ಬೆಂಗಳೂರು: ಹನುಮ ಜಯಂತಿ ವೇಳೆ ನಡೆದ ಘಟನೆಗೆ ಸಂಬಂಧಿಸಿ ಹತ್ಯೆಯಾಗಿರುವ (Murder Case) ತಿ. ನರಸೀಪುರದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ವಿಧಾನ ಪರಿಷತ್‌ನಲ್ಲಿ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಈ ವಿಚಾರ ಪ್ರಸ್ತಾಪ ಮಾಡಿದರು. ಟಿ. ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಾಯಕ್ ಹತ್ಯೆ ಪ್ರಕರಣ ನಡೆದಿದೆ. ಹತ್ಯೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಈ ಬಗ್ಗೆ ಗೃಹ ಸಚಿವರು ಖುದ್ದು ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ಗೃಹ ಸಚಿವರ ಸದನದಲ್ಲಿ ಇಲ್ಲದ ಕಾರಣ ಉತ್ತರ ಕೊಡಿಸುವುದಾಗಿ ಸಚಿವ ಕೆಎನ್ ರಾಜಣ್ಣ ತಿಳಿಸಿದರು. ಈ ಸಮಯದಲ್ಲಿ ಕೆಲಕಾಲ ಗದ್ದಲ ಉಂಟಾಯಿತು. ಘಟನೆ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಸದಸ್ಯರು ಒತ್ತಾಯಿಸಿದರು.
ಜೈನ ಮುನಿಗಳ ಕೊಲೆ ಪ್ರಕರಣ ಹಾಗೂ ವೇಣುಗೋಪಾಲ್ ಹತ್ಯೆ ಪ್ರಕರಣದ ಬಗ್ಗೆ ಉತ್ತರ ಕೊಡಿಸಿ. ಇಂದೇ ಉತ್ತರ ಕೊಡಿಸಬೇಕು ಎಂದು ಬಿಜೆಪಿ ಸದಸ್ಯ ನಾರಾಯಣ ಸ್ವಾಮಿ ಆಗ್ರಹಿಸಿದರು.
ಪ್ರತಿಪಕ್ಷ ನಾಯಕನೇ ಇಲ್ಲ ಎಂದ ಕಾಂಗ್ರೆಸ್
ವಿಧಾನ ಪರಿಷತ್‌ನಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಬಿಜೆಪಿ ಸದಸ್ಯರಿಗೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಯಾರನ್ನೂ ಆಯ್ಕೆ ಮಾಡದಿರುವುದು ಮುಜುಗರ ಉಂಟುಮಾಡಿತು. ಕಾಂಗ್ರೆಸ್‌ನ ಪ್ರಕಾಶ್ ರಾಥೋಡ್ ಮಾತನಾಡಿ, ಇತಿಹಾಸದಲ್ಲಿ ಮೊದಲ ಬಾರಿಗೆ ವಿಪಕ್ಷ ನಾಯಕ ಇಲ್ಲದೆ ಸದನ ನಡೆಸುತ್ತಿದ್ದಾರೆ ಎಂದರು. ರಾಥೋಡ್ ಮಾತಿಗೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಇದನ್ನೂ ಓದಿ: Murder Case : ಯುವ ಬ್ರಿಗೇಡ್ ಸದಸ್ಯನ ಹತ್ಯೆ ಹಿಂದೆ ಕಾಂಗ್ರೆಸ್ ನಾಯಕರು; ಸಿಕ್ಕಿತು ಪ್ರಬಲ ಸಾಕ್ಷ್ಯ
ಸದನದಲ್ಲಿ ಗದ್ದಲ ಗಲಾಟೆ ನಡೆದು ಬಿಜೆಪಿ-ಕಾಂಗ್ರೆಸ್ ಸದಸ್ಯರು ಪರಸ್ಪರ ಗುದ್ದಾಡಿಕೊಂಡರು. ಲೋಕಸಭೆಯಲ್ಲಿ 10 ವರ್ಷದಿಂದ ವಿಪಕ್ಷವೇ ಇಲ್ಲ ಎಂದು ಬಿಜೆಪಿ ಸದಸ್ಯರು ತಿರುಗೇಟು ನೀಡಿದರು. ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಿರುವಾಗ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ನಾರಾಯಣಸ್ವಾಮಿ, ಸದನದಲ್ಲಿ ಅಧಿಕಾರಿಗಳು, ಸಚಿವರು ಇಲ್ಲದ್ದಕ್ಕೆ ವಿರೋಧ ವ್ಯಕ್ತಪಡಿಸಿದರು. ಸದನದಲ್ಲಿ ಇರಬೇಕಾದ ಅಧಿಕಾರಿಗಳು, ಸಚಿವರ ಹೆಸರನ್ನು ಸಭಾಪತಿ ಓದಿ ಹೇಳಿದರು. ಸಭಾಪತಿ ಹೆಸರು ಹೇಳಿದಾಗ ಸಚಿವರು ಇಲ್ಲದೆ ಇರೋದಕ್ಕೆ “ಇಲ್ಲ..ಇಲ್ಲ” ಎಂದು ಬಿಜೆಪಿ ಸದಸ್ಯರು ಲೇವಡಿ ಮಾಡಿದರು. ಮತ್ತೆ ಸದನದಲ್ಲಿ ಮಾತಿನ ಚಕಮಕಿ, ಗದ್ದಲ ಗಲಾಟೆ ನಡೆದು ಸಭಾಪತಿ ಮಧ್ಯಪ್ರವೇಶಿಸಿ ಗಲಾಟೆ ಶಮನ ಮಾಡಿದರು.