Site icon Vistara News

ಬಿಜೆಪಿ ಮಿಷನ್‌ ದಕ್ಷಿಣ: ರಾಜ್ಯಸಭೆ ಆಯ್ಕೆ ಮೂಲಕ ಮೋದಿ ನೀಡಿದ ಸಂದೇಶವೇನು?

rajyasabha nominations 2022 ilayaraja pt usha veerendra heggade vijayendra prasad

ಬೆಂಗಳೂರು: ರಾಜ್ಯಸಭೆಗೆ ಕರ್ನಾಟಕದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ತಮಿಳುನಾಡಿನ ಹಿರಿಯ ಸಂಗೀತ ನಿರ್ದೇಶಕ ಇಳಯರಾಜ, ಕೇರಳದ ಕ್ರೀಡಾಪಟು ಪಿ.ಟಿ. ಉಷಾ ಹಾಗೂ ಅವಿಭಜಿತ ಆಂಧ್ರಪ್ರದೇಶದಿಂದ (ಆಂಧ್ರಪ್ರದೇಶ ಹಾಗೂ ತೆಲಂಗಾಣ) ಚಿತ್ರಕಥೆಗಾರ ಹಾಗೂ ನಿರ್ದೇಶಕ ಕೆ.ವಿ. ವಿಜಯೇಂದ್ರ ಪ್ರಸಾದ್‌ ಅವರನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ನಾಮನಿರ್ದೇಶನ ಮಾಡಿದೆ.

ನಾಲ್ವರೂ ಅವರವರ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದವರು, ನಾಲ್ವರೂ ವಿಭಿನ್ನ ಸಾಮಾಜಿಕ ಹಿನ್ನೆಲೆಯಿಂದ ಬಂದವರು, ನಾಲ್ವರೂ ಎಲ್ಲ ರಾಜಕೀಯ ಪಕ್ಷಗಳಿಂದಲೂ ಪ್ರಶಂಸೆಗೆ ಒಳಪಡುವವರು, ಸಮಾಜದಲ್ಲಿ ಘನತೆ ಹೊಂದಿರುವವರು. ಇದೆಲ್ಲಕ್ಕಿಂತಲೂ ಮುಖ್ಯವಾಗಿ ಇದೀಗ ಆಯ್ಕೆ ಆಗಿರುವ ನಾಲ್ವರೂ ದಕ್ಷಿಣ ಭಾರತದವರು, ಅದರಲ್ಲೂ ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷೆಗಳನ್ನು ಪ್ರತಿನಿಧಿಸುವ ಐದು ರಾಜ್ಯದವರು.

ನಿರಂತರ ವಿಸ್ತರಣೆ

80ರ ದಶಕದಲ್ಲಿ ಸ್ಥಾಪನೆಯಾದ ಬಿಜೆಪಿ ಪ್ರತಿ ಚುನಾವಣೆಯಲ್ಲೂ ತನ್ನ ಅಸ್ತಿತ್ವವನ್ನು ದೇಶಾದ್ಯಂತ ವಿಸ್ತರಿಸಿಕೊಳ್ಳುತ್ತಲೇ ಸಾಗಿದೆ. ಈ ಸಮಯದಲ್ಲಿ ಎರಡನೇ ಬಾರಿಗೆ ಕೇಂದ್ರ ಸರ್ಕಾರದ ಪಾಲುದಾರನಾಗಿರುವ ಬಿಜೆಪಿ, ಎರಡು ಬಾರಿ ಸರ್ಕಾರವನ್ನು ಮುನ್ನಡೆಸಿದೆ. ೧೯೯೬ರಿಂದ ಅಟಲ್‌ಬಿಹಾರಿ ವಾಜಪೇಯಿ, ನಂತರ ಇದೀಗ 2014ರಿಂದ ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರದಲ್ಲಿದೆ. ದೇಶಾದ್ಯಂತ ಬಿಜೆಪಿ ಅಲೆ ಇದೆ ಎನ್ನುವಾಗಲೂ ಈ ಪಕ್ಷಕ್ಕೆ ದಕ್ಷಿಣದಲ್ಲಿ ಕೊರತೆ ಕಾಣುತ್ತಿದೆ. ಕರ್ನಾಟಕದಲ್ಲಿ, ಪುದುಚೆರಿಯಲ್ಲಿ ಹೊರತುಪಡಿಸಿ ದಕ್ಷಿಣದ ಇನ್ನು ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ಬಿಜೆಪಿ ಮಿಷನ್‌ ದಕ್ಷಿಣ ಅಭಿಯಾನವನ್ನು ಹಮ್ಮಿಕೊಂಡಿದೆ.

2023ರಲ್ಲಿ ಕರ್ನಾಟಕ ಹಾಗೂ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಕೇರಳ ಹಾಗೂ ತಮಿಳುನಾಡಿನಲ್ಲಿ 2026ಕ್ಕೆ ಚುನಾವಣೆ ಎದುರಾಗಲಿದೆ. ಕರ್ನಾಟಕದಲ್ಲಿ ಅತ್ಯಂತ ಭದ್ರ ಸಂಘಟನೆ ಹೊಂದಿದ್ದರೂ ಪಕ್ಷಕ್ಕೆ ಅನೇಕ ಮಿತಿಗಳಿವೆ. ಇಡೀ ಹಳೆ ಮೈಸೂರು ಭಾಗದಲ್ಲಿ ಬೆಂಗಳೂರು, ಮೈಸೂರಿನ ಕೆಲ ಭಾಗ ಹೊರತುಪಡಿಸಿ ಉಳಿದೆಡೆ ಅತ್ಯಂತ ದುರ್ಬಲವಾಗಿದೆ. ಉತ್ತರ ಕರ್ನಾಟಕದಲ್ಲಿ ಸಂಘಟನೆಗಿಂತಲೂ ಪಕ್ಷದ ವಿವಿಧ ನಾಯಕರ ಜಾತಿ ಸಮೀಕರಣ ಹಾಗೂ ಸ್ಥಳೀಯ ರಾಜಕಾರಣದ ಕಾರಣಕ್ಕೆ ಚುನಾವಣೆಯಲ್ಲಿ ಗೆಲ್ಲುತ್ತಿದೆ. ಸಂಪೂರ್ಣ ಸಂಘಟನಾತ್ಮಕವಾಗಿ ದಕ್ಷಿಣ ಕನ್ನಡದಲ್ಲಿ ಮಾತ್ರ ಅಸ್ತಿತ್ವ ಹೊಂದಿದೆ.

ಉಳಿದಂತೆ ಕೇರಳದಲ್ಲಿ ಅತ್ಯಂತ ಸದೃಢ ಸಂಘಟನೆ ಇದ್ದರೂ ಜಾತಿ ಸಮೀಕರಣ, ಪಕ್ಷದಲ್ಲಿನ ಆಂತರಿಕ ಕಚ್ಚಾಟದ ಕಾರಣಕ್ಕೆ ಸೋಲುತ್ತಲೇ ಇದೆ. ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಕೆಲವು ಸ್ಥಾನ ಗೆದ್ದರೂ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯವಾಗುತ್ತಿಲ್ಲ. ದ್ರಾವಿಡ ಹೋರಾಟದ ನೆಲ ತಮಿಳುನಾಡಿನಲ್ಲಂತೂ ಅಧಿಕಾರ ಕೇಂದ್ರದಿಂದ ದೂರವೇ ಇರುವ ಬಿಜೆಪಿ ಇದೀಗ ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಮೂಲಕ ಒಳರಸ್ತೆಗಳನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿದೆ.

