ಬೆಂಗಳೂರು: Pay CM ಅಭಿಯಾನ ಭಾರಿ ಸದ್ದು ಮಾಡಿದ ಬೆನ್ನಿಗೇ ಕಾಂಗ್ರೆಸ್ ಈಗ Say CM ಅಭಿಯಾನ ನಡೆಸುವ ಎಚ್ಚರಿಕೆ ನೀಡಿದೆ. ತಾನು ಕೇಳಿದ ಐವತ್ತು ಪ್ರಶ್ನೆಗಳಿಗೆ ಒಂದಕ್ಕೂ ಉತ್ತರ ಕೊಟ್ಟಿಲ್ಲ ಎನ್ನುವುದು ಕಾಂಗ್ರೆಸ್ ಆರೋಪ. ಹೀಗಾಗಿ ಪ್ರಶ್ನೆಗಳಿಗೆ ಉತ್ತರ ಕೊಡಿ, ಮಾತನಾಡಿ ಎನ್ನುವ ಆಗ್ರಹದೊಂದಿಗೆ ಏನಾದರೂ ಹೇಳಿ ಸಿಎಂ ಎಂಬರ್ಥದಲ್ಲಿ ʻSay CM’ ಅಭಿಯಾನ ಶುರು ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಎಚ್ಚರಿಕೆ ಕೊಟ್ಟಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡಾ ಪ್ರತಿ ಅಭಿಯಾನ ಶುರು ಮಾಡಿದೆ. ಅದು ಪ್ರಧಾನವಾಗಿ ಸೋನಿಯಾ ಗಾಂಧಿ, ರಾಹುಲ್ ಮತ್ತು ಡಿಕೆಶಿ ಅವರನ್ನು ಟಾರ್ಗೆಟ್ ಮಾಡಿದೆ.
ಉತ್ತರ ಕೊಡಿ ಬೊಮ್ಮಾಯಿಯವರೇ?
ಮಂಗಳವಾರ ಕಾಂಗ್ರೆಸ್ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಎಂಎಲ್ಸಿ ರಮೇಶ್ ಬಾಬು ಹಾಗೂ ಶಾಸಕ ಪ್ರಸಾದ್ ಅಬ್ಬಯ್ಯ ಅವರು ನಾವು ಬಿಜೆಪಿಗೆ ೫೦ ಪ್ರಶ್ನೆಗಳನ್ನು ಕೇಳಿದ್ದೆವು. ಒಂದಕ್ಕೂ ಉತ್ತರ ಕೊಟ್ಟಿಲ್ಲ ಎಂದು ಆರೋಪಿಸಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಅವರು ಮೂಕ ಬಸವನ ಹಾಗೆ ಕೂತರೆ ಆಗುವುದಿಲ್ಲ… ಉತ್ತರ ಕೊಡಬೇಕು.. ಇಲ್ಲವಾದರೆ ಸೇ ಸಿಎಂ ಅಭಿಯಾನ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.
ಕಾಂಗ್ರೆಸ್ ನಾಯಕರ ಆರೋಪಗಳು
* ಭಾರತ್ ಜೋಡೋ ಯಾತ್ರೆಗೆ ಕೌಂಟರ್ ಎನ್ನುವ ರೀತಿಯಲ್ಲಿ ಜನ ಸಂಕಲ್ಪ ಮಾಡ್ತಾ ಇದ್ದಾರೆ. ಸಂಕಲ್ಪ, ಬದಲಾವಣೆಗಾಗಿ ಬಿಜೆಪಿ, ಈ ಬಾರಿ ಬಿಜೆಪಿ ಎಂಬ ಟೈಟಲ್ ಕೊಡ್ತಾನೆ ಬಂದಿದ್ದಾರೆ. ಅವರು ನಾವು ಕೇಳೋ ಪ್ರಶ್ನೆಗಳಿಗೆ ಉತ್ತರ ಕೊಡುವುದಿಲ್ಲ. ಯಾಕೆಂದರೆ, ಅವರ ಭಾಷಣಗಳೆಲ್ಲ ಸ್ಕ್ರಿಪ್ಟೆಡ್. ಯಡಿಯೂರಪ್ಪ, ಸಿಎಂ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್, ಶ್ರೀ ರಾಮುಲು ಎಲ್ಲರೂ ಒಂದೇ ರೀತಿಯ ಭಾಷಣ ಮಾಡುತ್ತಾರೆ. ಜತೆಗೆ ವೈಯಕ್ತಿಕ ಟೀಕೆ ಮಾಡ್ತಾರೆ. ಒಂದೇ ರೀತಿ ಭಾಷಣ ಯಾಕೆ ಮಾಡ್ತಾರೆ ಅಂದರೆ ಅವರು ಮಾಡುವ ಭಾಷಣ ಕೇಶವ ಕೃಪಾದಿಂದ ಬಂದಿರುತ್ತದೆ!
