ಬೆಂಗಳೂರು: ಸರ್ಕಾರದ ಮೂರು ವರ್ಷದ ಸಂದರ್ಭದಲ್ಲಿ ಆಯೋಜಿಸಿರುವ BJP ಜನಸ್ಪಂದನ ಕಾರ್ಯಕ್ರಮದಲ್ಲಿ ಸಂಭ್ರಮ ಮನೆ ಮಾಡಿದ್ದು, ಸಚಿವ ಎಂ.ಟಿ.ಬಿ. ನಾಗರಾಜ್ ಹಾಗೂ ಬಿಡಿಎ ಅಧ್ಯಕ್ಷ ಎಸ್. ವಿಶ್ವನಾಥ್ ಭರ್ಜರಿ ಸ್ಟೆಪ್ ಹಾಕಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷದ ಸಂದರ್ಭದಲ್ಲಿ ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಆರಂಭಕ್ಕೂ ಮುನ್ನ ಖ್ಯಾತ ಗಾಯಕ ವಿಜಯಪ್ರಕಾಶ್ ಮತ್ತು ತಂಡದಿಂದ ಗಾಯನ ನಡೆಯುತ್ತಿದೆ.
ಬೆಳಗ್ಗೆ 11ಗಂಟೆಯಿಂದ ವಿವಿಧ ಹಾಡುಗಳನ್ನು ತಂಡ ಹಾಡುತ್ತಲಿತ್ತು. ಅದೆಲ್ಲವನ್ನೂ ಬಿಜೆಪಿ ಶಾಸಕರು, ಸಚಿವರು ವೇದಿಕೆ ಮೇಲಿಂದಲೇ ಕುಳಿತು ಕೇಳುತ್ತಿದ್ದರು. ಆದರೆ ಡಾ. ರಾಜಕುಮಾರ್ ನಟನೆಯ ಸತ್ಯ ಹರಿಶ್ಚಂದ್ರ ಸಿನಿಮಾದ ʼಕುಲದಲ್ಲಿ ಕೀಳಾವುದೋ…ʼ ಹಾಡನ್ನು ಪ್ರಸ್ತುತಪಡಿಸಿದರು.
ಇದ್ದಕ್ಕಿಂದಂತೆ ಜೋಷ್ ತಂದುಕೊಂಡ ಸಚಿವ ಎಂ.ಟಿ.ಬಿ. ನಾಗರಾಜ್ ಹಾಗೂ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ವೇದಿಕೆ ಮೇಲೆ ನೃತ್ಯ ಆರಂಭಿಸಿದರು. ಇಬ್ಬರೂ ಜುಗಲ್‌ಬಂದಿಯಲ್ಲಿ ಸಂಪೂರ್ಣ ಹಾಡಿಗೆ ನರ್ತಿಸಿದರು. ಸಚಿವರು ಕುಣಿಯುತ್ತಿರುವುದನ್ನು ಕಂಡು ವಿಜಯಪ್ರಕಾಶ್ ಸಹ ಉತ್ಸಾಹಭರಿತರಾಗಿ ಹಾಡಿದರು. ಆದರೆ ನೃತ್ಯ ಮಾಡಬೇಕೆಂಬ ಮನಸ್ಸಿದ್ದರೂ ಇಂತಹ ಗಂಭೀರ ಕಾರ್ಯಕ್ರಮದಲ್ಲಿ ಇದೆಲ್ಲ ಬೇಡ ಎಂಬಂತೆ ಮತ್ತೊಬ್ಬ ಸಚಿವ ಮುನಿರತ್ನ ಸುಮ್ಮನೆ ನಿಂತಿದ್ದರು.
ಆರು ಸಚಿವರ ಗೈರು
ರಾಜ್ಯದ ಆರು ಮಂದಿ ಸಚಿವರು, ಕೇಂದ್ರದ ಹಿರಿಯ ನಾಯಕರು ಈ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಪ್ರಧಾನ ಅತಿಥಿ ಆಗಬೇಕಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕೂಡಾ ಬರುತ್ತಿಲ್ಲ.
ಸಚಿವರಾದ ವಿ. ಸೋಮಣ್ಣ, ಮುರುಗೇಶ್ ನಿರಾಣಿ, ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಹಾಲಪ್ಪ ಆಚಾರ್ ಮತ್ತು ಶಂಕರ ಪಾಟೀಲ್ ಮುನೇನಕೊಪ್ಪ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಸಚಿವ ಸೋಮಣ್ಣ ಅವರು ಚಾಮರಾಜನಗರ ಜಿಲ್ಲಾ ಪ್ರವಾಸದಲ್ಲಿದ್ದರೆ, ಮುರುಗೇಶ ನಿರಾಣಿ ಅವರು ಅಮೆರಿಕ ಹೂಡಿಕೆ ಸಮಾವೇಶದ ರೋಡ್ ಶೋನಲ್ಲಿ ಭಾಗವಹಿಸಿದ್ದಾರೆ.
ಇಂದು ಮಂಗಳೂರಿನಲ್ಲಿ ನಾರಾಯಣ ಗುರು ಜಯಂತಿ ನಡೆಯಲಿದ್ದು, ಅದರಲ್ಲಿ ಪಾಲ್ಗೊಳ್ಳುತ್ತಿರುವ ಸುನೀಲ್ ಕುಮಾರ್ ಮತ್ತು ಕೋಟ ಶ್ರೀನಿವಾಸ ಪೂಜಾರಿ ಅವರು ಕೂಡಾ ಸಮಾವೇಶಕ್ಕೆ ಬರುತ್ತಿಲ್ಲ.
ಇದನ್ನೂ ಓದಿ | ಇಂದಿನ ಬಿಜೆಪಿ ಜನಸ್ಪಂದನ ಕಾರ್ಯಕ್ರಮದ ಹೈಲೈಟ್ ಇದು