Site icon Vistara News

Social Media Harrassment : ಬಿಜೆಪಿ ಪರ ಪೋಸ್ಟ್‌ ಹಾಕುವವರಿಗೆ ಪೊಲೀಸ್‌ ದೌರ್ಜನ್ಯ, ಬೆದರಿಕೆ ; ಡಿಜಿಪಿಗೆ ದೂರು

BJP delegation meets DGP

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪರ ಸಕ್ರಿಯರಾಗಿರುವ ಕಾರ್ಯಕರ್ತರ ಮೇಲೆ (Social Media Harrassment) ಪೊಲೀಸರು ದೌರ್ಜನ್ಯ (Police atrocity) ನಡೆಸುತ್ತಿದ್ದು, ಇದನ್ನು ತಕ್ಷಣವೇ ನಿಲ್ಲಿಸಬೇಕು. ಏನೇ ಇದ್ದರೂ ನೋಟಿಸ್‌ ನೀಡಿ ವಿವರಣೆ ಪಡೆಯಬೇಕು ಎಂದು ಬಿಜೆಪಿ (BJP Karnataka) ರಾಜ್ಯದ ಪೊಲೀಸ್‌ ಮಹಾನಿರ್ದೇಶಕರಿಗೆ (Director General of Police) ಮನವಿ ಮಾಡಿದೆ. ಪಕ್ಷದ ಕಾರ್ಯಕರ್ತರ ಮೇಲಿನ ಈ ಕ್ರಮಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ, ಕಾರ್ಯಕರ್ತರ ಮನೆಗಳಿಗೆ ನುಗ್ಗಿ ಬೆದರಿಕೆ ಹಾಕುವುದು ಅಕ್ಷಮ್ಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ (N Ravikumar) ಅವರ ನೇತೃತ್ವದಲ್ಲಿ ಡಿಜಿಪಿ ಅವರಿಗೆ ಮನವಿ ಸಲ್ಲಿಸಲಾಗಿದೆ.

ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಹೀಗಾಗಿದೆ ಎಂದು ಆಕ್ಷೇಪಿಸಿದರು. ಪೊಲೀಸರು ತಮ್ಮ ಕರ್ತವ್ಯ ಹೊರತುಪಡಿಸಿ ಫೋನ್‌ ಮಾಡಿ ಬೆದರಿಸುವುದು, ಅನಗತ್ಯವಾಗಿ ಎಫ್‍ಐಆರ್ ಹಾಕುವುದನ್ನು ತಪ್ಪಿಸಲು ಸೂಚಿಸುವಂತೆ ಕೋರಿದ್ದಾಗಿ ಹೇಳಿದರು.

ಕಾರ್ಯಕರ್ತರು ಮತ್ತು ಮಾಧ್ಯಮದವರನ್ನು ಬೆದರಿಸದಂತೆ ತಿಳಿಸಿದ್ದೇವೆ. ಏನೇ ಇದ್ದರೂ ಪಕ್ಷಕ್ಕೆ ನೋಟಿಸ್ ಕೊಡಲು ಕೋರಿದ್ದೇವೆ ಎಂದರು. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಡಿಜಿಪಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಮಾಧ್ಯಮದವರು ಮತ್ತು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸುವುದು, ಅವರ ತನಿಖೆ ಮಾಡುವುದು, ಮನೆಗೆ ಹೋಗಿ ಅವರನ್ನು ಕರೆತಂದು ಮೂರ್ನಾಲ್ಕು ಗಂಟೆ, ಕೆಲವೊಮ್ಮೆ 24 ಗಂಟೆ, ಎರಡು ದಿನಗಳ ಕಾಲ ಎಫ್‍ಐಆರ್ ಹಾಕದೇ ಸ್ಟೇಷನ್‍ನಲ್ಲಿ ಕುಳಿತಿರುವಂತೆ ಮಾಡಿದ ಕುರಿತು ಗಮನ ಸೆಳೆಯಲಾಗಿದೆ. ಶಕುಂತಲಾ ಎಂಬ ಕಾರ್ಯಕರ್ತೆಯನ್ನು ತುಮಕೂರಿನಿಂದ ಕರೆತಂದು ಮರುದಿನ ಮಧ್ಯಾಹ್ನದವರೆಗೆ ತನಿಖೆ ಮಾಡಿದ ಕುರಿತು ವಿವರಿಸಲಾಗಿದೆ ಎಂದರು. ಹಾಸನದಿಂದ ಕೆಲವು ಕಾರ್ಯಕರ್ತರಿಗೂ ಇದೇರೀತಿ ಮಾಡಿದ್ದಾರೆ. ಚಿತ್ತಾಪುರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಣಿಕಂಠ ಅವರ ವಿರುದ್ಧ ಅನಪೇಕ್ಷಿತ ಕೇಸು ಹಾಕುತ್ತಿರುವ ಕುರಿತು ತಿಳಿಸಲಾಗಿದೆ ಎಂದು ತಿಳಿಸಿದರು.

