Site icon Vistara News

Exit Poll: ಎಕ್ಸಿಟ್‌ ಪೋಲ್‌ ಬಗ್ಗೆ ನೋ ವರಿ ಎಂದ ಬೊಮ್ಮಾಯಿ, ನಮ್ದೇ ಸರ್ಕಾರ ಎಂದ ಡಿಕೆಶಿ

basavaraja bommai

ಹಾವೇರಿ: ಮತದಾನೋತ್ತರ ಸಮೀಕ್ಷೆ 100% ಕರೆಕ್ಟ್ ಆಗಿರುವುದಿಲ್ಲ. ನೈಜ ಫಲಿತಾಂಶ ಬರುವಾಗ ಪ್ಲಸ್‌-ಮೈನಸ್‌ ಆಗುತ್ತವೆ. ರಾಜ್ಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ಬಿಜೆಪಿಗೆ ಸಂಪೂರ್ಣ ಬಹುಮತ ಬರುತ್ತದೆ. ಎಕ್ಸಿಟ್ ಪೋಲ್ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಬಿಜೆಪಿಗೆ ಬಹುಮತ ಸಿಗುತ್ತದೆ. ಹಾಗಾಗಿ ಯಾವುದೇ ರೆಸಾರ್ಟ್ ರಾಜಕೀಯ ಮಾಡುವ ಪ್ರಶ್ನೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟವಾಗಿ ಹೇಳಿದ್ದಾರೆ.

ಶಿಗ್ಗಾಂವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಕ್ಸಿಟ್ ಪೋಲ್ ನೂರಕ್ಕೆ ನೂರರಷ್ಟು ನಿಖರವಾಗಿರುವುದಿಲ್ಲ. ಶೇಕಡಾ 5 ರಿಂದ 10ರಷ್ಟು ಹೆಚ್ಚು ಕಮ್ಮಿ ಆಗುತ್ತಿರುತ್ತದೆ. ಒಂದೊಂದು ಸಂಸ್ಥೆ ಒಂದೊಂದು ರೀತಿ ತೋರಿಸುತ್ತಿದೆ. ಯಾವುದು ಸಹ ಸ್ಥಿರವಾಗಿರುವುದಿಲ್ಲ. ನಮಗೆ ಕಂಪ್ಲೀಟ್ ಗ್ರೌಂಡ್ ರಿಪೋರ್ಟ್ ಇದೆ. ಸಂಪೂರ್ಣ ಬಹುಮತ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Vistara News Poll of Polls: ಅತಂತ್ರ ವಿಧಾನಸಭೆ ಪಕ್ಕಾ; ಕಾಂಗ್ರೆಸ್ ದೊಡ್ಡ ಪಕ್ಷ, ಜೆಡಿಎಸ್‌‌ಗೆ ಶುಕ್ರದೆಸೆ

ಮೇ 13ರ ಫಲಿತಾಂಶ ಬರುವ ತನಕ ಕಾದು ನೋಡಿ. ಅಲ್ಲಿ ನಮ್ಮ ಪರವಾಗಿಯೇ ಫಲಿತಾಂಶ ಹೊರಬೀಳಲಿದೆ. ಜೆಡಿಎಸ್ ಕಿಂಗ್ ಮೇಕರ್ ಆಗುವುದಿಲ್ಲ. ಬಿಜೆಪಿಗೆ ಸಂಪೂರ್ಣ ಬಹುಮತ ಸಿಗುವ ವಿಶ್ವಾಸ ಇದೆ ಎಂದು ತಿಳಿಸಿದರು.

