ಚಿತ್ರದುರ್ಗ: ರಾಜ್ಯದಲ್ಲಿ ಆಗಾಗ ಸುದ್ದಿಯಾಗುತ್ತಿರುವ ʻಮುಂದಿನ ಸಿಎಂವಿಜಯೇಂದ್ರʼ (BY Vijayendra) ಪ್ರಸ್ತಾಪ ಚಿತ್ರದುರ್ಗದಲ್ಲಿ ನಡೆಯುತ್ತಿರುವ ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶದಲ್ಲಿ ಮರುಕಳಿಸಿದೆ.
ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡಿ, ಸಕ್ರಿಯ ಚುನಾವಣಾ ಸ್ಪರ್ಧಾ ರಾಜಕೀಯದಿಂದ ನಿವೃತ್ತಿ ಪಡೆದ ಬಳಿಕ ಅವರ ಸ್ಥಾನಕ್ಕೆ ಅವರ ಪುತ್ರ ಬಿ.ವೈ. ವಿಜಯೇಂದ್ರ ಬರಲಿದ್ದಾರೆ ಎಂಬ ಗಾಸಿಪ್‌ಗಳು ಜೋರಾಗಿಯೇ ಹರಡಿದ್ದವು. ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮತ್ತೆ ಅದು ಚಾಲನೆಗೆ ಬಂದಂತಾಗಿದೆ. ಶಿಕಾರಿಪುರ ಕ್ಷೇತ್ರದಿಂದ ಮುಂದಿನ ಬಾರಿ ಕಣಕ್ಕಿಳಿಯುತ್ತಿರುವ ಬಿವೈ ವಿಜಯೇಂದ್ರ ಅವರನ್ನೇ ಸಿಎಂ ಮಾಡಬೇಕು ಎಂಬ ಕೂಗೂ ಒಳಗಿಂದೊಳಗೆ ಇದೆ. ಬಿ.ಎಸ್. ಯಡಿಯೂರಪ್ಪ ಅವರ ಜತೆಗಿದ್ದು ಕಲಿತ ರಾಜಕೀಯ ಪಟ್ಟುಗಳು, ಅವರ ಕಾಲದಲ್ಲಿ ಇವರೇ ನಡೆಸಿದ ಆಡಳಿತ ನಿರ್ವಹಣೆಗಳು, ಲಿಂಗಾಯತ ಸಮುದಾಯದ ಮೇಲೆ ಅವರಿಗಿರುವ ಹಿಡಿತ, ಚುನಾವಣೆಗಳನ್ನು ನಿಭಾಯಿಸುವ ರೀತಿಯ ಆಧಾರದಲ್ಲಿ ಹಲವಾರು ಬಿಜೆಪಿ ಶಾಸಕರು, ನಾಯಕರು ವಿಜಯೇಂದ್ರ ಅವರಲ್ಲಿ ಒಬ್ಬ ಭಾವಿ ಸಿಎಂ ಅನ್ನು ಕಾಣುತ್ತಿದ್ದಾರೆ. ಈ ಅಭಿಪ್ರಾಯ ಬಿಜೆಪಿಯ ದೊಡ್ಡ ವೇದಿಕೆಯಲ್ಲೇ ಹೊರಹೊಮ್ಮಿದೆ.
ಚಿತ್ರದುರ್ಗದಲ್ಲಿ ನಡೆಯುತ್ತಿರುವ ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶದಲ್ಲಿ ಬಿವೈ ವಿಜಯೇಂದ್ರ ಕೂಡಾ ಭಾಗವಹಿಸಿದ್ದರು. ಆಗ ಅವರನ್ನು ಸಂಬೋಧಿಸುವ ಸಂದರ್ಭದಲ್ಲಿ ಹೊಳಲ್ಕೆರೆ ಶಾಸಕರಾದ ಎಂ ಚಂದ್ರಪ್ಪ ಅವರು ʻಮುಂದಿನ ಸಿಎಂ ವಿಜಯೇಂದ್ರʼ ಎಂದು ಹೇಳಿದರು.
ಸಮಾವೇಶದಲ್ಲಿ ನಾನಾ ನಾಯಕರು ಮಾತನಾಡಿದರು. ಶಾಸಕರಾಗಿರುವ ಎಂ. ಚಂದ್ರಪ್ಪ ಅವರು ತಮ್ಮ ಪಾಳಿಯಲ್ಲಿ ಭಾಷಣ ಶುರು ಮಾಡಿದಾಗ, ವೇದಿಕೆಯಲ್ಲಿರುವ ಅತಿಥಿಗಳ ಹೆಸರು ಹೇಳುವ ವೇಳೆ, ʻʻರಾಜ್ಯದ ಯುವಕರ ಕಣ್ಮಣಿ, ಮುಂದಿನ ಸಿಎಂ ವಿಜಯೇಂದ್ರʼʼ ಎಂದು ಹೇಳಿದರು. ಆಗ ಇಡೀ ಸಭಾಂಗಣದಿಂದ ಜೋರಾದ ಶಿಳ್ಳು, ಕೇಕೆ ಕೇಳಿಬಂತು.
