Site icon Vistara News

ಜನೋತ್ಸವ ಮತ್ತೆ ಮುಂದೂಡಿಕೆ, ಗಣೇಶೋತ್ಸವದ ಬಳಿಕ ಮಾಡ್ತೀವಿ ಎಂದ ಸಿಎಂ, ಕಾಲೆಳೆದ ಕಾಂಗ್ರೆಸ್‌!

ಬೆಂಗಳೂರು: ಬಿಜೆಪಿ ಸರಕಾರದ ಮೂರನೇ ವರ್ಷಾಚರಣೆ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧಿಕಾರಾವಧಿಯ ಒಂದೇ ವರ್ಷದ ಸಂಭ್ರಮಕ್ಕಾಗಿ ಆಯೋಜಿಸಲಾಗುತ್ತಿರುವ ಜನೋತ್ಸವ ಕಾರ್ಯಕ್ರಮ ಮತ್ತೆ ಮುಂದೂಡಿಕೆಯಾಗಿದೆ. ಸ್ವತಃ ಸಿಎಂ ಬೊಮ್ಮಾಯಿ ಅವರೇ ಈ ವಿಷಯವನ್ನು ತಿಳಿಸಿದ್ದು, ಗಣೇಶೋತ್ಸವ ಮುಗಿದ ಬಳಿಕ ಆಯೋಜನೆ ಮಾಡಲಾಗುವುದು ಎಂದಿದ್ದಾರೆ.

ಆರಂಭದಲ್ಲಿ ಜುಲೈ ೨೮ರಂದು ಜನೋತ್ಸವ ದೊಡ್ಡಬಳ್ಳಾಪುರದಲ್ಲಿ ನಿಗದಿಯಾಗಿತ್ತು. ಆದರೆ, ಜುಲೈ ೨೬ರಂದು ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್‌ ನೆಟ್ಟಾರ್‌ ಅವರ ಕೊಲೆ ನಡೆಯಿತು. ಈ ಕೊಲೆಯ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ನಾಯಕರ ವಿರುದ್ಧ ಸಿಡಿದೆದ್ದ ಹಿನ್ನೆಲೆಯಲ್ಲಿ ಜನೋತ್ಸವವನ್ನು ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಆ ಬಳಿಕ ಇದೀಗ ಅದೇ ದೊಡ್ಡಬಳ್ಳಾಪುರದಲ್ಲಿ ಆಗಸ್ಟ್‌ ೨೮ರಂದು ಕಾರ್ಯಕ್ರಮ ನಿಗದಿ ಮಾಡಲಾಯಿತು.

ಈ ನಡುವೆ ದೊಡ್ಡಬಳ್ಳಾಪುರದ ಜನೋತ್ಸವ ರಾಜ್ಯ ಮಟ್ಟದ್ದಲ್ಲ. ಐದು ಜಿಲ್ಲೆಗಳಿಗೆ ಸೀಮಿತವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಬಳಿಕ ರಾಜ್ಯದ ಐದು ಕಡೆಗಳಲ್ಲಿ ಜನೋತ್ಸವ ಆಯೋಜಿಸಲು ಬಿಜೆಪಿ ಪ್ಲ್ಯಾನ್‌ ಮಾಡಿತ್ತು. ಆಗಸ್ಟ್‌ ೨೮ರ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿರುವಂತೆಯೇ ಈಗ ಮತ್ತೆ ವಿಘ್ನ ಎದುರಾಗಿದೆ. ಜನೋತ್ಸವವನ್ನು ಮುಂದೂಡಲಾಗಿದೆ. ಈ ಬಗ್ಗೆ ಬುಧವಾರ ಬೆಳಗ್ಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಸಣ್ಣ ಸೂಚನೆಯನ್ನು ನೀಡಿದ್ದರು. ಸಂಜೆ ಹೊತ್ತಿಗೆ ಸಿಎಂ ಅವರೇ ದೃಢಪಡಿಸಿದರು.

ಯಾಕೆ ಮುಂದೂಡಿಕೆ?
ಈ ಬಾರಿ ಯಾವುದೇ ಗೊಂದಲಗಳು ಜನೋತ್ಸವವನ್ನು ಕಾಡಿಲ್ಲ. ಅಂದು ಹಲವಾರು ಬೇರೆ ಕಾರ್ಯಕ್ರಮಗಳು ಆಯೋಜನೆಯಾಗಿರುವುದು, ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಕಾದ ಹಲವು ನಾಯಕರಿಗೆ ಅನ್ಯ ಕಾರ್ಯಕ್ರಮಗಳಿಗೆ ಹೋಗಲೇಬೇಕಾದ ಅನಿವಾರ್ಯತೆ ಇರುವುದರಿಂದ ಜನೋತ್ಸವವನ್ನು ಮುಂದೂಡಲಾಗಿದೆ.

