ಕರ್ನಾಟಕ
BJP Politics: ಬೀದಿಗೆ ಬಂದ ಬಿಜೆಪಿ ಕಲಹ; ಯತ್ನಾಳ್-ನಿರಾಣಿ ನಡುವೆ ನಿಲ್ಲದ ಅಂತರ್ಯುದ್ಧ
BJP Politics: ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ನಾಯಕರ ನಡುವೆ ದೊಡ್ಡ ಮಟ್ಟದ ಜಟಾಪಟಿ ನಡೆದು ಪರಸ್ಪರ ಸವಾಲು ಹಾಕಿಕೊಂಡಿದ್ದಾರೆ.
ವಿಜಯಪುರ/ಬಾಗಲಕೋಟೆ: ಸೋಲಿನ ಹತಾಶೆಯಿಂದ ಕಂಗೆಟ್ಟಿರುವ ಬಿಜೆಪಿಯಲ್ಲಿ ಈಗ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಗಳೇ ಅಂತರ್ಯುದ್ಧದ ವೇದಿಕೆಗಳಾಗುತ್ತಿವೆ (BJP Politics). ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಸಾರ್ವಜನಿಕ ವೇದಿಕೆಗಳಲ್ಲೇ ತಮ್ಮ ಬೇಗುದಿಯನ್ನು ಹೊರಹಾಕುತ್ತಿದ್ದಾರೆ. ಒಬ್ಬರ ಮೇಲೆ ಇನ್ನೊಬ್ಬರು ಬೆಟ್ಟು ತೋರಿಸುತ್ತಾ ಅಕ್ಷರಶಃ ಬೀದಿಯಲ್ಲಿ ಬಡಿದಾಡುತ್ತಿದ್ದಾರೆ.
ಸೋಮವಾರ ಬಾಗಲಕೋಟೆ ಮತ್ತು ವಿಜಯಪುರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಗಳೆರಡೂ ಇಂಥಹುದೇ ಘಟನೆಗಳಿಗೆ ಸಾಕ್ಷಿಯಾದವು. ಬಾಗಲಕೋಟೆಯಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ (Murugesh Nirani) ಅವರ ಭಾಷಣಕ್ಕೆ ಕಾರ್ಯಕರ್ತರು ಅಡ್ಡಿಪಡಿಸಿದರೆ ವಿಜಯಪುರದ ಸಮಾವೇಶಕ್ಕೆ ಅಲ್ಲಿನ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda pateel Yatnal) ಅವರೇ ಬರಲಿಲ್ಲ!
ಬಾಗಲಕೋಟೆಯಲ್ಲಿ ನಡೆದ ಸಭೆಯಲ್ಲಿ ಮುರುಗೇಶ್ ನಿರಾಣಿಯವರು ಮಾತನಾಡಲು ಎದ್ದು ನಿಂತಾಗ ಕೆಲವು ಕಾರ್ಯಕರ್ತರು ಆಕ್ಷೇಪದ ಧ್ವನಿ ಎತ್ತಿದರು. ತಮಗೆ ಮಾತನಾಡಲು ಬಿಡಿ ಎಂದು ಆಕ್ರೋಶದಿಂದ ಹೇಳಿದರು. ಇದನ್ನು ನಿರಾಣಿ ಅಸಹಾಯಕರಾಗಿ ನೋಡಿದರೆ ಅಲ್ಲೇ ಇದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೊನೆಯವರೆಗೂ ಮೌನವಾಗಿಯೇ ನೋಡಿದರು.
ವಿಜಯಪುರದಲ್ಲಿ ಭಾರಿ ಗಲಾಟೆ
ಇತ್ತ ವಿಜಯಪುರದಲ್ಲಿ ಸಂಜೆ ಮೂರು ಗಂಟೆಗೆ ಆರಂಭವಾಗಬೇಕಾಗಿದ್ದ ಸಭೆ ಆರು ಗಂಟೆಯಾದರೂ ಆರಂಭವಾಗಲಿಲ್ಲ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಭೆಗೆ ಬಂದಿರಲೇ ಇಲ್ಲ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮೊದಲಾದವರು ಎಷ್ಟು ಕಾದರೂ ಸುಳಿವಿಲ್ಲ. ಹಾಗಂತ, ಅವರು ಬಾರದೆ ಸಭೆ ಆರಂಭ ಮಾಡಬಾರದು ಎಂಬ ತಾಕೀತು ಯತ್ನಾಳ್ ಬೆಂಬಲಿಗರಿಂದ.
ಸಂಜೆ ಆರು ಗಂಟೆಯವರೆಗೂ ಗೀತ ಗಾಯನದ ಹೆಸರಿನಲ್ಲಿ ಹಾಡು ಹೇಳಿಕೊಂಡು ಕಾರ್ಯಕ್ರಮ ಮುಂದುವರಿಸಲಾಯಿತು. ಶಾಸಕಿ ಶಶಿಕಲಾ ಜೊಲ್ಲೆ ಅವರು ಮಾತನಾಡಲು ಶುರು ಮಾಡಿದರು. ಈ ವೇಳೆ, ಅವರು ವಿಜಯಪುರದಿಂದ ಮುಂದಿನ ಬಾರಿಯೂ ರಮೇಶ್ ಜಿಗಜಿಣಗಿ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದ್ದು ಯತ್ನಾಳ್ ಬೆಂಬಲಿಗರನ್ನು ಕೆರಳಿಸಿತು.
ಈ ರೀತಿಯ ಕ್ಷುಲ್ಲಕ ಪಾಲಿಟಿಕ್ಸ್ ಮಾಜಿ ಸಚಿವ ಮುರುಗೇಶ ನಿರಾಣಿ ಮತ್ತು ಮಾಜಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅವರನ್ನು ತೀವ್ರವಾಗಿ ಕೆರಳಿಸಿತು. ಅವರಿಬ್ಬರೂ ಸಭೆಯಿಂದ ಹೊರಬಂದು ಮಾಧ್ಯಮಗಳ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಂಸದ ರಮೇಶ್ ಜಿಗಜಿಣಗಿ ಅವರು ಕೂಡಾ ಹೊರಬಂದಿದ್ದರು.
ʻʻಬಸನಗೌಡ ಪಾಟೀಲ್ ಯತ್ನಾಳ್ ಅವರ ಧಿಮಾಕಿನ ಮಾತು ಇನ್ನು ಮುಂದೆ ನಡೆಯೊಲ್ಲ. ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿದೆ. ಮತ್ತೊಬ್ಬರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕುʼʼ ಎಂದು ಹೇಳಿದರು.