ವರದಕ್ಷಿಣೆ ತೆಗೆದುಕೊಳ್ಳೋರನ್ನು ಮದುವೆಯಾಗಲ್ಲ
ಮಹಿಳಾ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು, ʻʻಹೆಣ್ಣು ಮಕ್ಕಳಲ್ಲಿ ಒಂದು ವಿನಂತಿ. ರಾಜ್ಯದಲ್ಲಿ 1000 ಗಂಡು ಮಕ್ಕಳಿಗೆ ಸುಮಾರು 940 ಹೆಣ್ಣು ಮಕ್ಕಳಿದ್ದಾರೆ. ಹೆಣ್ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಬೇಡಿಕೆ ಹೆಚ್ಚಿದೆ. ಹೀಗಾಗಿ ನೀವೊಂದು ಶಪಥ ಮಾಡಬೇಕು. ವರದಕ್ಷಿಣೆ ತೆಗೆದುಕೊಳ್ಳುವವರನ್ನು ಮದುವೆ ಆಗಲ್ಲ ಎಂದು ನಿರ್ಧಾರ ಮಾಡಬೇಕುʼʼ ಎಂದರು.
ʻʻನಾನು ಕೂಡ ಮದುವೆ ಆಗುವಾಗ ವರದಕ್ಷಿಣೆ ತೆಗೆದುಕೊಂಡಿಲ್ಲ. ನನಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.. ಹಾಗಾಗಿ ಹೇಳ್ತಿದ್ದೀನಿ, ಯಾರೂ ಕೂಡಾ ವರದಕ್ಷಿಣೆ ತೆಗೆದುಕೊಳ್ಳುವ ಹುಡುಗರನ್ನು ಒಪ್ಪಬೇಡಿʼʼ ಎಂದರು ಬಿ.ಸಿ. ಪಾಟೀಲ್.
ʻʻಹೆಣ್ಣುಮಕ್ಕಳು ಕೈಗಾರಿಕೆ ಆರಂಭಿಸುತ್ತೀರಿ ಅಂದರೆ ಕೇವಲ ಶೇಕಡಾ ೪ ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಹತ್ತು ಲಕ್ಷದವರೆಗಿನ ಮೊತ್ತಕ್ಕೆ ೫೦% ಸಬ್ಸಿಡಿ ಕೂಡಾ ಸರ್ಕಾರದ ವತಿಯಿಂದ ಸಿಗುತ್ತಿದೆ. ಇದನ್ನು ಬಳಸಿಕೊಂಡು ಉದ್ಯಮಿಗಳಾಗಬಹುದುʼʼ ಎಂದು ಹೇಳಿದ ಬಿ.ಸಿ. ಪಾಟೀಲ್, ʻʻಉತ್ತರ ಕನ್ನಡ ಜಿಲ್ಲೆಯಲ್ಲಿ ಲತಾ ಹೆಗಡೆ ಅನ್ನೋ ಮಹಿಳೆ ಬಾಳೆಕಾಯಿಯ ಉತ್ಪನ್ನಗಳನ್ನ ಮಾರಾಟ ಮಾಡಿ ತಿಂಗಳಿಗೆ 50 ಸಾವಿರ ದುಡಿಯುತ್ತಿದ್ದಾರೆʼʼ ಎಂದು ವಿವರಿಸಿದರು.
ಭಾರಿ ಸಂಖ್ಯೆಯಲ್ಲಿ ಮಹಿಳೆಯರು ಭಾಗಿ
ಚಿತ್ರದುರ್ಗದ ಚಂದ್ರವಳ್ಳಿ ಆಟದ ಮೈದಾನದಲ್ಲಿ ನಡೆಯುತ್ತಿರುವ ಈ ಸಮಾವೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಭಾಗಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಮೋರ್ಚಾಗಳ ಸಮಾವೇಶಗಳ ಸಂಚಾಲಕ ಬಿ.ವೈ.ವಿಜಯೇಂದ್ರ, ಅರಣ್ಯ ನಿಗಮದ ಅಧ್ಯಕ್ಷೆ ನಟಿ ತಾರಾ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ, ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಹೊಳಲ್ಕೆರೆ ಶಾಸಕ ಚಂದ್ರಪ್ಪ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ.
ಇದನ್ನೂ ಓದಿ : BJP Yuva Morcha Meeting: ಸಕ್ಕರೆನಾಡಿನಲ್ಲಿ 2ನೇ ದಿನವೂ ಬಿ.ವೈ.ವಿಜಯೇಂದ್ರ ಹವಾ; ಯುವ ನಾಯಕನಿಗೆ ಅದ್ಧೂರಿ ಸ್ವಾಗತ