ನಮ್ಮದೇ ಸರ್ಕಾರ ಎಂದ ಡಿ.ಕೆ. ಶಿವಕುಮಾರ್‌

ಮತದಾನೋತ್ತರ ಸಮೀಕ್ಷೆ ಪ್ರಕಟವಾದ ಬಳಿಕ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಡಬಲ್ ಇಂಜಿನ್ ಸರ್ಕಾರ ಫೇಲ್ ಆಗಿದೆ. ಭ್ರಷ್ಟ ಬಿಜೆಪಿ ಸರ್ಕಾರದಿಂದ ಕರ್ನಾಟಕಕ್ಕೆ ಕಳಂಕ ಬಂದಿತ್ತು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಹೊಸ ಕರ್ನಾಟಕಕ್ಕೆ ಹೊಸ ಸರ್ಕಾರ ಬರಲಿದೆ ಎಂದರು. ಕರ್ನಾಟಕದ ಜನರು ಹೊಸತನವನ್ನು ಬಯಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು. ನಾವು ಗೆಲ್ಲುತ್ತೇವೆ. ಕಾಂಗ್ರೆಸ್ ಸರ್ಕಾರ ರಚನೆ ಮಾಡಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮತದಾನಕ್ಕೆ ಬಿಜೆಪಿ ಧನ್ಯವಾದ

ಪ್ರಜಾಪ್ರಭುತ್ವದ ಹಬ್ಬ ಮತದಾನದಲ್ಲಿ ರಾಜ್ಯದ ಎಲ್ಲೆಡೆ, ದೇಶಕ್ಕಾಗಿ – ರಾಜ್ಯಕ್ಕಾಗಿ ನಿಷ್ಠೆಯಿಂದ ದುಡಿಯುವ ಸಮರ್ಥ ಸರ್ಕಾರವನ್ನು ಆರಿಸಲು, ಅತ್ಯಂತ ಉತ್ಸಾಹ ಮತ್ತು ಲವಲವಿಕೆಯಿಂದ ಪಾಲ್ಗೊಂಡು ತಮ್ಮ ಅಮೂಲ್ಯವಾದ ಮತ ಚಲಾಯಿಸಿದ ಪ್ರತಿಯೊಬ್ಬ ಮತದಾರ ಪ್ರಭುವಿಗೂ ಮನದಾಳದ ಧನ್ಯವಾದಗಳು ಎಂದು ಬಿಜೆಪಿ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.

ಧನ್ಯವಾದ ಹೇಳಿದ ಕಾಂಗ್ರೆಸ್‌

ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾನ ಮಾಡಿದ ಕರ್ನಾಟಕದ ಸಮಸ್ತ ನಾಗರಿಕರಿಗೂ ನಮ್ಮ ಹೃತ್ಪೂರ್ವಕ ಧನ್ಯವಾದಗಳು ಎಂದು ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ ಹೇಳಿದೆ.

ಇದನ್ನೂ ಓದಿ: Karnataka Election 2023 Live Updates: ವಿಸ್ತಾರ ನ್ಯೂಸ್‌ನ Exit Poll; ಕಾಂಗ್ರೆಸ್‌ ದೊಡ್ಡ ಪಕ್ಷ; ಬೇರೆ Exit Poll ಹೇಳಿರುವುದೇನು?

ಮತದಾರರಿಗೆ ಎಚ್‌ಡಿಕೆ ಧನ್ಯವಾದ

ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ ಜೆಡಿಎಸ್‌ ಪಕ್ಷದ ಸಮಸ್ತ ಕಾರ್ಯಕರ್ತ ಬಂಧುಗಳು, ಮುಖಂಡರಿಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಸಹಕಾರ, ಸಮರ್ಪಣಾ ಮನೋಭಾವಕ್ಕೆ ನಾನು ಚಿರಋಣಿ. ಹಾಗೆಯೇ, ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಮತದಾನ ಮಾಡಿದ ಪ್ರತಿಯೊಬ್ಬರಿಗೂ ನನ್ನ ಗೌರವಪೂರ್ಣ ನಮನಗಳು ಎಂದು ಮಾಜಿ ಸಿಎಂ, ಜೆಡಿಎಸ್‌ ನಾಯಕ ಎಚ್.‌ ಕುಮಾರಸ್ವಾಮಿ ಅವರು ಟ್ವೀಟ್‌ ಮೂಲಕ ಧನ್ಯವಾದವನ್ನು ಹೇಳಿದ್ದಾರೆ.

Exit mobile version