ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ (BJP Karnataka) ದಿನೇದಿನೆ ಹೆಚ್ಚಾಗುತ್ತಿರುವ ಬಂಡಾಯ, ವಿರೋಧಿ ಹೇಳಿಕೆಗಳು ನವದೆಹಲಿಯಲ್ಲಿರುವ ನಾಯಕರ ಕಿವಿ ತಲುಪಿದೆ. ಬಿಜೆಪಿ ಎರಡು ಬಣಗಳಾಗಿ ಪರಸ್ಪರರ ವಿರುದ್ಧ ವಾಗ್ದಾಲಿ ನಡೆಸುತತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ನಾಯಕರು ಇದೀಗ ಪರಿಹಾರಕ್ಕೆ ಮುಂದಾಗಿದ್ದಾರೆ.
ಚುನಾವಣೆ ಸೋಲಿಗೆ ಯಾರು ಕಾರಣ ಎಂಬ ಕುರಿತು ಇತ್ತೀಚಿನ ದಿನಗಳಲ್ಲಿ ಸಂಸದ ಪ್ರತಾಪಸಿಂಹ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಸ್. ಮುನಿರಾಜು, ಮಾಜಿ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಎ.ಎಸ್. ಪಾಟೀಲ್ ನಡಹಳ್ಳಿ, ವೀರಣ್ಣ ಚರಂತಿಮಠ, ಮಾಜಿ ಸಚಿವ ಮುರುಗೇಶ್ ನಿರಾಣಿ, ವಿ. ಸೋಮಣ್ಣ, ಪರಾಜಿತ ಅಭ್ಯರ್ಥಿ ತಮ್ಮೇಶ್ ಗೌಡ ಸೇರಿ ಅನೇಕರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಪ್ರತಾಪ್ ಸಿಂಹ್, ಬಸನಗೌಡ ಪಾಟೀಲ್ ಯತ್ನಾಳ್, ವಿ. ಸೋಮಣ್ಣ, ಎಂ.ಪಿ. ರೇಣುಕಾಚಾರ್ಯ ಅವರುಗಳು ಆಗಾಗ್ಗೆ ಹೇಳಿಕೆ ನೀಡುತ್ತಲೇ ಇದ್ದಾರೆ. ಇದೆಲ್ಲ ವಿಚಾರದಿಂದ ರಾಜ್ಯ ಬಿಜೆಪಿಯಲ್ಲಿ ಗೊಂದಲ ಉಂಟಾಗಿದೆ. ಈಗಾಗಲೆ ಸೋಲಿನ ಬೇಸರದಲ್ಲಿರುವ ಕಾರ್ಯಕರ್ತರು, ಲೋಕಸಭೆ ಚುನಾವಣೆಗೆ ತಯಾರಾಗುವ ಉಮೇದಿನಲ್ಲಿದ್ದರೂ ನಾಯಕರು ಮಾತ್ರ ಕಚ್ಚಾಟ ನಿಲ್ಲಿಸುತ್ತಿಲ್ಲ. ವಿಧಾನಸಭೆಗೆ ಪ್ರತಿಪಕ್ಷ ನಾಯಕನನ್ನಾಗಲಿ, ರಾಜ್ಯ ಬಿಜೆಪಿಗೆ ನೂತನ ಅಧ್ಯಕ್ಷನನ್ನಾಗಲಿ ಆಯ್ಕೆ ಮಾಡುತ್ತಿಲ್ಲ. ಇದೆಲ್ಲದರ ನಡುವೆ ನಾಯಕರು ಪರಸ್ಪರ ಕಿತ್ತಾಡಿಕೊಳ್ಳುತ್ತಿರುವುದು ನವದೆಹಲಿ ನಾಯಕರ ಕಿವಿಗೆ ಬಿದ್ದಿದೆ. ಹAಗಾಗಿ ಪ್ರತಿಯೊಬ್ಬರ ಜತೆಗೂ ಮಾತುಕತೆ ನಡೆಸುವಂತೆ ಸೂಚನೆ ನೀಡಿದ್ದಾರೆ.
ರಾಜ್ಯ ಕಚೇರಿಯಲ್ಲಿ ಸಭೆ
ನವದೆಹಲಿಯಿಂದ ಸೂಚನೆ ಬರುತ್ತಿದ್ದಂತೆಯೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕರ್ನಾಟಕಕ್ಕೆ ಆಗಮಿಸಿ ಸಭೆ ಆಯೋಜಿಸಿದ್ದಾರೆ. ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಗೋವಿಂದ ಕಾರಜೋಳಸಹ ಇದ್ದಾರೆ.
