Site icon Vistara News

40% ಕಮಿಷನ್| ಕರ್ನಾಟಕವನ್ನು ಕರಪ್ಶನ್‌ ಕ್ಯಾಪಿಟಲ್‌ ಮಾಡಿದ ಬಿಜೆಪಿ ಸರಕಾರ: ಕಾಂಗ್ರೆಸ್‌ ತೀವ್ರ ವಾಗ್ದಾಳಿ

congress corruption charge

ಬೆಂಗಳೂರು: ಗಾರ್ಡನ್‌ ಸಿಟಿ, ಸಿಲಿಕಾನ್‌ ಸಿಟಿ ಎಂಬ ಹೆಗ್ಗಳಿಕೆ ಹೊಂದಿದ್ದ ಬೆಂಗಳೂರನ್ನು, ಅದನ್ನು ರಾಜಧಾನಿಯಾಗಿ ಹೊಂದಿರುವ ಕರ್ನಾಟಕವನ್ನು ಬಿಜೆಪಿ ಸರಕಾರ ಕರಪ್ಶನ್‌ ಕ್ಯಾಪಿಟಲ್‌ (ಭ್ರಷ್ಟಾಚಾರದ ರಾಜಧಾನಿ) ಮಾಡಿದೆ ಎಂದು ಕಾಂಗ್ರೆಸ್‌ ತೀವ್ರ ವಾಗ್ದಾಳಿ ನಡೆಸಿದೆ.

ಬಿಜೆಪಿ ಸರಕಾರ ಎದುರಿಸುತ್ತಿರುವ ಭ್ರಷ್ಟಾಚಾರದ ಆರೋಪಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಬೃಹತ್‌ ಅಭಿಯಾನ ನಡೆಸಲು ಮುಂದಾಗಿರುವ ಕಾಂಗ್ರೆಸ್‌ ಮಂಗಳವಾರ ಅದಕ್ಕೆ ಚಾಲನೆಯನ್ನು ನೀಡಿತು. ʻʻಬಿಜೆಪಿ ಭ್ರಷ್ಟ ಸರ್ಕಾರ, 40% ಕಮಿಷನ್ ಸರ್ಕಾರʼʼ ಎಂದು ಅದು ಅಭಿಯಾನ ಆರಂಭಿಸಿದೆ. ಬಿಜೆಪಿ ಸರಕಾರದ ಭ್ರಷ್ಟಾಚಾರದ ಬಗ್ಗೆ ಒಂದು ಹಾಡು, ಪೋಸ್ಟರ್‌ ಮಾತ್ರವಲ್ಲದೆ, ಸರಕಾರದಲ್ಲಿ ಯಾವ ಕೆಲಸಕ್ಕೆ ಎಷ್ಟು ಲಂಚ ಕೊಡಬೇಕು ಎಂಬ ಬಗ್ಗೆ ಒಂದು ಲಂಚದ ಕಾರ್ಡನ್ನೇ ಬಿಡುಗಡೆ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಬ್ಬರೂ ಬಿಜೆಪಿ ಸರಕಾರ ಮತ್ತು ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಸದನದ ಒಳಗೂ ಹೊರಗೂ ಚರ್ಚೆಯಾಗಲಿ
ಬಿಜೆಪಿ ಸರಕಾರದ ಭ್ರಷ್ಟಾಚಾರವನ್ನು ಬಯಲಿಗೆ ಎಳೆಯಲು ಕಾಂಗ್ರೆಸ್‌ ಸಜ್ಜಾಗಿದೆ. ಇದು ವಿಧಾನಸೌಧದ ಒಳಗೆ ಮತ್ತು ಸಾರ್ವಜನಿಕವಾಗಿ ಚರ್ಚೆ ಆಗಬೇಕು. ಸದನದಲ್ಲಿ ಭ್ರಷ್ಟಾಚಾರದ ಬಗ್ಗೆ ವ್ಯಾಪಕವಾಗಿ ಚರ್ಚೆ ಆಗಬೇಕು. ಈ ಬಗ್ಗೆ ಶಾಸಕರಿಗೆ ಪಕ್ಷ ಜವಾಬ್ದಾರಿ ಕೊಟ್ಟಿದೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಗೌರವವನ್ನು ಹಾಳು ಮಾಡಿದೆ. ಗಾರ್ಡನ್‌ ಸಿಟಿ ಮತ್ತು ಸಿಲಿಕಾನ್‌ ಸಿಟಿ ಎಂಬ ಗೌರವವನ್ನು ಕರಪ್ಶನ್‌ ಕ್ಯಾಪಿಟರ್‌ ಆಗಿ ಬದಲಾಯಿಸಿದ ಅಪಕೀರ್ತಿ ಬಿಜೆಪಿಗೆ ಸೇರುತ್ತದೆ ಎಂದು ಹೇಳಿದ ಅವರು, ಡಬಲ್‌ ಎಂಜಿನ್‌ ಸರಕಾರ ಬಂದ ಮೇಲೆ ಯಾವ ಕೆಲಸಕ್ಕೆ ಎಷ್ಟು ಎಂದು ಬೋರ್ಡ್‌ ಹಾಕಿ ಕೆಲಸ ಮಾಡುತ್ತಿದೆ ಎಂದು ನುಡಿದರು.

ಪ್ರೊ. ಅಶೋಕ್‌ ಸಾವಿನ ತನಿಖೆ ಯಾಕೆ ಮಾಡಿಲ್ಲ?
ʻʻಎಸಿಪಿ, ಇನ್ಸ್‌ಪೆಕ್ಟರ್‌ ಸೇರಿದಂತೆ ಎಲ್ಲಾ ಹುದ್ದೆಗಳಿಗೆ ರೇಟ್ ಫಿಕ್ಸ್ ಆಗಿದೆ‌ʼʼ ಎಂದ ಡಿ.ಕೆ ಶಿವಕುಮಾರ್‌, ʻʻನಾವು ದಿನಕ್ಕೊಂದು ಪ್ರಶ್ನೆ ಮಾಡುತ್ತಿದ್ದೇವೆ. ಆದರೆ, ಸರಕಾರಕ್ಕೆ ಉತ್ತರ ಕೊಡಲು ಆಗುತ್ತಿಲ್ಲ. ಪ್ರೊ. ಅಶೋಕ್ ಆತ್ಮಹತ್ಯೆ ಮಾಡಿಕೊಂಡರು. ತನಿಖೆ ಯಾಕೆ ಮಾಡಿಲ್ಲ? ರಾಜಪಾಲರು ಭ್ರಷ್ಟಾಚಾರ ಮಾಡಿದ್ರು ಎಂದು ನಾನು ಹೇಳಲ್ಲ. ವಿಸಿ ಆಗಬೇಕು ಎಂದು ಹಣ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ಸರ್ಕಾರ, ಮಂತ್ರಿಗಳು ಭಾಗಿಯಾಗದೆ ಯಾವ ಅಧಿಕಾರಿಗಳಿಗೆ ಭ್ರಷ್ಟಾಚಾರ ಮಾಡಲು ಧೈರ್ಯ ಬರುತ್ತದೆʼʼ ಎಂದು ಪ್ರಶ್ನಿಸಿದರು.

ಪ್ರಿಯಾಂಕ್‌ ಖರ್ಗೆಗೆ ನೋಟಿಸ್‌ ಕೊಡ್ತೀರಾ?
ʻʻಕನಕಗಿರಿ ಎಂಎಲ್ಎ 15 ಲಕ್ಷ ತಾನೇ ಸರ್ಕಾರಕ್ಕೆ ಕೊಟ್ಟಿದ್ದೀನಿ. ಅದು ನಂದೇ ವಾಯ್ಸ್ ಅಂತ ಹೇಳಿದ. ನಮ್ಮ ಪಕ್ಷದ ಪರವಾಗಿ ಶಾಸಕ ಪ್ರಿಯಾಂಕ್‌ ಖರ್ಗೆ ಅವರು ಇದನ್ನು ಪ್ರಸ್ತಾಪ ಮಾಡಿದರೆ ನೊಟೀಸ್ ಕೊಟ್ಟು ಹೆದರಿಸ್ತೀರಾ? ಬೊಮ್ಮಾಯಿ ಅವರು 2500 ಕೋಟಿ ರೂ. ಕೊಟ್ಟು ಮುಖ್ಯಮಂತ್ರಿಯಾಗಿದ್ದಾರೆ ಎಂದು ಬಿಜೆಪಿಯದೇ ಶಾಸಕ ಬಸವರಾಜ ಪಾಟೀಲ್‌ ಯತ್ನಾಳ್ ಹೇಳಿದ್ರಲ್ಲ, ಯಾಕೆ ಅವರನ್ನು ನೊಟೀಸ್ ಕೊಟ್ಟು ಕರೆಯಲಿಲ್ಲ? ಮಂಚದ ಕೇಸಲ್ಲಿ ಒಬ್ಬ ಮಾಜಿ ಶಾಸಕ 15 ಲಕ್ಷ ಕೊಟ್ಟೆ ಅಂತ ಹೇಳಿದ. ಯಾಕೆ ಕರೆಯಲಿಲ್ಲ ಅವನನ್ನು? ನಿಮ್ಮ ಸರ್ಕಾರ ಏನು ಮಾಡ್ತಾ ಇತ್ತು?ʼʼ ಎಂದು ಖಾರವಾಗಿ ಪ್ರಶ್ನಿಸಿದರು ಡಿ.ಕೆ. ಶಿವಕುಮಾರ್‌.

