Site icon Vistara News

ಹಳೆ ಮೈಸೂರು ಸಂಘಟನೆಗೆ ಮುಂದಾದ ಬಿಜೆಪಿ: ರಾಜ್ಯ ಪದಾಧಿಕಾರಿಗಳ ಸಭೆ ಆರಂಭ

bjp state office bearers meeting hassan

ಬೆಂಗಳೂರು: ರಾಜ್ಯದ ವಿವಿಧೆಡೆ ಸಂಘಟನೆ ಹಾಗೂ ಮತದಾರರನ್ನು ಹೊಂದಿದ್ದರೂ ಹಳೆ ಮೈಸೂರು ಭಾಗದಲ್ಲಿ ದುರ್ಬಲವಾಗಿರುವ ಬಿಜೆಪಿ ಇದೀಗ ವಿಶೇಷ ನಿಗಾ ವಹಿಸಿದೆ. ಒಂದೆರಡು ನಿದರ್ಶನ ಹೊರತುಪಡಿಸಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಎಂಬಂತಿರುವ ಹಾಸನದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಶನಿವಾರ ಆಯೋಜಿಸದೆ.

ಹಾಸನದ ಅಶೋಕ ಹೋಟೆಲ್‌ನಲ್ಲಿ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಆಯೋಜಿಸಲಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಶಾಸಕರು, ಸಂಸದರು, ಎಲ್ಲ ಜಿಲ್ಲಾಧ್ಯಕ್ಷರು ಸೇರಿ ಅನೇಕ ಪದಾಧಿಕಾರಿಗಳು ಭಾಗಿಯಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಹಾಸನ ಶಾಸಕ ಪ್ರೀತಂಗೌಡ ಮತ್ತಿತರರಿದ್ದಾರೆ.

ಹಾಸನದ ಮೇಲೆ ಕಣ್ಣು

ಹಳೆ ಮೈಸೂರು ಭಾಗದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಜೆಡಿಎಸ್‌ ಜಯಿಸಿತ್ತು. ಪಕ್ಷಾಂತರದ ನಂತರ ನಾರಾಯಣಗೌಡ ಬಿಜೆಪಿಯಿಂದ ಜಯಿಸಿದ್ದು, ಜಿಲ್ಲೆಯಲ್ಲಿ ಮೊದಲ ಬಿಜೆಪಿ ಶಾಸಕ ಎಂಬ ಹೆಗ್ಗಳಿಕೆ ಪಡೆದರು. ಮೈಸೂರಿನಲ್ಲಿ ಹಿಂದಿನಿಂದಲೂ ಕೆ.ಆರ್‌., ಚಾಮರಾಜ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಕೊಡಗಿನ ಎರಡೂ ಕ್ಷೇತ್ರಗಳು ಬಿಜೆಪಿ ತೆಕ್ಕೆಯಲ್ಲೇ ಇವೆ. ರಾಮನಗರ, ಬೆಂಗಳೂರು ಗ್ರಾಮಾಂತರದಲ್ಲಿ ಎರಡನೇ ಸ್ಥಾನಕ್ಕೆ ಪೈಪೋಟಿ ನಡೆಸುವಲ್ಲೇ ಇದೆ. ಹಾಸನದಲ್ಲಿ ಬಿ.ಬಿ. ಶಿವಪ್ಪ, ಹನುಮೇಗೌಡ ಅವರ ಕಾಲದಲ್ಲಿ ನಾಲ್ಕು ಶಾಸಕರನ್ನು ಹೊಂದಿದ್ದರೂ ನಂತರ ಶೂನ್ಯ ಗಳಿಸಸುತ್ತಿತ್ತು. 2018ರ ಚುನಾವಣೆಯಲ್ಲಿ ಪ್ರೀತಂ ಗೌಡ ಆಯ್ಕೆಯಾಗಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಅನೇಕ ವರ್ಷಗಳ ನಂತರ ಮೊದಲ ಬಾರಿಗೆ ಬಿಜೆಪಿ ಗೆದ್ದಿದೆ ಎನ್ನುವುದು ಒಂದೆಡೆಯಾದರೆ, ಜಿಲ್ಲಾ ಕೇಂದ್ರವನ್ನೇ ಕಳೆದುಕೊಂಡ ಆಕ್ರೋಶದಲ್ಲಿ ಜೆಡಿಎಸ್‌ ಪಕ್ಷವಿದೆ. ಹಾಸನದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದರೂ, ಇಂಜಿನಿಯರಿಂಗ್‌ ಕಾಲೇಜು, ಮೆಡಿಕಲ್‌ ಕಾಲೇಜು ಸ್ಥಾಪಿಸಿದರೂ ಸೋತಿದ್ದೇವೆ ಎಂಬ ನಿರಾಸೆ, ಹಾಸನ ಜೆಡಿಎಸ್‌ ಮಟ್ಟಿಗೆ ಹೈಕಮಾಂಡ್‌ ಎಂಬಂತಿರುವ ಎಚ್‌.ಡಿ. ರೇವಣ್ಣ ಅವರನ್ನು ಕಾಡುತ್ತಿದೆ. ಹೇಗಾದರೂ ಮಾಡಿ ಹಾಸನ ಕ್ಷೇತ್ರವನ್ನು ಮರಳಿ ಪಡೆಯಬೇಕು ಎಂದು ಸತತ ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ | ಹಾಸನದಲ್ಲಿ ಬಿಜೆಪಿ ಬಲವರ್ಧನೆಗೆ ಒತ್ತು: ಉಸ್ತುವಾರಿ ಸಚಿವ ಗೋಪಾಲಯ್ಯ ಹೇಳಿಕೆ

