ಬೆಂಗಳೂರು: ಇನ್ನೇನು ವಿಧಾನಸಭೆ ಚುನಾವಣೆಗಳು ಹತ್ತಿರ ಬರುತ್ತಿರುವಂತೆ, ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಭಾರತೀಯ ಜನತಾ ಪಾರ್ಟಿ(ಬಿಜೆಪಿ) ವರಿಷ್ಠರು ಚಿಂತಿತರಾಗಿದ್ದಾರೆ.
ಸಚಿವರಷ್ಟೆ ಅಲ್ಲದೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಮನಕ್ಕೂ ಬಾರದೆ ಆದೇಶಗಳು ಹೊರಡುತ್ತಿವೆ. ಮೂರು ದಿನದಲ್ಲಿ ಎರಡು ಆದೇಶಗಳನ್ನು 12ಗಂಟೆಗೂ ಕಡಿಮೆ ಅವಧಿಯಲ್ಲಿ ಹಿಂಪಡೆಯುವುದರಿಂದ ಸರ್ಕಾರದ ಮೇಲೆ ಜನಾಕ್ರೋಶ ಹೆಚ್ಚುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೊ, ವಿಡಿಯೊ ಮಾಡಬಾರದು ಎಂದು ಜುಲೈ 15ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತು. ಎಲ್ಲ ಜಿಲ್ಲೆಗಳು, ಹಾಗೂ ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಅನಧಿಕೃತವಾಗಿ ವಿಡಿಯೊ, ಫೋಟೊ ತೆಗೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುತ್ತಾರೆ. ಇದನ್ನು ನಿಷೇಧಿಸಬೇಕು ಎಂದು ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ್ದ ಸರ್ಕಾರ, ಈ ವಿವಾದಾತ್ಮಕ ಆದೇಶವನ್ನು ಹೊರಡಿಸಿತ್ತು.
ಇದನ್ನೂ ಓದಿ | ಸಿಎಂ ಬೊಮ್ಮಾಯಿ ಗಮನಕ್ಕೇ ತಾರದೆ ಫೋಟೊ, ವಿಡಿಯೊ ನಿಷೇಧ ಮಾಡಿದ ಅಧಿಕಾರಿಗಳು?
ಈ ಆದೇಶಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕತೆಯ ಅವಶ್ಯಕತೆ ಇರುವಾಗ ಫೋಟೊ, ವಿಡಿಯೊ ಚಿತ್ರೀಕರಣಕ್ಕೆ ನಿಷೇಧಿಸಿದರೆ ಭ್ರಷ್ಟ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಅನುಕೂಲವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಪಕ್ಷಗಳೂ ಈ ಆದೇಶವನ್ನು ವಿರೋಧಿಸಿದ್ದವು. ʻಭ್ರಷ್ಟಾಚಾರಿಗಳಿಂದ, ಭ್ರಷ್ಟಾಚಾರಿಗಳಿಗೋಸ್ಕರ, ಭ್ರಷ್ಟಾಚಾರಕ್ಕಾಗಿʼ ಎನ್ನುವುದು ಬಿಜೆಪಿಯ 40% ಸರ್ಕಾರದ ಘೋಷ ವಾಕ್ಯ. ಹಿಂದೆ ಸದನದ ಕಲಾಪಗಳಿಗೆ ಮಾಧ್ಯಮಗಳ ನಿರ್ಬಂಧ, ಇಂದು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟರಿಗೆ ರಕ್ಷಣೆ. ಸರ್ಕಾರಿ ಕಚೇರಿಗಳಲ್ಲಿ ಕ್ಯಾಮೆರಾ ಚಿತ್ರೀಕರಣ ನಿಷೇಧಿಸುವ ಮೂಲಕ ಭ್ರಷ್ಟರ ಬೆಂಬಲಕ್ಕೆ ನಿಂತಿದೆ ಎಂದು ಕಾಂಗ್ರೆಸ್ ಟೀಕಿಸಿತ್ತು.
