ಬೆಂಗಳೂರು: ಕರ್ನಾಟಕ ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್ ಮುಂದಿದೆ ಎಂಬ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ನಾವು ಗ್ರೌಂಡ್‌ನಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದೇವೆ. ಸೌಂಡ್ ಮಾಡುವ ಕೆಲಸವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದೇವೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ರಾಜ್ಯ ಕೋರ್ ಕಮಿಟಿ ಸಭೆಯ ನಂತರ ಮಾಧ್ಯಮಗಳಿಗೆ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದರು. ವಿವಿಧ ಸಮೀಕ್ಷಾ ವರದಿಗಳನ್ನು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಅದರ ಪ್ರಕಾರ, ನಿಚ್ಚಳ ಬಹುಮತದೊಂದಿಗೆ ನಾವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೇವೆ. ನೆಲಮಟ್ಟದಲ್ಲಿ ತಯಾರಿ ಚೆನ್ನಾಗಿ ನಡೆದಿದೆ. ನಾವು ಸೌಂಡ್ ಮಾಡುವ ಕೆಲಸ ಮಾಡುತ್ತಿಲ್ಲ. ಆ ಕೆಲಸವನ್ನು ಕಾಂಗ್ರೆಸ್‌ಗೆ ಬಿಟ್ಟಿದ್ದೇವೆ. ಗ್ರೌಂಡ್ ಮಟ್ಟದಲ್ಲಿ ಏನೆಲ್ಲ ಕೆಲಸ ಮಾಡಬೇಕೊ ಅದನ್ನು ಮಾಡುತ್ತಿದ್ದೇವೆ. ಬೂತ್ ಗೆಲ್ಲುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದರು.
ಫೆಬ್ರವರಿ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ 2-3 ಬಾರಿ ಭೇಟಿ ನೀಡಲಿದ್ದಾರೆ ಎಂದ ಸಿ.ಟಿ. ರವಿ, ಅಮಿತ್ ಶಾ, ಜೆ.ಪಿ. ನಡ್ಡಾ ಸೇರಿ ಕೇಂದ್ರದ ವಿವಿಧ ಸಚಿವರು ಆಗಮಿಸುತ್ತಾರೆ. ಕರ್ನಾಟಕ ಸರ್ಕಾರದ ಸಚಿವರು ಮತ್ತು ಪಕ್ಷದ ನಾಯಕರ ತಂಡ ಪ್ರತಿ ಜಿಲ್ಲೆಯಲ್ಲಿ ಫಲಾನುಭವಿಗಳ ಸಮಾವೇಶ ನಡೆಸಲಾಗುತ್ತದೆ. ಪ್ರತಿ ಕ್ಷೇತ್ರದಲ್ಲಿ 70-80 % ಮತದಾರರು ಒಂದಿಲ್ಲ ಒಂದು ರೀತಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಅವರೆಲ್ಲರನ್ನೂ ಬಿಜೆಪಿ ಮತದಾರರಾಗಿ ಪರಿವರ್ತಿಸುವ ಪ್ರಯತ್ನ ನಡೆಯುತ್ತಿದೆ. ಇದೇ ಪ್ರಯೋಗ ಗುಜರಾತ್ ಹಾಗೂ ಉತ್ತರ ಪ್ರದೇಶದಲ್ಲಿ ಯಶಸ್ಸನ್ನು ನೀಡಿದೆ. ಫಲಾನುಭವಿಗಳನ್ನು ಪಕ್ಷದ ಜತೆಗೆ ಸಂಪರ್ಕಿಸುವುದೇ ಬಹುಮುಖ್ಯ ಸವಾಲು, ಅದನ್ನು ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ : Uma Bharti : ಮದ್ಯದ ಅಂಗಡಿ ಎದುರೇ ಬೀದಿ ದನಗಳನ್ನು ಕಟ್ಟಿ ಮೇವನ್ನಿಟ್ಟ ಬಿಜೆಪಿ ನಾಯಕಿ!
