ಬೆಂಗಳೂರು: ರಾಜ್ಯ ಸರ್ಕಾರವು ಅನ್ನಭಾಗ್ಯ (Congress Guarantee) ಯೋಜನೆಯಡಿ ಅಕ್ಕಿ ಬದಲಿಗೆ ಹಣವನ್ನು ಖಾತೆಗೆ ವರ್ಗಾವಣೆ ಮಾಡುವ ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರವು ಅಕ್ಕಿ ನೀಡುತ್ತಿಲ್ಲ ಎಂದು ತಿಳಿಸಿ ಈ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯ ಸಂಪುಟ ಸಭೆಯು ಕೈಗೊಂಡಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಚುನಾವಣೆಗೆ ಮುನ್ನ 10 ಕೆ.ಜಿ. ಕೊಡುತ್ತೇವೆ ಎಂದಿದ್ದರು. ಕೈ ಎತ್ತಿ 10 ಕೆ.ಜಿ. ಎಂದು ಸಿದ್ದರಾಮಯ್ಯ ಭಾಷಣ ಮಾಡಿದ್ದರು. ಕೇಂದ್ರ ಸರ್ಕಾರ 5 ಕೆ.ಜಿ ಕೊಡುತ್ತಿದೆ ಎಂದು ಇವತ್ತು ಮೊದಲ ಬಾರಿಗೆ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಹೇಳಿದಂತೆ 10 ಕೆ.ಜಿ.ಗೆ ಸಿದ್ದರಾಮಯ್ಯ ದುಡ್ಡು ಕೊಡಬೇಕು. ಕನಿಷ್ಟ ಪಕ್ಷ 5 ಕೆ.ಜಿ.ಗೆ ಹಣ ಕೊಟ್ಟರಲ್ಲ ಎನ್ನುವುದು ಸಮಾಧಾನ.
ಸಿದ್ದರಾಮಯ್ಯನವರು ನಾವೇ ಅಕ್ಕಿಕೊಟ್ಟಿದ್ದು ಎಂದು ದಾರಿ ತಪ್ಪಿಸುತ್ತಿದ್ದರು. 10 ಕೆ.ಜಿ.ಗೆ ಹಣ ಕೊಟ್ಟಿದ್ದರೆ ಮರ‍್ಯಾದಸ್ಥರ ಲಕ್ಷಣ ಆಗುತ್ತಿತ್ತು. ನಿಮ್ಮ ಮಾತಿಗೆ ತಕ್ಕಂತೆ 10 ಕೆ.ಜಿ. ಹಣ ಕೊಡಬೇಕು. ಐದು ಕೆ.ಜಿ. ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಡುತ್ತಿದೆ. ಸಿದ್ದರಾಮಯ್ಯ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು.
ಎಲ್ಲ ರಾಜ್ಯಗಳ 80 ಕೋಟಿ ಜನರಿಗೆ ಅಕ್ಕಿ ಕೊಡುತ್ತಿದ್ದೇವೆ. ಕೇಂದ್ರ ಸರ್ಕಾರ ಬಫರ್ ಸ್ಟಾಕ್ ಇಟ್ಟುಕೊಳ್ಳಬೇಕು. ನೈಸರ್ಗಿಕ ವಿಕೋಪ, ತುರ್ತು ಪರಿಸ್ಥಿತಿಯಲ್ಲಿ ಅಕ್ಕಿ ಕೊಡಬೇಕು. ಬಿಜೆಪಿ ಸರ್ಕಾರ ಇರುವ ರಾಜ್ಯಗಳಿಗೂ ಹೆಚ್ಚುವರಿ ಅಕ್ಕಿ ಕೊಟ್ಟಿಲ್ಲ. ಯಾರನ್ನೂ ಕೇಳದೆ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ನಮ್ಮ ಬಳಿ ಅಕ್ಕಿ ಇದ್ದರೆ ಕೊಡುತ್ತಿದ್ದೆವು. ಬೇರೆ ರಾಜ್ಯಗಳು ಕೂಡ 10 ಕೆ.ಜಿ. ಕೇಳಿದರೆ ಎಲ್ಲಿಂದ ಕೊಡುವುದು? ದೇಶದಲ್ಲಿ ಅಕ್ಕಿ ಸ್ಟಾಕ್ ಇರಲೇ ಬೇಕು. ಸಿದ್ದರಾಮಯ್ಯ ಸುಳ್ಳು ಹೇಳುವುದಕ್ಕೂ ಮಿತಿಯಿರಬೇಕು.
