ಹುಬ್ಬಳ್ಳಿ: ಈ ಬಾರಿ ವಿಧಾನಸಭೆ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಬಿಜೆಪಿ ವರಿಷ್ಠರು ಸೂಚನೆ ನೀಡಿರುವುದನ್ನು ಕೆ.ಎಸ್. ಈಶ್ವರಪ್ಪ ಒಪ್ಪಿದ್ದಾರಾದರೂ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಿರಾಕರಿಸಿದ್ದಾರೆ.
ಈ ಕುರಿತು ಹುಬ್ಬಳ್ಳಿಯ ನಿವಾಸದಲ್ಲಿ ಜಗದೀಶ್ ಶೆಟ್ಟರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ವರಿಷ್ಠರು ನನ್ನ ಜತೆಗೆ ಮಾತನಾಡಿದರು. ನೀವು ಹಿರಿಯರಿದ್ದೀರಿ, ಬೇರೆಯವರಿಗೆ ಅವಕಾಶ ಕೊಡಿ ಎಂದು ಕೇಳಿದರು. ಮೂವತ್ತು ವರ್ಷದಿಂದ ಬಿಜೆಪಿ ಕಟ್ಟಿ ಬೆಳೆಸುವ ಕೆಲಸ ನಾನು ಮಾಡಿದ್ದೇನೆ. ಹಿಂದೆ ಎರಡು ಬಾರಿ ಪ್ರತಿಪಕ್ಷ ನಾಯಕನಾಗಿ, ಪಕ್ಷವನ್ನು ಬಲಪಡಿಸಿದ್ದೇನೆ.
ಟಿಕೆಟ್ ನೀಡುವ ಪ್ರಕ್ರಿಯೆಯಲ್ಲೂ ನೂರಾರು ಸ್ಥಳೀಯ ನಾಯಕರಿಗೆ ಅವಕಾಶ ನೀಡಿ ಹಲವಾರು ನಾಯಕರಿಗೆ ಅವಕಾಶ ನೀಡಿದ್ದೇನೆ. ವರಿಷ್ಠರಿಂದ ಫೋನ್ ಬಂದಿದ್ದು ನನಗೆ ಮನಸ್ಸಿಗೆ ನೋವಾಗಿದೆ. ಹಿರಿಯರು, ಮಾಜಿ ಸಿಎಂ ಅದಕ್ಕೆ ಕೊಡುತ್ತಿಲ್ಲ ಎಂದರು. ಹಾಗಾದರೆ ಬೇರೆ ರಾಜ್ಯದಲ್ಲಿ ಮಾಜಿ ಸಿಎಂಗೆ ಕೊಟ್ಟಿಲ್ಲವೇ ಎಂಬ ಪ್ರಶ್ನೆಯಿದೆ.
ಮತ್ತೊಮ್ಮೆ ಪಕ್ಷದಲ್ಲಿ ಚರ್ಚೆ ಮಾಡುವುದಾಗಿ ವರಿಷ್ಠರು ಹೇಳಿದ್ದಾರೆ. ಅಲ್ಲಿಂದ ಏನು ಬರುತ್ತದೆ ಎನ್ನುವುದನ್ನು ನೋಡುತ್ತೇನೆ. ಆನಂತರ ಏನು ಮಾಡಬೇಕು ಎನ್ನುವುದಕ್ಕೆ ವಿಸ್ತೃತವಾದ ಸುದ್ದಿಗೋಷ್ಠಿ ಮಾಡುತ್ತೇನೆ. ನಾನು ಸ್ಪರ್ಧೆ ಮಾಡಿಯೇ ಮಾಡುತ್ತೇನೆ. ನನ್ನಲ್ಲಿ ಏನು ಮೈನಸ್ ಪಾಯಿಂಟ್ ಇದೆ ಹೇಳಿ ಎಂದಿದ್ದೇನೆ. ನನ್ನೆ ಮೇಲೆ ಏನಾದರೂ ಆಪಾದನೆ, ಕೇಸ್ ಇದೆಯೇ? ಒಂದು ಕ್ಲೀನ್ ಹ್ಯಾಂಡ್ ಇರುವಾಗ ಯಾಕೆ ತಪ್ಪಿಸಬೇಕು ಎಂದು ಕೇಳಿದ್ದೇನೆ.