ನಾಲ್ಕು ಕಡೆಯಿಂದ ಯಾತ್ರೆ
ಒಟ್ಟು ನಾಲ್ಕು ತಂಡಗಳಲ್ಲಿ ಯಾತ್ರೆಯ ಯೋಜನೆ ಆಗಿದೆ ಎಂದ ಸಿ.ಟಿ. ರವಿ, ಈ ನಾಲ್ಕೂ ತಂಡಗಳು ಬಹುತೇಕ ಜಿಲ್ಲೆಗಳನ್ನು ಪ್ರವಾಸ ಮಾಡಿದ ನಂತರ ದಾವಣಗೆರೆಯಲ್ಲಿ ಮಹಾ ಸಂಗಮ ನಡೆಯಲಿದೆ. ಇದರ ಜತೆಜತೆಗೆ ಪ್ರತಿ ಜಿಲ್ಲೆಯಲ್ಲಿ ವಿವಿಧ ಮೋರ್ಚಾಗಳ ಸಮಾವೇಶ ನಡೆಸಲಾಗುತ್ತದೆ. ವಿಜಯ ಸಂಕಲ್ಪ ಯಾತ್ರೆ ಎನ್ನುವ ಹೆಸರನ್ನು ನೀಡಲಾಗಿದೆ. ಪ್ರತಿದಿನ ಒಂದು ದೊಡ್ಡ ಸಮಾವೇಶ, ಸಂಜೆ ವೇಳೆ ನಡೆಯುತ್ತದೆ. ಯಾತ್ರೆಯು ಫೆಬ್ರವರಿ ಕೊನೆಯ ವಾರದಲ್ಲಿ ಆರಂಭ ಆಗುತ್ತದೆ. ಮಾರ್ಚ್ ಮೂರನೇ ವಾರದ ಆಸುಪಾಸಿನಲ್ಲಿ ಮಹಾ ಸಂಗಮ ದಾವಣಗೆರೆಯಲ್ಲಿ ನಡೆಯುತ್ತದೆ.
ಪ್ರತಿ ಬೂತ್‌ಗೆ ಎಲ್‌ಇಡಿ ವ್ಯಾನ್ ಹೋಗುತ್ತದೆ. ಕೇಂದ್ರ ಹಾಗೂ ರಾಜ್ಯದ ಯೋಜನೆಗಳ ಮಾಹಿತಿಗಳು ಹಾಗೂ ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಿಕೊಡಲಿದ್ದೇವೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಶೇ.50 ಮತ ಪಡೆಯುವ ಮೂಲಕ ಯಾವುದೇ ಹಂಗಿಲ್ಲದೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು ಎಂಬ ಗುರಿಯಿದೆ. ಅಭಿವೃದ್ಧಿ ಹಾಗೂ ಸಿದ್ಧಾಂತದ ಆಧಾರದಲ್ಲಿ ಚುನಾವಣೆ ಎದುರಿಸುತ್ತೇವೆ.
ಈಗಾಗಲೆ ಅನೇಕ ಅಭ್ಯರ್ಥಿಗಳ ಪಟ್ಟಿ ತಯಾರಾಗಿದೆ ಎಂದು ತಿಳಿಸಿದ ಸಿ.ಟಿ. ರವಿ, ಗೆಲ್ಲುವ ಸಾಮರ್ಥ್ಯವನ್ನು ಹೊಂದಿರುವವರ ಹೆಸರನ್ನು ಈಗಾಗಲೆ ಸಂಘಟನೆ ಪಟ್ಟಿ ಮಾಡಲಾಗಿದೆ. ಚುನಾವಣಾ ಸಮಿತಿ ಚರ್ಚೆ ಮಾಡಿ ಅಂತಿಮಗೊಳಿಸುತ್ತದೆ. ದೊಡ್ಡದೊಡ್ಡ ಕಾಂಗ್ರೆಸ್ ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಅನೇಕರು ನಮ್ಮ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್‌ಗೆ ಮರ್ಮಾಘಾತ ಆಗುವುದು ನಿಶ್ಚಿತ. 2018ರ ಅನುಭವದ ಆಧಾರದಲ್ಲಿ ಸಿ ಮತ್ತು ಡಿ ಕ್ಷೇತ್ರಗಳಲ್ಲಿ ಎರಡು ವರ್ಷದಿಂದಲೇ ಕೆಲಸ ಆರಂಭಿಸಿದ್ದೇವೆ. ಈ ಬಾರಿ ಸರಳ ಬಹುಮತ ಬರಲಿದ್ದೇವೆ ಎಂದರು.
ಯಾರ ನೇತೃತ್ವದಲ್ಲಿ ಚುನಾವಣೆ ಎಂಬ ಪ್ರಶ್ನೆಗೆ, ಈ ಬಾರಿ ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಮಾರ್ಗದರ್ಶನ, ನಳಿನ್ ಕುಮಾರ್ ಕಟೀಲ್, ಬೆಂಬಲಕ್ಕೆ ಕೇಂದ್ರದ ನಾಯಕರು, ನರೇಂದ್ರ ಮೋದಿಯವರಂತಹ ದೊಡ್ಡ ವ್ಯಕ್ತಿಯ ಆಧಾರದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.
ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಉಪಾಧ್ಯಕ್ಷರು ಮತ್ತು ಕರ್ನಾಟಕದ ಸಹ ಪ್ರಭಾರಿ ಅರುಣಾ ಕುಮಾರಿ, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಮತ್ತು ಡಿ.ವಿ. ಸದಾನಂದಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯದ ಸಚಿವರಾದ ಗೋವಿಂದ ಕಾರಜೋಳ, ಆರ್. ಅಶೋಕ್, ಡಾ|| ಸಿ.ಎನ್. ಅಶ್ವತ್ಥನಾರಾಯಣ, ಬಿ. ಶ್ರೀರಾಮುಲು, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣಾ ಅವರು ಪಾಲ್ಗೊಂಡರು.