ ಹಾಗೂ ನಿಮ್ಮ ಆಡಳಿತದ ಒಂದು ವರ್ಷವನ್ನು ಒಟ್ಟಾಗಿ ಆಚರಿಸುವುದು ಉತ್ತಮ ಎಂದಿದ್ದಾರೆ. ನವ ದೆಹಲಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಲು ಬಂದಾಗ ಬೊಮ್ಮಾಯಿ ಅವರಿಗೆ ʻಸರ್ಕಾರದ ಒಂದು ವರ್ಷಕ್ಕೆ ಮೋದಿಯವರು ಬರುತ್ತಾರಾ?ʼ ಎಂದು ಪ್ರಶ್ನೆ ಕೇಳಲಾಯಿತು. ಕೂಡಲೆ ಇದನ್ನು ಸರಿಪಡಿಸಿದ ಬೊಮ್ಮಾಯಿ, ನಮ್ಮ ಆಡಳಿತದ ಒಂದು ವರ್ಷ ಮಾತ್ರವಲ್ಲ, ಅದು ಬಿಜೆಪಿ ಆಡಳಿತದ ಮೂರು ವರ್ಷದ ಕಾರ್ಯಕ್ರಮ ಎಂದರು.

ಕಾರ್ಯಕ್ರಮದ ಕುರಿತು ಪ್ರತಿಕ್ರಿಯೆ ನೀಡಿರುವ ಇಂಧನ ಸಚಿವ ವಿ. ಸುನಿಲ್‌ಕುಮಾರ್‌, ಜನೋತ್ಸವದ ಮೂಲಕ ಜನರ ಬಳಿ ಹೋಗುವ ಪ್ರಯತ್ನ ಮಾಡುತ್ತಿದ್ದೇವೆ. ಬಿಜೆಪಿಗೂ ಕಾಂಗ್ರೆಸ್‌ಗೂ ಇರುವ ವ್ಯತ್ಯಾಸ ಇಷ್ಟೇ. ನಾವು ಜನೋತ್ಸವ ಮಾಡುತ್ತೇವೆ, ಕಾಂಗ್ರೆಸ್‌ನವರು ವ್ಯಕ್ತಿಯ ಉತ್ಸವ ಮಾಡುತ್ತಿದ್ದಾರೆ. ನಮ್ಮದು ಜನೋತ್ಸವ, ಕಾಂಗ್ರೆಸ್‌ನದ್ದು ಸಿದ್ದರಾಮೋತ್ಸವ. ಬಿಜೆಪಿಯ ಜನೋತ್ಸವವನ್ನು ರಾಜ್ಯದ ಜನ ಒಪ್ಪಿಕೊಳ್ಳುತ್ತಾರೆ ಎಂದಿದ್ದಾರೆ.

ಲೋಗೊ ಬಿಡುಗಡೆ

ಬಿಜೆಪಿ ವರಿಷ್ಠರು ಸೂಚನೆ ನೀಡಿದಂತೆಯೇ ಇದೀಗ ಕಾರ್ಯಕ್ರಮದ ಲೋಗೊ ಅನಾವರಣ ಮಾಡಲಾಗಿದೆ. ಇದರಲ್ಲಿ ಮುಖ್ಯವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರಿದ್ದಾರೆ. ಹಿನ್ನೆಲೆಯಲ್ಲಿ ಒಂದು ವರ್ಷ ಹಾಗೂ ಮೂರು ವರ್ಷ ಎಂಬುದನ್ನು ಬಿಂಬಿಸಲಾಗಿದೆ. ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕ. ಇದು ನಮ್ಮ ಸಂಕಲ್ಪ ಎಂದು ಹೇಳಲಾಗಿದೆ.

ಇದನ್ನೂ ಓದಿ | ಸಿದ್ದರಾಮೋತ್ಸವಕ್ಕೆ ಡಿ.ಕೆ. ಶಿವಕುಮಾರ್‌ ಅತಿಥಿ ಅಷ್ಟೆ: ಅಧ್ಯಕ್ಷರನ್ನು ದೂರವಿಟ್ಟ ಸಮಿತಿ

Exit mobile version