ಹೈದರಾಬಾದ್‌ನಲ್ಲಿ ಕಾರ್ಯಕಾರಿಣಿ

ಈಗಾಗಲೆ ಬಿಜೆಪಿಯು ಹಿಂದಿ ಹಾರ್ಟ್‌ಲ್ಯಾಂಡ್‌ ಎಂದು ಕರೆಯಲಾಗುವ ರಾಜ್ಯಗಳಲ್ಲಿ ಆವರಿಸಿದೆ. ದೊಡ್ಡರಾಜ್ಯಗಳಾದ ಮಧ್ಯಪ್ರದೇಶ, ಉತ್ತರಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್‌ ಮುಂತಾದ ಕಡೆಗಳಲ್ಲಿ ಈಗಾಗಲೆ ಸಾಕಷ್ಟು ಶಕ್ತಿಯುತವಾಗಿದೆ, ವಿಸ್ತರಣೆಯೂ ಆಗಿದೆ. ಈ ರಾಜ್ಯಗಳಲ್ಲಿ ಬಿಜೆಪಿ ಸಂಖ್ಯೆ ವಿಸ್ತರಣೆಗೆ ಹೆಚ್ಚು ಅವಕಾಶಗಳಿಲ್ಲ. ಅವಕಾಶ ಇರುವುದು ಮುಖ್ಯವಾಗಿ ಈಶಾನ್ಯ ರಾಜ್ಯಗಳು ಹಾಗೂ ದಕ್ಷಿಣದಲ್ಲಿ ಮಾತ್ರ. ದಕ್ಷಿಣದ ಐದು ರಾಜ್ಯಗಳಲ್ಲಿ 129 ಸಂಸದರಿದ್ದಾರೆ. ಕರ್ನಾಟಕದಲ್ಲಿ 25, ತೆಲಂಗಾಣದಲ್ಲಿ 8, ಆಂಧ್ರಪ್ರದೇಶದಲ್ಲಿ 8 ಹೊರತುಪಡಿಸಿ ತಮಿಳುನಾಡು ಹಾಗೂ ಕೇರಳದಲ್ಲಿ ಶೂನ್ಯ. ಅಂದರೆ 129 ರಲ್ಲಿ ಕೇವಲ 41 ರಲ್ಲಿ ಮಾತ್ರವೇ ಬಿಜೆಪಿ ಗೆಲುವು ಸಾಧಿಸಿದೆ. ಉಳಿದ ೮೮ ಕ್ಷೇತ್ರಗಳಲ್ಲಿ ಕನಿಷ್ಠ 25-30 ಸ್ಥಾನ ಹೆಚ್ಚಿಸಿಕೊಳ್ಳಲು ಸಾಧ್ಯವಾದರೂ 2024 ರ ಲೋಕಸಭೆ ಚುನಾವಣೆಯಲ್ಲಿ ಮತ್ತಷ್ಟು ಪ್ರಬಲವಾಗಿ ಕೇಂದ್ರದಲ್ಲಿ ಅಧಿಕಾರ ನಡೆಸಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರ.

ಇದೇ ಕಾರಣಕ್ಕೆ ಮಿಷನ್‌ ದಕ್ಷಿಣ್‌ ಹಮ್ಮಿಕೊಂಡಿದ್ದು, ಇತ್ತೀಚೆಗೆ (ಜುಲೈ 3 ಹಾಗೂ 4) ತೆಲಂಗಾಣದ ಹೈದರಾಬಾದ್‌ನಲ್ಲೆ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಆಯೋಜಿಸಿತ್ತು. ಕಾರ್ಯಕಾರಿಣಿಯನ್ನುದ್ದೇಶಿಸಿ ಟಿಆರ್‌ಎಸ್‌ ಪಕ್ಷದ ಕುಟುಂಬ ರಾಜಕಾರಣವನ್ನು ತೆಗಳಿದ ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣದಲ್ಲೂ ಡಬಲ್‌ ಇಂಜಿನ್‌ ಸರ್ಕಾರದ ಮಾತನ್ನಾಡಿದರು.

ಕಾರ್ಯಕಾರಿಣಿ ನಂತರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ದಕ್ಷಿಣದಲ್ಲಿ ಸಂಘಟನೆಯನ್ನು ಭದ್ರಪಡಿಸುವ ಕುರಿತು ಕಾರ್ಯಕಾರಿಣಿಯಲ್ಲಿ ಚರ್ಚೆಯಾಗಿದೆ. ಈ ಚರ್ಚೆಯ ಪ್ರಕಾರ, ದಕ್ಷಿಣದ ರಾಜ್ಯಗಳಲ್ಲಿರುವ ಕೇಂದ್ರ ಸರ್ಕಾರದ ವಿವಿಧ ಯೋಜನೆಯ ಫಲಾನುಭವಿಗಳನ್ನು ಮನವೊಲಿಸಲಾಗುತ್ತದೆ. ಕೇಂದ್ರ ಸರ್ಕಾರದಿಂದ ಕೈಗೊಂಡಿರುವ ವಿವಿಧ ಯೋಜನೆಗಳನ್ನು ಜನರಿಗೆ ತಿಳಿಸಲು ʻಸ್ನೇಹ ಯಾತ್ರೆʼ ಆಯೋಜಿಸಲು ಪ್ರಧಾನಿ ಮೋದಿ ತಿಳಿಸಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ | ಕೆಂಪೇಗೌಡ ಏರ್‌ಪೋರ್ಟ್‌ ಹೊಸ ದಾಖಲೆ: ಈ ಸಾಧನೆ ಮಾಡಿದ ದಕ್ಷಿಣ ಭಾರತದ ಮೊದಲ PPP ವಿಮಾನ ನಿಲ್ದಾಣ