ನೀವು ಗ್ಯಾರಂಟಿ ಕಾರ್ಡ್‌ನಲ್ಲಿ ಸಹಿಹಾಕುವಾಗ ಯೋಚನೆ ಮಾಡಬೇಕಿತ್ತು. ಸುಳ್ಳು ಹೇಳುವುದು ಕಾಂಗ್ರೆಸ್ ಡಿಎನ್‌ಎನಲ್ಲಿದೆ. ಹಿಮಾಚಲ, ರಾಜಸ್ತಾನದಲ್ಲಿ ಗ್ಯಾರಂಟಿ ಪೂರ್ಣವಾಗಿಲ್ಲ. ಜನರನ್ನು ಸಿದ್ದರಾಮಯ್ಯ ಮೋಸದಿಂದ ವಂಚಿಸಿದ್ದಾರೆ ಎಂದರು.
ಪಕ್ಷದ ನಾಯಕರ ವಿರುದ್ಧ ರೇಣುಕಾರ್ಯ ಅಸಮಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಸೋತಿರಬಹುದು, ನಮ್ಮದು ಐಡಿಯಾಲಜಿ ಪಾರ್ಟಿ. ಯಾವುದೇ ನಾಯಕರು ಬಹಿರಂಗವಾಗಿ ಮಾತನಾಡಬಾರದು. ಪಕ್ಷ ಲೋಕಸಭೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕು. ಶೀಘ್ರದಲ್ಲೇ ವಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆಯಾಗಲಿದೆ ಎಂದು ತಿಳಿಸಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನವರು ಹತ್ತು ಕೆ.ಜಿ. ಅಕ್ಕಿ ಕೊಡುವುದಾಗಿ ಭರವಸೆ ನೀಡಿದ್ದರು. ಈಗ ಅಕ್ಕಿ ಬದಲು 34 ರೂ. ಕೊಡುವುದಾಗಿ ಹೇಳುತ್ತಿದ್ದಾರೆ. ಇವರು ಕೊಡುವ ಹಣಕ್ಕೆ ಮಾರುಕಟ್ಟೆಯಲ್ಲಿ ಎರಡೂವರೆ ಕೆ.ಜಿ. ಅಕ್ಕಿ ಮಾತ್ರ ಬರುತ್ತದೆ. ಚುನಾವಣೆ ಸಂದರ್ಭದಲ್ಲಿ ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಈಗ ಐದು ಕೆಜಿ ಕೊಡುವುದಾಗಿ ಹೇಳುತ್ತಿದ್ದಾರೆ. ಅವರು ಮಾತಿಗೆ ತಪ್ಪುತ್ತಿದ್ದಾರೆ. ಎಷ್ಟಾದರೂ ಆಗಲಿ ನಾವು ಅಕ್ಕಿಯನ್ನೇ ಕೊಡುತ್ತೇವೆ ಅಂತ ಹೇಳಿದ್ದರು. ಈಗ ಹಣ ಹಾಕುತ್ತೇವೆ ಅಂತ ಹೇಳುತ್ತಿದ್ದಾರೆ. ಇವರು ಮತ್ತೆ ಮಾತಿಗೆ ತಪ್ಪಿದ್ದಾರೆ.
ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಅಕ್ಕಿಗೆ ಐವತ್ತರಿಂದ ಆರವತ್ತು ರೂಪಾಯಿ ಬೆಲೆ ಇದೆ. ಇವರು ಮೂವತ್ತು ರೂಪಾಯಿ ಕೊಟ್ಟರೆ ಜನರಿಗೆ ಎರಡೂವರೆ ಕೆಜಿ ಅಕ್ಕಿ ಮಾತ್ರ ಬರುತ್ತದೆ. ಕರೆಂಟ್ ವಿಚಾರದಲ್ಲಿಯೂ ಕಂಡಿಷನ್ ಹಾಕಿ ಅದನ್ನೆ ಮಾಡಿದ್ದಾರೆ. ಹತ್ತು ಕೆಜಿ ಅಕ್ಕಿಯನ್ನು ನರೇಂದ್ರ ಮೋದಿ ಸರ್ಕಾರ ಡಿಸೆಂಬರ್‌ವರೆಗೂ ಕೊಟ್ಟಿದೆ ಹತ್ತು ಕೆಜಿ ಕೊಟ್ಟವರು ಇವರೇ ಮೊದಲಲ್ಲ. ಎಷ್ಟೇ ಖರ್ಚಾದರೂ ಅಕ್ಕಿ ಕೊಡುವುದಾಗಿ ಹೇಳಿದವರು ಈಗ ಮಾತಿಗೆ ತಪ್ಪಿ ಜನರಿಗೆ ಎರಡೂವರೆ ಕೆಜಿ ಮಾತ್ರ ದೊರೆಯುವಂತೆ ಮಾಡಿದ್ದಾರೆ ಎಂದರು.