ಪ್ರತಾಪಸಿಂಹ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಸ್. ಮುನಿರಾಜು, ಮಾಜಿ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಎ.ಎಸ್. ಪಾಟೀಲ್ ನಡಹಳ್ಳಿ, ವೀರಣ್ಣ ಚರಂತಿಮಠ, ಮಾಜಿ ಸಚಿವ ಮುರುಗೇಶ್ ನಿರಾಣಿ, ವಿ. ಸೋಮಣ್ಣ, ಪರಾಜಿತ ಅಭ್ಯರ್ಥಿ ತಮ್ಮೇಶ್ ಗೌಡ ಅವರಿಗೆ ಬುಲಾವ್ ನೀಡಲಾಗಿದೆ. ಒಬ್ಬೊಬ್ಬ ನಾಯಕರೂ ಬಿಜೆಪಿಗೆ ಕಚೇರಿಗೆ ಆಗಮಿಸಿ ಪ್ರತ್ಯೇಕವಾಗಿ ಸಮಜಾಯಿಷಿ ನೀಡಿ ತೆರಳುತ್ತಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಆಗಮಿಸಿ ಸಾಕಷ್ಟು ಹೊತ್ತಿನ ನಂತರ ಹೊರ ನಡೆದರು. ರೇಣೂಕಾಚಾರ್ಯ ರೀತಿಯಲ್ಲಿ ತಮಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ನನಗೆ ನೋಟಿಸ್ ಬಂದಿರುವುದನ್ನು ನಿರೂಪಿಸಿದರೆ 10 ಲಕ್ಷ ರೂ. ನೀಡುತ್ತೇನೆ ಎನ್ನುತ್ತಲೇ ಹೊರನಡೆದರು. ತಮ್ಮೇಶ್ ಗೌಡ ಸಹ ಹೊರಬಂದರಾದರೂ, ಒಳಗೆ ಏಣು ನಡೆದಿದೆ ಎಂದು ಹೇಳಲು ನಿರಾಕರಿಸಿದರು.
ಇದನ್ನೂ ಓದಿ: BJP Politics: ಬೀದಿಗೆ ಬಂದ ಬಿಜೆಪಿ ಕಲಹ; ಯತ್ನಾಳ್-ನಿರಾಣಿ ನಡುವೆ ನಿಲ್ಲದ ಅಂತರ್ಯುದ್ಧ
ಎ.ಎಸ್. ಪಾಟೀಲ್ ವರಿಷ್ಠರ ಎದುರು ಹಾಜರಾಗಿ ವಿವರಣೆ ನೀಡಿದ್ದಾರೆ. ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೊಂದಾಣಿಕೆ ರಾಜಕಾರಣ ಎಲ್ಲರಿಗೂ ಗೊತ್ತಿರುವ ಸತ್ಯ. ಯತ್ನಾಳ್ ಹೊಂದಾಣಿಕೆ ಎಷ್ಟಿದೆ ಅನ್ನೋದನ್ನ ಜಿಲ್ಲೆಗೆ ಬಂದು ಅಭಿಪ್ರಾಯಗಳನ್ನು ಕೇಳಿ ಗೊತ್ತಾಗುತ್ತೆ. ಯತ್ನಾಳ್ ಸೇರಿ ಹಲವರು ಬಹಿರಂಗವಾಗಿ ಮಾತನಾಡ್ತಿದ್ರು, ನಾವು ಅದಕ್ಕಾಗಿಯೇ ಮಾತಾಡಿದ್ದು, ಅದರಲ್ಲಿ ತಪ್ಪೇನಿದೆ? ಈಗ ನೀವು ಮಾತಾಡಬೇಡಿ ಅಂದಿದ್ದೀರಿ.. ಮಾತಾಡಲ್ಲ.. ಆದರೆ ಲೋಕಸಭೆ ಚುನಾವಣೆಗೆ ವಿಧಾನಸಭೆ ಚುನಾವಣೆಯಲ್ಲಿ ಆಗದಂತೆ ಎಚ್ಚರವಹಿಸಿ ಎಂದಿದ್ದಾರೆ ಎಂದು ಮೂಲಗಳು ಹೇಳಿವೆ.
ಪ್ರತಿಯಯೊಬ್ಬರ ಮಾತನ್ನೂ ಆಲಿಸುತ್ತಿರುವ ನಾಯಕರು, ಇನ್ನುಮುಂದೆ ಬಹಿರಂಗ ಹೇಳಿಕೆ ನೀಡದಂತೆ ತಿಳಿಸುತ್ತಿದ್ದಾರೆ. ಈ ಸಭೆಯಲ್ಲಿ ಏನು ನಡೆದಿದೆ ಎನ್ನುವುದೂ ಸಹ ಹೊರಗೆ ತಿಳಿಯಬಾರದು. ಹಾಗೊಂದುವೇಳೆಗ ಹಳೆಯ ಚಾಳಿಯನ್ನೇ ಮುಂದುವರಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿರುವುದಾಗಿ ಮೂಲಗಳು ಹೇಳಿವೆ.