ರಾತ್ರೋರಾತ್ರಿ ವಾಪಸ್
ದಿನಪೂರ್ತಿ ಯಲಹಂಕ ಬಳಿಯ ರೆಸಾರ್ಟ್ನಲ್ಲಿ ರಾಜ್ಯ ಬಿಜೆಪಿ ಚಿಂತನ ಸಭೆಯಲ್ಲಿ ಭಾಗವಹಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಈ ಆದೇಶದ ಕುರಿತು ತುಸು ಯಾಮಾರಿದ್ದರು. ಆದೇಶದ ಕುರಿತು ಸಾರ್ವಜನಿಕರ ಆಕ್ರೋಶ ಭುಗಿಲೇಳುತ್ತಲೇ ತಡರಾತ್ರಿ 2 ಗಂಟೆ ಸುಮಾರಿಗೆ ಆದೇಶವೊಂದನ್ನು ಹೊರಡಿಸಿ, ಹಿಂದಿನ ಆದೇಶವನ್ನು ರದ್ದುಪಡಿಸಿದರು.
ಹಾಲಿನ ಉತ್ಪನ್ನಗಳ ದರ ಏರಿಕೆ
ಜಿಎಸ್ಟಿ ಎಂದರೇ ಜನಸಾಮಾನ್ಯರಲ್ಲಿ ನಕಾರಾತ್ಮಕ ಭಾವನೆ ಇರುವಾಗ, ಇದೇ ತೆರಿಗೆಯನ್ನು ಇತ್ತೀಚೆಗೆ ದಿನಬಳಕೆ ವಸ್ತುಗಳಿಗೆ ವಿಸ್ತರಿಸಲಾಗಿದೆ. 5% ಜಿಎಸ್ಟಿ ಹೆಚ್ಚಳ ಮಾಡಿದ್ದನ್ನೆ ಪ್ರಮುಖವಾಗಿಸಿಕೊಂಡ ಕೆಎಂಎಫ್, ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ ಹಾಗೂ ಲಸ್ಸಿ ದರವನ್ನು ಹೆಚ್ಚಳ ಮಾಡಿತು.
ಸೋಮವಾರ ದಿನಪೂರ್ತಿ ಇದೇ ವಿಚಾರ ಚರ್ಚೆಯಾಯಿತು. ಸಾಮಾಜಿಕ ಜಾಲತಾಣಗಳ ಮೂಲಕ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದರೆ, ಪ್ರತಿಪಕ್ಷಗಳಿಗೆ ಇದೊಂದು ಅಸ್ತ್ರವಾಗಿ ಪರಿಣಮಿಸಿತು. ತೆರಿಗೆಯನ್ನು ಹೆಚ್ಚಿಸಿದ ಕೂಡಲೆ ಉತ್ಪನ್ನಗಳ ಬೆಲೆ ಏರಿಸಲೇಬೇಕೆಂದಿಲ್ಲ. ಉತ್ಪಾದನಾ ಕಂಪನಿಗಳು ನಂತರ ತೆರಿಗೆ ಮರುಪಾವತಿ ಪಡೆಯಬಹುದು ಎಂದು ಮುಖ್ಯಮಂತ್ರಿ ಹಾಗೂ ಸ್ವತಃ ಜಿಎಸ್ಟಿ ದರ ಸಮಿತಿ ಅಧ್ಯಕ್ಷರೂ ಆಗಿರುವ ಬೊಮ್ಮಾಯಿ ಹೇಳಿದರು.
ಈ ವಿಚಾರಕ್ಕೆ ಮತ್ತಷ್ಟು ಆಕ್ರೋಶ ಹೆಚ್ಚಾಗಿ, ಬೃಹತ್ ಜನಾಂದೋಳನ ನಡೆಸಲು ಕಾಂಗ್ರೆಸ್ ಆಲೋಚಿಸಿತು. ಇದೆಲ್ಲದರ ನಂತರ ಒತ್ತಡಕ್ಕೊಳಗಾದ ಸಿಎಂ ಬಸವರಾಜ ಬೊಮ್ಮಾಯಿ, ಕೂಡಲೆ ಕೆಎಂಎಫ್ ಅಧ್ಯಕ್ಷರ ಜತೆಗೆ ಮಾತನಾಡಿ, ಅಲ್ಪ ಪ್ರಮಾಣದಲ್ಲಿ ದರವನ್ನು ಕಡಿತ ಮಾಡಿಸಿದರು.