ಹಿಂದು ಹುಲಿ ಟೋಪಿ ಹಾಕಿ ನಮಾಜ್ ಮಾಡಿದ್ದನ್ನು ಮರೆತಿಲ್ಲ
ʻʻ2018ರಲ್ಲಿ ಕಾರಜೋಳರ ಪುತ್ರನನ್ನು ಸೋಲಿಸಿದ್ದು ಯಾರು? ವಿಜುಗೌಡ ಪಾಟೀಲ್ ಮೂರು ಸಾರಿ ಸೋತಿದ್ದಾರೆ, ಅವರನ್ನ ಸೋಲಿಸುವ ಪ್ರಯತ್ನ ಯಾರು ಮಾಡಿದ್ದಾರೆ?ʼʼ ಎಂದು ಯತ್ನಾಳ್ ವಿರುದ್ಧ ಹರಿಹಾಯ್ದರು ನಿರಾಣಿ.
ʻʻನಾನೇ ಹಿಂದೂ ಹುಲಿ.. ನಾನೇ ಹಿಂದೂ ಹುಲಿ ಎಂದು ಜಂಬ ಕೊಚ್ಚಿಕೊಂಡವರು ಪಾರ್ಟಿ ಬಿಟ್ಟು ಹೋಗಿ ಟೋಪಿ ಹಾಕಿ ನಮಾಜ್ ಮಾಡಿದ್ದಾರೆ. ಇದನ್ನು ಬಿಜಾಪುರದ ಜನ ಮರೆತಿಲ್ಲ. ಮಾತನಾಡೋದು ಬಹಳ ಇದೆ. ಮಾಳಿಗೆ ಏರಿದ ಮೇಲೆ ಏಣಿ ಒದ್ದರು ಅನ್ನೋ ಹಾಗೇ ಆಗಬಾರದುʼʼ ಎಂದು ಹೇಳಿದರು.
ನಾವು ಸೋತಿದ್ದೇವೆ ಅಷ್ಟೆ
ʻʻಇಲ್ಲಿಗೆ ಚುನಾವಣೆ ಮುಗಿದಿಲ್ಲ, ನಾವಷ್ಟೆ ಸೋತಿಲ್ಲ ವಾಜಪೇಯಿಯವರು ಸೋತಿದ್ದಾರೆ. ಆದರೆ, ಅವನು ವಿಜಯಪುರದಲ್ಲಿ ಬಿಜೆಪಿ ತಲೆತಗ್ಗಿಸೋ ಹಾಗೇ ಮಾಡ್ತಿದ್ದಾನೆ. ಯತ್ನಾಳ್ ಗೆ ತಲೆಯಲ್ಲಿ ಕೋಡು (ಕೊಂಬು) ಬಂದಿವೆ. ನಾನೊಬ್ಬನೆ ಗೆದ್ದಿದ್ದೀನಿ ಎನ್ನುವ ಧಿಮಾಕು, ಅಹಂ ಬಂದಿದೆʼʼ ಎಂದರು ನಿರಾಣಿ.
ಸಭೆಯಿಂದ ಹೊರಬಂದ ಮಾಜಿ ಶಾಸಕ ನಡಹಳ್ಳಿ ಆಕ್ರೊಶ.
ನಿರಾಣಿ ಅವರ ಜತೆ ಸಭೆಯಿಂದ ಹೊರಬಂದ ಮಾಜಿ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅವರಂತೂ ಎಂಪಿ ಚುನಾವಣೆಯಲ್ಲಿ ರಮೇಶ್ ಜಿಗಜಿಣಗಿ ಅವರನ್ನು ಗೆಲ್ಲಿಸುವವರಗೆ ಮನೆಗೆ ಹೋಗಲ್ಲ, ಹೆಂಡತಿ ಮಕ್ಕಳ ಮುಖ ನೋಡಲ್ಲ ಎಂದು ಪ್ರತಿಜ್ಞೆ ಮಾಡಿದರು.
ಜಿಲ್ಲೆಯಲ್ಲಿ ಬಿಜೆಪಿ ಸತ್ತಿಲ್ಲ, ನಾವು ಸೋತಿದ್ದೇವೆ. ನಾವು ಏಳು ಜನ ಸೋತಿದ್ದೇವೆ ಆದರೆ ಬಿಜೆಪಿ ಸತ್ತಿಲ್ಲ. ನಾವೆಲ್ಲ ಏಳು ಜನ ವಾಪಸ್ ಬಿಜೆಪಿ ಕಟ್ಟಿ ತೋರಿಸುತ್ತೇವೆ, ಆ ತಾಕತ್ ಇದೆ ನಮಗೆ. ಎಂ ಪಿ ಚುನಾವಣೆ ಗೆಲ್ಲಿಸಿ ತೋರಿಸುತ್ತೇವೆ. ಇವತ್ತಿನಿಂದ ಮನಗೆ ಹೋಗಲ್ಲ ಹೆಂಡತಿ ಮಕ್ಕಳ ಮುಖ ನೋಡಲ್ಲ. ಎಂಪಿಯಾಗಿ ರಮೇಶ್ ಜಿಗಜಿಣಗಿ ಗೆದ್ದು ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುತ್ತೇವೆ ಎಂದು ಆಕ್ರೋಶ ಹೊರಹಾಕಿದರು.
ಅದೇನೂ ದೊಡ್ಡ ವಿಚಾರವಲ್ಲ ಎಂದ ಬೊಮ್ಮಾಯಿ
ವಿಜಯಪುರದಲ್ಲಿ ದೊಡ್ಡ ಮಟ್ಟದ ಗಲಾಟೆ ಆಗಿದ್ದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ. ಬಳಿಕ ಮಾತನಾಡಿದ ಅವರು ಇದೇನೂ ದೊಡ್ಡ ಸಂಗತಿಯಲ್ಲ ಅಂದರು. 2018ರಲ್ಲಿ ಕಾಂಗ್ರೆಸ್ ಸೋತಾಗಲೂ ಇಂಥ ಘಟನೆಗಳು ನಡೆದಿವೆ ಎಂದರು.
ʻʻಬೆಳಗಾವಿ ಹಾಗೂ ಚಿಕ್ಕೋಡಿಯಲ್ಲಿ ಉತ್ತಮ ಕಾರ್ಯಕ್ರಮಗಳಾದವು. ಬಾಗಲಕೋಟೆಯ ಕಾರ್ಯಕ್ರಮದಲ್ಲಿ ಓರ್ವ ಕಾರ್ಯಕರ್ತನ ಗಲಾಟೆ ಮಾತ್ರ ಆಗಿದೆ. ಅದೇನು ದೊಡ್ಡ ವಿಚಾರವಲ್ಲʼʼ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.
ʻʻವಿಜಯಪುರ ನಗರದಲ್ಲಿ ನಡೆದ ಜಿಲ್ಲಾಮಟ್ಟದ ಕಾರ್ಯಕರ್ತರ ಕಾರ್ಯಕ್ರಮಕ್ಕೆ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗಮಿಸಿಲ್ಲ. ಅವರಿಗೆ ಬೇರೆ ಕೆಲಸ ಇರುವ ಕಾರಣ ಕಾರ್ಯಕ್ರಮಕ್ಕೆ ಬಂದಿಲ್ಲ. ಬೇರೆ ಕೆಲಸವಿದೆ ಎಂದು ಈ ಮೊದಲೇ ಯತ್ನಾಳ್ ನನಗೆ ಹೇಳಿದ್ದರು. ಅವರು ವಿಜಯಪುರದಲ್ಲಿಲ್ಲ. ಯತ್ನಾಳ್ ಕಾರ್ಯಕ್ರಮಕ್ಕೆ ಬರಬೇಕೆಂದು ಅವರ ಅಭಿಮಾನಿಗಳು ಒತ್ತಾಸೆ ಮಾಡಿದ್ದಾರೆ. ಅದನ್ನು ಬಿಟ್ಟರೆ ಯಾವುದೇ ನಾಯಕರ ಬಗ್ಗೆ ವ್ಯತ್ಯಾಸ ಇಲ್ಲʼʼ ಎನ್ನುವುದು ಬೊಮ್ಮಾಯಿ ಮಾತು.
ಯತ್ನಾಳ್ ವಿರುದ್ಧ ಮುರುಗೇಶ್ ನಿರಾಣಿ, ಎ ಎಸ್ ಪಾಟೀಲ್ ನಡಹಳ್ಳಿ ತೀವ್ರ ವಾಗ್ದಾಳಿ ವಿಚಾರದ ಬಗ್ಗೆ ಕೇಳಿದಾಗ, ʻʻಅವರೇನು ಹೇಳಿದರು ಕೂಡ ಎಲ್ಲರನ್ನ ಒಗ್ಗೂಡಿಸಿಕೊಂಡು ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆʼʼ ಎಂದರು.
ಇದನ್ನೂ ಓದಿ: BJP Karnataka: ಒಬ್ಬರನ್ನೂ ಗೆಲ್ಲಿಸಲು ಆಗದವರನ್ನು ಕೋರ್ ಕಮಿಟಿಯಿಂದ ಕಿತ್ಹಾಕಿ: ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಕೋಲಾಹಲ
ಮುಂಬರುವ ಲೋಕಸಭಾ ಚುನಾವಣೆಗೆ ವಿಜಯಪುರ ಕ್ಷೇತ್ರದಿಂದ ರಮೇಶ್ ಜಿಗಜಿಣಗಿ ಅವರಿಗೆ ಟಿಕೆಟ್ ಕೊಡಲಾಗುತ್ತದೆಯೇ ಎಂದು ಕೇಳಿದಾಗ, ʻʻಅದೆಲ್ಲಾ ಪಾರ್ಲಿಮೆಂಟರಿ ಬೋರ್ಡ್ ನಲ್ಲಿ ತೀರ್ಮಾನವಾಗುತ್ತದೆʼʼ ಎಂದರು.
ಕರ್ನಾಟಕ
CM Siddaramaiah: CWRC ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ಧಾರ ಎಂದ ಸಿದ್ದರಾಮಯ್ಯ
CM Siddaramaiah: ಮತ್ತೆ 18 ದಿನ 3000 ಕ್ಯುಸೆಕ್ ನೀರು ಬಿಡಬೇಕು ಎಂಬ ಆದೇಶವನ್ನು ಪ್ರಶ್ನೆ ಮಾಡಲಾಗುವುದು ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.
ಚಾಮರಾಜನಗರ (ಹನೂರು): ಕಾವೇರಿ ನೀರು ನಿಯಂತ್ರಣ ಸಮಿತಿಯು (Cauvery water regulation Committee) ತಮಿಳುನಾಡಿಗೆ ಪ್ರತಿದಿನ 3000 ಕ್ಯೂಸೆಕ್ ನೀರನ್ನು (3000 Cusec water) ಹರಿಸಲು ಆದೇಶಿಸಿದೆ. ಈ ಬಗ್ಗೆ ಕಾನೂನು ತಂಡದೊಂದಿಗೆ ಚರ್ಚಿಸಿದ್ದು ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಕಾನೂನು ತಂಡ ಸಲಹೆ ನೀಡಿದೆ. ನೀರು ಬಿಡಲು ನಮ್ಮ ಬಳಿ ನೀರಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಅವರು ಶ್ರೀ ಮಲೈ ಮಹದೇಶ್ವರ ಬೆಟ್ಟದ (Male mahadeshwara betta) ಬಳಿ ಮಾಧ್ಯಮದವರಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು.
ಕಾವೇರಿ ನೀರು ನಿಯಂತ್ರಣ ಸಮಿತಿಯು ಮಂಗಳವಾರ ನೀಡಿದ ಆದೇಶದಲ್ಲಿ ಸೆ. 28ರಿಂದ ಅಕ್ಟೋಬರ್ 15ರವರೆಗೆ ಪ್ರತಿದಿನವೂ 3000 ಕ್ಯೂಸೆಕ್ ನೀರು ಬಿಡಲು ಆದೇಶ ನೀಡಿತ್ತು. ಇದನ್ನು ಪ್ರಾಧಿಕಾರದ ಮುಂದೆ ಪ್ರಶ್ನಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.
