ಬೆಂಗಳೂರು: ಈಗಾಗಲೆ ಎಸ್‌ಸಿಎಸ್‌ಟಿ ಸಮುದಾಯದ ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಕಾಂಗ್ರೆಸ್ ಮತ ಬ್ಯಾಂಕ್‌ಗೆ ಪೆಟ್ಟು ನೀಡಲು ಮುಂದಾಗಿರುವ ಬಿಜೆಪಿ, ಒಬಿಸಿ ಸಮುದಾಯವನ್ನು ಮತ್ತಷ್ಟು ಸೆಳೆಯಲು ಪ್ರಯತ್ನ ಆರಂಭಿಸಿದೆ.
ಬಿಜೆಪಿ ಒಬಿಸಿ ಮೋರ್ಚಾ ನೇತೃತ್ವದಲ್ಲಿ ಅಕ್ಟೋಬರ್ 30ರಂದು ಹಿಂದುಳಿದ ವರ್ಗಗಳ ವಿರಾಟ್ ಸಮಾವೇಶವನ್ನು ಕಲ್ಬುರ್ಗಿಯಲ್ಲಿ ಆಚರಿಸಲಾಗುತ್ತದೆ. ಇದೇ ವೇಳೆ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರನ್ನು ಒಬಿಸಿ ಸಮುದಾಯದ ನಾಯಕನನ್ನಾಗಿ ಮುನ್ನೆಲೆಗೆ ತರುವ ಪ್ರಯತ್ನ ನಡೆಸಲಾಗುತ್ತಿದೆ.
ಕಲ್ಬುರ್ಗಿಯ ನಾಗನಹಳ್ಳಿ ಪೊಲೀಸ್ ಕೇಂದ್ರದ ಹತ್ತಿರ ರದ್ದೇವಾಡಗಿ ಬಡಾವಣೆಯಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರ ನಿರೀಕ್ಷೆ ಇದೆ. ಈ ಕುರಿತು ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುನಿಲ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ನೆ. ಲ. ನರೇಂದ್ರ ಬಾಬು ಸುದ್ದಿಗೋಷ್ಠಿಯಲ್ಲಿ ಇದ್ದರಾದರೂ ಸುನಿಲ್ ಕುಮಾರ್ ನೇತೃತ್ವ ವಹಿಸಿದ್ದರು. ಸಮಾವೇಶದಲ್ಲಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಡಾ. ಲಕ್ಷ್ಮಣ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭಾಗವಹಿಸಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ. ನರೇಂದ್ರಬಾಬು, ಹಿಂದುಳಿದ ವರ್ಗಗಳ ಸಚಿವರು, ಶಾಸಕರು, ಸಂಸದರು ಇತರ ಗಣ್ಯರು ಪಾಲ್ಗೊಳ್ಳುವರು ಎಂದು ಸುನಿಲ್ ಕುಮಾರ್ ತಿಳಿಸಿದರು.
ಓಬಿಸಿ ಪ್ರವರ್ಗಕ್ಕೆ ಸೇರಿದ ಈಡಿಗ ಸಮುದಾಯದ ಸುನಿಲ್ ಕುಮಾರ್ ರಾಜ್ಯದ ವಿವಿಧೆಡೆ ಪ್ರಮುಖವಾಗಿ ಯುವ ಹಾಗೂ ಹಿಂದುತ್ವದ ಮುಖವಾಗಿಯೇ ಗುರುತಿಸಿಕೊಂಡಿದ್ದಾರೆ. ಆದರೆ ಬಿಜೆಪಿಯ ʼಸೋಷಿಯಲ್ ಇಂಜಿನಿಯರಿಂಗ್ʼ ಸೂತ್ರಕ್ಕೆ ಅನುಗುಣವಾಗಿ ಇದೀಗ ವಿವಿಧ ಸಮುದಾಯಗಳಲ್ಲಿ ಯುವ ನಾಯಕರ ಅಗತ್ಯವಿದೆ. ಹಾಗಾಗಿ ಒಬಿಸಿ ಸಮುದಾಯಕ್ಕೆ ಸುನಿಲ್ ಕುಮಾರ್ ಅವರನ್ನು ನಾಯಕರನ್ನಾಗಿ ಬಿಂಬಿಸುವುದು ಸೂಕ್ತ ಎಂದು ಪಕ್ಷದ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.
ಸಮಾವೇಶದ ಕುರಿತು ಮಾಹಿತಿ ನೀಡಿದ ಸುನಿಲ್ ಕುಮಾರ್, ಕರ್ನಾಟಕದ ಬಿಜೆಪಿ ವತಿಯಿಂದ ಮುಂದಿನ 2 ತಿಂಗಳುಗಳಲ್ಲಿ ವಿವಿಧ ರೀತಿಯ ಜನಜಾಗೃತಿ ಸಮಾವೇಶಗಳನ್ನು ಬೇರೆಬೇರೆ ಭಾಗಗಳಲ್ಲಿ ನಡೆಸಲಾಗುತ್ತಿದೆ. ನವ ಭಾರತ ನಿರ್ಮಾಣಕ್ಕೆ ನವ ಕರ್ನಾಟಕದ ಸಿದ್ಧತೆ ಎಂಬ ಕಲ್ಪನೆಯೊಂದಿಗೆ ರಾಜ್ಯಾದ್ಯಂತ ಎಲ್ಲ ಸಮುದಾಯ- ಎಲ್ಲ ವ್ಯಕ್ತಿಗಳನ್ನು ಜೋಡಿಸುವ ಕಾರ್ಯ ನಡೆದಿದೆ. ಕೇಂದ್ರ- ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಹಿಂದುಳಿದ ವರ್ಗಗಳ ಚಟುವಟಿಕೆಗಳು- ಅಭಿವೃದ್ಧಿಗೆ ವಿಶೇಷ ಆದ್ಯತೆ ಕೊಟ್ಟಿವೆ. ಹಿಂದುಳಿದ ವರ್ಗಗಳ ಜಾತಿಗಳ ಆಯೋಗಕ್ಕೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಸಾಂವಿಧಾನಿಕ ಮಾನ್ಯತೆ ಕೊಟ್ಟಿದೆ. ಹಿಂದಿನ ಸರ್ಕಾರಗಳು ಈ ಕುರಿತು ಕೇವಲ ಮಾತನ್ನಷ್ಟೇ ಆಡಿದ್ದವು ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 250 ಕೋಟಿ ನೀಡಿದ್ದು, ಸಣ್ಣಸಣ್ಣ ಸಮುದಾಯಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಅವರನ್ನು ಮುಖ್ಯವಾಹಿನಿಗೆ ತರಲಾಗುತ್ತಿದೆ. ಹಾಸ್ಟೆಲ್‍ಗಳ ನಿರ್ಮಾಣ, ಶೈಕ್ಷಣಿಕ ಚಟುವಟಿಕೆಗೆ ಉತ್ತೇಜನ, ಗಂಗಾ ಕಲ್ಯಾಣ ಯೋಜನೆ ವಿಸ್ತರಣೆ ಮೂಲಕ ಈ ಸಮುದಾಯಗಳ ಕಲ್ಯಾಣಕ್ಕೆ ಶ್ರಮಿಸಲಾಗುತ್ತಿದೆ ಎಂದು ವಿವರಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಸುನಿಲ್ ಕುಮಾ, ಕೇವಲ ಹಿಂದುಳಿದ ವರ್ಗಗಳ ಧ್ವನಿ ಎಂದು ಭಾಷಣದಲ್ಲಷ್ಟೇ ಅವರು ತಿಳಿಸಿದ್ದರು. ಅದನ್ನು ಕಾರ್ಯರೂಪಕ್ಕೆ ತರಲಿಲ್ಲ ಎಂದು ಟೀಕಿಸಿದರು.
ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು ಮಾತನಾಡಿ, ರದ್ದೇವಾಡಗಿ ಬಡಾವಣೆಯಲ್ಲಿ ಸಮಾವೇಶ ನಡೆಯಲಿದ್ದು, 224 ಕ್ಷೇತ್ರ, 312 ಮಂಡಲಗಳಿಂದ ಜನರು ಭಾಗವಹಿಸಲಿದ್ದಾರೆ. 205 ಒಬಿಸಿ ಸಮುದಾಯಗಳ ಪ್ರಮುಖರನ್ನು ಆಹ್ವಾನಿಸಿದ್ದೇವೆ ಎಂದು ತಿಳಿಸಿದರು.
ಸಂಸದ ಪಿ.ಸಿ.ಮೋಹನ್ ಮಾತನಾಡಿ, ಮಾಜಿ ಸಚಿವ ಈಶ್ವರಪ್ಪ ಅವರ ನೇತೃತ್ವದಲ್ಲಿ 5 ತಂಡಗಳ ಪ್ರವಾಸ ನಡೆಸಲಾಗಿದೆ. ಕೇಂದ್ರದ ಬಿಜೆಪಿ ಸರ್ಕಾರದಿಂದ ವೈದ್ಯಕೀಯ ಸೀಟ್, ಪಿಜಿ ಸೀಟು, ವೈದ್ಯಕೀಯ ಕಾಲೇಜಿನ ಹೆಚ್ಚಳದಿಂದ ಒಬಿಸಿ ಸಮುದಾಯಕ್ಕೆ ಹೆಚ್ಚಿನ ಪ್ರಯೋಜನ ಸಿಕ್ಕಿದೆ ಎಂದು ತಿಳಿಸಿದರು. ಒಬಿಸಿ ಸಮಾವೇಶ ಕುರಿತ ಹಾಡನ್ನು ಬಿಡುಗಡೆ ಮಾಡಲಾಯಿತು. ವಿಶ್ವಕರ್ಮ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಾಬು ಪತ್ತಾರ್, ಬೆಂಗಳೂರು ಉತ್ತರ ಜಿಲ್ಲೆ ಒಬಿಸಿ ಮೋರ್ಚಾ ಅಧ್ಯಕ್ಷ ಶ್ರೀನಿವಾಸ್ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ | ನೆಲ-ಜಲ-ಆಕಾಶದಲ್ಲಿ ‘ಕೋಟಿ ಕಂಠ ಗಾಯನ’: ಸಚಿವ ವಿ. ಸುನಿಲ್ ಕುಮಾರ್ ಬಣ್ಣನೆ