ಮುಖ್ಯಮಂತ್ರಿಗಳಿಗೆ ಈಗ ದಮ್ಮು ಬಂತಾ?
ʻʻನಾನು ಪವರ್ ಮಿನಿಸ್ಟರ್ ಆಗಿದ್ದಾಗ ಭ್ರಷ್ಟಾಚಾರ ಆಗಿದೆ ಎಂದು ಹೇಳಿದ್ರು. ಹೆಚ್ಚು ದುಡ್ಡು ಕೊಟ್ಟು ಪವರ್ ಖರೀದಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ರು. ತನಿಖೆ ಮಾಡಲಿ, ಯಾರು ಬೇಡ ಎಂದ್ರು. ನಮ್ಮದೆಲ್ಲ ಬಯಲಿಗೆಳೆಯುತ್ತಾರಂತೆ. ಸಿಎಂ ಏನೋ ದಮ್ಮಿನ ಬಗ್ಗೆ ಮಾತಾಡ್ತಿದ್ರಲ್ಲ. ಮೂರು ವರ್ಷ ಎಲ್ಲಿ ಹೋಗಿತ್ತು ಅವರ ದಮ್ಮು. ಈಗ ಬಂದುಬಿಡ್ತಾ ದಮ್ಮು?ʼʼ ಎಂದು ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದರು.

ಭಯ ಬಿಟ್ಟು ದೂರು ಕೊಡಿ ಎಂದ ಸಿದ್ದರಾಮಯ್ಯ
ʻʻಬಿಬಿಎಂಪಿಯಲ್ಲಿ 40 ರಿಂದ 50% ಕಮಿಷನ್ ಫಿಕ್ಸ್‌ ಮಾಡಿದ್ದಾರೆ. ಭ್ರಷ್ಟಾಚಾರದಿಂದ ವ್ಯವಸ್ಥೆ ಗಬ್ಬೆದ್ದು ಹೋಗಿದೆ. ಬಹಳಷ್ಟು ಜನ ಭಯದಿಂದ ದೂರು ಕೊಡಲ್ಲ. ಹಾಗಾಗಿ ನಾವು ಅಭಿಯಾನ ಪ್ರಾರಂಭ ಮಾಡಿ, ಹೆಲ್ಪ್ ಲೈನ್ ನಂಬರ್ ಮಾಡಿದ್ದೇವೆ. ಯಾರೇ ದೂರು ಕೊಟ್ಟರು ಅದನ್ನು ಗೌಪ್ಯವಾಗಿ ಇಡ್ತೇವೆ. ಜನರಲ್ಲಿ ಜಾಗೃತಿ ಮೂಡಿಸುವುದು. ಈ ಕಿರುಕುಳದಿಂದ ಜನರನ್ನು, ಗುತ್ತಿಗೆದಾರನ್ನು ಮುಕ್ತ ಮಾಡುವುದು ನಮ್ಮ ಉದ್ದೇಶʼʼ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ʻʻಸಿಎಂ ಹಾಗೂ ಮಂತ್ರಿ ಮಂಡಲದ ಎಲ್ಲ ಮಂತ್ರಿಗಳು ಸಂಪೂರ್ಣ ಲೂಟಿ ಹೊಡೆಯುತ್ತಿದ್ದಾರೆ. ಜನರ ರಕ್ತ ಹೀರುವ ಕೆಲಸ ಮಾಡ್ತಾ ಇದ್ದಾರೆʼʼ ಎಂದು ಹೇಳಿದ ಅವರು ಈಶ್ವರಪ್ಪ ಅವರ ಮೇಲಿನ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಸಾವಿನ ಆರೋಪವನ್ನು ಉಲ್ಲೇಖಿಸಿದರು.

ಇದನ್ನೂ ಓದಿ | 40% ಕಮಿಷನ್‌ | ಬಿಜೆಪಿ ಸರಕಾರದ ಮೇಲೆ 15,00,00,00,00,000 ರೂ. ಲೂಟಿ ಆರೋಪ, ಕಾಂಗ್ರೆಸ್‌ನಿಂದ ಲಂಚದ ಮೆನು!

Exit mobile version