ನವದೆಹಲಿ: ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿದ್ದರ ಸಂಪೂರ್ಣ ಶ್ರೇಯವನ್ನು ಪಡೆಯಲು ಬಿಜೆಪಿ ಎಲ್ಲ ಪ್ರಯತ್ನ ನಡೆಸುತ್ತಿರುವ ನಡುವೆಯೇ, ದಮನಿತ ವರ್ಗಗಳಿಗೆ ನ್ಯಾಯ ಒದಗಿಸಲು ಬಿಜೆಪಿಗೆ ಯಾವುದೇ ಬದ್ಧತೆ ಇಲ್ಲ ಎನ್ನುವುದನ್ನು ಸಿದ್ದರಾಮಯ್ಯ ಸುದೀರ್ಘವಾಗಿ ಆರೋಪಿಸಿದ್ದಾರೆ.
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಅಧಿಕಾರ ಸ್ವೀಕರಿಸುವ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಮಾತನಾಡಿದರು.
ನ್ಯಾ. ನಾಗಮೋಹನದಾಸ್ ಸಮಿತಿಗೂ ಸಿದ್ದರಾಮಯ್ಯ ಅವರಿಗೂ ಸಂಬಂಧ ಇಲ್ಲ ಎಂಬ ಸಚಿವ ಆರ್. ಅಶೋಕ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾಗಮೋಹನದಾಸ್ ಸಮಿತಿ ರಚನೆ ಆಗಿದ್ದು ಸಮ್ಮಿಶ್ರ ಸರ್ಕಾರದಲ್ಲಿ. ಆಗ ಅಶೋಕ ಇದ್ದನ? ನಮ್ಮ ಹಾಗೂ ಜೆಡಿಎಸ್ ನಡುವೆ ಎಣ್ಣೆ ಸೀಗೇಕಾಯಿ ಸಂಬಂಧ ಇತ್ತು ಎಂದು ಅಶೋಕ ಹೇಳಿದನ? ಎದು ಏಕವಚನದಲ್ಲೇ ಮಾತು ಮುಂದುವರಿಸಿದ ಸಿದ್ದರಾಮಯ್ಯ, ಸಮಿತಿ ರಚನೆಯಾದಾಗ ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ಸಮಾಜ ಕಲ್ಯಾಣ ಸಚಿವರಾಗಿದ್ದರು. ನಮ್ಮ ಸರ್ಕಾರ, ನಮ್ಮ ಮಂತ್ರಿಯೇ ಇದನ್ನು ಮಾಡಿದರು. ಇದರಲ್ಲಿ ಅಶೋಕನಿಗೆ ಏನು ಸಂಬಂಧ? ಎಂದು ಪ್ರಶ್ನಿಸಿದರು.
ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ವರದಿ ಜಾರಿ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು. ಸಮಿತಿ ವರದಿ ಸಲ್ಲಿಸಿ ಎರಡು ವರ್ಷವಾದರೂ ಏಕೆ ವರದಿ ಜಾರಿ ಮಾಡಲಿಲ್ಲವಲ್ಲ, ಆಗ ಅಶೋಕ ಎಲ್ಲಿ ಹೋಗಿದ್ದ? ಸ್ವಾಮೀಜಿ ಪ್ರತಿಭಟನೆ ಮಾಡಿದ ನಂತರ ಮಾಡಿದರು. ಇವರಿಗೆ ಕಾಳಜಿ ಇದ್ದಿದ್ದರೆ ಆಗಲೇ ಮಾಡಬೇಕಿತ್ತಲ್ಲವ? ನಮ್ಮ ಹೋರಾಟದ ಫಲವಾಗಿ ಇಂದು ವರದಿ ಜಾರಿಯಾಗಿದೆ.