ಪದಾಧಿಕಾರಿಗಳ ನಿಯೋಜನೆ

ಸದ್ಯ ರಾಷ್ಟ್ರೀಯ ಬಿಜೆಪಿ ಸಂಘಟನೆಯಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಸದ್ಯ ರಾಷ್ಟ್ರೀಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ಕರ್ನಾಟಕದ ಬಿ.ಎಲ್‌. ಸಂತೋಷ್‌ ಇದ್ದಾರೆ. ರಾಷ್ಟ್ರೀಯ ಅಧ್ಯಕ್ಷರ ನಂತರ ಪಕ್ಷದಲ್ಲಿರುವ ಅತ್ಯಂತ ಶಕ್ತಿಯುತ ಸ್ಥಾನ ಇದು. ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಕರ್ನಾಟಕದ ತೇಜಸ್ವಿ ಸೂರ್ಯ ಇದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ಕರ್ನಾಟಕದ ಸಿ.ಟಿ. ರವಿ, ಆಂಧ್ರ ಪ್ರದೇಶದ ಡಿ. ಪುರಂದೇಶ್ವರಿ ನೇಮಕವಾಗಿದ್ದಾರೆ. ಉಪಾಧ್ಯಕ್ಷರಾಗಿ ತೆಲಂಗಾಣದ ಡಿ.ಕೆ. ಅರುಣಾ, ಕೇರಳದ ಅಬ್ದುಲ್ಲಾ ಕುಟ್ಟಿ, ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ತೆಲಂಗಾಣದ ಸತ್ಯಕುಮಾರ್‌, ಕೇರಳದ ಅರವಿಂದ ಮೆನನ್‌, ರಾಷ್ಟ್ರೀಯ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ತಮಿಳುನಾಡಿದ ವಾಸಂತಿ ಶ್ರೀನಿವಾಸನ್‌, ಒಬಿಸಿ ಮೋರ್ಚಾ ಅಧ್ಯಕ್ಷರಾಗಿ ತೆಲಂಗಾಣದ ಡಾ. ಕೆ. ಲಕ್ಷ್ಮಣ್‌ ಕಾರ್ಯನಿರ್ವಹಿಸುತ್ತಿದ್ದಾರೆ.

ದಕ್ಷಿಣ ಭಾರತದಲ್ಲಿ ಸಂಘಟನೆಯನ್ನು ಬಲವರ್ಧನೆ ಮಾಡುವ ಸಲುವಾಗಿ ಈಗಾಗಲೆ ಪ್ರಯತ್ನ ಮುಂದುವರಿಸಿರುವ ಬಿಜೆಪಿ, ರಾಜ್ಯಸಭೆಯಲ್ಲಿ ನಾಮನಿರ್ದೇಶನದಲ್ಲೂ ಇದನ್ನು ಮುಂದುವರಿಸಿದೆ.

ನಾಲ್ಕು ರಾಜ್ಯ, ನಾಲ್ಕು ಸಮುದಾಯ

ಸದ್ಯ ರಾಜ್ಯಸಭೆಗೆ ಆಯ್ಕೆ ಮಾಡಲಾಗಿರುವ ನಾಲ್ವರೂ ದಕ್ಷಿಣದ ಒಂದೊಂದು ರಾಜ್ಯವನ್ನು ಪ್ರತಿನಿಧಿಸುತ್ತಾರೆ. ಆಡಳಿತಾತ್ಮಕವಾಗಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ಪ್ರತ್ಯೇಕವಾಗಿದ್ದರೂ ಸಂಸ್ಕೃತಿ, ಭಾಷೆಯ ಕಾರಣಕ್ಕೆ ಕೆ.ವಿ. ವಿಜಯೇಂದ್ರ ಪ್ರಸಾದ್‌ ಅವರನ್ನು ಅಖಂಡ ಆಂಧ್ರ ಪ್ರದೇಶದ ಪ್ರತಿನಿಧಿ ಎಂದು ಪರಿಗಣಿಸಬಹುದು. ಇದ್ದ ನಾಲ್ಕು ಸ್ಥಾನಗಳಿಗೆ ನಾಲ್ಕನ್ನೂ ದಕ್ಷಿಣದ ರಾಜ್ಯಗಳಿಗೆ ಮೀಸಲಿಡುವ ಮೂಲಕ, ತಾನು ಹಿಂದಿ ಹೇರಿಕೆ ಮಾಡುವ ಪಕ್ಷ ಎನ್ನುವ ಕಳಂಕವನ್ನು ಕಳೆದುಕೊಳ್ಳಲು ಬಿಜೆಪಿ ಮುಂದಾಗಿದೆ.

