Site icon Vistara News

ಉಮೇಶ್‌ ಕತ್ತಿ ನಿಧನ ಹಿನ್ನೆಲೆ: ನಾಳೆ ನಡೆಯಬೇಕಿದ್ದ ಬಿಜೆಪಿ ಜನೋತ್ಸವ ಸೆ.11ಕ್ಕೆ ಮುಂದೂಡಿಕೆ

BJP and Gujarat Election

ಬೆಂಗಳೂರು: ಸೆಪ್ಟೆಂಬರ್‌ ೮ರಂದು (ಗುರುವಾರ) ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿರುವ ಬಿಜೆಪಿ ಸರಕಾರದ ಮೂರನೇ ವರ್ಷಾಚರಣೆ ಮತ್ತು ಬೊಮ್ಮಾಯಿ ನೇತೃತ್ವದ ಸರಕಾರದ ಒಂದನೇ ವರ್ಷಾಚರಣೆ ಕಾರ್ಯಕ್ರಮವನ್ನು ಸೆಪ್ಟೆಂಬರ್‌ ೧೧ಕ್ಕೆ(ಭಾನುವಾರ) ಮುಂದೂಡಲಾಗಿದೆ. ಸಚಿವ ಉಮೇಶ್‌ ಕತ್ತಿ ಅವರ ನಿಧನದ ಹಿನ್ನೆಲೆಯಲ್ಲಿ ಈ ಸಂಭ್ರಮದ ಕಾರ್ಯಕ್ರಮವನ್ನು ಮುಂದೂಡಬೇಕು ಎಂಬ ಶಾಸಕರು ಮತ್ತು ಕೆಲವು ನಾಯಕರ ಪ್ರಬಲ ಹಕ್ಕೊತ್ತಾಯದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಸರಕಾರದ ಸಾಧನಾ ಸಮಾವೇಶ ಎಂದೇ ಹೇಳಲಾಗಿರುವ ಜನೋತ್ಸವ ಮುಂದೂಡಲ್ಪಡುತ್ತಿರುವುದು ಇದು ಮೂರನೇ ಬಾರಿ. ಮೊದಲು ಜುಲೈ ೨೮ಕ್ಕೆ ನಿಗದಿಯಾಗಿದ್ದ ಈ ಸಮಾವೇಶವನ್ನು ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್‌ ನೆಟ್ಟಾರ್‌ ಅವರ ಕೊಲೆಯ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಆಗಸ್ಟ್‌ ೨೮ರಂದು ಮರು ನಿಗದಿಯಾದ ಕಾರ್ಯಕ್ರಮವನ್ನು ಗಣೇಶ ಚತುರ್ಥಿ ಮತ್ತು ಬಿಜೆಪಿ ನಾಯಕರ ಪೂರ್ವ ನಿಗದಿತ ಇತರ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಇದೀಗ ಸೆ. ೮ರಂದು ನಿಗದಿಯಾದ ಕಾರ್ಯಕ್ರಮಕ್ಕೆ ಉಮೇಶ್‌ ಕತ್ತಿ ಅವರ ಅಕಾಲಿಕ ನಿರ್ಗಮನ ತಡೆಯಾಗಿದೆ.

ನಡೆಸಬೇಕೇ ಬೇಡವೇ ಎಂಬ ಗೊಂದಲ
ಮಂಗಳವಾರ ರಾತ್ರಿ ಸಚಿವ ಉಮೇಶ್‌ ಕತ್ತಿ ಅವರು ನಿಧನರಾದ ಸುದ್ದಿ ಹೊರಬೀಳುತ್ತಲೇ ರಾಜಕೀಯ ವಲಯದಲ್ಲಿ ಆರಂಭವಾದ ಮೊದಲ ಚರ್ಚೆ ಸೆಪ್ಟೆಂಬರ್‌ ೮ರಂದು ನಿಗದಿಯಾದ ಬಿಜೆಪಿ ಜನೋತ್ಸವ ನಡೆಯುತ್ತದೆಯೋ ಇಲ್ಲವೋ ಎನ್ನುವುದು. ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಂಗಳವಾರ ರಾತ್ರಿಯೇ ಒಂದು ದಿನದ ರಜೆ ಬೆಳಗಾವಿ ಜಿಲ್ಲೆಗೆ ಸೀಮಿತ ಎಂದು ಸ್ಪಷ್ಟಪಡಿಸುವ ಮೂಲಕ ಜನೋತ್ಸವಕ್ಕೆ ತಡೆ ಇಲ್ಲ ಎನ್ನುವ ಸಂದೇಶವನ್ನು ನೀಡಿದ್ದರು.