ಸಿಎಂ ಮತ್ತು ಡಿಸಿಎಂ ಇಬ್ಬರೂ ನಮ್ಮಲ್ಲಿ ನೀರು ಇಲ್ಲ ಎಂದು ಹೇಳುತ್ತಲೇ ಪ್ರಾಧಿಕಾರ ಹೇಳಿದಷ್ಟು ನೀರು ಬಿಡುಗಡೆ ಮಾಡಿದ್ದೇ ಸಮಿತಿಗೆ ಸರಾಗ ಆದೇಶ ನೀಡಲು ಕಾರಣವಾಗಿದೆ ಎಂದು ಆರೋಪಿಸಲಾಗಿದೆ. ಇದೀಗ ಸೆ. 29ರಂದು ಇದರ ವಿರುದ್ಧ ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಮಳೆಗಾಗಿ ಮಹದೇಶ್ವರನಲ್ಲಿ ಪ್ರಾರ್ಥನೆ
ಮಳೆ ಕೈಕೊಟ್ಟು 195 ತಾಲ್ಲೂಕು ಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಮಹದೇಶ್ವರನಲ್ಲಿ ಮಳೆಗಾಗಿ, ರಾಜ್ಯದ ಜನರಿಗೆ, ರೈತರಿಗೆ ಸೌಖ್ಯವಾಗಲಿ ಎಂದು ಪ್ರಾರ್ಥಿಸಿರುವುದಾಗಿ ಸಿದ್ದರಾಮಯ್ಯ ತಿಳಿಸಿದರು.
ಮೂಢನಂಬಿಕೆ, ಮೌಢ್ಯ, ಕಂದಾಚಾರದಲ್ಲಿ ನಂಬಿಕೆ ಇಲ್ಲ
ಮೂಢನಂಬಿಕೆ, ಮೌಢ್ಯ, ಕಂದಾಚಾರದಲ್ಲಿ ನಂಬಿಕೆ ಇಲ್ಲ. ಅದಕ್ಕಾಗಿಯೇ ಹಿಂದೆ ಮುಖ್ಯಮಂತ್ರಿ ಯಾದ ಕೂಡಲೇ ಚಾಮರಾಜನಗರಕ್ಕೆ ಭೇಟಿ ನೀಡಿದೆ. ಸುಮಾರು 12 ಬಾರಿ ಭೇಟಿ ನೀಡಿದ್ದು, 5 ವರ್ಷ ಗಟ್ಟಿಯಾಗಿ ಇದ್ದೆ. ಚಾಮರಾಜನಗರ ಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯ ಈಗ ಹೋಗಿದೆ ಎಂದರು.
ಬಂದ್‌ನಿಂದ ಯಾರಿಗೂ ತೊಂದರೆಯಾಗಬಾರದು
ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್ ಗೆ ಕರೆನೀಡಿರುವ ಬಗ್ಗೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಗೆ ಅವಕಾಶವಿದೆ. ಆದರೆ ಇತರರಿಗೆ ತೊಂದರೆಯಾಗಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ನಾವು ಈ ಆದೇಶ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತೇವೆ ಎಂದರು.
ಇದನ್ನೂ ಓದಿ: CM Siddaramaiah: ಕೃಷಿಗೆ ಸಾಲ ಮಾಡಿ ಮದುವೆ ಛಮಾಡುವುದನ್ನು ನಿಲ್ಲಿಸಿ: ಸಿಎಂ ಸಿದ್ದರಾಮಯ್ಯ ಮನವಿ
ಕರ್ನಾಟಕ
BJP JDS alliance : ವಿಜಯದಶಮಿ ನಂತರ ಜೆಡಿಎಸ್ ಸೀಟು ಹಂಚಿಕೆ ಅಂತಿಮ ಮಾತುಕತೆ!
BJP JDS alliance : ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಸೀಟು ಹಂಚಿಕೆ ಯಾವಾಗ ಎಂಬ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. ವಿಜಯದಶಮಿ ನಂತರ ಈ ಬಗ್ಗೆ ಬಿಜೆಪಿ ವರಿಷ್ಠರೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ (Lok Sabha Election 2024) ಸಂಬಂಧ ಬಿಜೆಪಿ ಜತೆ ಕೈಜೋಡಿಸಿರುವ ಜೆಡಿಎಸ್ ರಾಜ್ಯದಲ್ಲಿ ಹಲವಾರು ರಾಜಕೀಯ ತಂತ್ರಗಳನ್ನು (Political Strategy) ಹೆಣೆಯುತ್ತಿದೆ. ಈ ಸಂಬಂಧ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ (Former Prime Minister and JDS supremo HD DeveGowda) ಅವರು ಬುಧವಾರ (ಸೆಪ್ಟೆಂಬರ್ 27) ಸುದ್ದಿಗೋಷ್ಠಿ ನಡೆಸಿ ತಾವು ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರ ಜತೆ ಮೈತ್ರಿ (BJP JDS alliance) ಕುರಿತಾಗಿ ಮೊದಲು ಚರ್ಚೆ ನಡೆಸಿದ್ದಾಗಿ ಹೇಳಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಬಳಿ ಈ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಸೀಟು ಹಂಚಿಕೆ ಬಗ್ಗೆ ಪ್ರಶ್ನೆ ಕೇಳಿದಾಗ ವಿಜಯದಶಮಿ ಹಬ್ಬದ (Vijayadashami Festival) ಬಳಿಕ ಬಿಜೆಪಿಯೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸ್ಪಷ್ಟಪಡಿಸಿದ್ದಾರೆ. ಇದರ ಜತೆಗೆ ಆ ಸನ್ನಿವೇಶ ಬಂದಾಗ ಚರ್ಚೆ ಮಾಡುತ್ತೇವೆ ಎಂದು ದೇವೇಗೌಡರು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ಅವರು, ಮೈತ್ರಿ ಸೀಟು ಹಂಚಿಕೆ ಸಂಬಂಧ ವಿಜಯದಶಮಿ ಮುಗಿದ ಬಳಿಕ ಬಿಜೆಪಿ ವರಿಷ್ಠರ ಜತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಅದಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಸಹ ಧನಿಗೂಡಿಸಿದ್ದು, ಆ ಸನ್ನಿವೇಶ ಬರಲಿ, ಆಗ ಚರ್ಚೆ ಮಾಡುತ್ತೇವೆ ಎಂದು ಸೂಚ್ಯವಾಗಿ ಉತ್ತರಿಸಿದ್ದಾರೆ.