ತಮಿಳುನಾಡಿನಲ್ಲಿ ಆಗಿಂದಾಗ್ಗೆ ಭಿನ್ನತೆಯ ಕೂಗು ಕೇಳಿಬರುತ್ತದೆ. ಇತ್ತೀಚೆಗಷ್ಟೆ ಮಾತನಾಡಿದ್ದ ತಮಿಳುನಾಡು ಡಿಎಂಕೆ ನಾಯಕ ಎ.ರಾಜಾ, ಪ್ರಧಾನ ಮಂತ್ರಿ ಮತ್ತು ಅಮಿತ್‌ ಶಾ ಅವರನ್ನು ವಿನಮ್ರವಾಗಿ ಕೇಳುತ್ತಿದ್ದೇನೆ, ನಾಯಕ ಪೆರಿಯಾರ್‌ ಅವರ ಮಾರ್ಗವನ್ನು ನಾವು ತುಳಿಯುವಂತೆ ಮಾಡಬೇಡಿ. ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆ ಇಡುವಂತೆ ಮಾಡಬೇಡಿ. ನಮ್ಮ ರಾಜ್ಯಕ್ಕೆ ಸ್ವಾಯತ್ತತೆಯನ್ನು ನೀಡಿ, ಅಲ್ಲಿಯವರೆಗೂ ನಾವು ಸುಮ್ಮನಿರುವುದಿಲ್ಲ ಎಂದಿದ್ದರು.

ಇದೆಲ್ಲವನ್ನೂ ಸರಿಪಡಿಸಲು ದಕ್ಷಿಣದ ನಾಲ್ವರು ಗಣ್ಯರನ್ನೇ ಬಿಜೆಪಿ ಸರ್ಕಾರ ಆಯ್ಕೆ ಮಾಡಿದೆ. ತಮ್ಮತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರು. ಅವರನ್ನು ಎಲ್ಲ ಜಾತಿ. ಮತ, ಪಂಥವನ್ನು ಮೀರಿ ಜನರು ಗೌರವಿಸುತ್ತಾರೆ. ಆದರೂ ರಾಜಕಾರಣದಲ್ಲಿ ಜಾತಿಯ ಪ್ರಾತಿನಿಧ್ಯತೆ ಪ್ರಮುಖವಾಗುತ್ತದೆ. ಅದರ ಪ್ರಕಾರ, ಬಿಜೆಪಿಯೇ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸರುವಂತೆ, ಒಬ್ಬರು ದಲಿತ(ಇಳೆಯರಾಜ), ಒಬ್ಬ ಮಹಿಳೆ(ಪಿ.ಟಿ. ಉಷಾ), ಒಬ್ಬ ಜೈನ್‌(ವೀರೇಂದ್ರ ಹೆಗ್ಗಡೆ) ಅವರನ್ನು ಆಯ್ಕೆ ಮಾಡಲಾಗಿದೆ. ವಿಜಯೇಂದ್ರ ಪ್ರಸಾದ್‌ ಅವರು ಆಂಧ್ರಪ್ರದೇಶದ ಪ್ರಭಾವಿ ಕಮ್ಮ ಸಮುದಾಯದವರು.

ಕರ್ನಾಟಕಕ್ಕೆ ಏನು ಸಂದೇಶ?