ಹಾಸನದ ಜತೆಗೆ ಜಿಲ್ಲೆಯಲ್ಲಿ ಬಿಜೆಪಿಯನ್ನು ವಿಸ್ತರಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಒಕ್ಕಲಿಗ ಸಮುದಾಯದವರೇ ಹಾಗೂ ಜೆಡಿಎಸ್‌ ಹಿನ್ನೆಲೆಯನ್ನೇ ಹೊಂದಿರುವ ಕೆ. ಗೋಪಾಲಯ್ಯ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಿಸಿದೆ. ಉಳಿದಂತೆ ಮೈಸೂರು, ಮಂಡ್ಯಕ್ಕೂ ಒಕ್ಕಲಿಗ ಸಚಿವರನ್ನೇ ಉಸ್ತುವಾರಿಯಾಗಿ ನೇಮಿಸಲಾಗಿದೆ.

ಹಾಸನದಲ್ಲಿ ನಡೆಯುತ್ತಿರುವ ಪದಾಧಿಕಾರಿಗಳ ಸಭೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಕುರಿತು ವಿಶೇಷ ಚರ್ಚೆ ನಡೆಯಲಿದೆ. ಸಭೆಯಲ್ಲಿ ನಡೆಯುವ ಚರ್ಚೆ ಜತೆಗೆ, ಈ ಭಾಗದ ಕಾರ್ಯಕರ್ತರು ಹಾಗೂ ಜನಸಾಮಾನ್ಯರ ಮನಸ್ಸಿನಲ್ಲಿ ಪಕ್ಷದ ಕುರಿತು ಭರವಸೆಯನ್ನು ಮೂಡಿಸುವ ಪ್ರಯತ್ನ ನಡೆಯುತ್ತದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ವಿಚಾರಗಳ ಚರ್ಚೆ

ಹಳೆ ಮೈಸೂರು ಭಾಗದ ಜತೆಗೆ ಒಟ್ಟಾರೆ ರಾಜ್ಯ ಸಂಘಟನೆ ಕುರಿತು ಅನೇಕ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಇತ್ತೀಚೆಗೆ ಪ್ರತಿಪಕ್ಷಗಳು ಚರ್ಚೆಗೆ ತೆಗೆದುಕೊಳ್ಳುತ್ತಿರುವ ಪ್ರಶ್ನೆಗಳು, ಅದಕ್ಕೆ ಪಕ್ಷದ ಕಡೆಯಿಂದ ನೀಡಲಾಗುತ್ತಿರುವ ಉತ್ತರದ ಪರಾಮರ್ಶೆ ನಡೆಯಲಿದೆ. ಪಕ್ಷದ ನಿಲುವನ್ನು ಕಾರ್ಯಕರ್ತರ ನಡುವೆ ಸಮರ್ಥನೆ ಮಾಡಿಕೊಳ್ಳುವ ಕುರಿತು ರಾಜ್ಯ ನಾಯಕರು ಮಾರ್ಗದರ್ಶನ ನೀಡಲಿದ್ದಾರೆ. ಸ್ಥಳೀಯವಾಗಿ ಇರುವ ಸಮಸ್ಯೆಗಳು ಹಾಗೂ ಅವುಗಳ ಪರಿಹಾರಕ್ಕೆ ಸೂಚನೆ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ | ಪ್ರಶಾಂತ್‌ ಹತ್ಯೆ ಪ್ರಕರಣ: ರೇವಣ್ಣ ಹಾಗೂ ಪ್ರೀತಂ ನಡುವೆ ವಾರ್‌

Exit mobile version