ಮೈಸೂರು: ವಿಧಾನ ಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ಅವರ ಪುತ್ರ ಪೂರ್ವಜ್ ವಿಶ್ವನಾಥ್ ಅವರು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ. ಇದರೊಂದಿಗೆ ಅಪ್ಪ ಬಿಜೆಪಿಯಲ್ಲಿ, ಮಗ ಕಾಂಗ್ರೆಸ್‌ನಲ್ಲಿ ಎಂಬ ಪರಿಸ್ಥಿತಿ ನಿರ್ಮಾಣವಾಗಲಿದೆ
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ವೇಳೆ ಮಾತನಾಡಿದ ಅವರು, ಈ ಬಗ್ಗೆ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ. ತಂದೆ ವಿಶ್ವನಾಥ್ ಅವರಿಗೂ ತಿಳಿಸಿದ್ದೇನೆ ಎಂದು ಹೇಳಿದರು.
ಸಿದ್ದರಾಮಯ್ಯ ಮುಂದಿನ ಸಿಎಂ ಆಗುವ ಎಲ್ಲ ವಾತಾವರಣ ಇದೆ. ಕಾಂಗ್ರೆಸ್‌ಗೆ ಬೆಂಬಲವಾಗಿ ನಿಲ್ಲುತ್ತೇನೆ. ನಾನು ದಾವಣಗೆರೆಯ ಸಿದ್ದರಾಮೋತ್ಸವಕ್ಕೂ ಹೋಗಿದ್ದೆ ಎಂದು ಹೇಳಿದ್ದಾರೆ ಪೂರ್ವಜ್.
೨೦೧೯ರಲ್ಲಿ ಕಾಂಗ್ರೆಸ್‌ನಲ್ಲಿ ನಡೆದ ಬಂಡಾಯ ಚಟುವಟಿಕೆ ಮತ್ತು ಆಪರೇಷನ್ ಕಮಲದ ವೇಳೆ ವಿಶ್ವನಾಥ್ ಅವರು ಜೆಡಿಎಸ್‌ನಿಂದ ಬಿಜೆಪಿಗೆ ಜಿಗಿದಿದ್ದರು. ಅದಕ್ಕಿಂತ ಮೊದಲು ಅವರು ಕಾಂಗ್ರೆಸ್‌ನಲ್ಲಿದ್ದರು. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಮೇಲೆ ಸಿಟ್ಟು ಮಾಡಿಕೊಂಡಿದ್ದ ವಿಶ್ವನಾಥ್ ಜೆಡಿಎಸ್‌ಗೆ ಹೋದ ಕೂಡಲೇ ರಾಜ್ಯಾಧ್ಯಕ್ಷರೇ ಆಗಿದ್ದರು. ಆದರೆ, ಅವರಿಗೆ ಯಾವುದೆ ಸವಲತ್ತುಗಳನ್ನು ಕೊಟ್ಟಿರಲಿಲ್ಲ. ಅವರ ವೈಯಕ್ತಿಕ ಕೆಲಸಗಳನ್ನು ಕೂಡಾ ಮಾಡಿ ಕೊಟ್ಟಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಅವರು ಸಿಟ್ಟುಗೊಂಡು ಬಿಜೆಪಿಗೆ ಹೋಗಿದ್ದರು. ಮಂತ್ರಿಗಿರಿ ಸಿಗುತ್ತದೆ ಎಂಬ ಕಾರಣಕ್ಕೆ ಬಿಜೆಪಿಗೆ ಹೋಗಿದ್ದ ಅವರು ಮರು ಚುನಾವಣೆಯಲ್ಲಿ ಸೋಲು ಕಂಡಿದ್ದರು. ಹೀಗಾಗಿ ಮಂತ್ರಿಗಿರಿ ಸಿಕ್ಕಿರಲಿಲ್ಲ. ವಿಧಾನ ಪರಿಷತ್ ಮೂಲಕ ಅವರಿಗೆ ಶಾಸಕತ್ವ ನೀಡಲಾಯಿತಾದರೂ ತಾಂತ್ರಿಕ ಕಾರಣಗಳಿಂದಾಗಿ ಮಂತ್ರಿಗಿರಿ ಸಿಕ್ಕಿರಲಿಲ್ಲ. ಈಗ ಬಿಜೆಪಿ ವಿರುದ್ಧವೂ ವಿಶ್ವನಾಥ್ ಅವರಿಗೆ ಸಿಟ್ಟಿದೆ.
ವಿಶ್ವನಾಥ್ ಅವರು ಬಿಜೆಪಿಗೆ ಹೋಗಿದ್ದರೂ ಪೂರ್ವಜ್ ಮಾತ್ರ ಪರಿಪೂರ್ಣವಾಗಿ ಬಿಜೆಪಿಯ ಜತೆ ಬೆರೆತಿರಲಿಲ್ಲ. ಜೆಡಿಎಸ್ ಸೇರಿದಾಗಲೂ ಅಷ್ಟೇ ಅಂತರವಿತ್ತು. ಹೀಗಾಗಿ ಅವರು ಮಾನಸಿಕವಾಗಿ ಕಾಂಗ್ರೆಸ್‌ನಲ್ಲೇ ಇದ್ದಂತಿತ್ತು. ಈಗ ಅಧಿಕೃತವಾಗಿ ಸೇರುವ ನಿರ್ಧಾರ ಪ್ರಕಟಿಸಿದ್ದಾರೆ.
ತಿರುಪತಿ ತಿರುಮಲದಲ್ಲಿ ರಾಜ್ಯದ ಯಾತ್ರಾರ್ಥಿಗಳಿಗೆ 346 ಕೊಠಡಿ ಲಭ್ಯ; ವಿಶ್ವನಾಥ್