ಮೈಸೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆಸಲಾದ ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯವನ್ನು ಸರಿಪಡಿಸಬೇಕು ಎಂದಿರುವ ಸಾಹಿತಿ ದೇವನೂರು ಮಹಾದೇವ, ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಕೇಶವ ಬಲಿರಾಂ ಹೆಡ್ಗೆವಾರ್ ಕುರಿತ ಪಠ್ಯವನ್ನು ಕೈಬಿಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ದೇವನೂರು ಮಹಾದೇವ, ಹಿಂದಿನ ಸರ್ಕಾರ ತಮಗೆ ಇಷ್ಟದ ಹಾಗೆ ಪಠ್ಯ ಪರಿಷ್ಕರಣ ಮಾಡಿದೆ. ಆ ಸಮಿತಿಯಲ್ಲಿ ಯಾರೂ ಸಹ ಶಿಕ್ಷಣ ತಜ್ಞರು ಇರಲಿಲ್ಲ. ಹೆಡ್ಗೆವಾರ್ ವಿಚಾರಗಳನ್ನು ಪಠ್ಯದಿಂದ ಕೈ ಬಿಡಬೇಕು. ಶಿಕ್ಷಣ ತಜ್ಞರು ಇರುವ ತಂಡ ರಚಿಸಿ ಪಠ್ಯ ಪರಿಷ್ಕರಣೆ ಮಾಡ್ಬೇಕು. ಈಗಿರುವ ಸರ್ಕಾರ ಆ ರೀತಿಯ ತಪ್ಪು ಮಾಡಬಾರದು ಎಂದರು.
ಯಾವೆಲ್ಲ ವಿಚಾರಗಳನ್ನು ಪಠ್ಯದಲ್ಲಿ ತಿರುಚಿದ್ದಾರೆ, ಅದನ್ನ ಕಿತ್ತು ಎಸೆಯಬೇಕು. ಮತ್ತೆ ಹೊಸದಾಗಿ ಅದಕ್ಕೆ ಪೂರಕವಾದ ಪಠ್ಯ ನೀಡಬೇಕು. ಈಗ ಮಕ್ಕಳಿಗೆ ಪಾಠ ನಡೆಯಲಿ. ಆರು ತಿಂಗಳಾದರೂ ಪರವಾಗಿಲ್ಲ ಹೊಸ ಪೂರಕ ಪಠ್ಯ ನೀಡಬೇಕು. ಪಠ್ಯ ಪರಿಷ್ಕರಣೆಯನ್ನು ನಾನೇ ಮಾಡಬೇಕು ಎಂದಿಲ್ಲ. ಹಂಪಿ ಯೂನಿವರ್ಸಿಟಿ ಮಾಡಲಿ, ಶಿಕ್ಷಣ ತಜ್ಞರು ಮಾಡಲಿ, ಈ ಬಗ್ಗೆ ಶಿಕ್ಷಣ ತಜ್ಞರ ಜತೆ ಚರ್ಚೆ ಮಾಡಲಿ.
ಮುಂದಿನ ವರ್ಷಕ್ಕೆ ಸರ್ವಜನಾಂಗದ ಶಾಂತಿಯ ತೋಟ ಎಂಬಂತಿರುವ ಪಠ್ಯ ನೀಡಬೇಕು. ಇನ್ನು ವಿಜ್ಞಾನದ ಪಠ್ಯವೂ ಅದೇ ರೀತಿ ಆಗಿದೆ. ಅದನ್ನು ಸರಿ ಮಾಡಲಿ. ಇದನ್ನೆಲ್ಲ ಈ ವರ್ಷವೇ ಮಾಡಲಿ. ಸಿಎಂ ಜತೆ ಸಾಹಿತಿಗಳು ಇದೇ ವಿಚಾರ ಚರ್ಚೆ ಮಾಡಿದ್ದಾರೆ ಎನಿಸುತ್ತದೆ ಎಂದು ಹೇಳಿದರು.
ಹಿಜಾಬ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ಅವರ ಹಕ್ಕು ರೀ. ನಾನು ಅದನ್ನ ಹಾಕ್ಬೇಡಿ ಅಂತ ಹೇಳ್ತೀನಿ. ಆದ್ರೆ ನಾನೇ ಅದಕ್ಕೆ ಬೆಂಬಲ ನೀಡಿದ್ದೆ. ಅವರ ಹಕ್ಕನ್ನು ನಾವು ಯಾಕೆ ಕಿತ್ಕೊಳ್ಬೇಕು? ಅರಬ್ ಕಂಟ್ರಿಲಿ ಹಿಜಾಬ್ ಬೇಡ ಎಂದು ಪ್ರತಿಭಟನೆ ಮಾಡಿದ್ರು. ಅದು ಅವರ ಹಕ್ಕು. ದಬ್ಬಾಳಿಕೆ ಮಾಡಿ ಯಾಕೆ ಅದನ್ನ ತೆಗಿಬೇಕು? ಹಿಜಾಬ್ ಗಲಾಟೆಯಿಂದ ಅದೆಷ್ಟೋ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಯ್ತು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಹಿಜಾಬ್ ನಿಂದ ಅದನ್ನ ಕಿತ್ತುಕೊಳ್ಳಬಾರದು.
ಹಿಂದುತ್ವ ಅಂದ್ರೆ ವೈದಿಕ ಆಗಬಾರದು. ಸಾಧು ಸಂತರದ್ದು, ಬುದ್ಧ ಬಸವ ಅಂಬೇಡ್ಕರ್ ಅವರದ್ದು ಮತ್ತೊಂದು ಇದೆ. ಹಿಂದೂ ಧರ್ಮ ಅಂತ ಬಂದ್ರೆ ವೈದಿಕ. ಸಂವಿಧಾನಕ್ಕೆ ಬೇಕಿರೋದು ಬುದ್ಧ ಇತ್ಯಾದಿಗಳದ್ದು. ನಾವು ಹಿಂದುತ್ವ ಅಲ್ಲ, ಎಲ್ಲಾ ಸಮುದಾಯಗಳನ್ನು ಒಳಗೊಂಡ ಬಹುತ್ವ ಆಯ್ಕೆ ಎಂದಿದ್ದಾರೆ.
ಇದನ್ನೂ ಓದಿ: NCERT: ಹೊಸ ಶಿಕ್ಷಣ ನೀತಿ ಅನುಸಾರ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ಪರಿಷ್ಕರಣೆ, ಮುಂದಿನ ವರ್ಷದಿಂದಲೇ ಜಾರಿ