Site icon Vistara News

Operation Kamala : ಮತ್ತೆ ಆಪರೇಷನ್‌ ಕಮಲ ಸದ್ದು, ಜೂನ್‌ನಲ್ಲಿ ಉರುಳುತ್ತಾ ಸರ್ಕಾರ? ನನಗೂ ಗೊತ್ತು ಎಂದ ಡಿಕೆಶಿ

DK Shivakumar ramesh Jarakiholi Sathish Jarakiholi

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಆಪರೇಷನ್‌ ಕಮಲ (Operation Kamala) ಸದ್ದು ಜೋರಾಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಸರ್ಕಾರ ಗ್ಯಾರಂಟಿಗಳ ಹಿಂದೆ ಬಿದ್ದು ಶಾಸಕರ ಅನುದಾನ ಮತ್ತು ಅಭಿವೃದ್ಧಿಯನ್ನು ಮರೆತಿರುವುದನ್ನು ಮುಂದಿಟ್ಟುಕೊಂಡು ಶಾಸಕರನ್ನು ಸೆಳೆಯುವ ದೊಡ್ಡ ಪ್ಲ್ಯಾನ್‌ ಒಂದು ನಡೆಯುತ್ತಿದೆ ಎನ್ನಲಾಗಿದೆ. ಈ ರೀತಿಯ ಆಟದ ಬಗ್ಗೆ ತಮಗೂ ಅರಿವಿದೆ ಎಂದು ಸ್ವತಃ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಅವರು ಕೂಡಾ ಹೇಳಿದ್ದಾರೆ.

ಆಪರೇಷನ್‌ ಕಮಲಕ್ಕಾಗಿ ಬಿಜೆಪಿಯಲ್ಲಿ ಮೂರು ಟೀಮ್‌ ರೆಡಿ ಆಗಿದೆ ಎನ್ನಲಾಗಿದೆ. ಅದಕ್ಕೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ ಕೂಡಾ ಸಾಥ್‌ ನೀಡುತ್ತಿದೆ. ಈ ಪ್ಲ್ಯಾನ್‌ ವರ್ಕೌಟ್‌ ಆದರೆ 2024ರ ಲೋಕಸಭಾ ಚುನಾವಣೆಯ (Parliament Elections 2024) ಬಳಿಕ ಅಂದರೆ ಜೂನ್‌ ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ.

ಬಿಜೆಪಿಯ ಹಿರಿಯ ನಾಯಕ ಅಮಿತ್‌ ಶಾ ಅವರೇ ಈ ಅಪರೇಷನ್‌ನ ಸಾರಥಿ ಎಂದು ಹೇಳಲಾಗುತ್ತಿದೆ. ಅವರಿಗೆ ಸಾಥ್‌ ನೀಡುತ್ತಿರುವುದು ಕಳೆದ ಬಾರಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಪತನ ಮಾಡಿದ್ದ ಅದೇ ರಮೇಶ್‌ ಜಾರಕಿಹೊಳಿ ಮತ್ತು ಸಿ.ಪಿ. ಯೋಗೀಶ್ವರ್‌ ಎನ್ನಲಾಗಿದೆ. ರಮೇಶ್‌ ಜಾರಕಿಹೊಳಿ ಅವರು ಎರಡು ದಿನದ ಹಿಂದೆ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರನ್ನು ಭೇಟಿ ಮಾಡಿ ಮಾತನಾಡಿದ್ದರ ಹಿಂದೆಯೂ ಇದೇ ಆಪರೇಷನ್‌ನ ಕಾರಸ್ಥಾನವಿದೆ ಎನ್ನಲಾಗಿದೆ.

ರಮೇಶ್‌ ಜಾರಕಿಹೊಳಿ ಅವರು ಜಗದೀಶ್‌ ಶೆಟ್ಟರ್‌ ಅವರ ಜತೆ ಘರ್‌ ವಾಪ್ಸಿ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಶೆಟ್ಟರ್‌ ಅವರನ್ನೂ ಕೂಡಿಸಿಕೊಂಡು ಕಿತ್ತೂರು ಹಾಗೂ ಹೈದ್ರಬಾದ್‌ ಕರ್ನಾಟಕದ ಶಾಸಕರನ್ನು ಟಾರ್ಗೆಟ್‌‌ ಮಾಡುವುದು ಒಂದು ಪ್ಲ್ಯಾನ್‌ ಎನ್ನಲಾಗಿದೆ. ಈಗ ಸರ್ಕಾರದ ವಿರುದ್ಧ ಮಾತನಾಡುತ್ತಿರುವ ಶಾಸಕರನ್ನು ಸೇರಿಸಕೊಂಡು ಒಟ್ಟು 35 ಶಾಸಕರನ್ನು ಸೆಳೆಯುವ ಪ್ಲ್ಯಾನ್‌ ಇದಾಗಿದೆ.