ಎಸ್‌ಸಿಎಸ್‌ಪಿ ಟಿಎಸ್‌ಪಿ ಹಣ ಖರ್ಚು ಮಾಡಬೇಕೆಂದು ನಿರ್ಧಾರ ಮಾಡಿದವರು ನಾವು. ಗುತ್ತಿಗೆಯಲ್ಲಿ ಮೀಸಲಾತಿ ತಂದವರು ನಾವು. ಇವರ ಕೊಡುಗೆ ಏನಿದೆ? ಯಾವುದೇ ವಿಚಾರದಲ್ಲಿ ಬಿಜೆಪಿ ದ್ವಂದ್ವ ನಿಲುವನ್ನು ಹೊಂದಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡಲು ರಾಜೀವ್ ಗಾಂಧಿ ಅವಧಿಯಲ್ಲಿ ಸಂವಿಧಾನದ 73 ಹಾಗೂ 74ನೇ ತಿದ್ದುಪಡಿ ತಂದಿದ್ದು ಕಾಂಗ್ರೆಸ್. ಇದನ್ನು ವಿರೋಧ ಮಾಡಿ ಕೋರ್ಟ್‌ಗೆ ಹೋಗಿದ್ದವರು ಬಿಜೆಪಿಯ ರಾಮಾಜೋಯಿಸ್. ಅವರು ಬಿಜೆಪಿಯ ರಾಜ್ಯಸಭೆ ಸದಸ್ಯರಾಗಿದ್ದವು, ಉಪಾಧ್ಯಕ್ಷರಾಗಿದ್ದವರು. ಅವರನ್ನು ಬಿಜೆಪಿಯವರು ತಡೆದರ? ಆದರೆ ರಾಮಾಜೋಯಿಸ್ ಅವರ ಮನವಿಯನ್ನು ಕೋರ್ಟ್ ವಜಾ ಮಾಡಿತು.
ಮಂಡಲ್ ಸಮಿತಿ ವಿರೋಧಿಸಿ ರಥ ಯಾತ್ರೆ ಮಾಡಿದ್ದು ಇದೇ ಬಿಜೆಪಿಯ ಆಡ್ವಾಣಿ ಅಲ್ಲವೇ? ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡಬಾರದು ಎಂದು ವಿರೋಧಿಸಿದವರು ಬಿಜೆಪಿಯವರಲ್ಲವೇ? ಕಾಕಾ ಕಾಲೇಲ್ಕರ್ ವರದಿಯಿಂದ ಇಲ್ಲಿಯವರೆಗೂ ಸಾಮಾಜಿಕ ನ್ಯಾಯಕ್ಕೆ ಬಿಜೆಪಿಯವರು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇಂದು ಒತ್ತಡಕ್ಕೆ ಸಿಲುಕಿ, ಚುನಾವಣೆಗಾಗಿ ಜಾರಿ ಮಾಡಿದ್ದಾರೆ ಎಂದರು.
ʼಆರ್. ಅಶೋಕ್ ಮುಂದಿನ ಚುನಾವಣೆಯಲ್ಲಿ ಗೆದ್ದು ಬರಲಿ ನೋಡೋಣʼ
ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬ ಆರ್. ಅಶೋಕ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಅವರು ಮತ್ತೆ ಗೆದ್ದು ಬರುತ್ತಾರ ನೋಡೋ? ಜನ ಅವರನ್ನೇ ಗೆಲ್ಲಿಸುವುದಿಲ್ಲ. ಅವರ ಯೋಗ್ಯತೆಗೆ, ಬೆಂಗಳೂರಿನಲ್ಲಿ ಗುಂಡ ಮುಚ್ಚಲು ಸಾಧ್ಯವಾಗುತ್ತಿಲ್ಲ. ಜನರು ಸಾಯುತ್ತಿದ್ದಾರೆ. ಹಾಗಾಗಿ, ಇವರನ್ನು ಮತ್ತೆ ಆಯ್ಕೆ ಮಾಡಬಾರದು ಎಂದು ಜನರು ತೀರ್ಮಾನ ಮಾಡಿದ್ದಾರೆ ಎಂದರು.
ಇದನ್ನೂ ಓದಿ | SCST ಮೀಸಲಾತಿ ಕಣ್ಣೊರೆಸುವ ತಂತ್ರ ಎಂದ ಸಿದ್ದರಾಮಯ್ಯ