*ಬಿಜೆಪಿ ಯುವಕರಿಗೆ ಶಿಕ್ಷಣ ಉದ್ಯೋಗ ನೀಡುವ ಬದಲಾಗಿ ಧರ್ಮ ರಕ್ಷಣೆ, ಗೋರಕ್ಷಣೆ ಬಿರುದು ನೀಡುತ್ತಿದೆ. ಯುವಕರ ಭವಿಷ್ಯದ ಜೊತೆಗೆ ಬಿಜೆಪಿ ಚೆಲ್ಲಾಟ ಆಡುತ್ತಿದೆ.
* ಪರೇಶ್ ಮೇಸ್ತಾ ಸಾವಿನ ಬಗ್ಗೆ ಸಿಬಿಐ ವರದಿ ಬಂದಿದೆ. ವರದಿಯಲ್ಲಿ ಎಲ್ಲವನ್ನೂ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಹೆಣದ ಮೇಲೆ ರಾಜಕೀಯ ಮಾಡಿದ ಶೋಭಾ ಕರಂದ್ಲಾಜೆ, ಕೆ.ಎಸ್. ಈಶ್ವರಪ್ಪ ಮೊದಲಾದದವರು ಕ್ಷಮೆ ಕೇಳಬೇಕು.
* ಪರೇಶ್ ಮೇಸ್ತ ಕೊಲೆ ಆದಾಗ ಅದನ್ನು ಕಾಂಗ್ರೆಸ್ ತಲೆಗೆ ಕಟ್ಟಲಾಯಿತು. ಕೋಮುವಿಷ ಬೀಜ ಬಿತ್ತಿ ಯುವಕರ ಭವಿಷ್ಯ ಹಾಳು ಮಾಡುವ ಕೆಲಸ ಮಾಡಲಾಯಿತು. ಶೋಭಾ ಕರಂದ್ಲಾಜೆ ಪರೇಶ್ ಮೇಸ್ತ ಸಾವಿಗೆ ಜಿಹಾದಿ ಶಕ್ತಿಗಳು ಕಾರಣ ಎಂದಿದ್ದರು. ಚಿತ್ರ ಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದಿದ್ದರು. ಪರೇಶ್ ಮೇಸ್ತ ಕೈಕಡಿಯಲಾಗಿದೆ ಎಂದು ಹೇಳಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಇನ್ನೆಷ್ಟು ಹಿಂದೂ ಕಾರ್ಯಕರ್ತರ ಹತ್ಯೆ ನಡೆಯಬೇಕು ಎಂದು ಪ್ರಶ್ನೆ ಮಾಡಿದ್ದರು. ಸಿಬಿಐ ವರದಿಯಲ್ಲಿ ಪರೇಶ್ ಮೇಸ್ತ ಕೈಮೇಲೆ ಇರುವ ಶಿವಾಜಿ ಟ್ಯಾಟೋ ಹಾಗೇ ಇದೆ ಎಂದಿದೆ. ಈ ವಿಷಯದಲ್ಲಿ ಶೋಭಾ ಕರಂದ್ಲಾಜೆ, ಕೆ.ಎಸ್ ಈಶ್ವರಪ್ಪ, ಸಿ.ಟಿ ರವಿ, ನಳಿನ್ ಕುಮಾರ್, ಅನಂತ್ ಕುಮಾರ್ ದಾರಿ ತಪ್ಪಿಸಿ ರಾಜ್ಯದಲ್ಲಿ ಬೆಂಕಿ ಹಚ್ಚಲು ಕಾರಣರಾಗಿದ್ದರು. ಇವರ ಮೇಲೆ ಕೇಸ್ ಬುಕ್ ಮಾಡಲು ಸಿಎಂಗೆ ತಾಕತ್ತು ಇದ್ಯಾ? ೧೫ ದಿನದ ಒಳಗೆ ಕೇಸ್ ಹಾಕದಿದ್ದರೆ ಸಿಬಿಐಗೆ ದೂರು ನೀಡುತ್ತೇವೆ.
ಬಿಜೆಪಿಯಿಂದ ಕೌಂಟರ್ ಅಭಿಯಾನ
ಸೇ ಸಿಎಂ ಅಭಿಯಾನಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಟ್ಟುಕೊಂಡು ಬಿಜೆಪಿಯೂ ಪ್ರತಿ ದಾಳಿ ಶುರು ಮಾಡಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಡಿ.ಕೆ. ಶಿವಕುಮಾರ್ ಅವರು ಜಾಮೀನಿನ ಮೇಲೆ ಇರುವುದನ್ನು ಮುಂದಿಟ್ಟು ನೀವ್ಯಾಕೆ ಬೇಲ್ ಮೇಲೆ ಇದ್ದೀರಿ ಹೇಳಿ ಎಂದು ಪ್ರಶ್ನಿಸಿದೆ.