Site icon Vistara News

BJP Karnataka: ಪ್ರತಾಪ್‌ ಸಿಂಹ ಅಡ್ಜಸ್ಟ್‌ಮೆಂಟ್‌ ರಾಜಕಾರಣಿ ಎಂದರೇ ಮಾಜಿ ಸಿಎಂ ಬೊಮ್ಮಾಯಿ?: ಬಿಜೆಪಿಯಲ್ಲಿ ಬೈದಾಟ ಜೋರು

Prathap simha Basavaraj Bommai

#image_title

ಬೆಂಗಳೂರು: ಬಿಜೆಪಿಯಲ್ಲೀಗ ಅಡ್ಜಸ್ಟ್‌ಮೆಂಟ್‌ ರಾಜಕಾರಣದ್ದೇ ಮಾತು. ಈ ವಿಧಾನಸಭೆಯಲ್ಲಿ ಹೀನಾಯವಾಗಿ ಸೋತ ನಂತರ ತರಹೇವಾರಿ ವಿಶ್ಲೇಷಣೆಗಳನ್ನು ಮಾಡಿದ ಬಿಜೆಪಿ ನಾಯಕರು ಇದೀಗ ಅಡ್ಜಸ್ಟ್‌ಮೆಂಟ್‌ ರಾಜಕಾರಣದ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ. ಇದೀಗ ಸಂಸದ ಪ್ರತಾಪ್‌ ಸಿಂಹ ಅವರ ಕುರಿತೇ ಅಡ್ಜಸ್ಟ್‌ಮೆಂಟ್‌ ರಾಜಕಾರಣದ ಆರೋಪವನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾಡಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ.

ಮೊದಲಿಗೆ ಅಡ್ಜಸ್ಟ್‌ಮೆಂಟ್‌ ರಾಜಕಾರಣದ ವಿಚಾರ ಪ್ರಸ್ತಾಪ ಮಾಡಿದ್ದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ. ಪಕ್ಷದಲ್ಲಿ ಕೆಲವರು ಅಡ್ಜಸ್ಟ್‌ಮೆಂಟ್‌ ಮಾಡಿಕೊಂಡಿದ್ದರಿಂದ ಸೋಲಾಯಿತು ಎಂದು ಇತ್ತೀಚೆಗೆ ತಿಳಿಸಿದ್ದರು. ಆ ನಂತರದಲ್ಲಿ ಮಾತನಾಡಿದ ಕೊಡಗು-ಮೈಸೂರು ಸಂಸದ ಪ್ರತಾಪ್‌ ಸಿಂಹ, ಪಕ್ಷದ ಅತಿರಥಮಹಾರಥರು ಅಡ್ಜಸ್ಟ್‌ಮೆಂಟ್‌ ಮಾಡಿಕೊಂಡಿದ್ದಾರೆ ಎಂದರು.‌ ಪ್ರತಾಪ್‌ ಸಿಂಹ ಅವರು ಎಳಸು, ಅವರಿಗೆ ರಾಜಕೀಯ ಪರಿಪಕ್ವತೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸಹ ಹೇಳಿದ್ದರು.

ಬಿ.ಎಸ್‌. ಯಡಿಯೂರಪ್ಪ ಅವರ ಅವಧಿಯಲ್ಲಿ, ನಂತರ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲೂ ಕಾಂಗ್ರೆಸ್‌ ಜತೆಗೆ ಅಡ್ಜಸ್ಟ್‌ಮೆಂಟ್‌ ರಾಜಕಾರಣ ಮುಂದುವರಿಯಿತು. ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದರೇ ಹೊರತು ಬುಟ್ಟಿಯೊಳಗಿನ ಹಾವನ್ನು ಹೊರಗೆ ಬಿಡಲೇ ಇಲ್ಲ ಎಂದಿದ್ದರು.

ಇದಕ್ಕೆ ತಕ್ಕಂತೆ ಸಂಸದ ತೇಜಸ್ವೀ ಸೂರ್ಯ ಅವರು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿದರು. ಮಾಜಿ ಶಾಸಲ ಎಂ.ಪಿ. ರೇಣುಕಾಚಾರ್ಯ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿದರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ದಾವಣಗೆರೆಯಲ್ಲಿ ಕಾಂಗ್ರೆಸ್‌ ನಾಯಕ ಶಾಮನೂರು ಶಿವಶಂಕರಪ್ಪ ಅವರ ಮನೆಗೆ ಹೋಗಿ ಭೇಟಿ ಮಾಡಿದರು. ಈ ಬಗ್ಗೆ ಸ್ವತಃ ಬೊಮ್ಮಾಯಿ ಸ್ಪಷ್ಟನೆಯನ್ನೂ ನೀಡಿದರು.