ಸಾಮಾನ್ಯವಾಗಿ ಮಂತ್ರಿಯಾಗಿದ್ದವರು ಮೃತಪಟ್ಟಾಗ ಮೂರು ದಿನದ ಶೋಕಾಚರಣೆ ಮಾಡಲಾಗುತ್ತದೆ. ಆದರೆ, ಉಮೇಶ್‌ ಕತ್ತಿ ಅವರ ಸಾವಿನ ನಂತರ ಒಂದೇ ದಿನ ಶೋಕಾಚರಣೆಗೆ ಆದೇಶ ಹೊರಡಿಸಲಾಗಿದೆ. ಅಂದರೆ ಬುಧವಾರ ಮಾತ್ರ ಯಾವುದೇ ಸರಕಾರಿ ಇಲ್ಲವೇ ದೊಡ್ಡ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದಿಲ್ಲ. ಜನೋತ್ಸವವನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡು ಈ ರೀತಿ ಮಾಡಲಾಗಿದೆ ಎಂಬ ಮಾತು ಕೇಳಿಬಂತು. ಜತೆಗೆ ದೊಡ್ಡಬಳ್ಳಾಪುರದಲ್ಲಿ ನಡೆಯುವ ಸಮಾವೇಶದ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಡಾ. ಕೆ. ಸುಧಾಕರ್‌ ಅವರು ಯಾವುದೇ ಕಾರಣಕ್ಕೂ ಸಮಾವೇಶ ಮುಂದಕ್ಕೆ ಹೋಗಲ್ಲ ಎಂದು ಕಾರ್ಯಕರ್ತರ ಜತೆ ಸ್ಪಷ್ಟವಾಗಿ ಹೇಳಿದ್ದರು.

ಆದರೆ, ಉಮೇಶ್‌ ಕತ್ತಿ ಅವರ ನಿಧನದ ಬೆನ್ನಿಗೇ ಜನೋತ್ಸವದ ಹೆಸರಿನಲ್ಲಿ ಸಂಭ್ರಮಿಸುವುದು ಬೇಡ ಎಂಬ ಅಭಿಪ್ರಾಯ ಶಾಸಕರು ಮತ್ತು ಕೆಲವು ಮಂತ್ರಿಗಳ ವಲಯದಲ್ಲಿ ಕೇಳಿಬಂದಿತ್ತು. ಅದರ ಜತೆಗೆ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ರಾಜ್ಯಾದ್ಯಂತ ಜನ ಸಂಕಷ್ಟದಲ್ಲಿರುವಾಗ ಜನೋತ್ಸವ ಬೇಕಾ ಎನ್ನುವ ಚರ್ಚೆಯೂ ಇತ್ತು.

ಈಗ ಉಮೇಶ್‌ ಕತ್ತಿ ಅವರ ನಿಧನದ ಹಿನ್ನೆಲೆಯಲ್ಲಿ ಸಮಾವೇಶ ಮುಂದೂಡಲೇಬೇಕು ಎನ್ನುವ ಪಟ್ಟಿಗೆ ಬೆಲೆ ಸಿಕ್ಕಿದೆ.

ಇದನ್ನೂ ಓದಿ| ಜನೋತ್ಸವ ಮತ್ತೆ ಮುಂದೂಡಿಕೆ, ಗಣೇಶೋತ್ಸವದ ಬಳಿಕ ಮಾಡ್ತೀವಿ ಎಂದ ಸಿಎಂ, ಕಾಲೆಳೆದ ಕಾಂಗ್ರೆಸ್‌!

ಇದರ ಹಿಂದಿನ ಸುದ್ದಿ |ಗೊಂದಲದಲ್ಲಿ ಜನೋತ್ಸವ: 3ನೇ ಬಾರಿ ಮುಂದೂಡಿಕೆ ಸಾಧ್ಯತೆ ಕಡಿಮೆ, ಕತ್ತಿ ಸಾವಿನಿಂದಾಗಿ ಬೇಡ ಅಂತಿರುವ ಶಾಸಕರು

Exit mobile version