ಶಾಸಕ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಅಕ್ಕಿ ಕೊಡಬೇಕಾಗಿತ್ತು. ಕೇಂದ್ರದ 5 ಕೆ.ಜಿ. ಜತೆ 10 ಕೆ.ಜಿ. ಅಕ್ಕಿ ಕೊಡಬೇಕಿತ್ತು. ಯಡಿಯೂರಪ್ಪ ಹೋರಾಟ ಮಾಡತ್ತೇನೆ ಎಂದು ಹೇಳಿದ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿದೆ. ಅಕ್ಕಿ ಬದಲು ಹಣ ಕೊಡುತ್ತೇವೆ ಎಂದಿದ್ದು ಸ್ವಾಗತ. ಆದರೆ ಸರ್ಕಾರ ಜನರ ಕಿವಿಗೆ ಹೂವು ಇಡುತ್ತಿದೆ. 10 ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದಿರಿ. ಅದೇ ಮಾತಿನಂತೆ ಅಕ್ಕಿ ಕೊಡಬೇಕು.
34 ರೂ.ಗೆ ಮಾರುಕಟ್ಟೆಯಲ್ಲಿ ಅಕ್ಕಿ ಸಿಗಲ್ಲ. ಪ್ರತಿ ಕೆಜಿಗೆ 45 ರೂ. ಕೊಡಬೇಕು. ಇಲ್ಲದಿದ್ದಲ್ಲಿ ಬಿಜೆಪಿ ಬೀದಿಗಿಳಿದು ಹೋರಾಟ ಮಾಡುತ್ತದೆ ಎಂದರು. ಆಡಳಿತ ನಡೆಸಿ ಅನುಭವ ಇರುವ ಕಾಂಗ್ರೆಸ್ ಪಕ್ಷ ಯಾವುದೇ ಯೋಚನೆ ಮಾಡದೆ ಮನಸೋ ಇಚ್ಛೆ ಗ್ಯಾರಂಟಿ ಘೋಷಣೆ ಮಾಡಿದೆ. ಈಗ ಕೊಟ್ಟ ಭರವಸೆ ಈಡೇರಿಸಬೇಕು. ಇಲ್ಲದಿದ್ದರೆ ಬಿಜೆಪಿ ಸುಮ್ಮನಿರಲ್ಲ.
ಇದನ್ನೂ ಓದಿ: Congress Guarantee: ಅಕ್ಕಿಗೆ ಕಲ್ಲು ಹಾಕಿದ್ದು ಕೇಂದ್ರ ಸರ್ಕಾರ ಎಂದ ಸಿದ್ದರಾಮಯ್ಯ: 10 ಕೆ.ಜಿ.ಗೆ ದುಡ್ಡು ಕೊಡಿ ಎಂದ ಬಿಜೆಪಿ
ಯಡಿಯೂರಪ್ಪ ಹುಟ್ಟು ಹೋರಾಟಗಾರ. ಇಟ್ಟ ಹೆಜ್ಜೆ ಹಿಂದಿಡುವ ಪ್ರಶ್ನೆ ಇಲ್ಲ. ಹೋರಾಟದ ವಿಚಾರದಲ್ಲಿ ಕಾಂಗ್ರೆಸ್ ನಾಯಕರಿಂದ ಹೇಳಿಸಿಕೊಳ್ಳುವ ಅಗತ್ಯ ಇಲ್ಲ. ಚುನಾವಣೆಗೂ ಮುನ್ನ ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆಯಲಿ. ಆಗದಿದ್ದಲ್ಲಿ ರಾಜ್ಯದ ಜನರ ಕ್ಷಮೆ ಕೇಳಲಿ. ಕೊಟ್ಟ ಭರವಸೆ ಬೋಗಸ್, ಸುಳ್ಳು ಆಶ್ಚಾಸನೆಗಳು ಎಂದು ಕ್ಷಮೆ ಕೇಳಲಿ ಎಂದರು.
ಬಿಜೆಪಿ ಯಲ್ಲಿ ವಿಪಕ್ಷ ನಾಯಕನ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮದು ಒಂದು ರಾಷ್ಟ್ರೀಯ ಪಕ್ಷ. ವಿಪಕ್ಷ ನಾಯಕ ಸ್ಥಾನದ ಮಹತ್ವ ಕೂಡ ಅವರಿಗೆ ತಿಳಿದಿದೆ. ಸದ್ಯದಲ್ಲೇ ಸೂಕ್ತ ನಾಯಕನನ್ನು ವರಿಷ್ಠರು ಆಯ್ಕೆ ಮಾಡಲಿದ್ದಾರೆ ಎಂದರು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಸೋಮಣ್ಣ ಆಸೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ಬೇಕಾದರೂ ರಾಜ್ಯಾಧ್ಯಕ್ಷರಾಗಬಹುದು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಪೇಕ್ಷೆ ಪಡೋದು ತಪ್ಪಲ್ಲ. ಆದರೆ ನಾಯಕತ್ವ ಯಾರಿಗೆ ಕೊಟ್ರೆ ಒಳ್ಳೆಯದು, ನಾಯಕತ್ವದ ಗುಣಗಳು ಯಾರಲ್ಲಿ ಇದೆ ಎಂಬುದನ್ನು ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.