Site icon Vistara News

22 ಸಾವಿನ ಹೆಸರಿನಲ್ಲಿ BJP ಅಧಿಕಾರ: 2022 ಬಂದರೂ ನ್ಯಾಯವಿಲ್ಲ ಎಂಬ ಆಕ್ರೋಶ

BJP Workers Murder

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವದಲ್ಲಿದ್ದ ಅಷ್ಟೂ ವರ್ಷದಲ್ಲಿ ರಾಜ್ಯ ಬಿಜೆಪಿ ನಿರಂತರವಾಗಿ ಚರ್ಚಿಸಿದ ವಿಚಾರವೆಂದರೆ ಹಿಂದು ಕಾರ್ಯಕರ್ತರ ಹತ್ಯೆ. 2014ರಲ್ಲಿ ಸಿದ್ದರಾಮಯ್ಯ ಸರ್ಕಾರ ಆಡಳಿತ ಆರಂಭಿಸಿತ್ತು. ಅದೇ ವರ್ಷದಿಂದ ಕಾರ್ಯಕರ್ತರ ಹತ್ಯೆ ಆರೋಪಗಳು ಸರ್ಕಾರವನ್ನು ಸುತ್ತಿಕೊಳ್ಳಲು ಆರಂಭಿಸಿದವು.

ಬೆಂಗಳೂರಿನ ಕಾರ್ಪೊರೇಟರ್‌ ಪತಿ ಹಾಗೂ ಬಿಜೆಪಿ ಮುಖಂಡ ಶ್ರೀನಿವಾಸ್‌ ಹತ್ಯೆ 2014ರಲ್ಲೇ ನಡೆದಿತ್ತು. ಅಂದಿನಿಂದ ಆರಂಭವಾದ ಬಿಜೆಪಿ ಆರೋಪಗಳು, 2017ರಲ್ಲಿ ಬಳ್ಳಾರಿ ಬಿಜೆಪಿ ಮುಖಂಡ ರಮೇಶ್‌ ಬಂಡಿ ಹತ್ಯೆ ವೇಳೆಗೆ ತೀವ್ರವಾಗಿತ್ತು.

ಒಟ್ಟಾರೆ ಬಿಜೆಪಿ ವಿವಿಧ ನಾಯಕರು, ಮೋರ್ಚಾಗಳು ಎಲ್ಲ ಕಾರ್ಯಕರ್ತರ ಹೆಸರುಗಳನ್ನು ಪಟ್ಟಿ ಮಾಡಿದ್ದವು. ಕೊನೆಗೆ 22 ಕಾರ್ಯಕರ್ತರು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಹತ್ಯೆಯಾಗಿದ್ದಾರೆ ಎಂದು ಪ್ರಚಾರ ಮಾಡಲಾಯಿತು. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಹಿಂದು ಕಾರ್ಯಕರ್ತರ ಹತ್ಯೆ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ಕೊಡಿಸಲಾಗುತ್ತದೆ ಎಂದು ಘೋಷಣೆ ಮಾಡಲಾಯಿತು.

ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಪ್ರಧಾನಿ ನರೇಂದ್ರ ಮೋದಿ ಸಹ ತಮ್ಮ ಭಾಷಣಗಳಲ್ಲಿ ಈ ಬಗ್ಗೆ ಉಲ್ಲೇಖಿಸಿ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಬೆಂಗಳೂರಿನಲ್ಲಿ ನಡೆದಿದ್ದ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್, ಮಂಗಳೂರಿನ ಶರತ್‌ ಮಡಿವಾಳ ಹತ್ಯೆ ಸೇರಿದಂತೆ ಅನೇಕ ಪ್ರಕರಣಗಳು ಮೇಲ್ನೋಟಕ್ಕೇ, ರಾಜಕೀಯ ಹಾಗೂ ಸೈದ್ಧಾಂತಿಕ ಪ್ರೇರಿತ ಹತ್ಯೆಗಳು ಎಂದು ಕಾಣುತ್ತಿದ್ದವು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ, ಕ್ಯಾತಮಾರನಹಳ್ಳಿ ರಾಜು ಅವರ ಮನೆಗೆ 2018ರಲ್ಲಿ ಭೇಟಿ ನೀಡಿದರು. “ರಾಜಕೀಯ, ಸೈದ್ಧಾಂತಿಕ ಭಿನ್ನತೆಗೆ ಹಿಂಸೆಯ ಉತ್ತರಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ. ಹಿಂಸೆಯಿಂದ ವಿಚಾರಧಾರೆ ಹರಡುವಿಕೆಯನ್ನು ತಡೆಯುತ್ತೇವೆ ಎಂದು ತಿಳಿದಿದ್ದರೆ ಅದು ತಪ್ಪು. ಈ ಆಟ ಬಹಳ ದಿನ ನಡೆಯುವುದಿಲ್ಲ. ಸಿಎಂ ಸಿದ್ದರಾಮಯ್ಯ ಸರ್ಕಾರದ ಅವಧಿ ಮಕ್ತಾಯವಾಗಿದೆ. ಸಧ್ಯದಲ್ಲೆ ಅಧಿಕಾರಕ್ಕೆ ಬರುವ ಬಿಜೆಪಿ ಸರ್ಕಾರ ಈ ಎಲ್ಲ ಹಂತಕರು ಪಾತಾಳದಲ್ಲಿ ಅಡಗಿದ್ದರೂ ಬಿಡದೆ ಶಿಕ್ಷೆ ಕೊಡಿಸುತ್ತದೆ. ರಾಜುವನ್ನು ಪ್ರತೀಕವಾಗಿಸಿಕೊಂಡು ಎಲ್ಲ ಕಾರ್ಯಕರ್ತರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇನೆ” ಎಂದು ಅಮಿತ್ ಷಾ ಹೇಳಿದ್ದರು.

ಇಡೀ ವಿಧಾನಸಭೆ ಚುನಾವಣೆಯಲ್ಲಿ, ಕಾರ್ಯಕರ್ತರ ಹತ್ಯೆ ವಿಚಾರ ಪ್ರಮುಖವಾಗಿ ಚರ್ಚೆ ಆಗುತ್ತಲೇ ಇತ್ತು. ಈ ನಡುವೆ ಶೋಭಾ ಕರಂದ್ಲಾಜೆಯವರು 2017ರ ಜುಲೈ 8ರಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್‌ಗೆ ಪತ್ರವೊಂದನ್ನು ಬರೆದರು. ಕರ್ನಾಟಕದಲ್ಲಿ ನಡೆಯುತ್ತಿರುವ ರಕ್ತಪಾತದ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಹಾಗೂ ಕರ್ನಾಟಕ ಫೋರಂ ಫಾರ್ ಡಿಗ್ನಿಟಿ(ಕೆಎಫ್‌ಡಿ) ಸಂಘಟನೆಗಳ ನೇರ ಕೈವಾಡವಿದೆ. ಪ್ರತಿ ಬಾರಿ ಹತ್ಯೆ ನಡೆದಾಗಲೂ ರಾಜ್ಯದ ಮುಖ್ಯಮಂತ್ರಿ ಈ ವಿಚಾರವನ್ನು ಒಂದಲ್ಲ ಒಂದು ನೆಪ ಹೇಳಿ, ಸೈದ್ಧಾಂತಿಕ ಹಲ್ಲೆ ಎನ್ನುತ್ತಾರೆ. ಈ ಸಂಘಟನೆಗಳನ್ನು ನಿಷೇಧಿಸುವ ಜತೆಗೆ ಈ ಹತ್ಯೆಗಳ ಬಗ್ಗೆ ಎನ್‌ಐಎ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದರು.

ಕಠಿಣ ಕ್ರಮದ ಮಾತುಗಳು

ಹತ್ಯೆ ಆರೋಪಿಗಳನ್ನು ಪಾತಾಳದಲ್ಲಿದ್ದರೂ ಹೊರತಂದು ಶಿಕ್ಷೆ ಕೊಡಿಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದರಾದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಕಾರ್ಯಕರ್ತರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಈ ಪೈಕಿ ಅನೇಕ ಪ್ರಕರಣಗಳಲ್ಲಿ ವಿಚಾರಣೆ ಮಾತ್ರ ನಡೆಯುತ್ತಿದ್ದು, ಶಿಕ್ಷೆ ಆಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ನಾಯಕರುಗಳು ಈ ಪ್ರಕರಣಗಳ ಕುರಿತು ಮಾತನಾಡುವುದನ್ನೇ ನಿಲ್ಲಿಸಿದ್ದಾರೆ ಎಂದು ಬೆಂಗಳೂರು ಬಿಜೆಪಿ ಪದಾಧಿಕಾರಿಯೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

