Site icon Vistara News

BJP Karnataka: ಅತಂತ್ರ ಫಲಿತಾಂಶ ಬರಲಿ, ಸಿಎಂ ಆಗ್ತೇನೆ ಎಂದು ಒಬ್ಬರು ಕಾದು ಕುಳಿತಿದ್ದಾರೆ: ಎಚ್‌ಡಿಕೆ ಕಾಲೆಳೆದ ಸುಮಲತಾ ಅಂಬರೀಶ್

bjp karnataka Sumalatha ambareesh says HD kumaraswamy waiting for hung assembly

#image_title

ಮಂಡ್ಯ: ಕರ್ನಾಟಕ ವಿಧಾನಸಭೆಯಲ್ಲಿ ಈ ಬಾರಿ ಅತಂತ್ರ ಫಲಿತಾಂಶ ಬರಲಿ, ಆಗ ತಾವು ಸಿಎಂ ಆಗಬಹುದು ಎಂದು ಒಬ್ಬರು ಕಾದು ಕುಳಿತಿದ್ದಾರೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಟೀಕಿಸಿದ್ದಾರೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರ ಉಪಸ್ಥಿತಿಯಲ್ಲಿ ಮಂಡ್ಯದಲ್ಲಿ ಆಯೋಜನೆಯಾಗಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉತ್ತರ ಪ್ರದೇಶದಲ್ಲಿ ಉದ್ಯಮಿಗಳು, ಸಾಮಾನ್ಯರು ಜೀವನ ಮಾಡಲು ಆಗುತ್ತಿರಲಿಲ್ಲ. ಉದ್ಯಮದಲ್ಲಿ ಮಾಡಿದ ಲಾಭವನ್ನೆಲ್ಲ ಗೂಂಡಾಗಳಿಗೆ ಮಾಮೂಲು ಕೊಡಬೇಕಿತ್ತು. ಆದರೆ ಯೋಗಿ ಆದಿತ್ಯನಾಥ್‌ ಅವರ ನೇತೃತ್ವದಲ್ಲಿ ಭ್ರಷ್ಟಾಚಾರಿಗಳನ್ನು, ಗೂಂಡಾಗಳನ್ನು ಬುಲ್ಡೋಜರ್‌ ಮೂಲಕ ಹೊಡೆದೋಡಿಸಿದರು.

ನಮ್ಮ ರಾಜ್ಯದಲ್ಲೂ ಈ ರೀತಿಯ ಅಭಿವೃದ್ಧಿ ಮುಂದುವರಿಯಬೇಕು ಎಂದರೆ ಡಬಲ್‌ ಎಂಜಿನ್‌ ಸರ್ಕಾರಕ್ಕೆ ಜನರು ಆಶೀರ್ವಾದ ಮಾಡಬೇಕು. ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಪ್ರಗತಿ ಸಾಧಿಸಿರುವುದಕ್ಕೆ ಅನೇಕ ಉದಾಹರಣೆಗಳಿವೆ. ಕಳೆದ ಅನೇಕ ದಶಕಗಳಿಂದ ನೋಡಲು ಆಗದ ಅಭಿವೃದ್ಧಿ ಇಂದು ಕಾಣುತ್ತಿದೆ.

ಇಷ್ಟು ವರ್ಷ ಮಂಡ್ಯದಲ್ಲಿ ಒಂದು ರೀತಿಯ ರಾಜಕಾರಣ ಇದೆ. ಆದರೆ ಬೆಳವಣಿಗೆ ಕುಂಠಿತ ಆಗಿದೆ, ಬದಲಾವಣೆ ಆಗಬೇಕು ಎನ್ನುವುದು ಇಲ್ಲಿನ ಜನರಿಗೆ ತಿಳಿಸಿದೆ. ನಾನು ಪಕ್ಷೇತರರಾಗಿ ಏನು ಸಾಧನೆ ಮಾಡಿದ್ದೇನೊ ಅದಕ್ಕೆ ಕೇಂದ್ರ ಸರ್ಕಾರದ ಸಹಕಾರ ಕಾರಣ. ಕಳೆದ ಚುನಾವಣೆಯಲ್ಲಿ ಒಂದೇ ಪಕ್ಷದ ಏಳು ಶಾಸಕರನ್ನು ಕಳಿಸಿದ್ದೀರ, ಆದರೆ ಅವರಿಂದ ಏನೂ ಅಭಿವೃದ್ಧಿ ಆಗಲಿಲ್ಲ. ಮೈ ಶುಗರ್‌ ಸಕ್ಕರೆ ಕಾರ್ಖಾನೆ, ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಆರಂಭ ಮಾಡಬೇಕು ಎಂದರೆ ಬಿಜೆಪಿ ಸರ್ಕಾರದ ಸಹಕಾರವೇ ಬೇಕಾಯಿತು.

ರಾಜ್ಯದಲ್ಲಿ ಅತಂತ್ರ ಸರ್ಕಾರವೇ ಬರಬೇಕು, ಆಗ ಮಾತ್ರ ಸಿಎಂ ಆಗುತ್ತೇನೆ ಎಂದು ಕಾಯ್ದುಕೊಂಡು ಕೂತಿದ್ದಾರೆ. ಒಂದು ಕುಟುಂಬ ಅಭಿವೃದ್ಧಿ ಆಗಬೇಕೆ ಅಥವಾ ಎಲ್ಲರ ಕುಟುಂಬವೂ ಅಭಿವೃದ್ಧಿ ಆಗಬೇಕೆ ಎಂಬುದನ್ನು ಜನರು ತೀರ್ಮಾನಿಸಬೇಕು. ನಮ್ಮ ಭವಿಷ್ಯ, ನಿಮ್ಮ ಭವಿಷ್ಯ, ನಿಮ್ಮ ಮಕ್ಕಳ ಭವಿಷ್ಯಕ್ಕೆ ನಿಮ್ಮ ಮತ ಎಂದು ನಂಬಿದ್ದರೆ ಬಿಜೆಪಿಗೆ ಆಶೀರ್ವಾದ ಮಾಡಿ ಎಂದರು.

ಇದನ್ನೂ ಓದಿ: Karnataka Election : ಡಿ.ಕೆ ಶಿವಕುಮಾರ್, ಎಚ್‌.ಡಿ ಕುಮಾರಸ್ವಾಮಿ ಪರವಾಗಿ ಪತ್ನಿಯರಿಂದ ಮತಯಾಚನೆ‌

Exit mobile version