ಕಾರ್ಯಕ್ರಮಗಳಿಗೆ ಕಡೆಗಣಿಸುವುದು ಬೇರೆ, ಟಿಕೆಟ್ ನೀಡದೇ ಇರುವುದು ಬೇರೆ. ನನಗೆ ಜನರ ಆಶೀರ್ವಾದ ಇದೆ. ನಿನ್ನೆ ಮೊನ್ನೆ ಕನ್ಫರ್ಮ್ ಎಂದು ಹೈಕಮಾಂಡ್‌ನಿಂದ ಸಿಗ್ನಲ್ ಬಂತು. ಇವತ್ತು ಇಲ್ಲ ಎಂದರೆ ಏನು? ಯಾವ ಕಾರಣಕ್ಕೆ ಟಿಕೆಟ್ ನೀಡುತ್ತಿಲ್ಲ ಎಂದು ಕೇಳಿದ್ದೇನೆ, ಆದರೆ ಅದಕ್ಕೆ ಉತ್ತರ ನೀಡಿಲ್ಲ. ಈಗಾಗಲೆ ಪ್ರಚಾರ ಆರಂಭಿಸಿದ್ದೇನೆ. ಜನರಿಂದ ಉತ್ತಮ ಸ್ಪಂದನೆ ಇದೆ. ಇದನ್ನು ಪರಿಗಣಿಸುತ್ತೇವೆ, ಚರ್ಚಿಸುತ್ತೇವೆ ಎಂದು ತಿಳಿಸಿದ್ದಾರೆ ಎಂದರು.
ಮುಂದೆ ಏನು ಮಾಡುತ್ತೇನೆ ಎಂಬ ಪ್ರಶ್ನೆಗೆ ಉತ್ತರಿಸಿ, ಚುನಾವಣಾ ಕಣದಿಂದ ಹಿಂದೆ ಸರಿಯಬೇಕು ಎನ್ನುವುದಿದ್ದರೆ ಏರಡು ಮೂರು ತಿಂಗಳು ಮೊದಲೇ ಹೇಳಬಹುದಿತ್ತು. ನೀವು ಹಿರಿಯರಿದ್ದೀರಿ, ಬೇರೆ ಹೊಣೆಗಾರಿಕೆ ನೀಡುತ್ತೇವೆ ಎಂದು ತಿಳಿಸಿದ್ದರೆ ಒಪ್ಪಬಹುದಿತ್ತು. ಆದರೆ ಈ ರೀತಿ ಇನ್ನು ಎರಡು ದಿನ ಇರುವಂತೆ ಹೇಳಿರುವುದು ಆಘಾತವಾಗುತ್ತದೆ. ಅಲ್ಲಿಂದ ಏನು ಸೂಚನೆ ಬರುತ್ತದೆ ಎನ್ನುವುದರ ಆಧಾರದಲ್ಲಿ ಮುಂದಿನ ನಿರ್ಧಾರ ಘೋಷಿಸುತ್ತೇನೆ ಎಂದು ತಿಳಿಸಿದ್ದೇನೆ ಎಂದರು.
ನಾನು ಇನ್ನೂ 10-15 ವರ್ಷ ಕ್ರಿಯಾಶೀಲ ರಾಜಕಾರಣ ಮಾಡುತ್ತೇನೆ. ನನಗೆ ವಯಸ್ಸು ಇದೆ, ಆರೋಗ್ಯವೂ ಚೆನ್ನಾಗಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: KS Eshwarappa : ಈಶ್ವರಪ್ಪ ಮನೆ ಮುಂದೆ ಹೈ ಡ್ರಾಮಾ, ನಿವೃತ್ತಿ ನಿರ್ಧಾರ ಹಿಂಪಡೆಯುವಂತೆ ಬೆಂಬಲಿಗರ ಆಗ್ರಹ