ಗದಗ: ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜಾಹುಲಿಯಾದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಾಹುಬಲಿಯಾಗಿದ್ದಾರೆ. ಈ ಇಬ್ಬರ ಶಕ್ತಿಯೊಂದಿಗೆ ಜನಸಂಕಲ್ಪ ಯಾತ್ರೆ (BJP Janasankalpa Yatre) ಮಾಡುತ್ತಿದ್ದೇವೆ. ರಾಜ್ಯಕ್ಕೆ ಬಂಡೆ ಬೇಕಾಗಿಲ್ಲ, ಬಾಹುಬಲಿ ಬೊಮ್ಮಾಯಿ ಸರ್ಕಾರ ಬೇಕಾಗಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.
ಅವರು ಶಿರಹಟ್ಟಿ ಪಟ್ಟಣದಲ್ಲಿ ಮಂಗಳವಾರ (ನ. ೮) ಏರ್ಪಡಿಸಲಾಗಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಸಚಿವರು, ಸಿದ್ದರಾಮಯ್ಯ ಭಾಷಣ ಮಾಡುವಾಗ ಹುಲಿಯಾ ಹುಲಿಯಾ ಎಂದು ಕೂಗುತ್ತಾರೆ. ಆದರೆ, ಬಾಹುಬಲಿ, ರಾಜಾಹುಲಿ ಸೇರಿದರೆ ಹುಲಿಯಾ ಎಲ್ಲಿದೆ ಎಂದು ಹುಡುಕಬೇಕಾಗುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಬಂಡೆ ಎಂದು ಹೇಳುತ್ತಾರೆ. ಆದರೆ, ರಾಜ್ಯಕ್ಕೆ ಬಂಡೆ ಬೇಕಾಗಿಲ್ಲ, ಬಾಹುಬಲಿ ಬೊಮ್ಮಾಯಿ ಅವರು ಬೇಕಾಗಿದ್ದಾರೆ. ಅವರ ಸರ್ಕಾರ ಬೇಕಿದೆ. 2023ರ ಚುನಾವಣೆಯಲ್ಲಿ ಜನತೆಯ ಆಶೀರ್ವಾದದಿಂದ 150 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು.
ಬಿಜೆಪಿಯ ಸ್ಫೂರ್ತಿ ಬಾಬಾಸಾಹೇಬ್ ಅಂಬೇಡ್ಕರ್ ಆಗಿದ್ದಾರೆ. ಆದರೆ, ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಇದೇ ಕಾಂಗ್ರೆಸ್. ಅವರ ಸಂವಿಧಾನದಂತೆ ನಾವು ಆಡಳಿತ ನಡೆಸುತ್ತಿದ್ದೇವೆ. ಎಸ್‌ಸಿ, ಎಸ್‌ಟಿ ಮೀಸಲಾತಿ ಜತೆಗೆ ಅವರ ಅಭಿವೃದ್ಧಿಗೆ ನಮ್ಮ ಸರ್ಕಾರ 28 ಕೋಟಿ ರೂಪಾಯಿ ಮೀಸಲಿಟ್ಟಿದೆ. ಕಾಂಗ್ರೆಸ್ ಎಸ್‌ಸಿ, ಎಸ್‌ಟಿ ಸಮಾಜವನ್ನು ವೋಟ್ ಬ್ಯಾಂಕ್ ಮಾಡಿಕೊಂಡಿತ್ತು. ಮತ ಪಡೆದ ನಂತರ ಈ ಸಮುದಾಯಕ್ಕೆ ಮೋಸ ಮಾಡುತ್ತಾ ಬಂದಿದೆ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಬೇಕು. ಈ ಹಿನ್ನೆಲೆಯಲ್ಲಿ ಬಿಜೆಪಿಯು ಮೀಸಲಾತಿ ಹೆಚ್ಚಿಸಿ ಪರಿಶಿಷ್ಟ ಜಾತಿ, ಪಂಗಡಗಳ ಜತೆಗೆ ನಿಂತಿದೆ ಎಂದು ಶ್ರೀರಾಮುಲು ಹೇಳಿದರು.
ಮುಖ್ಯಮಂತ್ರಿಗಳು ಪದೇ ಪದೆ ಧಮ್, ತಾಕತ್ತಿ ಬಗ್ಗೆ ಮಾತನಾಡುತ್ತಾರೆ ಎನ್ನುತ್ತೀರಿ. ರೀ ಸ್ವಾಮಿ ಧಮ್, ತಾಕತ್ತು ಇದ್ದಿದ್ದಕ್ಕೆ ನಾವು ಮೀಸಲಾತಿ ಹೇಚ್ಚಿಸಿದ್ದೇವೆ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ಶ್ರೀರಾಮುಲು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಬಿ.ಸಿ. ಪಾಟೀಲ್, ಸಿ.ಸಿ. ಪಾಟೀಲ್, ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ | Murugha seer | ಮುರುಘಾಶ್ರೀಗಳ ದೌರ್ಜನ್ಯ ಅಕ್ಷಮ್ಯ, ತಕ್ಕ ಶಿಕ್ಷೆಯಾಗಲಿ: ಬಿ.ಎಸ್. ಯಡಿಯೂರಪ್ಪ ಆಕ್ರೋಶ