ಬೆಂಗಳೂರು: ಲೋಕಸಭೆ ಚುನಾವಣೆಗೆ (Lok Sabha Election) ಕೆಲವೇ ದಿನಗಳು ಬಾಕಿ ಉಳಿದಿವೆ. ಆಯಾ ಪಕ್ಷಗಳಿಂದ ಟಿಕೆಟ್ ಪಡೆದಿರುವ ಅಭ್ಯರ್ಥಿಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಪಕ್ಷಗಳ ನಾಯಕರು ಕೂಡ ಪ್ರಚಾರದ ಜತೆಗೆ ರಣತಂತ್ರ ರೂಪಿಸುತ್ತಿದ್ದಾರೆ. ಅದರಲ್ಲೂ, ಕರ್ನಾಟಕ ಬಿಜೆಪಿಯು (Karnataka BJP) ಕಾಂಗ್ರೆಸ್‌ಗೆ ಟಕ್ಕರ್ ಕೊಡಲು ಮುಂದಾಗಿದ್ದು, ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿಗೆ (Akhanda Srinivas Murthy) ಪಕ್ಷಕ್ಕೆ ಆಹ್ವಾನ ನೀಡಿದೆ ಎಂದು ತಿಳಿದುಬಂದಿದೆ. ಬಿಜೆಪಿ ನಾಯಕಿ, ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ (Shobha Karandlaje) ಅವರೇ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಭೇಟಿಯಾಗಿ, ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಹೌದು, ಕಾಂಗ್ರೆಸ್ ವಿರುದ್ಧ ದಲಿತಾಸ್ತ್ರ ಪ್ರಯೋಗಿಸಲು ಬಿಜೆಪಿ ಮುಂದಾಗಿದ್ದು, ಶೋಭಾ ಕರಂದ್ಲಾಜೆ ಅವರು ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಭೇಟಿ ನೀಡಿರುವ ಫೋಟೊಗಳು ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿವೆ. ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ತೆರಳಿದ ಶೋಭಾ ಕರಂದ್ಲಾಜೆ ಅವರನ್ನು ಬಿಜೆಪಿಗೆ ಆಹ್ವಾನ ನೀಡಿದ್ದಲ್ಲದೆ, ಬಿಜೆಪಿ ನೀಡಿರುವ ದೊಡ್ಡ ಆಫರ್ ಬಗ್ಗೆಯೂ ಅವರ ಗಮನಕ್ಕೆ ತಂದಿದ್ದಾರೆ. ಆ ಮೂಲಕ ಬಿಜೆಪಿಗೆ ಸೇರ್ಪಡೆಯಾಗಲು ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿಗೆ ಹೇಗೆ ಇದು ಅಸ್ತ್ರ?
ದಲಿತರ ಏಳಿಗೆ ಕುರಿತು ಪುಂಖಾನುಪುಂಖವಾಗಿ ಮಾತನಾಡುವ ಕಾಂಗ್ರೆಸ್ ನಾಯಕರು, 2023ರ ವಿಧಾನಸಭೆ ಚುನಾವಣೆಯಲ್ಲಿ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಟಿಕೆಟ್ ತಪ್ಪಿಸಿದ್ದು ದಲಿತರಿಗೆ ಮಾಡಿದ ಅನ್ಯಾಯ ಎಂದೇ ವಿಶ್ಲೇಷಿಸಲಾಗಿತ್ತು. ಟಿಕೆಟ್ ತಪ್ಪಿದ ಕಾರಣ ಅಖಂಡ ಶ್ರೀನಿವಾಸಮೂರ್ತಿ ಅವರು ಕೊನೆಯ ಕ್ಷಣದಲ್ಲಿ ಭಾರತೀಯ ಸಮಾಜ ಪಕ್ಷದಿಂದ (BSP) ಸ್ಪರ್ಧಿಸಿ ಎರಡನೇ ಸ್ಥಾನ ಗಳಿಸಿದ್ದರು. ಹಾಗಾಗಿ, ಅಖಂಡ ಶ್ರೀನಿವಾಸಮೂರ್ತಿ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡರೆ, ಕಾಂಗ್ರೆಸ್ ವಿರುದ್ಧ ದಲಿತಾಸ್ತ್ರ ಪ್ರಯೋಗಿಸಬಹುದು ಎಂಬುದು ಬಿಜೆಪಿ ರಣತಂತ್ರವಾಗಿದೆ ಎಂದು ಹೇಳಲಾಗುತ್ತಿದೆ.
ಮುಂದಿನ ವಾರ ಬಿಜೆಪಿ ಸೇರ್ಪಡೆ?
ಕರ್ನಾಟಕದಲ್ಲಿ ಬಿಎಸ್‌ಪಿಗೆ ನೆಲೆ ಇಲ್ಲ. ಹಾಗಾಗಿ, ಬಿಜೆಪಿಗೆ ಸೇರಿದರೆ ಒಳ್ಳೆಯ ಅವಕಾಶಗಳು ಸಿಗಲಿವೆ ಎಂಬ ಸಂದೇಶವನ್ನು ಶೋಭಾ ಕರಂದ್ಲಾಜೆ ಅವರು ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ, ಮುಂದಿನ ವಾರವೇ ಅಖಂಡ ಶ್ರೀನಿವಾಸಮೂರ್ತಿ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ಮನೆಗೆ ಬೆಂಕಿ ಹಚ್ಚಿದ ಆರೋಪ ಹೊತ್ತಿರುವ ಸಂಪತ್ ರಾಜ್ ಅವರಿಗೆ ಕಾಂಗ್ರೆಸ್ ಸಿ.ವಿ. ರಾಮನ್ ನಗರದ ಟಿಕೆಟ್ ಕೊಟ್ಟ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಇದು ಸಕಾಲ ಎಂದು ಭಾವಿಸಿರುವ ಶ್ರೀನಿವಾಸಮೂರ್ತಿ ಅವರು ಬಿಜೆಪಿ ಸೇರುವ ಮನಸ್ಸು ಮಾಡಿದ್ದಾರೆ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ: Lok Sabha Election 2024: ಡಿಕೆಶಿ ಸುಳ್ಳು ಫ್ಯಾಕ್ಟರಿಯ ಮೇಟಿ ಎಂದ ಎಚ್‌ಡಿಕೆ; ಶುರುವಾಯ್ತು ಮೇಕೆದಾಟು ವಾರ್!