Site icon Vistara News

BJP Politics: ಬೀದಿಗೆ ಬಂದ ಬಿಜೆಪಿ ಕಲಹ; ಯತ್ನಾಳ್‌-ನಿರಾಣಿ ನಡುವೆ ನಿಲ್ಲದ ಅಂತರ್ಯುದ್ಧ

BJP Meeting Vijayapura

#image_title

ವಿಜಯಪುರ/ಬಾಗಲಕೋಟೆ: ಸೋಲಿನ ಹತಾಶೆಯಿಂದ ಕಂಗೆಟ್ಟಿರುವ ಬಿಜೆಪಿಯಲ್ಲಿ ಈಗ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಗಳೇ ಅಂತರ್ಯುದ್ಧದ ವೇದಿಕೆಗಳಾಗುತ್ತಿವೆ (BJP Politics). ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಸಾರ್ವಜನಿಕ ವೇದಿಕೆಗಳಲ್ಲೇ ತಮ್ಮ ಬೇಗುದಿಯನ್ನು ಹೊರಹಾಕುತ್ತಿದ್ದಾರೆ. ಒಬ್ಬರ ಮೇಲೆ ಇನ್ನೊಬ್ಬರು ಬೆಟ್ಟು ತೋರಿಸುತ್ತಾ ಅಕ್ಷರಶಃ ಬೀದಿಯಲ್ಲಿ ಬಡಿದಾಡುತ್ತಿದ್ದಾರೆ.

ಸೋಮವಾರ ಬಾಗಲಕೋಟೆ ಮತ್ತು ವಿಜಯಪುರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಗಳೆರಡೂ ಇಂಥಹುದೇ ಘಟನೆಗಳಿಗೆ ಸಾಕ್ಷಿಯಾದವು. ಬಾಗಲಕೋಟೆಯಲ್ಲಿ ಮಾಜಿ ಸಚಿವ ಮುರುಗೇಶ್‌ ನಿರಾಣಿ (Murugesh Nirani) ಅವರ ಭಾಷಣಕ್ಕೆ ಕಾರ್ಯಕರ್ತರು ಅಡ್ಡಿಪಡಿಸಿದರೆ ವಿಜಯಪುರದ ಸಮಾವೇಶಕ್ಕೆ ಅಲ್ಲಿನ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagowda pateel Yatnal) ಅವರೇ ಬರಲಿಲ್ಲ!

ಬಾಗಲಕೋಟೆಯಲ್ಲಿ ನಡೆದ ಸಭೆಯಲ್ಲಿ ಮುರುಗೇಶ್‌ ನಿರಾಣಿಯವರು ಮಾತನಾಡಲು ಎದ್ದು ನಿಂತಾಗ ಕೆಲವು ಕಾರ್ಯಕರ್ತರು ಆಕ್ಷೇಪದ ಧ್ವನಿ ಎತ್ತಿದರು. ತಮಗೆ ಮಾತನಾಡಲು ಬಿಡಿ ಎಂದು ಆಕ್ರೋಶದಿಂದ ಹೇಳಿದರು. ಇದನ್ನು ನಿರಾಣಿ ಅಸಹಾಯಕರಾಗಿ ನೋಡಿದರೆ ಅಲ್ಲೇ ಇದ್ದ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಕೊನೆಯವರೆಗೂ ಮೌನವಾಗಿಯೇ ನೋಡಿದರು.

ವಿಜಯಪುರದಲ್ಲಿ ಭಾರಿ ಗಲಾಟೆ

ಇತ್ತ ವಿಜಯಪುರದಲ್ಲಿ ಸಂಜೆ ಮೂರು ಗಂಟೆಗೆ ಆರಂಭವಾಗಬೇಕಾಗಿದ್ದ ಸಭೆ ಆರು ಗಂಟೆಯಾದರೂ ಆರಂಭವಾಗಲಿಲ್ಲ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಸಭೆಗೆ ಬಂದಿರಲೇ ಇಲ್ಲ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮೊದಲಾದವರು ಎಷ್ಟು ಕಾದರೂ ಸುಳಿವಿಲ್ಲ. ಹಾಗಂತ, ಅವರು ಬಾರದೆ ಸಭೆ ಆರಂಭ ಮಾಡಬಾರದು ಎಂಬ ತಾಕೀತು ಯತ್ನಾಳ್‌ ಬೆಂಬಲಿಗರಿಂದ.