ಸಿದ್ದರಾಮಯ್ಯ, ಡಿ.ಕೆ.ಶಿಗೂ ಮಾಹಿತಿ ನೀಡಿದ ಶಾಸಕರು

ಕಿತ್ತೂರು ಮತ್ತು ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಶಾಸಕರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಶಾಸಕರ ಅನುದಾನದ ಸಮಸ್ಯೆ ಬಗೆಹರಿಸದಿದ್ದರೆ ಅದುವೇ ಪಕ್ಷಕ್ಕೆ ಮುಳುವಾಗಬಹುದು ಎಂಬ ಎಚ್ಚರಿಕೆಯನ್ನೂ ಇದೇ ಸಂದರ್ಭದಲ್ಲಿ ನೀಡಲಾಗಿದೆ ಎನ್ನಲಾಗಿದೆ. ಮೊದಲು ಶಾಸಕರನ್ನು ಕರೆದು ಮಾತನಾಡಿ ಎಂದು ಸಲಹೆ ನೀಡಲಾಗಿದೆ ಎನ್ನಲಾಗುತ್ತಿದೆ.

ಇದೇ ವಿಚಾರವನ್ನು ಸತೀಶ್‌ ಜಾರಕಿಹೊಳಿ ಅವರು ಕೂಡಾ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದಾರೆ. ಎರಡೇ ದಿನಗಳ ಹಿಂದೆ ಸತೀಶ್‌ ಜಾರಕಿಹೊಳಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲೂ ಈ ವಿಚಾರವೇ ಪ್ರಧಾನವಾಗಿ ಚರ್ಚೆಯಾಗಿದೆ. ಸತೀಶ್‌ ಜಾರಕಿಹೊಳಿ ಅವರು ತಮ್ಮ ಟೀಮನ್ನು ಮೈಸೂರಿಗೆ ಕರೆದುಕೊಂಡು ಹೋಗಲು ಮುಂದಾಗಿದ್ದರ ಹಿಂದೆ ಕೂಡಾ ಇದೇ ವಿಚಾರವಿದೆ ಎನ್ನಲಾಗಿದೆ. ಇದರ ನಡುವೆ ಸತೀಶ್‌ ಜಾರಕಿಹೊಳಿ ಅವರು ಕೂಡಾ ಆಪರೇಷನ್‌ಗೆ ಬಲಿಯಾಗಬಹುದಾ ಎಂಬ ಚರ್ಚೆಯೂ ಹುಟ್ಟಿಕೊಂಡಿದೆ.

ನನಗೆ ಗೊತ್ತಿದ ಎಂದ ಡಿ.ಕೆ ಶಿವಕುಮಾರ್‌

ʻʻರಮೇಶ್‌ ಜಾರಕಿಹೊಳಿ ಮತ್ತು ಜಗದೀಶ್‌ ಶೆಟ್ಟರ್‌ ಅವ ನಡುವಿನ ಮಾತುಕತೆ ವಿಚಾರದಲ್ಲಿ ನಾನು ಅನುಮಾನ ಪಡಲು ಹೋಗುವುದಿಲ್ಲ. ಬಿಜೆಪಿಯವರು ತುಂಬ ಹತಾಶೆಯಲ್ಲಿದ್ದಾರೆ. ಜಗದೀಶ್‌ ಶೆಟ್ಟರ್‌ ಅವರು ತಮ್ಮ ಶಕ್ತಿ ಏನು ಎನ್ನುವುದು ಆಗಲೇ ಪ್ರೂವ್‌ ಆಗಿದೆ.ʼʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ʻʻಬಿಜೆಪಿಯಲ್ಲಿ ಆಪರೇಷನ್‌ ಮಾಡಲು ಒಂದು ಟೀಮ್ ಆಕ್ಟೀವ್ ಆಗಿರುವುದು ನನಗೆ ಗೊತ್ತಿದೆ. ಅವರು ತಮ್ಮನ್ನು ಭೇಟಿಯಾಗಿರುವ ಬಗ್ಗೆ ಹಲವು ಶಾಸಕರು ನನಗೆ ಮತ್ತು ಸಿಎಂಗೆ ಹೇಳ್ತಿದ್ದಾರೆ. ಏನು ಆಫರ್ ಮಾಡ್ತಿದ್ದಾರೆ ಅನ್ನೋದನ್ನೂ ಹೇಳಿದ್ದಾರೆ. ಅಸೆಂಬ್ಲಿ ನಡೆಯಲಿ, ಯಾರೆಲ್ಲಾ ಮಾತನಾಡಲಿದ್ದಾರೆ. ಎಲ್ಲವನ್ನೂ ಅಲ್ಲಿಯೇ ಮಾತಾಡ್ತೀನಿʼʼ ಎಂದು ಹೇಳಿದರು.