ಆಗಸ್ಟ್‌ 28 ರಂದು ಪುತ್ತೂರಿನಲ್ಲಿ ಸಂಘ ಪರಿವಾರದ ಪ್ರಾಂತ್ಯ ಬೈಠಕ್ ನಿಗದಿಯಾಗಿದೆ. ಅದರಲ್ಲಿ ಹಲವು ನಾಯಕರು ಭಾಗವಹಿಸಬೇಕಾಗಿದೆ. ಕೇಂದ್ರದಿಂದ ಬರಬೇಕಾಗಿರುವ ಹಿರಿಯ ನಾಯಕರಿಗೂ ಕೆಲವು ಅನ್ಯ ಕಾರ್ಯಕ್ರಮಗಳಿವೆ ಎನ್ನಲಾಗಿದೆ. ಹೀಗಾಗಿ ಸಮಾವೇಶ ನಡೆಸಲು ಕಷ್ಟವಾಗುತ್ತಿದೆ ಎನ್ನಲಾಗಿದೆ.

ಬಿಜೆಪಿ ಕಾಲೆಳೆದ ಕಾಂಗ್ರೆಸ್
ಈ ನಡುವೆ ಜನೋತ್ಸವ ಮುಂದೂಡಿಕೆಯ ಬಗ್ಗೆ ಕಾಂಗ್ರೆಸ್‌ ಬಿಜೆಪಿ ಕಾಲೆಳೆದಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಟ್ವಿಟರ್‌ ಹ್ಯಾಂಡಲ್‌ನಿಂದ ಮಾಡಿರುವ ಟ್ವೀಟ್‌ನಲ್ಲಿ ಬಿಜೆಪಿಯನ್ನು ಸಣ್ಣ ಮಟ್ಟಿಗೆ ಗೇಲಿ ಮಾಡಲಾಗಿದೆ.

-ಬಿಜೆಪಿಯ ಜನೋತ್ಸವ ಮುಂದೂಡಿಕೆಯ ಮೇಲೆ ಮುಂದೂಡಿಕೆಯಾಗುತ್ತಿದೆ, ಆದರೆ #BJPBrashtotsava ಮಾತ್ರ ಅಡೆತಡೆಯಿಲ್ಲದೆ ಸಾಗುತ್ತಿದೆ.
-ಮಾಧುಸ್ವಾಮಿಯವರ ರಾಜೀನಾಮೆ ಕೇಳಿದ ಎಸ್. ಟಿ ಸೋಮಶೇಖರ್ ಅವರ ಅಕ್ರಮದ ವಿರುದ್ದ ಪ್ರಧಾನಿಗೆ ಪತ್ರ ಬರೆಯಲಾಗಿದೆ, ಈಗ ಯಾರ ರಾಜಿನಾಮೆ ಪಡೆಯುವಿರಿ ಬೊಮ್ಮಾಯಿ ಅವರೇ? ಮಾಧುಸ್ವಾಮಿಯವರದ್ದೋ, ಸೋಮಶೇಖರ್‌ರದ್ದೋ?
– ಬಿಜೆಪಿಯ #ManagementSarkara ದಲ್ಲಿ ಸಿಎಂ ಒಂದೇ ವರ್ಷದ ಅವಧಿಯಲ್ಲಿ 12 ಬಾರಿ ದೆಹಲಿಗೆ ಹೋದರೂ ಸಂಪುಟ ವಿಸ್ತರಣೆ ಮಾಡಲಾಗಲಿಲ್ಲ, ಸಿಎಂ ಸಂಪುಟ ಸರ್ಜರಿಗೆ ಕಸರತ್ತು ನಡೆಸುತ್ತಿದ್ದರೆ, ಸ್ಥಾನ ವಂಚಿತರು ಸಿಎಂ ಮೇಲೆಯೇ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಿದ್ದಾರೆಯೇ @BJP4Karnataka? ಇಷ್ಟು ಬೇಗ ನೆರೆ ಸಂತ್ರಸ್ತರನ್ನು ಮರೆಯಿತೇ ಸರ್ಕಾರ?
– ಹೀಗೆ ನಾನಾ ರೀತಿಯಲ್ಲಿ ಕಾಲೆಳೆಯಲಾಗಿದೆ.

Exit mobile version