ಸಂಜೆ ಆರು ಗಂಟೆಯವರೆಗೂ ಗೀತ ಗಾಯನದ ಹೆಸರಿನಲ್ಲಿ ಹಾಡು ಹೇಳಿಕೊಂಡು ಕಾರ್ಯಕ್ರಮ ಮುಂದುವರಿಸಲಾಯಿತು. ಶಾಸಕಿ ಶಶಿಕಲಾ ಜೊಲ್ಲೆ ಅವರು ಮಾತನಾಡಲು ಶುರು ಮಾಡಿದರು. ಈ ವೇಳೆ, ಅವರು ವಿಜಯಪುರದಿಂದ ಮುಂದಿನ ಬಾರಿಯೂ ರಮೇಶ್‌ ಜಿಗಜಿಣಗಿ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದ್ದು ಯತ್ನಾಳ್‌ ಬೆಂಬಲಿಗರನ್ನು ಕೆರಳಿಸಿತು.

ಈ ರೀತಿಯ ಕ್ಷುಲ್ಲಕ ಪಾಲಿಟಿಕ್ಸ್‌ ಮಾಜಿ ಸಚಿವ ಮುರುಗೇಶ ನಿರಾಣಿ ಮತ್ತು ಮಾಜಿ ಶಾಸಕ ಎ.ಎಸ್‌. ಪಾಟೀಲ್‌ ನಡಹಳ್ಳಿ ಅವರನ್ನು ತೀವ್ರವಾಗಿ ಕೆರಳಿಸಿತು. ಅವರಿಬ್ಬರೂ ಸಭೆಯಿಂದ ಹೊರಬಂದು ಮಾಧ್ಯಮಗಳ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಂಸದ ರಮೇಶ್‌ ಜಿಗಜಿಣಗಿ ಅವರು ಕೂಡಾ ಹೊರಬಂದಿದ್ದರು.

ʻʻಬಸನಗೌಡ ಪಾಟೀಲ್‌ ಯತ್ನಾಳ್ ಅವರ ಧಿಮಾಕಿನ ಮಾತು ಇನ್ನು ಮುಂದೆ ನಡೆಯೊಲ್ಲ. ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿದೆ. ಮತ್ತೊಬ್ಬರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕುʼʼ ಎಂದು ಹೇಳಿದರು.

ಹಿಂದು ಹುಲಿ ಟೋಪಿ ಹಾಕಿ ನಮಾಜ್‌ ಮಾಡಿದ್ದನ್ನು ಮರೆತಿಲ್ಲ

ʻʻ2018ರಲ್ಲಿ ಕಾರಜೋಳರ ಪುತ್ರನನ್ನು ಸೋಲಿಸಿದ್ದು ಯಾರು? ವಿಜುಗೌಡ ಪಾಟೀಲ್ ಮೂರು ಸಾರಿ ಸೋತಿದ್ದಾರೆ, ಅವರನ್ನ ಸೋಲಿಸುವ ಪ್ರಯತ್ನ ಯಾರು ಮಾಡಿದ್ದಾರೆ?ʼʼ ಎಂದು ಯತ್ನಾಳ್‌ ವಿರುದ್ಧ ಹರಿಹಾಯ್ದರು ನಿರಾಣಿ.

ʻʻನಾನೇ ಹಿಂದೂ ಹುಲಿ.. ನಾನೇ ಹಿಂದೂ ಹುಲಿ ಎಂದು ಜಂಬ ಕೊಚ್ಚಿಕೊಂಡವರು ಪಾರ್ಟಿ ಬಿಟ್ಟು ಹೋಗಿ ಟೋಪಿ ಹಾಕಿ ನಮಾಜ್ ಮಾಡಿದ್ದಾರೆ. ಇದನ್ನು ಬಿಜಾಪುರದ ಜನ ಮರೆತಿಲ್ಲ. ಮಾತನಾಡೋದು ಬಹಳ ಇದೆ. ಮಾಳಿಗೆ ಏರಿದ ಮೇಲೆ ಏಣಿ ಒದ್ದರು ಅನ್ನೋ ಹಾಗೇ ಆಗಬಾರದುʼʼ ಎಂದು ಹೇಳಿದರು.

