Site icon Vistara News

BJP Karnataka: 40% ಆರೋಪ ಮಾಡಿದವರು ಯಾವುದೇ ದಾಖಲೆ ನೀಡಿಲ್ಲ: ಇದು ಕಾಂಗ್ರೆಸ್‌ ಕುತಂತ್ರ ಎಂದ ಸಿಎಂ ಬೊಮ್ಮಾಯಿ

bjp karnataka CM Basavaraj bommai says no evidence submitted by contractors regarding accusation

#image_title

ಬೆಂಗಳೂರು: ರಾಜ್ಯ ಸರ್ಕಾರದ ಇಲಾಖೆಗಳಲ್ಲಿ 40% ಕಮಿಷನ್‌ ಪಡೆಯಲಾಗುತ್ತಿದೆ ಎಂದು ಆರೋಪ ಮಾಡಿದ ಗುತ್ತಿಗೆದಾರರ ಸಂಘ ಈ ಕ್ಷಣದವರೆಗೆ ಯಾವುದೇ ದಾಖಲೆ ನೀಡಿಲ್ಲ ಎಂದಿರುವ ಸಿಎಂ ಬಸವರಾಜ ಬೊಮ್ಮಾಯಿ, ಇದು ಕಾಂಗ್ರೆಸ್‌ ಕುತಂತ್ರ ಎಂದಿದ್ದಾರೆ.

ಮಲ್ಲೇಶ್ವರದ “ಗಿರಿಜಾರಾಮ ದೈವಜ್ಞ ಭವನ”ದಲ್ಲಿ ಮಾಧ್ಯಮ ಕೇಂದ್ರದ ಉದ್ಘಾಟನೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ. 40 ಎಂದು ಆರೋಪಿಸುವ ಗುತ್ತಿಗೆದಾರರ ಸಂಘದವರು ಯಾವುದೇ ದಾಖಲೆ, ಸಾಕ್ಷ್ಯಾಧಾರ ನೀಡಿಲ್ಲ.

ಕೋರ್ಟಿನಲ್ಲೂ ದಾಖಲೆ ಕೊಡಲಿಲ್ಲ. ಇವತ್ತಿನವರೆಗೂ ಸಾಕ್ಷಿ ನೀಡಿಲ್ಲ. ರಾಜಕೀಯ ಪ್ರೇರಿತವಾಗಿ ಕಾಂಗ್ರೆಸ್ ಪಕ್ಷವು ಗುತ್ತಿಗೆದಾರರ ಸಂಘವನ್ನು ಬಳಸಿಕೊಂಡಿದೆ. ತನಿಖೆ ಎದುರಿಸಲು ನಾವು ಈಗಲೂ ಸಿದ್ಧರಿದ್ದೇವೆ. ಲೋಕಾಯುಕ್ತರಿಗೆ ವಿವರ ಕೊಡಿ.

ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರದ ಸರಮಾಲೆ ಇದೆ. ಇವರಿಗೆ ಭ್ರಷ್ಟಾಚಾರದ ಕುರಿತು ಮಾತನಾಡಲು ನೈತಿಕತೆ ಇಲ್ಲ. ನಮ್ಮ ಸರ್ಕಾರ ಕ್ರಿಯಾಶೀಲ, ಜನಪರ, ಜನಕಲ್ಯಾಣ ಮಾಡುವ ಸರ್ಕಾರವಾಗಿದೆ. ಬಡವರು, ದೀನದಲಿತರು, ಹೆಣ್ಣುಮಕ್ಕಳು, ಯುವಕರು, ರೈತರ ಪರವಾಗಿ ಕೆಲಸ ಮಾಡಿದ್ದೇವೆ. ದುಡಿಯುವ ವರ್ಗ ಬಿಜೆಪಿಯೇ ಭರವಸೆ ಎಂದು ನಮ್ಮ ಪರವಾಗಿ ನಿಂತಿದೆ. ಜನರ ಆಶೀರ್ವಾದ, ಬೆಂಬಲದಿಂದ ಮುಂದಿನ 5 ವರ್ಷಗಳ ಕಾಲ ನಮ್ಮ ಸರ್ಕಾರ ಮತ್ತೆ ಆಡಳಿತ ನಡೆಸಲಿದೆ. ಜನರು ಪ್ರಧಾನಿ ಮೋದಿಜ ನಾಯಕತ್ವಕ್ಕೆ ಮತ್ತೆ ಅವಕಾಶ ಮಾಡಿಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ 50ಕ್ಕೂ ಹೆಚ್ಚು ಹಗರಣಗಳು ನಡೆದಿವೆ. ಅವುಗಳ ಕುರಿತ ದೂರು ಎಸಿಬಿಗೆ ಹೋಗಿತ್ತು. ಎಲ್ಲದಕ್ಕೂ ಬಿ ರಿಪೋರ್ಟ್ ಹಾಕಲಾಗಿತ್ತು. ಲೋಕಾಯುಕ್ತದ ಅಧಿಕಾರವನ್ನು ಶೂನ್ಯ ಮಾಡಿದವರು ಕಾಂಗ್ರೆಸ್ಸಿಗರು. ಇದು ಕರ್ನಾಟಕದ ಜನತೆಗೆ ಮೋಸ ಮಾಡುವ ಕೆಲಸ. ನಾವು ಲೋಕಾಯುಕ್ತರಿಗೆ ಮತ್ತೆ ಅಧಿಕಾರ ಕೊಟ್ಟಿದ್ದೇವೆ.