ಶಾಮನೂರು ಶಿವಶಂಕರಪ್ಪ ಅವರು ನಮ್ಮ ಹಿರಿಯರು ಮತ್ತು ದೂರದ ಸಂಬಂಧಿಯೂ ಹೌದು ಹಲವಾರು ಬಾರಿ ನಾವು ಅವರು ನಮ್ಮ ಮನೆಯಲ್ಲಿ ಭೇಟಿ ಆಗಿದ್ದೇವೆ. ಇದರಲ್ಲಿ ರಾಜಕಾರಣ ಬೆರೆಸುವುದು ಸೂಕ್ತವಲ್ಲ. ನಾನು ಶಿಗ್ಗಾಂವಿಯಿಂದ ಬೆಂಗಳೂರಿಗೆ ಬರುವಾಗ ರಾತ್ರಿ‌ ಊಟ ಮಾಡಲು ಹೊಟೆಲ್ ಗೆ ಹೋದಾಗ ಅವರು ತಮ್ಮ ಮೊಮ್ಮಕ್ಕಳ ಬಗ್ಗೆ ಹೊಸ ಸಂಬಂಧದ ಕುರಿತು ಚರ್ಚೆ ಮಾಡಲು ಸೇರಿದ್ದರು. ಆ ಸಂದರ್ಭದಲ್ಲಿ ಅವರ ಜೊತೆಗೆ ಹತ್ತು ನಿಮಿಷ ಉಭಯ ಕುಶಲೊಪರಿ ಮಾತನಾಡಿದ್ದು ಯಾವುದೇ ರಾಜಕೀಯ ವಿಷಯ ಪ್ರಸ್ತಾಪ ಆಗಿಲ್ಲ. ಸ್ನೇಹ ಸಂಬಂಧಗಳೇ ಬೇರೆ ರಾಜಕೀಯ ಸಂಬಂಧವೇ ಬೇರೆ ನಾನು ನನ್ನ ರಾಜಕೀಯ ನಿಲುವಿನಲ್ಲಿ ಯಾವುದೇ ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದಿದ್ದರು.

ಪ್ರತಾಪ್‌ ಸಿಂಹ ಸಹ ಹಾಗೆಯೇ
ಇದೆಲ್ಲದರ ನಡುವೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಪ್ರಶ್ನೆಯೊಂದಕ್ಕೆ ಉತ್ತರಿಸುತತ ಸಂಸದ ಪ್ರತಾಪ್‌ ಸಿಂಹ ಕುರಿತು ಬಸವರಾಜ ಬೊಮ್ಮಾಯಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ನಾನು ಬಹಳ ಸ್ಪಷ್ಟವಾಗಿ ಹೇಳ್ತೀನಿ, ನಾನು ನನ್ನ ಜೀವನದಲ್ಲಿ ಎಂದೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ನನಗೆ ಅದೂ ಬೇಕಾಗಿಲ್ಲ. ಶಾಮನೂರು ಶಿವಶಂಕರಪ್ಪ ಅವರ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಹಿಂದೆ ದೇವೇಗೌಡರನ್ನೂ ಕೂಡ ಭೇಟಿಯಾಗಿದ್ದೆ. ಕರ್ನಾಟಕ ರಾಜಕಾರಣ ಹೇಗಿದೆ ಅಂತ ನಿಮಗೂ ಗೊತ್ತಿದೆ ಎಂದರು.

ಪ್ರತಾಪ್‌ ಸಿಂಹ ಕುರಿತು ಪರೋಕ್ಷವಾಗಿ ಪ್ರಸ್ತಾಪಿಸಿ, ಈಗಾಗಲೇ ಮಾತನಾಡಿದವರು ಬಹಳ ಪಕ್ಷದ ಜೊತೆ ಸ್ನೇಹವಾಗಿದ್ದಾರೆ ಎಂದರು. ಸಿದ್ದರಾಮಯ್ಯ ವಿರುದ್ಧ 5 ಪ್ರಮುಖ ಪ್ರಕರಣಗಳನ್ನು ಹೊಸದಾಗಿ ದಾಖಲು ಮಾಡಲಾಗಿದೆ. 65 ಎಸಿಬಿ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ನೀಡಿದ್ದೇವೆ. ಕೇಸ್‌ಗೆ ಸಂಬಂಧಿಸಿದಂತೆ ಕಾರ್ಯದರ್ಶಿ ನೇತೃತ್ವದಲ್ಲಿ ಕಮಿಟಿ ರಚನೆ ಮಾಡಿ ವರದಿ ಕೊಡಲು ಸೂಚಿಸಿದ್ದೆವು. ಬಹುಶಃ ಪ್ರತಾಪ್ ಸಿಂಹ ಅವರಿಗೆ ಸಂಪೂರ್ಣ ಮಾಹಿತಿ ಇಲ್ಲ ಎಂದಿದ್ದಾರೆ.

ಬಹಳ ಪಕ್ಷದ ಜತೆಗೆ ಸ್ನೇಹ ಹೊಂದಿದ್ದಾರೆ ಎನ್ನುವ ಮೂಲಕ ಪ್ರತಾಪ್‌ ಸಿಂಹ ಅವರು ಸ್ಥಳೀಯವಾಗಿ ಜೆಡಿಎಸ್‌ ಜತೆಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಾರೆ ಎಂಬ ಮಾತನ್ನು ಬಸವರಾಜ ಬೊಮ್ಮಾಯಿ ಪರೋಕ್ಷವಾಗಿ ಎಳೆದು ತಂದಿದ್ದಾರೆ. ಚುನಾವಣೆ ಫಲಿತಾಂಶ ಹೊರಬಂದು ತಿಂಗಳಾದರೂ ಪ್ರತಿಪಕ್ಷ ನಾಯಕನನ್ನು ನೇಮಕ ಮಾಡದೆ ಹೆಣಗಾಡುತ್ತಿರುವ ಪಕ್ಷದಲ್ಲಿ ದಿನದಿಂದ ದಿನಕ್ಕೆ ಅಸಮಾಧಾನ, ಹೊಂದಾಣಿಕೆ ಕೊರತೆ ಹೆಚ್ಚುತ್ತಲೇ ಸಾಗಿದೆ.

ಇದನ್ನೂ ಓದಿ: R. Ashok: ಮಂಡ್ಯ ಜನರಿಗೆ ಸಾಷ್ಟಾಂಗ ನಮಸ್ಕಾರ: ಅಡ್ಜಸ್ಟ್‌ಮೆಂಟ್‌ ಆರೋಪಕ್ಕೆ ಉಸ್ತುವಾರಿಯಿಂದ ಹಿಂದೆ ಸರಿದ ಆರ್.‌ ಅಶೋಕ್‌

Exit mobile version