ಚಿಕ್ಕಮಗಳೂರು: ಮುಂಬರುವ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಬಿಜೆಪಿ ವತಿಯಿಂದ ಜನಸಂಕಲ್ಪ ಯಾತ್ರೆಯನ್ನು ಆಯೋಜಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗಳವಾರ ಯಾತ್ರೆ ನಡೆಯುತ್ತಿದ್ದು, ಬೆಳಗ್ಗೆ ಕಡೂರಿನಲ್ಲಿ ಹಾಗೂ ಮದ್ಯಾಹ್ನ ತರೀಕೆರೆಯಲ್ಲಿ ಕಾರ್ಯಕ್ರಮ ನಡೆಯಿತು.
ಸಿಎಂ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೇರಿ ಅನೇಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ನಾಯಕರನ್ನು ಗೌರವಿಸಲು ಸುಮಾರು 300 ಕೆ.ಜಿ. ತೂಕದ ಸೇಬಿನ ಹಾರವನ್ನು ತರಲಾಗಿತ್ತು. ನಾಯಕರನ್ನು ಗೌರವಿಸಲಾಯಿತು. ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ, ಕ್ರೇನ್‌ನಲ್ಲಿದ್ದ ಸೇಬಿನ ಹಾರದ ಕಡೆಗೆ ಜನರು ಮುಗಿಬಿದ್ದರು.
ನಾ ಮುಂದು ತಾ ಮುಂದು ಎನ್ನುತ್ತಾ ಸೇಬಿನ ಹಾರಕ್ಕೆ ಕಾರ್ಯಕರ್ತರು ಕೈಹಾಕಿದರು. ನೋಡನೋಡುತ್ತಿದ್ದಂತೆ ಕೇವಲ ಒಂದೇ ನಿಮಿಷದಲ್ಲಿ 300 ಕೆಜಿ ಸೇಬಿನ ಹಾರ ಮಂಗಮಾಯವಾಯಿತು. ಶಕ್ತಿ ಹೆಚ್ಚಾಗಿದ್ದವರು ಹೆಚ್ಚು ಹಣ್ಣು ಪಡೆಯಲು ಸಫಲರಾದರೆ ಉಳಿದವರು ದೂರದಲ್ಲಿ ನಿಂತು ನೋಡುತ್ತ, ವಿಡಿಯೋ ಮಾಡಿಕೊಳ್ಳುತ್ತ ಸಂತಸಪಟ್ಟರು.
ನವೆಂಬರ್ 11ರಂದು 108 ಅಡಿ ಎತ್ತರದ ನಾಡ ಪ್ರಭು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕಡಲೆಮಿಠಾಯಿಗಾಗಿ ಜನರು ಕಿತ್ತಾಡಿದ ದೃಶ್ಯಗಳು ಹರಿದಾಡಿದ್ದವು.
ಐದು ವರ್ಷ ಜನರು ನೆನಪಾಗಲಿಲ್ಲ: ಸಿಎಂ
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ರಾಮಣ್ಣ ಐದು ವರ್ಷ ಇದ್ದರೂ ಕುರಿ, ಕುರಿಗಾಯಿ ಯಾರೂ ನೆನಪಾಗಲಿಲ್ಲ. ಇನ್ನೂ ಎರಡು ಬಾರಿ ಇಲ್ಲಿಗೆ ಬರುತ್ತೇನೆ. ಭದ್ರಾ ಯೋಜನೆ ಚಾಲನೆಗೆ ಮತ್ತೆ ಬರುತ್ತೇನೆ. ಯಾರೇ ಅಡ್ಡಿ ಮಾಡಿದರೂ ಸರಿ, ಒಂದು ಕೈ ನೋಡೇ ಬಿಡೋಣ. ಈ ಯೋಜನೆ ನಿಲ್ಲಿಸೋದಕ್ಕೆ ಸಾಧ್ಯವೇ ಇಲ್ಲ ಎಂದರು.
ತುಂಬಾ ಜನ ಸೇರಿದ್ದೀರ. ನಿಮ್ಮನ್ನ ನೋಡಿ ನಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ. ಮತ್ತೊಮ್ಮೆ ಬಿಜೆಪಿ, ನಿಮ್ಮ ಸಂಕಲ್ಪ-ನಮ್ಮ ಸಂಕಲ್ಪ ಅದೇ. ವಿವೇಕಾನಂದರು ಶ್ರೇಷ್ಠ ಜ್ಞಾನಿ, ಅದಕ್ಕೇ ವಿವೇಕ ಎಂದು ಹೆಸರಿಟ್ಟಿದ್ದೇವೆ. ಆದರೆ, ಅದನ್ನು ಅವಿವೇಕ ಎಂದು ಕರೆದಿದ್ದಾರೆ ಕಾಂಗ್ರೆಸಿಗರು. ನಾಚಿಕೆ ಆಗಬೇಕು ನಿಮಗೆ, ನಿಮ್ಮ ಕಾಲದಲ್ಲಿ ಶಾಲೆ ಅಲ್ಲ, ಹೆಣ್ಣು ಮಕ್ಕಳಿಗೆ ಶೌಚಾಲಯದ ಕಟ್ಟಲು ಆಗಲಿಲ್ಲ. ನೀವು ಅಜ್ಞಾನಿಗಳು, ಅವಿವೇಕಿಗಳು ಎಂದು ಹರಿಹಾಯ್ದರು.
ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಕಾಂಗ್ರೆಸ್ಸಿಗರು ಅಂಬೇಡ್ಕರ್ ವಿರೋಧಿಗಳು. ಎಸ್‌ಸಿಎಸ್‌ಟಿ ವಿರೋಧಿಗಳು ಕಾಂಗ್ರೆಸ್ಸಿಗರು. ಈಗ ಸೋಗು ಹಾಕಿಕೊಂಡು ಬರುತ್ತಾರೆ. ಕಾಂಗ್ರೆಸ್ಸಿಗರನ್ನು ಯಾರೂ ನಂಬಬೇಡಿ. ಶಾಸಕ ಸುರೇಶ್ ಬಗ್ಗೆ ಹೇಳೋದು ಬೇಡ. ಅವರನ್ನು ಮತ್ತೆ ಗೆಲ್ಲಿಸಿ, ಅದೇ ನನ್ನ ಮನವಿ, ಬೇಡಿಕೆ. ಜಗತ್ತೇ ಮೆಚ್ಚಿರುವ ಮೋದಿ ನೇತೃತ್ವದ ಪಕ್ಷ ಬಿಜೆಪಿ. ಕಾಂಗ್ರೆಸ್ ಪಕ್ಷಕ್ಕೆ ನಾಯಕರಿಲ್ಲ, ತಬ್ಬಲಿಗಳಂತೆ ಅಲೆಯುತ್ತಿದ್ದಾರೆ. ಎರಡು ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿದ್ದಾರೆ. ಮುಂದೆ ಅಲ್ಲಿಯೂ ಮನೆಗೆ ಹೋಗೋದು ನಿಶ್ಚಿತ ಎಂದರು.
ಶೋಭಾ ಕರಂದ್ಲಾಜೆ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಮೋದಿ ಇಲ್ಲದಿದ್ದರೆ ಈ ದೇಶ ಏನಾಗುತ್ತಿತ್ತು, ಯೋಚಿಸಿ. ಎಲ್ಲರಿಗೂ ಔಷಧಿ, ಮಾಸ್ಕ್ ಎಲ್ಲವೂ ಸಿಕ್ಕಿತು. ಹಿಂದಿನ ಕಾಂಗ್ರೆಸ್, ಇಂದಿನ ಬಿಜೆಪಿ ಸರ್ಕಾರಕ್ಕೆ ತುಲನೆ ಮಾಡಿ. 10 ವರ್ಷದ ಮನಮೋಹನ್ ಸಿಂಗ್ ಆಡಳಿತದ ಒಂದೇ ಒಂದು ಯೋಜನೆ ನೆನಪು ಮಾಡಿ ಹೇಳಿ. ಸಿದ್ದು ಜಾತಿ-ಜಾತಿ ಒಡೆಯುವ ಕೆಲಸ ಮಾಡಿದ್ದರು. ಲಿಂಗಾಯಿತರು-ವೀರಶೈವರ ಒಗ್ಗಟ್ಟನ್ನು ಒಡೆಯಲು ಮುಂದಾಗಿದ್ದರು. ಶಾದಿಭಾಗ್ಯ ಕೆಲವು ಜನರಿಗೆ ಮಾತ್ರ ಕೊಟ್ಟರು, ಮಕ್ಕಳ ಪ್ರವಾಸದಲ್ಲೂ ಮೋಸ ಮಾಡಿದರು. ಚುನಾವಣೆ ಬಂತೆಂದರೆ ಜಾತಿ-ಧರ್ಮದ ಮೇಲೆ ರಾಜಕಾರಣ ಮಾಡಬೇಕು ಎನ್ನುವುದು ಕಾಂಗ್ರೆಸ್ ಮಾನಸಿಕತೆ ಎಂದರು.
ಇದನ್ನೂ ಓದಿ | Live | BJP Janasankalpa Yatre | ಸಿದ್ದರಾಮಯ್ಯ ಮಾಡಿದ್ದು ಭಾಷಣ; ಸಾಮಾಜಿಕ ನ್ಯಾಯ ನೀಡಿದ್ದು ಬಿಜೆಪಿ: ಸಿಎಂ ಬೊಮ್ಮಾಯಿ