ನಾವು ಸೋತಿದ್ದೇವೆ ಅಷ್ಟೆ

ʻʻಇಲ್ಲಿಗೆ ಚುನಾವಣೆ ಮುಗಿದಿಲ್ಲ, ನಾವಷ್ಟೆ ಸೋತಿಲ್ಲ ವಾಜಪೇಯಿಯವರು ಸೋತಿದ್ದಾರೆ. ಆದರೆ, ಅವನು ವಿಜಯಪುರದಲ್ಲಿ ಬಿಜೆಪಿ ತಲೆತಗ್ಗಿಸೋ ಹಾಗೇ ಮಾಡ್ತಿದ್ದಾನೆ. ಯತ್ನಾಳ್ ಗೆ ತಲೆಯಲ್ಲಿ ಕೋಡು (ಕೊಂಬು) ಬಂದಿವೆ. ನಾನೊಬ್ಬನೆ ಗೆದ್ದಿದ್ದೀನಿ ಎನ್ನುವ ಧಿಮಾಕು, ಅಹಂ ಬಂದಿದೆʼʼ ಎಂದರು ನಿರಾಣಿ.

ಸಭೆಯಿಂದ ಹೊರಬಂದ ಮಾಜಿ ಶಾಸಕ ನಡಹಳ್ಳಿ ಆಕ್ರೊಶ.

ನಿರಾಣಿ ಅವರ ಜತೆ ಸಭೆಯಿಂದ ಹೊರಬಂದ ಮಾಜಿ ಶಾಸಕ ಎ.ಎಸ್‌. ಪಾಟೀಲ್‌ ನಡಹಳ್ಳಿ ಅವರಂತೂ ಎಂಪಿ ಚುನಾವಣೆಯಲ್ಲಿ ರಮೇಶ್‌ ಜಿಗಜಿಣಗಿ ಅವರನ್ನು ಗೆಲ್ಲಿಸುವವರಗೆ ಮನೆಗೆ ಹೋಗಲ್ಲ, ಹೆಂಡತಿ ಮಕ್ಕಳ ಮುಖ ನೋಡಲ್ಲ ಎಂದು ಪ್ರತಿಜ್ಞೆ ಮಾಡಿದರು.

ಜಿಲ್ಲೆಯಲ್ಲಿ ಬಿಜೆಪಿ ಸತ್ತಿಲ್ಲ, ನಾವು ಸೋತಿದ್ದೇವೆ. ನಾವು ಏಳು ಜನ ಸೋತಿದ್ದೇವೆ ಆದರೆ ಬಿಜೆಪಿ ಸತ್ತಿಲ್ಲ. ನಾವೆಲ್ಲ ಏಳು ಜನ ವಾಪಸ್ ಬಿಜೆಪಿ ಕಟ್ಟಿ ತೋರಿಸುತ್ತೇವೆ, ಆ ತಾಕತ್ ಇದೆ ನಮಗೆ. ಎಂ ಪಿ ಚುನಾವಣೆ ಗೆಲ್ಲಿಸಿ ತೋರಿಸುತ್ತೇವೆ. ಇವತ್ತಿನಿಂದ ಮನಗೆ ಹೋಗಲ್ಲ ಹೆಂಡತಿ ಮಕ್ಕಳ ಮುಖ ನೋಡಲ್ಲ. ಎಂಪಿಯಾಗಿ ರಮೇಶ್‌ ಜಿಗಜಿಣಗಿ ಗೆದ್ದು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುತ್ತೇವೆ ಎಂದು ಆಕ್ರೋಶ ಹೊರಹಾಕಿದರು.

ಅದೇನೂ ದೊಡ್ಡ ವಿಚಾರವಲ್ಲ ಎಂದ ಬೊಮ್ಮಾಯಿ

ವಿಜಯಪುರದಲ್ಲಿ ದೊಡ್ಡ ಮಟ್ಟದ ಗಲಾಟೆ ಆಗಿದ್ದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ. ಬಳಿಕ ಮಾತನಾಡಿದ ಅವರು ಇದೇನೂ ದೊಡ್ಡ ಸಂಗತಿಯಲ್ಲ ಅಂದರು. 2018ರಲ್ಲಿ ಕಾಂಗ್ರೆಸ್‌ ಸೋತಾಗಲೂ ಇಂಥ ಘಟನೆಗಳು ನಡೆದಿವೆ ಎಂದರು.

