Site icon Vistara News

BJP Karnataka: ಕಟೀಲ್‌ಗೆ ಗೇಟ್ ಪಾಸ್? ಯಾರಾಗಲಿದ್ದಾರೆ ಮುಂದಿನ ರಾಜ್ಯಾಧ್ಯಕ್ಷ?

kateel sunil byv

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಬಿಜೆಪಿಗೆ (BJP Karnataka) ಭಾರಿ ಹಿನ್ನಡೆಯಾದ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಪಕ್ಷದ ನಾಯಕತ್ವ ಬದಲಾಯಿಸುವ ಬಗ್ಗೆ ಪಕ್ಷದೊಳಗೆ ಜೋರಾಗಿ ಚರ್ಚೆ ನಡೆದಿದೆ.

ನಾಯಕರ ವಲಯದಲ್ಲೂ, ಕಾರ್ಯಕರ್ತರಲ್ಲೂ ಈ ಬಗ್ಗೆ ಚರ್ಚೆ ಶುರುವಾಗಿದ್ದು, ರಾಜ್ಯ ಘಟಕ ರಥಕ್ಕೆ ಹೊಸ ಸಾರಥಿ ಆಯ್ಕೆಯಾಗಲಿದ್ದಾರೆ ಎಂಬ ಗುಸುಗುಸು ಹರಡಿದೆ. ನಳಿನ್‌ಕುಮಾರ್‌ ಕಟೀಲ್‌ ಅವರು ಪಕ್ಷದ ಸಂಘಟನೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲಿಲ್ಲ, ಹೀಗಾಗಿ ಈ ಚುನಾವಣಾ ಸೋಲಿನ ಹೊಣೆಯನ್ನು ರಾಜ್ಯಾಧ್ಯಕ್ಷರೇ ಹೊತ್ತುಕೊಳ್ಳಬೇಕು ಎಂದು ಇತರ ಕೆಲ ನಾಯಕರು ಆಗ್ರಹಿಸಿದ್ದಾರೆ.

ಮುಂದೆ ಪ್ರಬಲ ಸಮುದಾಯಕ್ಕೆ ರಾಜ್ಯ ಘಟಕದ ಜವಾಬ್ದಾರಿ ಕೊಡುವ ಬಗ್ಗೆ ಚರ್ಚೆ ನಡೆದಿದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ಇರುವುದರಿಂದ, ಆದಷ್ಟು ಬೇಗನೆ ಅಧ್ಯಕ್ಷರನ್ನು ಬದಲಿಸುವಂತೆ ಕಾರ್ಯಕರ್ತರ ವಲಯದಲ್ಲಿ ಆಗ್ರಹ ಕೇಳಿಬಂದಿದೆ. ಈ ನಡುವೆ ರಾಜ್ಯಾಧ್ಯಕ್ಷರ ಹುದ್ದೆಗೆ ಸಾಲು ಸಾಲು ನಾಯಕರ ಪೈಪೋಟಿಯಿದೆ. ಬಿ.ವೈ ವಿಜಯೇಂದ್ರ, ಶೋಭಾ ಕರಂದ್ಲಾಜೆ, ಅಶ್ವಥ್ ನಾರಾಯಣ, ಸುನಿಲ್ ಕುಮಾರ್ ಸೇರಿದಂತೆ ಹಲವರ ಹೆಸರು ಚರ್ಚೆಯಾಗುತ್ತಿದೆ.

ವಿಪಕ್ಷ ನಾಯಕ ಸ್ಥಾನ ಲಿಂಗಾಯತ ಸಮುದಾಯಕ್ಕೆ ಬಹುತೇಕ ಪಕ್ಕಾ ಆಗಿರುವುದರಿಂದ, ಒಕ್ಕಲಿಗ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಹುದ್ದೆ ಸಿಗುವ ಸಾಧ್ಯತೆ ಇದೆ. ಆದರೆ ಅಹಿಂದ ಮತ ಸೆಳೆಯಲು ಅಹಿಂದ ಸಮುದಾಯದ ನಾಯಕನನ್ನು ನೇಮಿಸುವ ಬಗ್ಗೆ ಸಹ ಚರ್ಚೆ ಇದೆ. ಸುನಿಲ್ ಕುಮಾರ್ ಆದರೆ ಅಹಿಂದ ಸಮುದಾಯದ ಮತ ಸೆಳೆಯಬಹುದು ಅನ್ನುವ ಲೆಕ್ಕಾಚಾರವಿದೆ.

ಒಕ್ಕಲಿಗ ಸಮುದಾಯಕ್ಕೆ ರಾಜ್ಯಾಧ್ಯಕ್ಷ, ಲಿಂಗಾಯತ ಸಮುದಾಯಕ್ಕೆ ವಿಪಕ್ಷ ನಾಯಕ ಹಾಗೂ ಅಹಿಂದ ಸಮುದಾಯಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾನ ಕೊಡುವ ಬಗ್ಗೆ ಚರ್ಚೆ ಆಗುತ್ತಿದೆ. ಮೂರೂ ಸಮುದಾಯಗಳನ್ನು ಪರಿಗಣಿಸಿ ಸೂಕ್ತ ಸ್ಥಾನ ನೀಡಿ 2024ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಅನುಕೂಲ ಮಾಡಿಕೊಳ್ಳುವ ಬಗ್ಗೆಯೂ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: Karnataka Election: ಬಿಜೆಪಿಗೆ ಸೋಲು; ಪುತ್ತೂರಿನಲ್ಲಿ ಕಟೀಲ್‌, ಸದಾನಂದ ಗೌಡ ಫೋಟೊಗೆ ಚಪ್ಪಲಿ ಹಾರ ಹಾಕಿ ಆಕ್ರೋಶ

Exit mobile version