ಶಾಸಕ ರವಿ ಸುಬ್ರಹ್ಮಣ್ಯ ಅವರು ಮಾತನಾಡಿ, ನಮ್ಮ ಕಾರ್ಯಕರ್ತರನ್ನು ಸಮಾಜವಿರೋಧಿ, ಭಯೋತ್ಪಾದಕ ಎಂಬಂತೆ ನೋಡುತ್ತಿರುವುದನ್ನು ಡಿಜಿಪಿ ಗಮನಕ್ಕೆ ತಂದಿದ್ದೇವೆ. ಕಾನೂನಿನ ಚೌಕಟ್ಟಿನಲ್ಲೇ ಕ್ರಮ ಕೈಗೊಳ್ಳಿ. ರಾತ್ರೋರಾತ್ರಿ ಕಿರುಕುಳ ಕೊಡದಿರಿ ಎಂದು ತಿಳಿಸಿದ್ದೇವೆ ಎಂದರು.

ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಬಿಜೆಪಿ ಮುಖಂಡ ಭಾಸ್ಕರ ರಾವ್ ಅವರು ಮಾತನಾಡಿ, ಪೊಲೀಸರು ಅನಪೇಕ್ಷಿತ ಒತ್ತಡ ಹೇರದಂತೆ ಸುತ್ತೋಲೆ ಹೊರಡಿಸುವುದಾಗಿ ಡಿಜಿಪಿ ತಿಳಿಸಿದ್ದಾರೆ ಎಂದರು. ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಅವರು ಮಾತನಾಡಿ, ಪೊಲೀಸರ ದಮನಕಾರಿ ನೀತಿಯ ಕುರಿತು ಗಮನ ಸೆಳೆದಿದ್ದೇವೆ ಎಂದು ವಿವರಿಸಿದರು.

ಈ ನಿಯೋಗದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ರಾಜ್ಯ ಕಾರ್ಯಕಾರಿಣಿ ಸದಸ್ಯರು ಮತ್ತು ಬೆಂಗಳೂರು ವಕೀಲ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಚಾಮರಾಜಪೇಟೆ ಪರಾಜಿತ ಅಭ್ಯರ್ಥಿ ಭಾಸ್ಕರ್ ರಾವ್, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಯೋಗೇಂದ್ರ ಹೂಡಾಘಟ್ಟ, ಸಾಮಾಜಿಕ ಜಾಲತಾಣ ಪ್ರಕೋಷ್ಠದ ರಾಜ್ಯ ಸಂಚಾಲಕ ವಿಕಾಸ್ ಕುಮಾರ್, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ಸಾಮಾಜಿಕ ಜಾಲತಾಣ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ನರೇಂದ್ರ ಮೂರ್ತಿ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಪ್ರಶಾಂತ್ ಕೆಡಂಜಿ ಅವರು ಉಪಸ್ಥಿತರಿದ್ದರು.

ದೂರಿನಲ್ಲಿರುವ ಪ್ರಮುಖ ಅಂಶಗಳೇನು?

