Site icon Vistara News

BJP Karnataka: ಯಾರೇ ಅಭ್ಯರ್ಥಿಯಾದರೂ ಕೆಲಸ ಮಾಡಬೇಕು ಅಷ್ಟೆ: ಟಿಕೆಟ್‌ ಆಯ್ಕೆಯ ಸುಳಿವು ಬಿಟ್ಟುಕೊಟ್ಟರೇ ಶೋಭಾ ಕರಂದ್ಲಾಜೆ?

bjp karnataka leader shobha karandlaje calls to karyakartas

ಬೆಂಗಳೂರು: ಪಕ್ಷ ಯಾವುದೇ ಅಭ್ಯರ್ಥಿಯನ್ನು ಘೋಷಣೆ ಮಾಡಿದರೂ ಕೆಲಸ ಮಾಡಬೇಕು ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ ಖಡಕ್ಕಾಗಿ ಹೇಳಿದ್ದು, ಟಿಕೆಟ್‌ ಆಯ್ಕೆಯಲ್ಲಿ ಅಚ್ಚರಿ ಇರುವ ಸಾಧ್ಯತೆಯನ್ನು ಮುಂದಿಟ್ಟಿದ್ದಾರೆ.

ಅರಮನೆ ಮೈದಾನದಲ್ಲಿ ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಶೋಭಾ ಕರಂದ್ಲಾಜೆ ಮಾತನಾಡಿದ್ದಾರೆ.

ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ, ಸಹ ಸಂಚಾಲಕ ಭಗವಂತ್ ಖೂಬಾ ಮತ್ತು ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ. ಉಪಸ್ಥಿತಿ.

ಚುನಾವಣೆಗೆ ನಾವು ಸಿದ್ದತೆ ಮಾಡಿಕೊಳ್ಳಬೇಕಿದೆ. ನಾವು ಮಾಡುವ ಕೆಲಸ ಅತ್ಯಂತ ಪಾರದರ್ಶಕವಾಗಿರಬೇಕು. ಯಾವುದೇ ರೀತಿಯ ನೆಗೆಟೀವ್ ಅಂಶ ವಿರೋಧ ಪಕ್ಷಗಳಿಗೆ ಆಹಾರ ಆಗಬಾರದು. ಹಾಗೆಯೇ ವಿರೋಧ ಪಕ್ಷಗಳು ಮಾಡುವ ಯಾವುದೇ ವಿಚಾರಗಳು ನಮಗೆ ಅಸ್ತ್ರ ಆಗಲಿವೆ. ಅವರು ಮಾಡುವ ತಪ್ಪುಗಳು ನಮಗೆ ಚುನಾವಣೆಯಲ್ಲಿ ಗೆಲ್ಲುವ ಅಸ್ತ್ರ ಆಗಲಿವೆ.

ವಿಪಕ್ಷಗಳು ಮಾಡುವ ತಪ್ಪುಗಳನ್ನ ಎತ್ತಿ ಹಿಡಿಯಿರಿ. ಮೋದಿ ಅವರು ಮಾಡುವ ಕೆಲಸಗಳೇ ನಮಗೆ ಪ್ಲಸ್ ಪಾಯಿಂಟ್. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಚೇರಿ ಮಾಡಿ. ಪಕ್ಷ ಯಾವ ಅಭ್ಯರ್ಥಿ ಕೊಡ್ತಾರೆ ಅವರ ಪರ ಕೆಲಸ ಮಾಡಬೇಕು.

ಇದೇ ಅಭ್ಯರ್ಥಿ ಕೊಟ್ರೆ ಮಾತ್ರ ಕೆಲಸ ಮಾಡ್ತೀನಿ ಅನ್ನೋದು ಬೇಡ. ಸೈನಿಕರು ಯುದ್ಧ ಮಾಡುವಾಗ ಇದೇ ಪ್ರದಾನಿ ಇದ್ರೆ ಮಾತ್ರ ಯುದ್ಧ ಮಾಡ್ತೀನಿ ಅಂತ ಹೇಳಲ್ಲ. ಎದುರಾಳಿ ಎದೆ ಸೀಳಿ ಯುದ್ಧ ಮಾಡ್ತಾನೆ. ಪಕ್ಷ ಗುರ್ತಿಸೋ ಅಭ್ಯರ್ಥಿ ಪರವಾಗಿ ಕೆಲಸ ಮಾಡಿ ಗೆಲ್ಲಿಸಿಕೊಂಡು ಬನ್ನಿ. ಏನೇ ಸಮಸ್ಯೆ ಇದ್ರೆ ನಮ್ಮ ಗಮನಕ್ಕೆ ತನ್ನಿ ಎಂದು ಹೇಳಿದ್ದಾರೆ.

ಏಪ್ರಿಲ್‌ 8ರಂದು ನವದೆಹಲಿಯಲ್ಲಿ ಸಂಸದೀಯ ಮಂಡಳಿ ಸಭೆಯಿದ್ದು, ಒಂಭತ್ತನೇ ತಾರೀಕು ಸುಮಾರು 130 ಅಭ್ಯರ್ಥಿಗಳ ಘೋಷಣೆ ಆಗಬಹುದು ಎನ್ನಲಾಗುತ್ತಿದೆ. ಈ ವೇಳೆ ಅನೇಕ ಹಾಲಿ ಶಾಸಕರು ಹಾಗೂ ಅತಿ ದೊಡ್ಡ ಅಂತರದಲ್ಲಿ ಸೋಲು ಕಂಡ ಅನೇಕರಿಗೆ ಟಿಕೆಟ್‌ ನೀಡುವುದಿಲ್ಲ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅನೇಕರು ಬಂಡಾಯ ಏಳುವ ಸಾಧ್ಯತೆಯೂ ಇದೆ. ಹೀಗಾಗಿ ಈಗಿನಿಂದಲೇ ಶೋಭಾ ಕರಂದ್ಲಾಜೆ ಅವರು ಕಾರ್ಯಕರ್ತರನ್ನು ಮಾನಸಿಕವಾಗಿ ಸಿದ್ಧಗೊಳಿಸುವ ಪ್ರಯತ್ನ ಆರಂಭಿಸಿದ್ದಾರೆ ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬರುತ್ತಿವೆ.

ಇದನ್ನೂ ಓದಿ: Congress Guarantee:‌ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗೆ ಜಾರ್ಜ್‌ ಸೊರೊಸ್‌ ಹಣ ಕೊಡುತ್ತಾರೆಯೇ ಎಂದು ಪ್ರಶ್ನಿಸಿದ ಶೋಭಾ ಕರಂದ್ಲಾಜೆ

Exit mobile version