ಕರ್ನಾಟಕದಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಆಯ್ಕೆ ಮಾಡಲಾಗಿದೆ. ವೀರೇಂದ್ರ ಹೆಗ್ಗಡೆ ಅವರು ಭೌಗೋಳಿಕವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದವರು. ಆದರೆ ಅವರ ಪ್ರಭಾವ ಇಡೀ ಕರ್ನಾಟಕದಲ್ಲಿದೆ, ಪ್ರಮುಖವಾಗಿ ಹಳೆ ಮೈಸೂರು ಭಾಗದಲ್ಲಿ ಹೆಚ್ಚಾಗಿದೆ. ಬೆಂಗಳೂರು, ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ಮೈಸೂರು ಜಿಲ್ಲೆಗಳಲ್ಲಂತೂ ಧರ್ಮಸ್ಥಳ ಕ್ಷೇತ್ರಕ್ಕೆ ವಿಶೇಷ ಮಹ್ವವಿದೆ. ಧರ್ಮಸ್ಥಳ ಮಂಜುನಾಥೇಶ್ವರನನ್ನು ವರ್ಷಕ್ಕೊಮ್ಮೆಯಾದರೂ ದರ್ಶನ ಮಾಡುವ ಲಕ್ಷಾಂತರ ಕುಟುಂಬಗಳಿವೆ. ಅದರಲ್ಲೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನೂ ದೇವರ ರೀತಿಯಲ್ಲೇ ಕಾಣಲಾಗುತ್ತದೆ. ಧಾರ್ಮಿಕವಾಗಿಯಷ್ಟೆ ಅಲ್ಲದೆ, ಇತ್ತೀಚಿನ ವರ್ಷದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಜನರ ಸ್ವಾವಲಂಬನೆ ಕ್ಷೇತ್ರದಲ್ಲೂ ಶ್ರೀ ಕ್ಷೇತ್ರ ವಿಶೇಷ ಕಾರ್ಯ ಮಾಡುತ್ತಿದೆ.

ಸ್ವಸಹಾಯ ಸಂಘಗಳ ಮೂಲಕ ಹಳೆ ಮೈಸೂರು ಭಾಗದ ಜಿಲ್ಲೆಗಳ, ಅದರಲ್ಲೂ ಗ್ರಾಮೀಣಭಾಗದಲ್ಲಿ ಮನೆಮಾತಾಗಿದೆ. ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸದೃಢತೆಯಷ್ಟೆ ಅಲ್ಲದೆ, ಮದ್ಯವರ್ಜನ ಶಿಬಿರಗಳ ಮೂಲಕ ಗಂಡಸರ ಕುಡಿತದ ಚಟವನ್ನು ಬಿಡಿಸಿ ಕುಟುಂಬದಲ್ಲಿ ಶಾಂತಿ ತರುವ ಕೆಲಸವನ್ನೂ ಮಾಡುತ್ತಿದೆ. ಈ ಕಾರಣಕ್ಕಾಗಿ, ಶ್ರೀಕ್ಷೇತ್ರದ ಕುರಿತು ಮಹಿಳೆಯರು ವಿಶೇಷ ಗೌರವ ಹೊಂದಿದ್ದಾರೆ.

ಮುಖ್ಯವಾಗಿ ಬಿಜೆಪಿ ಕರ್ನಾಟಕದಲ್ಲಿ ದುರ್ಬಲವಾಗಿರುವುದು ಹಳೆ ಮೈಸೂರಿನಲ್ಲಿ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಮತ್ತಷ್ಟು ದುರ್ಬಲ. ಬಿಜೆಪಿ ದುರ್ಬಲವಾಗಿರುವ ಕ್ಷೇತ್ರದಲ್ಲೆ ಅತ್ಯಂತ ಪೂಜನೀಯ ಸ್ಥಾನ ಹೊಂದಿರುವ ಹೆಗ್ಗಡೆಯವರ ಆಯ್ಕೆ ಮಾಡಲಾಗಿದೆ. ಇದೊಂದರಿಂದಲೇ ಬಿಜೆಪಿ ಚುನಾವಣೆಗಳನ್ನು ಗೆದ್ದುಬಿಡಬಹುದು ಎಂಬ ಲೆಕ್ಕಾಚಾರ ಇರಲಾರದು, ಅದು ಸಾಧ್ಯವೂ ಅಲ್ಲ. ಆದರೆ ಬಿಜೆಪಿ ಕುರಿತು ಜನರಲ್ಲಿ ಇರುವ ಕೆಲವು ನಕಾರಾತ್ಮಕ ಭಾವನೆಳನ್ನು ಹೋಗಲಾಡಿಸಲು, ಪಕ್ಷದ ಕುರಿತು ಮೃದುಭಾವನೆ ಬರಲಿಕ್ಕೆ ಹೆಗ್ಗಡೆ ಅವರ ಆಯ್ಕೆ ನಿಶ್ಚಿತವಾಗಿ ಸಹಾಯಕ್ಕೆ ಬರಲಿದೆ.

ಇದನ್ನೂ ಓದಿ | ವಿಸ್ತಾರ Explainer: ಬಿಜೆಪಿ ಕಾರ್ಯಕಾರಿಣಿ, ಟಿಆರ್‌ಎಸ್‌ ಜತೆ ಫೈನಲ್‌ ಫೈಟ್‌ಗೆ ಮುಹೂರ್ತ?

Exit mobile version