ಒಂದೇ ದಿನದಲ್ಲಿ ಯು-ಟರ್ನ್
ಸರ್ಕಾರದಿಂದ ಆದೇಶ ಹೊರಡಿಸುವಾಗ ವಿವಿಧ ಹಂತಗಳಲ್ಲಿ ಚರ್ಚೆ ಆಗಬೇಕು. ಅದರಲ್ಲೂ ಜನಸಾಮಾನ್ಯರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಆದೇಶ ಹೊರಡಿಸುವಾಗ ಎಚ್ಚರ ವಹಿಸಬೇಕು. ಈಗಾಗಲೆ 40% ಲಂಚ ಆರೋಪ ಕೇಳಿಬಂದಿದ್ದು, ಒಬ್ಬ ಹಿರಿಯ ಸಚಿವರೂ ರಾಜಿನಾಮೆ ನೀಡಿದ್ದಾರೆ. ಈ ವಿಚಾರದಿಂದ ಹೊರಬರಲು ಹೆಣಗಾಡುತ್ತಿರುವಾಗಲೆ ಹೊಸ ವಿವಾದಗಳನ್ನು ಕಟ್ಟಿಕೊಳ್ಳಲಾಗುತ್ತಿದೆ. ಚುನಾವಣೆ ವರ್ಷದಲ್ಲಿ ಇರಬೇಕಾದಷ್ಟು ಗಂಭೀರತೆ ಕಾಣುತ್ತಿಲ್ಲ ಎಂದು ರಾಷ್ಟ್ರೀಯ ಬಿಜೆಪಿ ವರಿಷ್ಠರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಆಗಿಂದಾಗ್ಗೆ ನಡೆಯುತ್ತಿರುತ್ತದೆ. ಈ ನಡುವೆ ಇಂತಹ ಯಡವಟ್ಟುಗಳನ್ನು ಮಾಡಿಕೊಂಡರೆ ಚರ್ಚೆ ತೀವ್ರವಾಗುತ್ತದೆ. ಜನಸಾಮಾನ್ಯರಲ್ಲಿ ಸರ್ಕಾರದ ಕುರಿತು ನಕಾರಾತ್ಮಕ ಭಾವನೆ ಉಂಟಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಸರ್ಕಾರಿ ಕಚೇರಿಗಳಲ್ಲಿ ಫೊಟೊ, ವಿಡಿಯೊ ನಿಷೇಧದ ಆದೇಶ ಹೊರಡಿಸಿದ್ದು ತಮ್ಮ ಗಮನಕ್ಕೆ ಬಂದಿಲ್ಲ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ. ಕೂಡಲೆ ಎಚ್ಚರಿಕೆ ವಹಿಸಿ, ಇಡೀ ಆಡಳಿತ ಯಂತ್ರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ರಾಷ್ಟ್ರೀಯ ಬಿಜೆಪಿ ಕಚೇರಿಯಿಂದ ಸೂಚನೆ ಲಭಿಸಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ನಡೆಯುವ ರಾಜಕೀಯ ಚಟುವಟಿಕೆಗಳು, ಪ್ರಮುಖ ವಿದ್ಯಮಾನಗಳ ಕುರಿತು ವರದಿ ಹಾಗೂ ಅದಕ್ಕೆ ರಾಜ್ಯ ಬಿಜೆಪಿಯಿಂದ ವರದಿಯನ್ನು ಕಾಲಕಾಲಕ್ಕೆ ವರಿಷ್ಠರಿಗೆ ರವಾನೆ ಮಾಡಲಾಗುತ್ತದೆ. ಈ ಎರಡೂ ಘಟನೆಗಳ ಕುರಿತು ಸಂಪೂರ್ಣ ವರದಿ ಹಾಗೂ ಅದಕ್ಕೆ ಪಕ್ಷದ ಸಮರ್ಥನೆಯನ್ನು ನೀಡುವಂತೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರಿಗೆ ವರಿಷ್ಠರು ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳ ಹಾಗೂ ಸಚಿವರ ಸಭೆಗಳನ್ನು ನಡೆಸಿ ಆಡಳಿತ ಬಿಗಿಗೊಳಿಸುವ ನಿರ್ಧಾರ ಮಾಡಲಾಗುತ್ತದೆ ಎಂದು ಬಿಜೆಪಿ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ | ನಂದಿನಿ ಮೊಸರು, ಮಜ್ಜಿಗೆ, ಲಸ್ಸಿ ದರ ಅಲ್ಪ ಕಡಿತ: ಒತ್ತಡಕ್ಕೆ ಮಣಿದ ಕೆಎಂಎಫ್