ʻʻಬೆಳಗಾವಿ ಹಾಗೂ ಚಿಕ್ಕೋಡಿಯಲ್ಲಿ ಉತ್ತಮ ಕಾರ್ಯಕ್ರಮಗಳಾದವು. ಬಾಗಲಕೋಟೆಯ ಕಾರ್ಯಕ್ರಮದಲ್ಲಿ ಓರ್ವ ಕಾರ್ಯಕರ್ತನ ಗಲಾಟೆ ಮಾತ್ರ ಆಗಿದೆ. ಅದೇನು ದೊಡ್ಡ ವಿಚಾರವಲ್ಲʼʼ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.

ʻʻವಿಜಯಪುರ ನಗರದಲ್ಲಿ ನಡೆದ ಜಿಲ್ಲಾಮಟ್ಟದ ಕಾರ್ಯಕರ್ತರ ಕಾರ್ಯಕ್ರಮಕ್ಕೆ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗಮಿಸಿಲ್ಲ. ಅವರಿಗೆ ಬೇರೆ ಕೆಲಸ ಇರುವ ಕಾರಣ ಕಾರ್ಯಕ್ರಮಕ್ಕೆ ಬಂದಿಲ್ಲ. ಬೇರೆ ಕೆಲಸವಿದೆ ಎಂದು ಈ ಮೊದಲೇ ಯತ್ನಾಳ್ ನನಗೆ ಹೇಳಿದ್ದರು. ಅವರು ವಿಜಯಪುರದಲ್ಲಿಲ್ಲ. ಯತ್ನಾಳ್ ಕಾರ್ಯಕ್ರಮಕ್ಕೆ ಬರಬೇಕೆಂದು ಅವರ ಅಭಿಮಾನಿಗಳು ಒತ್ತಾಸೆ ಮಾಡಿದ್ದಾರೆ. ಅದನ್ನು ಬಿಟ್ಟರೆ ಯಾವುದೇ ನಾಯಕರ ಬಗ್ಗೆ ವ್ಯತ್ಯಾಸ ಇಲ್ಲʼʼ ಎನ್ನುವುದು ಬೊಮ್ಮಾಯಿ ಮಾತು.

ಯತ್ನಾಳ್ ವಿರುದ್ಧ ಮುರುಗೇಶ್ ನಿರಾಣಿ, ಎ ಎಸ್ ಪಾಟೀಲ್ ನಡಹಳ್ಳಿ ತೀವ್ರ ವಾಗ್ದಾಳಿ ವಿಚಾರದ ಬಗ್ಗೆ ಕೇಳಿದಾಗ, ʻʻಅವರೇನು ಹೇಳಿದರು ಕೂಡ ಎಲ್ಲರನ್ನ ಒಗ್ಗೂಡಿಸಿಕೊಂಡು ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆʼʼ ಎಂದರು.

ಇದನ್ನೂ ಓದಿ: BJP Karnataka: ಒಬ್ಬರನ್ನೂ ಗೆಲ್ಲಿಸಲು ಆಗದವರನ್ನು ಕೋರ್‌ ಕಮಿಟಿಯಿಂದ ಕಿತ್ಹಾಕಿ: ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕೋಲಾಹಲ

ಮುಂಬರುವ ಲೋಕಸಭಾ ಚುನಾವಣೆಗೆ ವಿಜಯಪುರ ಕ್ಷೇತ್ರದಿಂದ ರಮೇಶ್ ಜಿಗಜಿಣಗಿ ಅವರಿಗೆ ಟಿಕೆಟ್ ಕೊಡಲಾಗುತ್ತದೆಯೇ ಎಂದು ಕೇಳಿದಾಗ, ʻʻಅದೆಲ್ಲಾ ಪಾರ್ಲಿಮೆಂಟರಿ‌ ಬೋರ್ಡ್ ನಲ್ಲಿ ತೀರ್ಮಾನವಾಗುತ್ತದೆʼʼ ಎಂದರು.

Exit mobile version