  1. ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದ ಸರ್ಕಾರದ ಆದೇಶದ ಮೇರೆಗೆ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ವಿರುದ್ಧ ರಾಜ್ಯ ಪೊಲೀಸರಿಂದ ಬೆದರಿಕೆ, ಕಿರುಕುಳ ಮತ್ತು ದೌರ್ಜನ್ಯ ನಡೆಸಲಾಗುತ್ತಿದೆ.
  2. ಬಿಜೆಪಿ ಕಾರ್ಯಕರ್ತರನ್ನು ಬೆದರಿಸಲು ಮತ್ತು ಕಿರುಕುಳ ನೀಡಲು ರಾಜಕೀಯ ಪ್ರೇರಿತವಾಗಿರುವ ನಾನ್‌ ಕಾಗ್ನಿಜಬಲ್ (non cognizable), ಜಾಮೀನು ಮತ್ತು ಜಾಮೀನು ರಹಿತ ಪ್ರಕರಣಗಳನ್ನು ರಾಜ್ಯದಾದ್ಯಂತ ದಾಖಲಿಸಲಾಗುತ್ತಿದೆ.
  3. ಪೊಲೀಸರು ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಲು ಧಾವಿಸುತ್ತಿದ್ದು, ತಕ್ಷಣದಲ್ಲಿ ಬಂಧನ ಮಾಡುತ್ತಿದ್ದಾರೆ. ಪೊಲೀಸರು ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಅರ್ಧ ರಾತ್ರಿಯಲ್ಲಿ ಸಾಮಾನ್ಯ ಉಡುಪಿನಲ್ಲಿ ಒಂದು ಪಕ್ಷದ ಸದಸ್ಯರನ್ನು ಬಂಧಿಸಿ ಕರೆದೊಯ್ಯುತ್ತಿದ್ದಾರೆ.
  4. ಕಾಂಗ್ರೆಸ್‌ ಸರ್ಕಾರ ರಾಜಕೀಯ ಸೇಡು ತೀರಿಸಿಕೊಳ್ಳಲು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ.
  5. ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟರ್‌ಗಳನ್ನು, ಭಯೋತ್ಪಾದನೆ ಮತ್ತು ರಾಷ್ಟ್ರೀಯ ವಿರೋಧಿ ಪ್ರಕರಣಗಳೆಂದು ತಪ್ಪಾಗಿ ಪರಿಗಣಿಸಿ, ಪೊಲೀಸರು ಪಕ್ಷದ ಕಾರ್ಯಕರ್ತರ ಮನೆಗೆ ನುಗ್ಗಿ ಅವರನ್ನು ವಾಹನಗಳಲ್ಲಿ ಕೂಡಿಹಾಕಿ ಅಜ್ಞಾತ ಸ್ಥಳಗಳಿಗೆ ಕರೆದೊಯ್ದು ಅಕ್ರಮ ಬಂಧನದಲ್ಲಿ ಇರಿಸಿ, ಥಳಿಸಿ, ಬೆದರಿಕೆಯನ್ನೊಡ್ಡಿ ಸುಳ್ಳು ಹೇಳಿಕೆಗಳನ್ನು ದಾಖಲಿಸಿ ಚಿತ್ರಹಿಂಸೆ ನೀಡುತಿದ್ದಾರೆ.
  6. ರಾಜಕೀಯ ಚಟುವಟಿಕೆಗಳನ್ನು ರಾಜಕೀಯವಾಗಿ ಎದುರಿಸಬೇಕೇ ಹೊರತು ಪೊಲೀಸ್‌ ಇಲಾಖೆಯ ಮೂಲಕ ಅಲ್ಲ, ಈ ನಡವಳಿಕೆಯನ್ನು ವೀರೋಧಿಸಿದಾಗ, ಕಿರಿಯ ಅಧಿಕಾರಿಗಳು, ತಾವು ಹಿರಿಯ ಅಧಿಕಾರಿಗಳ ಆದೇಶವನ್ನು ಪಾಲಿಸುತ್ತಿರುವುದಾಗಿ, ತಮ್ಮ ಅಸಹಾಯಕತೆಯನ್ನು ತೋರಿಸುತ್ತಾರೆ, ಕಾನೂನಿನ ನಿಯಮ ಮತ್ತು ಕಾರ್ಯವಿಧಾನವನ್ನು ಎತ್ತಿಹಿಡಿಯಲಾಗುತ್ತಿಲ್ಲ. ಈ ರೀತಿಯ ಪೊಲೀಸ್ ಕ್ರಮವು ತುರ್ತು ಪರಿಸ್ಥಿತಿ, ಟಾಡಾ ಮತ್ತು ರಾಷ್ಟ್ರವಿರೋಧಿ ಚಟುವಟಿಕೆಗಳ ಸಮಯಕ್ಕೆ ಹೋಲಿಕೆಯಾಗುತ್ತದೆ.
  7. ಕರ್ನಾಟಕದಾದ್ಯಂತ ಕೆಲವು ಬಿಜೆಪಿ ಕಾರ್ಯಕರ್ತರನ್ನು ದೂರವಾಣಿ ಮೂಲಕ ಠಾಣೆಗೆ ಕರೆಸಲಾಗುತ್ತಿದ್ದು, ಅವರನ್ನು ಕರೆದೊಯ್ಯಲು ಸಿಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಗಳಲ್ಲಿ ಮತ್ತು ಇತರ ನಗರಗಳಲ್ಲಿ ಸಿಸಿಬಿಯ ಉಪಸ್ಥಿತಿ ಮತ್ತು ಚಟುವಟಿಕೆಯ ಬಗ್ಗೆ ಸ್ಥಳೀಯ ಪೋಲೀಸರ ಗಮನಕ್ಕೆ ತಾರದೇ ಕಾರ್ಯತಂತ್ರ ನಡೆಸುತ್ತಿದ್ದಾರೆ.
  8. ಕಾಂಗ್ರೆಸ್ ಪಕ್ಷದ ರಾಜಕಾರಣಿಗಳು, ಸಹಕಾರ ನೀಡದಿರುವ ಕೆಲವು ಅಧಿಕಾರಿಗಳ ವರ್ಗಾವಣೆ ಹಾಗೂ ಶಿಕ್ಷೆಗೆ ಒತ್ತಾಯಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ದಯವಿಟ್ಟು ನಿಮ್ಮ ವೃತ್ತಿಪರ ನಡವಳಿಕೆಯನ್ನು ತೋರಿಸಿ ಮತ್ತು ರಾಜಕೀಯ ಒತ್ತಡ ಹಾಗೂ ಪ್ರಭಾವದಿಂದ ಕೆಲಸ ಮಾಡಬಾರದೆಂದು ವಿನಂತಿಸಿಕೊಳ್ಳುತ್ತೇವೆ.
  9. ಈ ದೂರುಗಳನ್ನು ಸರಿಪಡಿಸುವ ಕ್ರಮಗಳನ್ನು ಅನುಸರಿಸದಿದ್ದರೆ ಸಂವಿಧಾನದ ಅಡಿಯಲ್ಲಿ ನೀಡಿರುವ ಸ್ವಾತಂತ್ರ್ಯ ಮತ್ತು ರಕ್ಷಣೆಯನ್ನು ಕಾಪಾಡಲು ರಾಜ್ಯಾದ್ಯಂತ ಆಂದೋಲನವನ್ನು ಪ್ರಾರಂಭಿಸಲಾಗುವುದು ಎಂದು ನಾವು ಪುನರುಚ್ಚರಿಸುತ್ತೇವೆ.

ಇದನ್ನೂ ಓದಿ : India vs Bharat row: ಚುನಾವಣೆ ಹತ್ತಿರ ಬಂದಿದ್ರಿಂದ ಬಿಜೆಪಿಯವರು ಭಾವನಾತ್ಮಕ ವಿಚಾರ ಕೆದಕುತ್ತಿದ್ದಾರೆ: ಸಿದ್ದರಾಮಯ್ಯ

Exit mobile version