2014ರ ಬಳಿಕ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಪ್ರತಿ ನಾಗರಿಕರಲ್ಲಿ ಆತ್ಮವಿಶ್ವಾಸ ಮೂಡಿದೆ. ಸುರಕ್ಷತೆ, ಅಭಿವೃದ್ಧಿಯ ವಿಚಾರದಲ್ಲಿ ವಿಶ್ವಾಸ ಮೂಡಿದೆ. ಅತಿ ಹೆಚ್ಚು ಹೆದ್ದಾರಿ, ರೈಲ್ವೆ ಲೈನ್, ವಿಮಾನ ನಿಲ್ದಾಣಗಳು, ಮೆಡಿಕಲ್ ಕಾಲೇಜು- ಎಲ್ಲ ರಂಗದಲ್ಲಿ ಸಾಧನೆ ಆಗಿದೆ. ಸಾಮಾಜಿಕ ಸೌಕರ್ಯದಲ್ಲೂ ನಾವು ಮುಂದಿದ್ದೇವೆ. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕೆಂದು ಹಲವು ಯೋಜನೆ ಜಾರಿಗೊಳಿಸಿದ್ದಾರೆ ಎಂದರು.

ಕರ್ನಾಟಕದ 54 ಲಕ್ಷಕ್ಕೂ ಹೆಚ್ಚು ರೈತರು ಸೇರಿ 20 ಕೋಟಿಯಷ್ಟು ರೈತರನ್ನು ಕಿಸಾನ್ ಸಮ್ಮಾನ್ ಯೋಜನೆ ತಲುಪುತ್ತಿದೆ. 16 ಸಾವಿರ ಕೋಟಿ ರೂ. ಕರ್ನಾಟಕದ ರೈತರಿಗೆ ಸಿಕ್ಕಿದೆ. ನಮ್ಮನ್ನು ಹಿಂದೆ ಆಳಿದವರು ಸ್ವಚ್ಛ ಭಾರತ ಯೋಜನೆ ಬಗ್ಗೆ ವ್ಯಂಗ್ಯವಾಡಿದ್ದರು. ಕಳೆದ 3 ವರ್ಷಗಳ ಹಿಂದೆ ಮೋದಿಜಯವರು ಪ್ರತಿ ಮನೆಗೆ ನಲ್ಲಿ ನೀರು ಕೊಡುವ ಘೋಷಣೆ ಮಾಡಿದ್ದಾರೆ. ಹಿಂದಿನ ಸರಕಾರಗಳು ಆ ಸಾಹಸ ಮಾಡಿರಲಿಲ್ಲ. ಅದು ಅನುಷ್ಠಾನಕ್ಕೆ ಬಂದಿದೆ. ಕರ್ನಾಟಕದಲ್ಲಿ ಸುಮಾರು 40 ಲಕ್ಷ ಮನೆಗಳಿಗೆ ಸೇರಿದಂತೆ ದೇಶದಲ್ಲಿ 12 ಕೋಟಿ ಮನೆಗಳಿಗೆ ನೀರಿನ ಸೌಕರ್ಯ ಕೊಡಲಾಗಿದೆ ಎಂದು ವಿವರಿಸಿದರು.

ಬಿ.ಎಸ್.ಯಡಿಯೂರಪ್ಪ ಅವರ ಜನಪರ ಹೋರಾಟಗಳಿಂದ ಜನಮಾನಸದಲ್ಲಿ ಪಕ್ಷವು ಬೆಳೆಯಿತು. ಅನಂತಕುಮಾರ್ ಅಧ್ಯಕ್ಷತೆಯಲ್ಲೂ ಈ ಬೆಳವಣಿಗೆ ಮುಂದುವರಿದಿದೆ. 2008ರಿಂದ 5 ವರ್ಷ ಬಡವರ ಪರವಾಗಿ, ವಯೋವೃದ್ಧರಿಗೆ ಸೇರಿ ವಿವಿಧ ಯೋಜನೆ, ರೈತರಿಗೆ ವಿಶೇಷ ಬಜೆಟ್ ಕೊಡಲಾಗಿದೆ. ಇದು ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದಿದೆ ಎಂದರು.

ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್, ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ, ರಾಷ್ಟ್ರೀಯ ಮುಖ್ಯ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಅನಿಲ್ ಬಲೂನಿ, ಕೇಂದ್ರ ಸಚಿವರಾದ ಭಗವಂತ ಖೂಬಾ, ರಾಜೀವ್ ಚಂದ್ರಶೇಖರ್, ರಾಷ್ಟ್ರೀಯ ವಕ್ತಾರ ಜಾಫರ್ ಇಸ್ಲಾಂ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್, ರಾಜ್ಯ ವಕ್ತಾರ ರಾಜುಗೌಡ ಮತ್ತಿತರರು ಭಾಗವಹಿಸಿದ್ದರು.

ಇದನ್ನೂ ಓದಿ: Basavaraj Bommai: ಒಳಮೀಸಲಾತಿಯನ್ನು ಕಾಂಗ್ರೆಸ್‌ ಹಿಂಪಡೆಯಲು ಸಾಧ್ಯವಿಲ್ಲ ಎಂದ ಸಿಎಂ ಬೊಮ್ಮಾಯಿ

Exit mobile version