Site icon Vistara News

BJP Janothsava | ರದ್ದಾಗಿದ್ದ ಜನೋತ್ಸವಕ್ಕೆ ದಿನಾಂಕ ಫಿಕ್ಸ್‌: ಬರಲಿದ್ದಾರೆ ಜೆ.ಪಿ. ನಡ್ಡಾ

BJP Janothsava

ಬೆಂಗಳೂರು: ಕೊನೆ ಕ್ಷಣದಲ್ಲಿ ರದ್ದಾಗಿದ್ದ ಬಿಜೆಪಿ ಸರ್ಕಾರದ ಸಾಧನಾ ಸಮಾವೇಶ ʻಜನೋತ್ಸವʼವನ್ನು (BJP Janothsava ) ಸೆಪ್ಟೆಂಬರ್‌ 8ಕ್ಕೆ ನಡೆಸಲು ದಿನಾಂಕ ನಿಗದಿಯಾಗಿದೆ. ಈ ಕುರಿತು ಸಚಿವ ಸುಧಾಕರ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.  

ಬಿಜೆಪಿ ಸರ್ಕಾರದ ಮೂರನೇ ವರ್ಷಾಚರಣೆ ಮತ್ತು ಬಸವರಾಜ ಬೊಮ್ಮಾಯಿ ಅವರ ಅಧಿಕಾರಾವಧಿಯ ಒಂದು ವರ್ಷದ ಸಂಭ್ರಮಕ್ಕಾಗಿ ಜುಲೈ 28ಕ್ಕೆ ಜನೋತ್ಸವ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಯಾಗಿತ್ತು. ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಆಚರಿಸುವುದಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗಿತ್ತು.  ಅದರ ಮಧ್ಯೆ ಜುಲೈ ೨೬ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ನೆಟ್ಟಾರಿನಲ್ಲಿ ಬಿಜೆಪಿ ಯುವಮೋರ್ಚಾ ಪದಾಧಿಕಾರಿ ಪ್ರವೀಣ್‌ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. 

ಈ ಘಟನೆ ಬಿಜೆಪಿ ಕಾರ್ಯಕರ್ತರನ್ನು ತೀವ್ರವಾಗಿ ಕೆರಳಿಸಿತ್ತು. ರಾಜ್ಯ ಸರಕಾರ ಬಿಜೆಪಿ ಮತ್ತು ಸಂಘ ಪರಿವಾರದ ಸಾಮಾನ್ಯ ಕಾರ್ಯಕರ್ತರ ರಕ್ಷಣೆಗೆ ನಿಲ್ಲುತ್ತಿಲ್ಲ ಎಂಬ ಆಕ್ರೋಶ ರಾಜ್ಯಾದ್ಯಂತ ಭುಗಿಲೆದ್ದು ಹಲವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಅದಷ್ಟೇ ಅಲ್ಲದೆ, ಜುಲೈ ೨೭ರಂದು ಪ್ರವೀಣ್‌ ನೆಟ್ಟಾರು ಅವರ ಅಂತ್ಯಕ್ರಿಯೆಗೆ ಹೋದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರನ್ನೇ ತಡೆದು ನಿಲ್ಲಿಸಲಾಗಿತ್ತು, ಅವರಿದ್ದ ಕಾರನ್ನು ಅಡಿಮೇಲು ಮಾಡಲು ಕಾರ್ಯಕರ್ತರೆ ಮುಂದಾಗಿದ್ದರು. ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಬಿಜೆಪಿ ನಾಯಕರ ಮೇಲೆ ಕಾರ್ಯಕರ್ತರ ತಿರುಗಿಬಿದ್ದಿದ್ದರು. ನಾಡಿನ ಹಲವು ಕಡೆ ಪ್ರತಿಭಟನೆ ಮಾತ್ರವಲ್ಲ, ಜನಪ್ರತಿನಿಧಿಗಳಿಗೆ ಮುತ್ತಿಗೆಯನ್ನೂ ಹಾಕಲಾಗಿತ್ತು.

ಈ ಎಲ್ಲ ವಿದ್ಯಮಾನಗಳು, ಕಾರ್ಯಕರ್ತರ ಆಕ್ರೋಶವನ್ನು ಗಮನಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜುಲೈ ೨೭ರ ರಾತ್ರಿ ೧೨.೧೫ಕ್ಕೆ ಪತ್ರಿಕಾಗೋಷ್ಠಿಯನ್ನು ನಡೆಸಿ ಕಾರ್ಯಕ್ರಮವನ್ನು ರದ್ದು ಮಾಡಿದ್ದಾಗಿ ಪ್ರಕಟಿಸಿದ್ದರು. ಹಾಗೆ ರದ್ದಾದ ಕಾರ್ಯಕ್ರಮ ಈಗ ಆಗಸ್ಟ್‌ ೨೮ರಂದು ನಡೆಯಲಿದೆ ಎಂದಿದ್ದರು, ಆದರೆ ಇದೀಗ ಮತ್ತೆ ದಿನಾಂಕ ಬದಲಾವಣೆ ಮಾಡಲಾಗಿದ್ದು ಸೆಪ್ಟೆಂಬರ್‌ 8ಕ್ಕೆ ದೊಡ್ಡಬಳ್ಳಾಪುರದಲ್ಲಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಸುಧಾಕರ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ಖಚಿತಪಡಿಸಿದ್ದು, ಸೆಪ್ಟೆಂಬರ್ 8ರ ಬೆಳಗ್ಗೆ 11ಗಂಟೆಗೆ ಜನೋತ್ಸವ ಕಾರ್ಯಕ್ರಮ ಶುರುವಾಗಲಿದೆ. ಈ ಬಾರಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ತುಮಕೂರು ಜಿಲ್ಲೆಯ ಜನರಿಗೆ ಸೀಮಿತವಾಗಿ ಜನೋತ್ಸವ ನಡೆಯಲಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ | ಜನೋತ್ಸವ ಮತ್ತೆ ಮುಂದೂಡಿಕೆ, ಗಣೇಶೋತ್ಸವದ ಬಳಿಕ ಮಾಡ್ತೀವಿ ಎಂದ ಸಿಎಂ, ಕಾಲೆಳೆದ ಕಾಂಗ್ರೆಸ್‌!

Exit mobile version