ಆಪರೇಷನ್‌ ಮಾಡುವ ಯೋಜನೆ ಇಲ್ಲ ಎಂದ ಅಶ್ವಥ್‌ನಾರಾಯಣ್‌

ಈ ನಡುವೆ ಆಪರೇಷನ್‌ ಕಮಲದ ಸಾಧ್ಯತೆಗಳನ್ನು ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್‌ ಅಲ್ಲಗಳೆದಿದ್ದಾರೆ.

ʻಐದು ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಜನ ಬಹುಮತ ನೀಡಿದ್ದಾರೆ. ಬಿಜೆಪಿಯಿಂದ ಆಪರೇಷನ್ ಮಾಡುವ ಯಾವುದೇ ಆಲೋಚನೆ ಇಲ್ಲ. 135 ಶಾಸಕರಿರೋ ಕಾಂಗ್ರೆಸ್ ಪಕ್ಷವನ್ನು ಆಪರೇಷನ್‌ನಿಂದ ಬೀಳಿಸೋದು ಸಾಧ್ಯಾನಾ ಅಂತ ನೀವೇ ಲೆಕ್ಕಾಚಾರ ಮಾಡಿ ನೋಡಿʼʼ ಎಂದು ಹೇಳಿರುವ ಅಶ್ವಥ್‌ ನಾರಾಯಣ ಅವರು ಒಂದು ವೇಳೆ ಬಿದ್ದರೆ ಅವರಲ್ಲಿ ಇರೋ ಗುಂಪುಗಳಿಂದ ಸರ್ಕಾರ ಬೀಳಬೇಕಷ್ಟೇ ಎಂದರು.

ʻʻಸತೀಶ್ ಜಾರಕಿಹೊಳಿ, ಡಿಕೆಶಿ ಅವರೇ ಯಾರ್ಯಾರನ್ನೋ ಕರೆದುಕೊಂಡು ಹೋಗ್ತಿದ್ದಾರಲ್ಲ. ಹೊರಗಿನಿಂದ ಯಾರೂ ಸರ್ಕಾರ ಬೀಳಿಸುವುದಿಲ್ಲ. ಬಿದ್ರೆ ಒಳ ಜಗಳದಲ್ಲೇ ಬೀಳಬೇಕುʼʼ ಎಂದು ಹೇಳಿದ ಅವರು, ನಾಲ್ಕು ಡಿಸಿಎಂ ಮಾಡಿ, ಅಭಿವೃದ್ಧಿಗೆ ಹಣ ಕೊಟ್ಟಿಲ್ಲ, ಅನುದಾನ ಕೊಡಿ ಎಂದೆಲ್ಲ ಕಿತ್ತಾಡಿಕೊಳ್ಳುತ್ತಿದ್ದಾರೆ. ಆದರೆ, ಡಿಕೆಶಿ ಅವರು ನುರಿತ ರಾಜಕಾರಣಿಯಂತೆ ಎಲ್ಲ ವಿಷಯಗಳನ್ನು ಡೈವರ್ಟ್‌ ಮಾಡುತ್ತಾರೆ ಎಂದು ಹೇಳಿದರು.

ʻʻ135 ಜನ ಶಾಸಕರು ಇರುವಾಗ ಆಪರೇಷನ್ ಮಾಡಲು ಸಾಧ್ಯವಾ.? ಸುಮ್ಮನೆ ದಿಕ್ಕು ತಪ್ಪಿಸೋ ಕೆಲಸ ಮಾಡ್ತಿದ್ದಾರೆ. ಬಿಜೆಪಿ ಮೇಲೆ ಗೂಬೆ ಕೂರಿಸ್ತಿದ್ದಾರೆʼʼ ಎಂದು ಹೇಳಿದರು ಅಶ್ವಥ್‌ನಾರಾಯಣ್‌.

ಬಣ ಜಗಳದಿಂದ ತಮ್ಮ ಗುಂಡಿ ತಾವೇ ತೋಡಿಕೊಳ್ಳುತ್ತಿದ್ದಾರೆ

ʻʻಅವರವರ ಗುಂಡಿ, ಅವರೇ ತೋಡಿಕೊಳ್ತಿದ್ದಾರೆ. ಅವರ ಪಕ್ಷದ ಶಾಸಕರೇ ಗುಂಡಿ ತೋಡಿಕೊಳ್ತಿದ್ದಾರೆ. ಸಿದ್ದರಾಮಯ್ಯ ಬಣ, ಡಿಕೆಶಿ ಬಣ, ಸತೀಶ್ ಜಾರಕಿಹೊಳಿ ಬಣ ಎಂದು ಹೇಳುತ್ತಾ ಅವರವರೇ ಒಳ ಜಗಳ ಮಾಡಿಕೊಳ್ತಿದ್ದಾರೆʼʼ ಎಂದು ಅಶ್ವಥ್‌ನಾರಾಯಣ್‌ ಹೇಳಿದರು.

Exit mobile version