ಬೆಂಗಳೂರು: ಅಧಿವೇಶನದಲ್ಲಿ ವಿಪಕ್ಷ ಕಾಂಗ್ರೆಸ್ ಮೇಲೆ ಇನ್ನಷ್ಟು ಆಕ್ರಮಣಕಾರಿಯಾಗಿ ದಾಳಿ ನಡೆಸಲು, ಭ್ರಷ್ಟಾಚಾರದ ಆರೋಪವನ್ನು ಸಂಘಟಿತವಾಗಿ ಎದುರಿಸಲು ಬಿಜೆಪಿ ಶಾಸಕಾಂಗ ಪಕ್ಷ ನಿರ್ಧರಿಸಿದೆ.
ನಮ್ಮ ಬಳಿಯೂ ಸಾಕಷ್ಟು ಅಸ್ತ್ರಗಳು ಸಿದ್ಧ ಇವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಹಗರಣಗಳ ದಾಖಲೆಗಳು ಸಿದ್ಧ ಇವೆ. ಒಂದೊಂದಾಗಿ ಹೊರಬಿಡಬೇಕಾದ ಸಮಯದಲ್ಲಿ ಹೊರಬಿಡುತ್ತೇವೆ. ಬಜೆಟ್ ಘೋಷಿತ ಮತ್ತು ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಘೋಷಿತ ಯೋಜನೆಗಳ ಆದೇಶ ಕೂಡಲೇ ಹೊರ ಬೀಳುತ್ತದೆ. ಕಾಂಗ್ರೆಸ್ ಆಧಾರ ರಹಿತ ಆರೋಪಗಳಿಗೆ ಹೆದರುವ ಅಗತ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ನಮ್ಮ ಮೇಲೆ ಇರಿಸಿರುವ ವಿಶ್ವಾಸ ಉಳಿಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಆರೋಪಗಳಿಗೆ ಸದನದಲ್ಲಿಯೇ ಉತ್ತರ ಕೊಡೋಣ ಎಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿ ಶಾಸಕರು ಒಂದು ಕಡೆ, ಪಕ್ಷ ಒಂದು ಕಡೆ ಅಂತ ಆಗಬಾರದು. ಇಬ್ಬರೂ ಕೂಡಾ ಒಟ್ಟಿಗೆ ಒಂದೇ ದಿಕ್ಕಿನಲ್ಲಿ ಹೋಗಬೇಕು. ಕ್ಷೇತ್ರಗಳ ಅನುದಾನ ಅಂತೂ ಬರಲೇಬೇಕು ಎಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅನುದಾನಕ್ಕೆ ಒತ್ತಾಯ ಇಟ್ಟಿದ್ದಾರೆ.
ಸಚಿವ ಸ್ಥಾನದ ಬೇಡಿಕೆ
ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ಅವರು ಸಭೆಯಲ್ಲಿ ಸಚಿವ ಸ್ಥಾನದ ಬೇಡಿಕೆ ಇಟ್ಟಿರುವುದು ತಿಳಿದುಬಂದಿದೆ. ನಾವು ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದರಿಂದ ಸರ್ಕಾರ ಆಡಳಿತಕ್ಕೆ ಬಂತು. ಈಗ ನಮ್ಮನ್ನ ಕಡೆಗಣಿಸುತ್ತಿದ್ದೀರಿ. ನಾನು ಕ್ಷೇತ್ರ ಸಹ ಕಳೆದುಕೊಂಡಿದ್ದೇನೆ, ಮಂತ್ರಿ ಮಾಡಿ ಎಂದು ಶಂಕರ್ ಒತ್ತಾಯ ಮಾಡಿದ್ದಾರೆ. ಅದು ನನ್ನ ಗಮನದಲ್ಲಿ ಇದ್ದು, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಮಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ.
ಧೈರ್ಯ ತುಂಬಿದ ಬಿಎಸ್‌ವೈ
ಈ ಬಾರಿ ಚುನಾವಣೆಯಲ್ಲಿ 150 ಸೀಟು ಗೆಲ್ಲುವುದು ನಮ್ಮ ಗುರಿ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೇ ಓಡಾಡುತ್ತಿದ್ದಾರೆ. ಅವರಿಬ್ಬರ ಓಡಾಟಕ್ಕೆ ನಾವು ವಿಚಲಿತರಾಗಬೇಕಿಲ್ಲ. ನೀವು ಯಾವುದೇ ಕಾರಣಕ್ಕೂ ಭ್ರಮನಿರಸನಕ್ಕೊಳಗಾಗುವುದು ಬೇಡ. ನೀವು ನಿಮ್ಮ ಕ್ಷೇತ್ರಗಳಲ್ಲಿ ವಿಶ್ವಾಸ ಉಳಿಸಿಕೊಳ್ಳಿ. ನೀವು ಯೋಚನೆ ಮಾಡುವ ಹತ್ತು ಪಟ್ಟು ಜಾಸ್ತಿ ಕೇಂದ್ರೀಯ ನಾಯಕರು ಯೋಚಿಸುತ್ತಿರುತ್ತಾರೆ. ನಾವು ಕೂಡಾ ಯೋಚನೆ ಮಾಡುತ್ತಿರುತ್ತೇವೆ. ಫಲಾನುಭವಿಗಳ ಸಮಾವೇಶ ಹೆಚ್ಚು ನಡೆಸಿ. ನಾನು ನೀವು ಕರೆದಲ್ಲಿಗೆ ಬರಲು ಸಿದ್ಧ ಇದ್ದೇನೆ, 150 ಸ್ಥಾನ ಗೆಲ್ಲುವುದು ಕಷ್ಟವೇನಲ್ಲ ಎಂಧು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಶಾಸಕರಿಗೆ ಧೈರ್ಯ ತುಂಬಿದ್ದಾರೆ.
ವಿಧಾನ ಮಂಡಲ ಅಧಿವೇಶನ ಮುಗಿದ ಕೂಡಲೇ ವಲಯವಾರು ಬಿಜೆಪಿ ಮೋರ್ಛಾಗಳ ಸಮಾವೇಶ ನಡೆಸಲು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನವಾಗಿದೆ. ಬ್ರಾಂಡ್ ಬೆಂಗಳೂರು ಉಳಿಸಿಕೊಳ್ಳಬೇಕು, ಇಲ್ಲದಿದ್ದರೆ ಚುನಾವಣೆ ಗೆಲುವು ಕಷ್ಟ. ಬೆಂಗಳೂರಿನ ಶಾಸಕರು ಮತ್ತು ಅಧಿಕಾರಿಗಳ ಸಭೆ ಕರೆಯಬೇಕು. ತಕ್ಷಣ ಸಭೆ ಕರೆದು ಚರ್ಚೆ ನಡೆಸಬೇಕು ಎಂದು ಸಭೆಯಲ್ಲಿ ಸಿಎಂಗೆ ಬೆಂಗಳೂರಿನ ಶಾಸಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | ಸಿಎಲ್‌ಪಿ ಸಭೆಗೆ 15 ಶಾಸಕರು ಗೈರು; ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಗರಂ