Site icon Vistara News

ನಮ್ಮ ಜಿಲ್ಲೆಯವರು ಸಿಎಂ ಆಗಲಿ ಅಂತ ಎಲ್ಲರಿಗೂ ಆಸೆ ಇರ್ತದೆ: ಸಿದ್ದರಾಮಯ್ಯ ಪರ ನಿಂತ ಬಿಜೆಪಿ ಶಾಸಕ ರಾಮದಾಸ್‌

siddaramaiah ramadas

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಲಿನ ಭೀತಿಯಿಂದ ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ವ್ಯತಿರಿಕ್ತವಾದ ಹೇಳಿಕೆಯನ್ನು ಮೈಸೂರಿನ ಶಾಸಕ ಎಸ್‌.ಎ ರಾಮದಾಸ್‌ ನೀಡಿದ್ದಾರೆ. ʻʻಸಿಎಂ ಅಭ್ಯರ್ಥಿಯಾದವರು ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿದ್ದು ಚರ್ಚೆ ವಿಷಯ ಆಗಿದ್ದೇ ಸರಿಯಲ್ಲʼʼ ಎಂದು ಅವರು ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರದಿಂದ ಕಣಕ್ಕಿಳಿಯಲು ಮುಂದಾಗಿರುವುದು ಒಂದು ಸಂಗತಿಯೇ ಅಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವುದು ಅವರವರ ಇಚ್ಛೆಯಾಗಿರುತ್ತದೆ. ಪಕ್ಷಾತೀತವಾಗಿ ಹೇಳುವುದಾದರೆ ನಮ್ಮ ಜಿಲ್ಲೆಯವರೊಬ್ಬರು ಮುಖ್ಯಮಂತ್ರಿ ಆಗಲಿ ಎಂಬ ಆಸೆ ಎಲ್ಲರಲ್ಲೂ ಇರುತ್ತದೆ.
ಆದರೆ ಸಿಎಂ ಕ್ಯಾಂಡಿಡೇಟ್ ಆದವರು ಬೇರೆ ಬೇರೆ ಜಿಲ್ಲೆಗಳಲ್ಲಿ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿದ್ದು, ಈ ವಿಚಾರ ಚರ್ಚೆಗೀಡಾದದ್ದು ಸರಿಯಲ್ಲʼʼ ಎಂದು ರಾಮದಾಸ್‌ ಹೇಳಿದ್ದಾರೆ.

ʻʻಸಿದ್ದರಾಮಯ್ಯ ಹಿರಿಯರು, ಅವರ ಬಗ್ಗೆ ಅಪಾರ ಗೌರವವಿದೆ. ಅವರು ಕೋಲಾರದಿಂದ ಸ್ಪರ್ಧಿಸಿದರೆ ಮೈಸೂರು ಭಾಗದಲ್ಲಿ ಯಾವುದೇ ಪರಿಣಾಮ ಬೀರಲ್ಲ. ಎಲ್ಲಾ ಪಕ್ಷಗಳು ತಮ್ಮದೇ ಆದ ತತ್ವ, ಸಿದ್ಧಾಂತಗಳ ಆಧಾರದಲ್ಲಿ ಚುನಾವಣೆ ಎದುರಿಸುತ್ತವೆʼʼ ಎಂದಿದ್ದಾರೆ ರಾಮದಾಸ್‌.

ತನ್ವೀರ್‌ ಸೇಠ್‌ಗೂ ಕಿವಿಮಾತು
ಇದೇ ವೇಳೆ ಮೈಸೂರಿನಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣ ಮಾಡುವುದಾಗಿ ಘೋಷಿಸಿರುವ ಶಾಸಕ ತನ್ವೀರ್‌ ಸೇಠ್‌ಗೆ ರಾಮದಾಸ್‌ ಕಿವಿಮಾತು ಹೇಳಿದ್ದಾರೆ.
ʻʻಶಾಸಕ ತನ್ವೀರ್ ಸೇಠ್ ನನಗೆ ಒಳ್ಳೆಯ ಗೆಳೆಯ. ಟಿಪ್ಪು ಪ್ರತಿಮೆ ನಿರ್ಮಾಣ ಮಾಡುವ ಮೊದಲು ಎನ್.ಆರ್. ಕ್ಷೇತ್ರದ ಜನರ ಭವಿಷ್ಯ ನಿರ್ಮಿಸಲು ಮುಂದಾಗುವ ಅವಶ್ಯಕತೆಯಿದೆ. ಟಿಪ್ಪು ಪ್ರತಿಮೆ ನಿರ್ಮಾಣದಿಂದ ಎನ್ ಆರ್ ಕ್ಷೇತ್ರದ ಜನರ ಭವಿಷ್ಯ ನಿರ್ಮಿಸಲಾಗುವುದಿಲ್ಲ. ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ರಾಜಕೀಯ ಲಾಭಕ್ಕಾಗಿ ತನ್ವೀರ್ ಸೇಠ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಆದರೆ ಇದರಿಂದ ಯಾವುದೇ ರಾಜಕೀಯ ಲಾಭವಾಗುವುದಿಲ್ಲʼʼ ಎಂದಿದ್ದಾರೆ ರಾಮದಾಸ್‌.

ಯಾರೂ ಕುರಾನ್‌ನ್ನು ಸರಿಯಾಗಿ ಓದಿಲ್ಲ
ʻʻಪ್ರತಿಯೊಂದು ಧರ್ಮದ ಸಾರವೂ ಅಹಿಂಸೆಯಾಗಿದೆ. ಇದುವರೆಗೆ ಯಾರೊಬ್ಬರೂ ಕುರಾನ್ ಅನ್ನು ಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡಿಲ್ಲ. ಇಸ್ಲಾಂ ಧರ್ಮದಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ. ಆದರೂ ತನ್ವೀರ್ ಸೇಠ್ ರಾಜಕೀಯ ಲಾಭಕ್ಕಾಗಿ ಟಿಪ್ಪು ಪ್ರತಿಮೆ ನಿರ್ಮಾಣ ಮಾಡುತ್ತೇನೆಂದು ಹೇಳಿರುವುದು ಸರಿಯಲ್ಲ‌‌ʼʼ ಎಂದು ರಾಮದಾಸ್‌ ಪ್ರತಿಕ್ರಿಯಿಸಿದರು.

ಇದನ್ನೂ ಓದಿ | Siddaramaiah In Kolar | ಕೋಲಾರದಿಂದ ಗೆದ್ದು ಯಾಕೆ CM ಆಗಬಾರದು?: ಮತ್ತೊಮ್ಮೆ ಮುಖ್ಯಮಂತ್ರಿ ಕನಸು ಬಿಚ್ಚಿಟ್ಟ ಸಿದ್ದರಾಮಯ್ಯ

Exit mobile version