ಮೈತ್ರಿಕೂಟ ಸೇರಿದ್ದಷ್ಟೇ
ಈಚೆಗೆ ನವದೆಹಲಿಗೆ ಎಚ್.ಡಿ. ಕುಮಾರಸ್ವಾಮಿ ಅವರು ಭೇಟಿ ನೀಡಿದ್ದಾಗ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆ ಪ್ರಾಥಮಿಕ ಹಂತದ ಮಾತುಕತೆಯನ್ನು ನಡೆಸಿದ್ದರು. ಇದರ ಭಾಗವಾಗಿ ಅಂದೇ ಬಿಜೆಪಿ – ಜೆಡಿಎಸ್ ಮೈತ್ರಿ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗಿತ್ತು. ಎನ್‌ಡಿಎ ಮೈತ್ರಿಕೂಟವನ್ನು ಜೆಡಿಎಸ್ ಸೇರಿದೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿತ್ತು. ಆದರೆ, ಇದರ ನಂತರ ಸೀಟು ಹಂಚಿಕೆ ಸಂಬಂಧ ಯಾವುದೇ ರೀತಿಯ ಅಂತಿಮ ಹಂತದ ಚರ್ಚೆ ಆಗಿಲ್ಲ ಎಂದು ಹೇಳಲಾಗಿದೆ.
ಐದು ಕ್ಷೇತ್ರ ಕೇಳಿರುವ ಜೆಡಿಎಸ್
ಮೂಲಗಳ ಪ್ರಕಾರ ಜೆಡಿಎಸ್ ಒಟ್ಟು ಐದು ಲೋಕಸಭಾ ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ರಾಯಚೂರು ಸೇರಿದಂತೆ ಇತ್ತ ಮಂಡ್ಯ, ಹಾಸನ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಕೇಳಿತ್ತು. ಆದರೆ, ಈ ಸಂಬಂಧ ಬಿಜೆಪಿ ನಾಯಕರಲ್ಲಿ ಒಮ್ಮತ ಮೂಡಿಲ್ಲ.
ಇದನ್ನೂ ಓದಿ: BJP JDS alliance : ಜೆಡಿಎಸ್‌ಗೆ ಕಾಂಗ್ರೆಸ್ ಮಾಡಿದ ಮೋಸದ ಬಗ್ಗೆ 100 ಕಾರಣ ಹೇಳುವೆ: ಗುಡುಗಿದ ದೇವೇಗೌಡ
ಬಿಜೆಪಿ ನಾಯಕರ ವಿರೋಧ
ಜೆಡಿಎಸ್‌ಗೆ ಯಾವುದೇ ಕಾರಣಕ್ಕೂ ಐದು ಸೀಟನ್ನು ಬಿಟ್ಟುಕೊಡುವುದು ಬೇಡ. ಮೂರು ಕ್ಷೇತ್ರವನ್ನು ಬಿಟ್ಟುಕೊಟ್ಟರೆ ಸಾಕು. ಉಳಿದ ಕಡೆ ಅವರಿಗೆ ಕೊಟ್ಟರೆ ಸೋಲು ನಿಶ್ಚಿತ. ಇದು ಬಿಜೆಪಿಗೆ ನಷ್ಟವನ್ನುಂಟು ಮಾಡುತ್ತದೆ ಎಂದು ರಾಜ್ಯದ ಕೆಲವು ನಾಯಕರು ಈಗಾಗಲೇ ವರದಿ ಒಪ್ಪಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿಜಯ ದಶಮಿ ನಂತರ ನಡೆಯುವ ಮಾತುಕತೆ ಕುತೂಹಲ ಮೂಡಿಸಿದೆ.
ಕರ್ನಾಟಕ
Murder Case : ಕುಡಿದ ಮತ್ತಿನಲ್ಲಿ ಮೂತ್ರ ಸಿಡಿಸಿದ; ಪ್ರಶ್ನೆ ಮಾಡಿದ ವ್ಯಾಪಾರಿಯ ಮನೆಗೆ ನುಗ್ಗಿ ಕೊಂದ ಕಿರಾತಕ!
Murder Case: ತನ್ನ ಮೇಲೆ ಮೂತ್ರ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಧೂರ್ತನೊಬ್ಬ ಕೊಲೆಯನ್ನೇ ಮಾಡಿದ್ದಾನೆ. ಅದೂ ಆತನ ಮನೆಗೆ ನುಗ್ಗಿ. ಒಬ್ಬ ಸಜ್ಜನನ ಕೊಲೆ ಗೌನಿಪಲ್ಲಿಯ ಜನರ ಮನ ಕಲಕಿದೆ.
ಕೋಲಾರ: ಕುಡಿತದ ಮತ್ತು ಹಾಗೂ ದುರಂಹಕಾರ ಸೇರಿಕೊಂಡರೆ ಒಬ್ಬ ಮನುಷ್ಯ ಅದೆಷ್ಟು ಕ್ರೂರಿಯಾಗಬಲ್ಲ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಕುಡಿತದ ಮತ್ತಿನಲ್ಲಿದ್ದ (Alcoholic) ಆತ ಮೂತ್ರ (Urination) ಮಾಡುವಾಗ ಇನ್ನೊಬ್ಬನ ಮೇಲೆ ಸಿಡಿಸಿದ. ಅದನ್ನು ಪ್ರಶ್ನೆ ಮಾಡಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಿದ್ದು ಮಾತ್ರವಲ್ಲ, ಮನೆಗೇ ನುಗ್ಗಿ ಕೊಲೆ (Murder Case) ಮಾಡಿದ್ದಾನೆ.
ಇಂಥಹುದೊಂದು ಭಯಾನಕ ಘಟನೆ ನಡೆದಿರುವುದು ಕೋಲಾರ ಜಿಲ್ಲೆಯ (Kolara News) ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ. ಮಂಗಳವಾರ ಸಂಜೆ ಇಬ್ಬರು ವ್ಯಕ್ತಿಗಳ ನಡುವಿನ ಒಂದು ಕ್ಷುಲ್ಲಕ ಜಗಳ ಸಾವಿನಲ್ಲಿ ಅಂತ್ಯಗೊಂಡಿದೆ.
ಗೌನಿಪಲ್ಲಿ ತರಕಾರಿ ವ್ಯಾಪಾರ ಮಾಡುತ್ತಾ ಎಲ್ಲರ ಜತೆ ಒಳ್ಳೆಯತನದಿಂದ ಬೆರೆಯುತ್ತಾ ಜನಮನ್ನಣೆ ಪಡೆದಿದ್ದ ಸಂಸಾವಂದಿಗ ವೆಂಕಟರಾಯಪ್ಪ ಅವರೇ ಪ್ರಾಣ ಕಳೆದುಕೊಂಡ ದುರ್ದೈವಿ. ಅವರಿಗೆ ವಯಸ್ಸು 55. ಅವರ ಮೇಲೆ ಮೂತ್ರ ಸಿಡಿಸಿದ್ದಲ್ಲದೆ ಪ್ರಶ್ನೆ ಮಾಡಿದ್ದಕ್ಕೆ ಕೊಂದೇ ಹಾಕಿದವನ ಹೆಸರು ಶಂಕರಪ್ಪ. ಸುಮಾರು 45 ವರ್ಷದ ಇವನು ಸದಾ ಕುಡಿದ ಮತ್ತಿನಲ್ಲೇ ಇರುತ್ತಾನೆ, ಸದಾ ಜಗಳ, ಹೊಡೆದಾಟಗಳೇ ಇವನ ಐಡೆಂಟಿಟಿ ಎನ್ನುತ್ತಾರೆ ಗೌನಿಪಲ್ಲಿ ಜನ.
ಮಂಗಳವಾರ ಸಂಜೆ ಏನಾಯಿತು?
ಮಂಗಳವಾರ ಸಂಜೆಯ ಹೊತ್ತಿಗೆ ವೆಂಕಟರಾಯಪ್ಪ ಅವರು ತಮ್ಮ ವ್ಯಾಪಾರ ನಡುವೆ ಮೂತ್ರ ಬರುತ್ತದೆ ಎಂದು ಸಂತೆ ಮೈದಾನದ ಕೊನೆಗೆ ಹೋದರು. ಆಗ ಅವರ ಹಿಂದೆಯೇ ಶಂಕರಪ್ಪ ಕೂಡಾ ಬಂದಿದ್ದ. ಅವರಿಬ್ಬರೂ ಹತ್ತಿರ ಹತ್ತಿರ ನಿಂತೇ ಮೂತ್ರ ಮಾಡಿದ್ದರು. ಈ ವೇಳೆ ಕುಡಿತದ ಮತ್ತಿನಲ್ಲಿದ್ದ ಮನೋಹರ ಬೇಕು ಎಂತಲೇ ವೆಂಕಟರಾಯಪ್ಪ ಅವರ ಮೇಲೆಯೇ ಮೂತ್ರ ಸಿಡಿಸಿದ್ದ.
ವೆಂಕಟರಾಯಪ್ಪ ಅವರು ಇದನ್ನು ಪ್ರಶ್ನೆ ಮಾಡಿದ್ದಾರೆ. ನೀನು ಮಾಡಿದ್ದು ಸರಿಯಾ ಎಂದು ಕೇಳಿದ್ದಾರೆ. ಆದರೆ, ಶಂಕರಪ್ಪ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು ಅವರ ಮೇಲೆಯೇ ಎಗರಾಡಿದ್ದಾನೆ. ನಾನು, ನನ್ನ ಮೂತ್ರ ಎಲ್ಲಿ ಬೇಕಾದರೂ ಮಾಡುತ್ತೇನೆ, ನೀನು ಯಾರು ಕೇಳುವುದಕ್ಕೆ ಎಂದೆಲ್ಲ ಗಲಾಟೆ ಮಾಡಿದ್ದಾನೆ.
ಇವನ ಬಳಿ ಮಾತನಾಡುವುದು ಬೇಡ ಎಂದು ವೆಂಕಟರಾಯಪ್ಪ ತನ್ನ ಅಂಗಡಿ ಕಡೆಗೆ ಬಂದಿದ್ದಾರೆ. ಆದರೆ, ಮನೋಹರ ಅವರನ್ನು ಬೆನ್ನಟ್ಟಿಕೊಂಡೇ ಬಂದು ನನ್ನನ್ನು ಪ್ರಶ್ನೆ ಮಾಡುತ್ತೀಯಾ ಎಂದು ಕೇಳಿ ಹಲ್ಲೆ ಮಾಡಿದ್ದಾನೆ. ಆಗ ಗೌನಿಪಲ್ಲಿ ಸಂತೆ ಮೈದಾನದಲ್ಲಿದ್ದವರು ಮತ್ತು ವ್ಯಾಪಾರಿಗಳು ಸೇರಿ ಜಗಳ ಬಿಡಿಸಿದ್ದಾರೆ.
ವೆಂಕಟರಾಯಪ್ಪ ಅವರ ಮೇಲೆ ಹಲ್ಲೆ ಮಾಡಿದ್ದರಿಂದ ಸಿಟ್ಟುಕೊಂಡ ವ್ಯಾಪಾರಿಗಳೆಲ್ಲ ಸೇರಿ ಈ ಗುಂಡ್ರುಗೋವಿ ಶಂಕರಪ್ಪನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬುದ್ಧಿ ಮಾತೂ ಹೇಳಿದ್ದಾರೆ. ಅಲ್ಲಿಗೆ ಅದು ಮುಕ್ತಾಯಗೊಂಡಿದೆ.
ಮನೆಗೇ ಬಂದು ಬಾಗಿಲು ಬಡಿದ ಕಿರಾತಕ
ರಾತ್ರಿಯಾಗುತ್ತಿದ್ದಂತೆಯೇ ವೆಂಕಟರಾಯಪ್ಪ ಅವರು ವ್ಯಾಪಾರ ಮುಗಿಸಿ ಮನೆಗೆ ತೆರಳಿದ್ದಾರೆ. ಸ್ವಲ್ಪ ಹೊತ್ತಿಗೆ ಮನೆಯ ಬಾಗಿಲು ಬಡಿಯಿತು. ಯಾರೆಂದು ಬಾಗಿಲು ತೆರೆದು ನೋಡಿದರೆ ಶಂಕರಪ್ಪ ನಿಂತಿದ್ದ. ಏನು ಎಂದು ಕೇಳಲೂ ಅವಕಾಶವಿಲ್ಲದಂತೆ ಶಂಕರಪ್ಪ ಮನೆಯೊಳಗೆ ನುಗ್ಗಿದ್ದ.