22 ಕಾರ್ಯಕರ್ತರ ಹತ್ಯೆಗೆ ನ್ಯಾಯ ಸಿಗುತ್ತದೆ ಎಂದು ಕಾದು ಕಾದು ಸಾಕಾಗಿದೆ. 2022ನೇ ಇಸವಿ ಬಂದರೂ ಇನ್ನೂ ನ್ಯಾಯ ಮರೀಚಿಕೆಯಾಗಿದೆ. ಈಗ ಬಿಜೆಪಿ ಸರ್ಕಾರದ ಅವಧಿಯಲ್ಲೆ ಫೆಬ್ರವರಿಯಲ್ಲಿ ಶಿವಮೊಗ್ಗದ ಹರ್ಷ, ಸುಳ್ಯದ ಪ್ರವೀಣ್‌ ನೆಟ್ಟಾರು ಹತ್ಯೆಯಾಗಿದೆ. ಮುಸ್ಲಿಮರಿಂದ ಬೆಂಗಳೂರಿನಲ್ಲಿ ಹಿಂದು ಯುವಕನೊಬ್ಬನನ್ನು ಹತ್ಯೆ ಮಾಡಲಾಗಿದೆ. ಈಗಾಗಲೆ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಅವರನ್ನು ಸಮಾಧಾನಪಡಿಸುವುದು ಕಷ್ಟವಾಗುತ್ತಿದೆ. ಹೀಗೆಯೇ ಆದರೆ 2023ರಲ್ಲಿ ಚುನಾವಣೆಯನ್ನು ಎದುರಿಸುವುದು ಕಷ್ಟವಾಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಬಿಜೆಪಿ ವತಿಯಿಂದ ಸಿದ್ಧಪಡಿಸಲಾಗಿದ್ದ ಕಾರ್ಯಕರ್ತರ ಪಟ್ಟಿ

ಕ್ರಮ ಸಂಖ್ಯೆಹೆಸರುಸ್ಥಳಹತ್ಯೆ ವರ್ಷ
1ವಾಮನ ಪೂಜಾರಿಮೂಡಬಿದ್ರಿ2015
2ಪ್ರಶಾಂತ ಪೂಜಾರಿಮೂಡಬಿದ್ರಿ2015
3ಡಿ.ಕೆ. ಕುಟ್ಟಪ್ಪಮಡಿಕೇರಿ2015
4ರಾಜುಮಡಿಕೇರಿ2015
5ಕೆ. ರಾಜುಮೈಸೂರು2015
6ರಾಜೇಶ್‌ ಕೋಟ್ಯಾನ್‌ಉಳ್ಳಾಲ2016
7ಅಶ್ವತ್ಥ್‌ಅತ್ತಿಬೆಲೆ2016
8ಯೋಗೀಶ್‌ ಗೌಡರ್‌ಹುಬ್ಬಳ್ಳಿ2016
9ಸಿ.ಎನ್‌. ಶ್ರೀನಿವಾಸ್‌ಬೆಂಗಳೂರು2014
10ಪ್ರವೀಣ್‌ ಪೂಜಾರಿಕುಶಾಲನಗರ2016
11ಚರಣ್‌ ಪೂಜಾರಿಮಂಗಳೂರು2016
12ವೆಂಕಟೇಶ್‌ಶಿವಮೊಗ್ಗ2015
13ರುದ್ರೇಶ್‌ಬೆಂಗಳೂರು2016
14ಕಾರ್ತಿಕ್‌ ರಾಜ್‌ಮಂಗಳೂರು2016
15ರವಿ ಮಾಗಳಿಪಿರಿಯಾಪಟ್ಟಣ2016
16ಚಿಕ್ಕತಿಮ್ಮೇಗೌಡಬೆಂಗಳೂರು2016
17ಶ್ರೀನಿವಾಸ ಪ್ರಸಾದ್‌ಬೊಮ್ಮನಹಳ್ಳಿ2016
18ಹರೀಶ್‌ಚಂದಾಪುರ2016
19ಶರತ್‌ ಮಡಿವಾಳಮಂಗಳೂರು2016
20ಮಹದೇವ ಕಾಳೆಕಲಬುರ್ಗಿ2016
21ತಿಪ್ಪೇಶ್‌ತಿಪಟೂರು2016
22ರಮೇಶ್‌ ಬಂಡಿಬಳ್ಳಾರಿ2017
Exit mobile version