Site icon Vistara News

ಸೆಪ್ಟೆಂಬರ್‌ನ ಮೊದಲ 9 ದಿನದಲ್ಲಿ ನಾಲ್ಕು ಬಿಜೆಪಿ ನಾಯಕರು ರಾಜ್ಯಕ್ಕೆ, ಮುಂದಿನ ಸರದಿ ರಾಹುಲ್‌ ಗಾಂಧಿ

Congress BJP ಕಾಂಗ್ರೆಸ್‌ ಟ್ವೀಟ್‌

ಬೆಂಗಳೂರು: ರಾಜ್ಯದಲ್ಲಿ ೨೦೨೩ರ ಅಸೆಂಬ್ಲಿ ಚುನಾವಣೆಯ ರಣ ಕಹಳೆ ಸೆಪ್ಟೆಂಬರ್‌ ಮೊದಲ ವಾರದಲ್ಲೇ ಮೊಳಗುವುದು ಖಚಿತವಾಗಿದೆ. ಸೆಪ್ಟೆಂಬರ್‌ ತಿಂಗಳ ಮೊದಲ ಒಂಬತ್ತು ದಿನಗಳ ಅವಧಿಯಲ್ಲಿ ಬಿಜೆಪಿಯ ನಾಲ್ವರು ರಾಜ್ಯ ಮಟ್ಟದ ನಾಯಕರು ರಾಜ್ಯಕ್ಕೆ ಆಗಮಿಸಲಿದ್ದಾರೆ. ತಿಂಗಳ ಕೊನೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ರಾಜ್ಯದಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಗೆ ದೊಡ್ಡ ಮಟ್ಟದ ಚುನಾವಣಾ ಪ್ರಚಾರದ ತೆರೆ ಮೇಲೇಳಲಿದೆ. ಬಿಜೆಪಿ ನಾಯಕರಂತೂ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ರಾಜ್ಯಕ್ಕೆ ಬರುತ್ತಿದ್ದು, ಎಲೆಕ್ಷನ್‌ ಟ್ರೆಂಡ್‌ ಸೆಟ್‌ ಮಾಡಲಿದ್ದಾರೆ.

ಪ್ಟೆಂಬರ್‌ ೧ರಂದು ಯೋಗಿ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಅವರು ನೆಲಮಂಗಲದಲ್ಲಿ ಧರ್ಮಸ್ಥಳ ಎಸ್‌ಡಿಎಂಇ ಸೊಸೈಟಿ ವತಿಯಿಂದ ಸ್ಥಾಪಿಲಾಗಿರುವ ನಿಸರ್ಗದತ್ತ ಆರೋಗ್ಯ ಕ್ಷೇಮಪಾಲನಾ ಕೇಂದ್ರವಾದ ಕ್ಷೇಮವನದ ಉದ್ಘಾಟನೆಗಾಗಿ ಅವರು ಆಗಮಿಸುತ್ತಿದ್ದಾರೆ. ಜತೆಗೆ ಇಲ್ಲಿನ ಕೆಲವು ದೇವಾಲಯಗಳಿಗೂ ಭೇಟಿ ನೀಡಲಿದ್ದಾರೆ. ಅವರದ್ದು ಅಧಿಕೃತ ರಾಜಕೀಯ ಕಾರ್ಯಕ್ರಮಗಳು ಇಲ್ಲದೆ ಇದ್ದರೂ ಅವರು ಬಂದಾಗಲೇ ಒಂದು ಹವಾ ಸೃಷ್ಟಿಯಾಗುತ್ತದೆ ಎಂದು ಬಿಜೆಪಿ ನಂಬಿದೆ.

ಮಂಗಳೂರಿನಲ್ಲಿ ಪ್ರಧಾನಿ ಮೋದಿ
ಸೆಪ್ಟೆಂಬರ್ ೨ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಇಲ್ಲಿ ನಡೆಯುವ ಬೃಹತ್‌ ಸಮಾವೇಶದಲ್ಲಿ ಮೋದಿ ಅವರು ಕೇಂದ್ರ ರಾಜ್ಯ ಸರ್ಕಾರದ ಸಾಧನೆ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವುದು ಖಚಿತವಾಗಿದೆ.

ಸೆಪ್ಟೆಂಬರ್‌ ೮ರಂದು ಜೆ.ಪಿ ನಡ್ಡಾ
ದೊಡ್ಡಬಳ್ಳಾಪುರದಲ್ಲಿ ಸೆಪ್ಟೆಂಬರ್‌ ೮ರಂದು ನಡೆಯಲಿರುವ ರಾಜ್ಯ ಸರಕಾರದ ಮೂರನೇ ವರ್ಷಾಚರಣೆ-ಜನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಬರುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಎರಡು ಲಕ್ಷ ಜನರನ್ನು ಸೇರಿಸುವ ಟಾಸ್ಕ್‌ ನೀಡಲಾಗಿದೆ ಎನ್ನಲಾಗುತ್ತಿದೆ. ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಕಾರ್ಯಕರ್ತರ ಸಮಾವೇಶ ಇದಾಗಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಡ್ಡಾ ಅವರು ಪಕ್ಷ ಸಂಘಟನಾತ್ಮಕ ಚಟುವಟಿಕೆಗಳನ್ನೂ ಗಮನಿಸಿ ಸಲಹೆ ನೀಡಲಿದ್ದಾರೆ.

ಸೆಪ್ಟೆಂಬರ್‌ ೯ಕ್ಕೆ ಅಮಿತ್‌ ಶಾ
ರಾಜ್ಯದ ಚೆನ್ನೇನಹಳ್ಳಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಭೆಯಲ್ಲಿ ಭಾಗವಹಿಸಲೆಂದು ಸೆಪ್ಟೆಂಬರ್‌ ೯ರಂದು ಗೃಹ ಸಚಿವ ಅಮಿತ್‌ ಶಾ ಆಗಮಿಸಲಿದ್ದಾರೆ. ಹೀಗೆ ಬಂದವರು ರಾಜ್ಯದ ಹಿರಿಯ ಬಿಜೆಪಿ ನಾಯಕರ ಜತೆ ಚರ್ಚೆ ನಡೆಸಲಿದ್ದಾರೆ. ೨೦೨೩ರ ಚುನಾವಣೆ ಕುರಿತಂತೆ ಪ್ರಧಾನ ಚರ್ಚೆಯೂ ಅಮಿತ್‌ ಶಾ ಅವರ ಸಮ್ಮುಖದಲ್ಲಿ ನಡೆಯಲಿದೆ.

ಅಕ್ಟೋಬರ್‌ನಲ್ಲಿ ರಾಹುಲ್‌
ಈ ನಡುವೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ…ಭಾರತ ಜೋಡೋ ಯಾತ್ರೆ ಅಕ್ಟೋಬರ್ ತಿಂಗಳಲ್ಲಿ ರಾಜ್ಯವನ್ನು ಪ್ರವೇಶಿಸಲಿದ್ದಾರೆ. ರಾಹುಲ್‌ ಗಾಂಧಿ ಅವರು 24 ದಿನಗಳ ಕಾಲ ರಾಜ್ಯದಲ್ಲಿ ನಡೆಯಲಿದ್ದಾರೆ.

ರಾಹುಲ್ ಗಾಂಧಿ ಭಾಗವಹಿಸುವ ಪಾದಯಾತ್ರೆ ಸಂದರ್ಭದಲ್ಲಿ ಎಲ್ಲ ದಿನವೂ ಜತೆಗಿರುವಂತೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಅವರಿಗೆ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಸೂಚನೆ ನೀಡಿದ್ದಾರೆ. ಜತೆಗೆ ಇತರ ಕೈ ನಾಯಕರಿಗೂ ಜವಾಬ್ದಾರಿ ಹಂಚಲಾಗಿದೆ.

ಇದನ್ನೂ ಓದಿ ಸ್ವತಃ ನರೇಂದ್ರ ಮೋದಿಯೇ ಬಿ.ಎಸ್‌. ಯಡಿಯೂರಪ್ಪಗೆ ಫೋನ್‌ ಮಾಡಿ ಒಪ್ಪಿಸಿದರು!

Exit mobile version