ಮನೆಯಲ್ಲಿ ವೆಂಕಟರಾಯಪ್ಪ ಅವರ ಪುತ್ರ ಮನೋಹರ, ಪತ್ನಿ ಮತ್ತು ಇತರರು ಇದ್ದರು. ಅವರೆಲ್ಲ ಏನಾಗುತ್ತಿದೆ ಎಂದು ನೋಡನೋಡುತ್ತಿದ್ದಂತೆಯೇ ಶಂಕರಪ್ಪ ವೆಂಕಟರಾಯಪ್ಪರನ್ನು ನೆಲಕ್ಕೆ ಕೆಡವಿ ಹಾಕಿ ಎದೆಗೆ ಗುದ್ದತೊಡಗಿದ್ದಾನೆ. ಜತೆಗೆ ಮೂತ್ರ ಮಾಡುವ ವಿಷಯದಲ್ಲಿ ಜಗಳ ಮಾಡುತ್ತೀಯಾ ಎಂದು ಮೂತ್ರ ಮಾಡುವ ಜಾಗಕ್ಕೂ ಹೊಡೆದಿದ್ದಾನೆ. 55 ವರ್ಷದ ಸಜ್ಜನ ಹಿರಿಯ ಜೀವ ವೆಂಕಟರಾಯಪ್ಪ ಅವರು ಶಂಕರಪ್ಪನ ಹೊಡೆತಗಳಿಗೆ ತತ್ತರಿಸಿ ಹೋಗಿದ್ದಾರೆ. ಸ್ವಲ್ಪ ಹೊತ್ತು ಹಾಗೆಯೇ ಹೊಡೆದ ಶಂಕರಪ್ಪ ಮನೆಯವರನ್ನು ಹೆದರಿಸಿ ಹೊರಗೆ ಹೋಗಿದ್ದಾನೆ.
ಎದೆಗೆ, ಮರ್ಮಾಂಗಕ್ಕೆ ಗುದ್ದಿದ್ದ ಧೂರ್ತ
ಅದಾದ ಕೂಡಲೇ ಮನೆಯವರು ವೆಂಕಟರಾಯಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದರು. ಆದರೆ, ಎದೆಗೆ, ಮರ್ಮಾಂಗಕ್ಕೆ ಬಿದ್ದ ಹೊಡೆತಗಳಿಂದ ತತ್ತರಿಸಿ ಜರ್ಜರಿತರಾಗಿದ್ದ ವೆಂಕಟರಾಯಪ್ಪ ಅವರು ಶ್ರೀನಿವಾಸಪುರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದರು.
ಇದನ್ನೂ ಓದಿ: Instagram fight: ಇನ್‌ಸ್ಟಾಗ್ರಾಂನಲ್ಲಿ ಬೈದ ಎಂದು 16ರ ಬಾಲಕನನ್ನು ತಲ್ವಾರ್‌ನಿಂದ ಕಡಿದು ಕೊಂದ ಸ್ನೇಹಿತರು!
ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ. ಗೌನಿಪಲ್ಲಿಯ ವ್ಯಾಪಾರಸ್ಥರು, ನಾಗರಿಕರು ವೆಂಕಟರಾಯಪ್ಪ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಅಂದ ಹಾಗೆ, ವೆಂಕಟರಾಯಪ್ಪ ಅವರಿಗೂ ಶಂಕರಪ್ಪ ಅವರಿಗೂ ಮುಖ ಪರಿಚಯ ಇಲ್ಲವೇ ಇಲ್ಲ. ಅವರಿಬ್ಬರು ಹಿಂದೆಂದು ಮುಖಾಮುಖಿ ಆಗಿರಲೇ ಇಲ್ಲ. ಯಾರೆಂದು ಗೊತ್ತೇ ಇಲ್ಲ. ಕೇವಲ ಒಂದು ಮೂತ್ರದ ಸಿಡಿತದಿಂದ ಒಂದು ಮನೆಯ ಬೆಳಕು ಆರಿತು. ಹೀಗೆ ಕೊಲೆ ಮಾಡಿದ ಧೂರ್ತನಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಜನರು ಒತ್ತಾಯಿಸಿದ್ದಾರೆ.
ಕರ್ನಾಟಕ
BJP JDS alliance : ಜೆಡಿಎಸ್‌ಗೆ ಕಾಂಗ್ರೆಸ್ ಮಾಡಿದ ಮೋಸದ ಬಗ್ಗೆ 100 ಕಾರಣ ಹೇಳುವೆ: ಗುಡುಗಿದ ದೇವೇಗೌಡ
BJP JDS alliance : ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಬಿಜೆಪಿ ಜತೆಗಿನ ಮೈತ್ರಿ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಕಾಂಗ್ರೆಸ್‌ನಿಂದ ಪಕ್ಷಕ್ಕಾದ ಅನ್ಯಾಯದ ಬಗ್ಗೆ ಹೇಳಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿದ್ದು ಯಾರು ಎಂಬ ಬಗ್ಗೆಯೂ ಚರ್ಚೆ ಮಾಡೋಣ ಎಂದು ಸವಾಲು ಹಾಕಿದ್ದಾರೆ.
ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ (BJP JDS alliance) ಬಗ್ಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ (Former Prime Minister and JDS supremo HD DeveGowda) ಅಧಿಕೃತವಾಗಿ ಮಾತನಾಡಿದ್ದಾರೆ. ಮೈತ್ರಿ ಹಿಂದಿನ ಉದ್ದೇಶ ಏನು ಎಂಬುದನ್ನು ಹೇಳಿದ್ದಾರೆ. ಅಲ್ಲದೆ, ಮುಸ್ಲಿಂ ಮುಖಂಡರನ್ನು (Muslim leaders) ಜೆಡಿಎಸ್ ತೊರೆಯುತ್ತಿರುವ ಬಗ್ಗೆ ಪ್ರಸ್ತಾಪ ಮಾಡುತ್ತಾ, ಮುಸ್ಲಿಂ ನಾಯಕರನ್ನು ಕಾಂಗ್ರೆಸ್ ಸೋಲಿಸಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ಪಕ್ಷದ ಬಿ ಟಿಂ ಜೆಡಿಎಸ್ ಎಂದು ಹೇಳುವವರು ಮೊದಲು ತಾವೇನು ಮಾಡಿದ್ದಾರೆಂಬುದನ್ನು ನೋಡಬೇಕು. ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಸರ್ಕಾರವನ್ನು ಕೆಡವಿದ್ದು ಯಾರು ಎಂಬುದನ್ನು ಚರ್ಚೆ ಮಾಡೋಣ ಎಂದು ಪಂಥಾಹ್ವಾನ ನೀಡಿದ್ದಾರೆ. ಜತೆಗೆ ಕಾಂಗ್ರೆಸ್ ಮಾಡಿರುವ ಮೋಸದ ಬಗ್ಗೆ 100 ಕಾರಣಗಳನ್ನು ಹೇಳುವೆ ಎಂದು ದೇವೇಗೌಡರು ಗುಡುಗಿದ್ದಾರೆ. ಇದೆಕ್ಕೆಲ್ಲ ವಿ ಡೋಂಟ್ ಕೇರ್ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, ರಾಜ್ಯಸಭೆಯಲ್ಲಿ ಫಾರೂಕ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದೆ, ಯಾರು ಸೋತರು? 8 ಜನ ನಾಯಕರನ್ನು ಕರೆದುಕೊಂಡು ಹೋದಿರಿ. ಅಲ್ಪಸಂಖ್ಯಾತರನ್ನು ಆ ದಿನ ಸೋಲಿಸಿದ್ದು ಯಾರು? ಜೆಡಿಎಸ್‌ಗೆ ಕಾಂಗ್ರೆಸ್ ಮೋಸ ಮಾಡಿರುವ 100 ಉದಾಹರಣೆಗಳನ್ನು ಕೊಡುತ್ತೇನೆ. ಕಾಂಗ್ರೆಸ್ ಹಲವಾರು ಬಾರಿ ಬ್ಲಂಡರ್ ಮಾಡಿದೆ. ನೀವು ಜಾತ್ಯತೀತ ಬಗ್ಗೆ ಮಾತನಾಡುತ್ತಿರಾ? ನಾವು ಯಾವುದಕ್ಕೂ ಕೇರ್ ಮಾಡಲ್ಲ ಎಂದು ಹೇಳಿದರು.
