ಬೆಂಗಳೂರು: ಪಕ್ಷದಿಂದ ಎಲ್ಲವನ್ನೂ ಪಡೆದ ನಂತರವೂ ಪಕ್ಷವನ್ನು ಬಿಟ್ಟು ಹೋಗುತ್ತಿರುವುದು ಲಕ್ಷ್ಮಣ ಸವದಿ ಹಾಗೂ ಜಗದೀಶ್ ಶೆಟ್ಟರ್ ಮಾಡುತ್ತಿರುವುದು ಅಕ್ಷಮ್ಯ ಅಪರಾಧ ಎಂದಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಈ ಹಿಂದೆ ತಾವೂ ಅಕ್ಷಮ್ಯ ಅಪರಾಧ ಮಾಡಿದ್ದಾಗಿ ತಿಳಿಸಿದ್ದಾರೆ. ಇಬ್ಬರೂ ತಮ್ಮ ತಪ್ಪಿನ ಅರಿವಾಗಿ ವಾಪಸಾದರೆ ಅದೇ ಸ್ಥಾನಮಾನ, ಗೌರವ ನೀಡುವುದಾಗಿ ತಿಳಿಸಿದ್ದಾರೆ.
ಮಲ್ಲೇಶ್ವರದ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಹೈಕಮಾಂಡ್ ನಮಗೆ ಸುಪ್ರೀಂ. ಶೆಟ್ಟರಿಗೆ ಕೇಳಲು ಇಷ್ಟಪಡುತ್ತೇನೆ, ನಿಮಗೆ ಏನು ಅನ್ಯಾಯ ಆಗಿದೆ? ನಿಮಗೆ ಅಧಿಕಾರ ನೀಡುವುದಿಲ್ಲ ಎಂದು ನಾವು ಹೇಳಿದ್ದೆವೆ? ಅವರ ಪತ್ನಿಗೆ ಬೇಕಾದರೆ ಟಿಕೆಟ್ ಕೊಡಲೂ ಸಿದ್ಧವಿದ್ದೆವು. ಶೆಟ್ಟರ್ ಅವರನ್ನು ರಾಜ್ಯಸಭೆ ಸದಸ್ಯರಾಗಿಸಿ ಕೇಂದ್ರದಲ್ಲಿ ಮಂತ್ರಿ ಮಾಡುವ ಆಶ್ವಾಸನೆಯನ್ನೂ ನೀಡಿದ್ದೆವು. ಆದರೂ ಮಾತನ್ನು ಕೇಳದೆ ಕಾಂಗ್ರೆಸ್ ಜತೆ ಹೋಗುತ್ತಿರುವುದು ಅಕ್ಷಮ್ಯ ಅಪರಾಧ ಎಂದರು.
ಪಕ್ಷವು ಎಲ್ಲವನ್ನೂ ನೀಡಿದ್ದರೂ ಈ ಹಿಂದೆ ಯಡಿಯೂರಪ್ಪ ಅವರೂ ಪಕ್ಷವನ್ನು ಬಿಟ್ಟು ಹೋಗಿದ್ದರು ಎಂಬ ಜಗದೀಶ್ ಶೆಟ್ಟರ್ ಮಾತಿಗೆ ಪ್ರತಿಕ್ರಿಯಿಸಿ, ಅದು ನಾನು ಮಾಡಿದ ಅಕ್ಷಮ್ಯ ಅಪರಾಧ. ಅದಕ್ಕಾಗಿ ನಾನು ಈಗಾಗಲೆ ರಾಜ್ಯದ ಜನರ ಕ್ಷಮೆ ಕೇಳಿದ್ದೇನೆ ಎಂದರು.
ಎಸ್. ಸುರೇಶ್ ಕುಮಾರ್ ಹಾಗೂ ಶೆಟ್ಟರ್ ಅವರದ್ದು ಒಂದೇ ವಯೋಮಾನವಾದರೂ ಶೆಟ್ಟರ್‌ಗೆ ಮಾತ್ರ ಟಿಕೆಟ್ ತಪ್ಪಿಸಿರುವುದು ಲಿಂಗಾಯತರಿಗೆ ಮಾಡಿದ ಅವಮಾನ ಎಂಬ ಚರ್ಚೆ ನಡೆಯುತ್ತಿದೆ ಎಂಬ ಮಾತಿಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನವರು ಉದ್ದೇಶಪೂರ್ವಕವಾಗಿ ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ. ವೀರಶೈವ ಲಿಂಗಾಯತರಿಗೆ ಅನ್ಯಾಯ ಆಗಿದೆ ಎಂಬ ಕಾಂಗ್ರೆಸ್ ಪಿತೂರಿ ಮಾತಿಗೆ ಬೆಲೆ ಇಲ್ಲ. ನಾನು ರಾಜೀನಾಮೆ ನೀಡಬೇಕೆನ್ನುವುದು ಒತ್ತಾಯ ಅಲ್ಲ, ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದೂ ನನ್ನ ನಿರ್ಧಾರ. ಬಿಜೆಪಿಯಲ್ಲಿ ವೀರಶೈವ ಲಿಂಗಾಯತರಿಗೆ ಅನ್ಯಾಯ ಆಗಿಲ್ಲ. ನನಗೆ 80 ವರ್ಷವಾಗಿದ್ದರೂ ಸಂಚಾರ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದರು.
ನಿವೃತ್ತಿ ಆಗಿ ಎಂದು ಶೆಟ್ಟರ್‌ಗೆ ಯಾರೂ ಹೇಳಿಲ್ಲ, ಕೇಂದ್ರಕ್ಕೆ ಬನ್ನಿ, ರಾಜ್ಯಸಭೆ ಸದಸ್ಯರಾಗಿ ಎಂದು ಹೇಳಿದ್ದೇವೆ. ಜಗದೀಶ ಶೆಟ್ಟರಿಗೆ ನಾವೇನೂ ಅನ್ಯಾಯ ಮಾಡಿಲ್ಲ. ಅವರಿಗೆ ಒಳ್ಳೆಯದು ಆಗಲಿ. ಅವರ ನಿಲುವು ಸರಿಯಲ್ಲ ಎಂದರು. ತಪ್ಪಿನ ಅರಿವಾಗಿ ಮತ್ತೆ ಬಂದರೆ ಅವರನ್ನು ಸ್ವಾಗತ ಮಾಡುತ್ತೇನೆ. ಅದೇ ರೀತಿಯ ಸ್ಥಾನಮಾನ ನೀಡಲು ಸಿದ್ಧರಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂ ಓದಿ: Karnataka Election 2023: ಇನ್ನೊಂದು ಪೀಳಿಗೆಗೆ ಅವಕಾಶ ಕೊಡುವುದಕ್ಕಾಗಿ ಶೆಟ್ಟರ್‌ಗೆ ಟಿಕೆಟ್ ತಪ್ಪಿದೆ: ಸಿಎಂ ಬೊಮ್ಮಾಯಿ