ಬೆಂಗಳೂರು: ಚುನಾವಣೆ ವರ್ಷದಲ್ಲಿ ಸಂಭ್ರಮಾಚರಣೆ ಹಾಗೂ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡುವ ಚಿಂತನೆಯಲ್ಲಿದ್ದ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಈಗ ಇಕ್ಕಟ್ಟಿನಲ್ಲಿ ಸಿಲುಕಿದೆ. ಪಕ್ಷದ ಕಾರ್ಯಕರ್ತನ ಹತ್ಯೆಯಾಗಿ ರಾಜ್ಯಾದ್ಯಂತ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನವಿರುವಾಗ ಸಂಭ್ರಮಾಚರಣೆ ನಡೆಸುವುದು ಹೇಗೆ? ಯಾವ ಸಾಧನೆಯನ್ನು ಹೇಳಿಕೊಳ್ಳುವುದು ಎಂಬ ಯೋಚನೆ ಶುರುವಾಗಿದೆ.
ಶಿವಮೊಗ್ಗದಲ್ಲಿ ಫೆಬ್ರವರಿ 21ರಂದು ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ನಡೆದಿತ್ತು. ಇದರ ನಂತರ ಕಾರ್ಯಕರ್ತರಲ್ಲಿ ಆಕ್ರೋಶ ಹೆಚ್ಚಾಗಿತ್ತು. ಒತ್ತಡಕ್ಕೆ ಮಣಿದ ಸರ್ಕಾರ ಪ್ರಕರಣವನ್ನು ಎನ್‌ಐಎಗೆ ವಹಿಸಿತು. ಆರು ಆರೋಪಿಗಳನ್ನು ಬಂಧಿಸಿರುವ ಎನ್‌ಐಎ ಈಗಾಗಲೆ ತನಿಖೆ ನಡೆಸುತ್ತಿದೆ.
ಬೆಂಗಳೂರಿನ ಜಗಜೀವನ್ ರಾಮ್ ನಗರದಲ್ಲಿ ಏಪ್ರಿಲ್ 5ರಂದು ಚಂದು ಎಂಬ ಯುವಕನ ಕೊಲೆ ಆಗಿತ್ತು. ಚಂದು ಬಿಜೆಪಿ ಅಥವಾ ಆರ್‌ಎಸ್‌ಎಸ್ ಕಾರ್ಯಕರ್ತ ಆಗಿರಲಿಲ್ಲ. ಆದರೆ ಆತ ಉರ್ದುವಿನಲ್ಲಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಮುಸ್ಲಿಂ ಯುವಕರು ಹತ್ಯೆ ಮಾಡಿದರು ಎಂಬುದು ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ | Praveen Murder| ಕೇಂದ್ರವೂ ನಮ್ಮದೇ, ರಾಜ್ಯವೂ ನಮ್ಮದೇ ಕೊನೆಗೆ ಸಾವೂ ನಮ್ಮದೇ: ಕಾರ್ಯಕರ್ತರ ಆಕ್ರೋಶ
ಈ ಕುರಿತು ಅಂದಿನ ಪೊಲೀಸ್ ಆಯುಕ್ತ ಕಮಲ್‌ಪಂತ್ ಹೇಳಿಕೆಗೂ ಗೃಹಸಚಿವರ ಹೇಳಿಕೆಗೂ ತಾಳೆಯಾಗದಿದ್ದಾಗ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ಎನ್. ರವಿ ಕುಮಾರ್, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಉರ್ದು ಬರುವುದಿಲ್ಲ ಎಂಬ ಕಾರಣಕ್ಕೇ ಚಂದುವನ್ನು ಹತ್ಯೆ ಮಾಡಲಾಗಿದೆ. ಅವನನ್ನು ಮುಸ್ಲಿಂ ಗೂಂಡಾಗಳು ಕೊಂದಿದ್ದಾರೆ. ಕಮಿಷನರ್ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿದ್ದರು. ಇದರ ನಂತರ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ಅದರ ತನಿಖೆಯೂ ನಡೆಯುತ್ತಿದೆ.
ಈ ನಡುವೆ ಸುಳ್ಯದ ಬೆಳ್ಳಾರೆಯಲ್ಲಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿದೆ. ಹತ್ಯೆ ನಡೆದ ಕೂಡಲೆ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ʻಸರ್ಕಾರವೂ ನಮ್ಮದೇ, ಸಾವೂ ನಮ್ಮದೇʼ ಎನ್ನುತ್ತ ಅಸಮಾಧಾನ ಹೊರಹಾಕುತ್ತಿದ್ದಾರೆ.
ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ, ಕಠಿಣ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಹೇಳಿಕೆಗಳಿಗಷ್ಟೆ ಸರ್ಕಾರದವರ ಕ್ರಮ ಸೀಮಿತವಾಗಿದೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಇದರ ಜತೆಗೆ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವ ಮೋರ್ಚಾ, ಸಾಮಾಜಿಕ ಜಾಲತಾಣ ಪ್ರಕೋಷ್ಠಗಳ ಯುವ ಪದಾಧಿಕಾರಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಾಗೂ ಒಟ್ಟಾರೆ ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಈ ರಾಜಿನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಹ ಕಾರ್ಯಕರ್ತರ ಅಸಮಾಧಾನಕ್ಕೆ ದನಿಗೂಡಿಸಿದ್ದಾರೆ. ಕೇಂದ್ರದಲ್ಲಿ, ರಾಜ್ಯದಲ್ಲಿ ಎರಡೂ ಕಡೆ ನಾವೇ ಇದ್ದರೂ ಏನೂ ಮಾಡಲಾಗುತ್ತಿಲ್ಲ ಎಂದು ಕಾರ್ಯಕರ್ತರು ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ. ಚಂದು, ಹರ್ಷ, ಪ್ರವೀಣ್ ನಾಳೆ ಇನ್ಯಾರೋ.? ಕಾರ್ಯಕರ್ತರ ಭಾವನೆ ಜತೆಗೆ ನಾವೂ ಇದ್ದೇವೆ. ನಾವು ಕೇವಲ ಅಧಿಕಾರ ಮಾಡಲು ಬಂದಿಲ್ಲ. ಅವರ ಭಾವನೆ ಜೊತೆಗೆ ನಾವೂ ನಿಲ್ಲುತ್ತೇವೆ. ಜಿಹಾದ್ ವಿರುದ್ಧ ಹೋರಾಟ ಮಾಡಲು ವ್ಯವಸ್ಥೆಯನ್ನು ಅಣಿಗೊಳಿಸಬೇಕು. ಸಿದ್ದರಾಮಯ್ಯ ಕಾಲದಲ್ಲೂ ಸರಣಿ ಹತ್ಯೆ ನಡೆಯುತ್ತಿತ್ತು, ಈಗಲೂ ಅದೇ ರೀತಿ ನಡೆಯುತ್ತಿದೆ ಎನ್ನುವ ಆರೋಪ ಇದೆ. ಇದನ್ನು ನಾವು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ನಾವೀಗ ಆಕ್ಷನ್ ಮಾಡದಿದ್ದರೆ ನಾವೇ ಹೊಣೆ ಹೊರಬೇಕಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ಬಿಜೆಪಿ ಸರ್ಕಾರ ಬಂದರೆ ಹಿಂದುಗಳಿಗೆ, ಹಿಂದು ಕಾರ್ಯಕರ್ತರಿಗೆ ರಕ್ಷಣೆ ಸಿಗುತ್ತದೆ. ಭಯೋತ್ಪಾದಕರನ್ನು ಹಿಡಿದು ಹೊರಗಟ್ಟಲಾಗುತ್ತದೆ ಎಂದು ವಾಗ್ದಾನ ನೀಡಲಾಗಿತ್ತು. ಆದರೆ ಇದೀಗ ಬೆಂಗಳೂರು ಮತ್ತಿತರ ಕಡೆಗಳಲ್ಲಿ ಭಯೋತ್ಪಾದಕ ಆರೋಪದಲ್ಲಿ ಅನೇಕರು ಬಂಧಿತರಾಗುತ್ತಿದ್ದಾರೆ. ರಾಜಧಾನಿ ಬೆಂಗಳೂರು ಭಯೋತ್ಪಾದನೆಯ ಸ್ಲೀಪರ್‌ಸೆಲ್ ಆಗಿದೆ ಎಂಬ ಆರೋಪವೂ ಇದೆ. ಇದೆಲ್ಲದರ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ವಿರೋಧಪಕ್ಷಗಳಿಗಿಂತಲೂ ಹೆಚ್ಚಾಗಿ ತಮ್ಮ ಪಕ್ಷದಲ್ಲೆ ಪ್ರತಿರೋಧ ಬರುತ್ತಿದೆ. ಇದೆಲ್ಲದರ ನಡುವೆ ಸರ್ಕಾರ ಒಂದು ವರ್ಷದ ಸಾಧನೆ ಸಮಾವೇಶವನ್ನು ಹೇಗೆ ಮಾಡುತ್ತದೆ ಎನ್ನುವುದು ಪ್ರಶ್ನೆ.
ಇದನ್ನೂ ಓದಿ | Praveen Nettaru Murder| ಬೆಳಗಿನವರೆಗೂ ಬಾರದ ಬಿಜೆಪಿ ನಾಯಕರು, ಬಂಧುಗಳ ಆಕ್ರೋಶ