ಅಮಿತ್ ಶಾ ಜತೆ ಮೈತ್ರಿ ಚರ್ಚೆ ಮಾಡಿದ್ದೇನೆ
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಭಾರತೀಯ ಜನತಾ ಪಾರ್ಟಿಯ ಜತೆ ಹೋಗಬೇಕಾದರೆ, ನಾನು ಮೊದಲು ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರ ಜತೆ ಚರ್ಚೆ ಮಾಡಿದ್ದೆ. ನಾವು ಕಳೆದ 60 ವರ್ಷದಿಂದ ಯಾವುದೇ ಸಮಯಕ್ಕೆ ಅನ್ಯಾಯವಾಗಲು ಬಿಟ್ಟಿಲ್ಲ. ಕರ್ನಾಟಕದಲ್ಲಿ ಕುಮಾರಸ್ವಾಮಿಯವರ ಸರ್ಕಾರದಲ್ಲಿದ್ದ 17 ಜನರು ಶಾಸಕರನ್ನು ಮುಂಬೈಗೆ ಕರೆಸಿಕೊಂಡವರು ಯಾರು? ಇದೆಲ್ಲವೂ ಚರ್ಚೆಯಾಗಲಿ, ಚರ್ಚೆ ಮಾಡೋಣ. ಕರ್ನಾಟಕದಲ್ಲಿ ಕುಮಾರಸ್ವಾಮಿ ಅವನ ಸರ್ಕಾರನ್ನ ತೆಗೆದಿದ್ದು ಯಾರು? ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರೋದಕ್ಕೆ ಅವಕಾಶ ಮಾಡಿದ ಬಗ್ಗೆ ಚರ್ಚೆ ಮಾಡೋಣ. ಯಾರು ಇದಕ್ಕೆ ಜವಾಬ್ದಾರಿ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ ಪ್ರಶ್ನಿಸಿದರು.
ಎಚ್‌ಡಿಕೆಯನ್ನು ಸಿಎಂ ಮಾಡುವಂತೆ ಒತ್ತಾಯ ಮಾಡಿದ್ದು ಯಾರು?
ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಬೇಕೆಂದು ಯಾರು ಬಂದಿದ್ದು? ನನಗೆ ಅವರನ್ನೇ ಸಿಎಂ ಮಾಡುವಂತೆ ಒತ್ತಾಯ ಮಾಡಿದರು. ಯಾವ ಕಾರಣಕ್ಕೂ ನಿಮ್ಮ ಸಹವಾಸ ಬೇಡ ಅಂತಾ ಹೇಳಿದ್ದೆ. ರಾತ್ರಿ 12 ಗಂಟೆಗೆ ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ. ಇವತ್ತು ಬಿಜೆಪಿ ಜತೆ ಸಂಬಂಧ ಯಾಕೆ ಬೆಳೆಸಿದ್ದೀರಿ ಎಂದು ಮಾಧ್ಯಮಗಳಲ್ಲಿ ಕೇಳುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: Weather report : ಇನ್ನೆರಡು ದಿನ ಉತ್ತರ ಕರ್ನಾಟಕದ 7 ಜಿಲ್ಲೆ ಸೇರಿ ಕರಾವಳಿಯಲ್ಲಿ ಭಾರಿ ಮಳೆ
ದೇಶದಲ್ಲಿ ಒಂದೇ ಕುಟುಂಬ ಆಡಳಿತ ಮಾಡಬೇಕಾ?
ನಾನು ಯಾವುದೇ ಕಾರಣಕ್ಕೂ ಅಧಿಕಾರಕ್ಕಾಗಿ ರಾಜಕೀಯ ಮಾಡಿಲ್ಲ. ರಾಹುಲ್ ಗಾಂಧಿ ಕೈಯಲ್ಲಿ ಜೆಡಿಎಸ್ ಬಿಜೆಪಿ ಬಿ ಟೀಮ್ ಅಂತ ಹೇಳಿಸಿದರು. ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಾಗ ಏನ್ ಮಾಡಿದ್ರು ಅಂತ ನಾನು ನೋಡಲಿಲ್ವಾ? ಈಗ ಮೈತ್ರಿ ಬಗ್ಗೆ ಚರ್ಚೆ ಮಾಡ್ತಿದ್ದಾರೆ. ದೇಶದಲ್ಲಿ ಒಂದೇ ಕುಟುಂಬ ಆಡಳಿತ ಮಾಡಬೇಕಾ? ನಾನು 10 ವರ್ಷದಲ್ಲಿ ಮೊದಲ ಬಾರಿ ಮೈತ್ರಿ ಬಗ್ಗೆ ಮಾತನಾಡಿದ್ದೇನೆ ಎಂದು ಎಚ್.ಡಿ. ದೇವೇಗೌಡ ಹೇಳಿದರು.
-
ದೇಶ13 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ವಿದೇಶ21 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
South Cinema24 hours ago
Heart attack : ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ?
-
ಸುವಚನ8 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ13 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ಕರ್ನಾಟಕ24 hours ago
Bengaluru Bandh : ಪೊಲೀಸರಿಗೆ ಕೊಟ್ಟ ಊಟದಲ್ಲಿ ಸಿಕ್ಕಿತು ಫ್ರೈಡ್ ಇಲಿ!
-
ದೇಶ14 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಆಟೋಮೊಬೈಲ್20 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು