ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡ ನಂತರದಲ್ಲಿ ಬಹುತೇಕ ಮೌನವಾಗಿರುವ ಬಿಜೆಪಿ ಇದೀಗ ವಿಧಾನಸಭೆ ಚುನಾವಣೆಯ ಅವಲೋಕನಕ್ಕೆ ಮುಂದಾಗಿದೆ. ನೂತನ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳ ಸಭೆಯನ್ನು ಗುರುವಾರ ಬೆಂಗಳೂರಿನಲ್ಲಿ ಆಯೋಜಿಸಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ನೂತನವಾಗಿ ಚುನಾಯಿತರಾದ 66 ಶಾಸಕರ ಮತ್ತು ಪರಾಜಿತ ಅಭ್ಯರ್ಥಿಗಳ ಸಭೆಯು ಗುರುವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ನೂತನ ಶಾಸಕರ ಸಭೆಯು ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ. ಮಧ್ಯಾಹ್ನದ ನಂತರ 3.00 ಗಂಟೆಗೆ ಎಲ್ಲ ಪರಾಜಿತ ಅಭ್ಯರ್ಥಿಗಳ ಸಭೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಎಲ್ಲ ಪರಾಜಿತ ಅಭ್ಯರ್ಥಿಗಳು ಭಾಗವಹಿಸುವಂತೆ ಅವರು ವಿನಂತಿಸಿದ್ದಾರೆ.
ಸಂಜೆ ರಾಜ್ಯ ಕೋರ್ ಕಮಿಟಿ ಸಭೆ
ಬುಧವಾರ ಸಂಜೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಗುರುವಾರ ನಡೆಯುವ ಎಲ್ಲ ಸಭೆಗಳಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ರಾಜ್ಯದ ಪ್ರಭಾರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಆರ್. ಅಶೋಕ್ ಅವರು ಭಾಗವಹಿಸಿ ಸಭೆಯಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ.
ಈ ಸಭೆಯಲ್ಲಿ ರಾಜ್ಯದ ಚುನಾವಣೆಯ ಕುರಿತು ಅವಲೋಕನ, ಕೇಂದ್ರ ಸರ್ಕಾರದ 9 ವರ್ಷಗಳ ಯೋಜನೆ, ಜುಲೈ 03 ರಂದು ನಡೆಯಲಿರುವ ಅಧಿವೇಶನ, ತೆರವಾಗಿರುವ 3 ಸ್ಥಾನಗಳ ವಿಧಾನ ಪರಿಷತ್ ಚುನಾವಣೆ ಇತ್ಯಾದಿಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Text Book: ಹೊಸ ಪಠ್ಯಕ್ರಮ ರಚನೆಗೆ ಸಮಿತಿ; ಬಿಜೆಪಿ ಅವಧಿಯ ಅಧ್ಯಾಯಗಳಿಗೆ ಕೊಕ್?