Site icon Vistara News

BJP Politics : ಪಕ್ಷ ವಿರೋಧಿ ಚಟುವಟಿಕೆ ; ವಿಜಯೇಂದ್ರ ಆಪ್ತ ರುದ್ರೇಶ್‌ಗೆ ಬಿಜೆಪಿ ನೋಟಿಸ್‌

Somanna rudresh Vijayendra

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯ ನಾಯಕರು (BJP Politics) ಬಹಿರಂಗವಾಗಿ ಮಾತನಾಡುತ್ತಿರುವ ಹಿನ್ನೆಲೆಯಲ್ಲಿ ಶುರುವಾಗಿರುವ ನೋಟಿಸ್‌ ಪಾಲಿಟಿಕ್ಸ್‌ (Disciplinery Notice) ಮುಂದುವರಿದಿದೆ. ಕೆಲವು ದಿನಗಳ ಹಿಂದೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ (MP Renukacharya) ಅವರಿಗೆ ಬಹಿರಂಗವಾಗಿ ನೋಟಿಸ್‌ ನೀಡಿದ್ದ ರಾಜ್ಯ ಬಿಜೆಪಿಯ ಶಿಸ್ತು ಸಮಿತಿ ಇದೀಗ ರಾಮನಗರದ ಬಿಜೆಪಿ ಮುಖಂಡ ಎಂ. ರುದ್ರೇಶ್‌ (M Rudresh) ಅವರಿಗೆ ನೋಟಿಸ್‌ ಜಾರಿ ಮಾಡಿದೆ.

ರಾಮನಗರ ಬಿಜೆಪಿ ಮುಖಂಡರಾಗಿರುವ ರುದ್ರೇಶ್ ಅವರಿಗೆ ಬಿಜೆಪಿ ರಾಜ್ಯ ಶಿಸ್ತು ಸಮಿತಿ. ಎರಡು ದಿನಗಳ ಹಿಂದೆ ನೊಟೀಸ್ ಜಾರಿ ಮಾಡಿದೆ. ವಿಧಾನಸಭೆ ಚುನಾವಣೆ ವೇಳೆ ಮಾಜಿ ಸಚಿವ ವಿ. ಸೋಮಣ್ಣ ಅವರ ವಿರುದ್ಧ ಎಂ ರುದ್ರೇಶ್‌ ಪತ್ರಿಕಾಗೋಷ್ಠಿ ನಡೆಸಿದ್ದರು.

ರುದ್ರೇಶ್‌ ಅವರು ಚಾಮರಾಜನಗರ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿ ಹೈಕಮಾಂಡ್‌ ಸೋಮಣ್ಣ ಅವರಿಗೆ ಚಾಮರಾಜನಗರದ ಟಿಕೆಟ್‌ ನೀಡಿತ್ತು. ಜತೆಗೆ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ವರುಣ ಕ್ಷೇತದಲ್ಲೂ ಕಣಕ್ಕಿಳಿಯುವಂತೆ ಸೂಚನೆ ನೀಡಿತ್ತು. ಗೋವಿಂದರಾಜ ನಗರದ ಶಾಸಕರಾಗಿದ್ದ ವಿ. ಸೋಮಣ್ಣ ಅವರು ಎರಡೂ ಕ್ಷೇತ್ರಗಳನ್ನು ಒಲ್ಲದ ಮನಸಿನಿಂದಲೇ ಸ್ವೀಕರಿಸಿದ್ದರು. ಒಂದೊಮ್ಮೆ ಗೋವಿಂದರಾಜನಗರದಲ್ಲಿ ತಮ್ಮ ಮಗನಿಗೆ ಟಿಕೆಟ್‌ ಕೊಟ್ಟರೆ ತಮಗೆ ಚಾಮರಾಜ ನಗರದಲ್ಲಿ ಇರಲಿ ಎಂಬ ಮನಸು ಅವರಿಗೆ ಇತ್ತು. ಆದರೆ ಮಗನಿಗೂ ಇಲ್ಲ, ಗೋವಿಂದ ರಾಜ ನಗರವೂ ಇಲ್ಲ ಎಂಬ ಪರಿಸ್ಥಿತಿಯಲ್ಲಿ ಚಾಮರಾಜ ನಗರವನ್ನು ಒಪ್ಪಿಕೊಂಡಿದ್ದರು.

ಆದರೆ, ಚಾಮರಾಜ ನಗರದ ಮೇಲೆ ಕಣ್ಣಿಟ್ಟಿದ್ದ ರುದ್ರೇಶ್‌ ಇದರಿಂದ ಕೆರಳಿದ್ದರು. ಚಾಮರಾಜನಗರದಲ್ಲಿ ಪತ್ರಿಕಾಗೋಷ್ಠಿ ಮಾಡಿ ಸೋಮಣ್ಣ ವಿರುದ್ಧ ವಾಗ್ದಾಳಿ ಮಾಡಿದ್ದರು. ಈ ರೀತಿ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದ ರುದ್ರೇಶ್‌ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಪಕ್ಷದ ವೇದಿಕೆಯಲ್ಲಿ ಪ್ರಶ್ನೆ ಮಾಡಿದ್ದರು.

ಇದೀಗ ಬಿಜೆಪಿಯ ಶಿಸ್ತು ಸಮಿತಿ ರುದ್ರೇಶ್‌ ಅವರಿಗೆ ಕಾರಣ ಕೇಳಿ ನೋಟಿಸ್‌ ನೀಡಿದೆ. ಒಂದು ವಾರದೊಳಗೆ ಉತ್ತರ ನೀಡುವಂತೆ ಸೂಚನೆ ನೀಡಿದೆ.

ರುದ್ರೇಶ್ ಅವರು ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರ ಆಪ್ತರಾಗಿದ್ದು ಕೆ.ಆರ್‌ಡಿಸಿಎಲ್‌ ಅಧ್ಯಕ್ಷರೂ ಆಗಿದ್ದರು. ಸೋಮಣ್ಣ ಮತ್ತು ಯಡಿಯೂರಪ್ಪ ಅವರ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಎಂಬಂತಾಗಿತ್ತು. ಈ ಪರಿಸ್ಥಿತಿಯಲ್ಲಿ ರುದ್ರೇಶ್‌ ವಾಗ್ದಾಳಿ ನಡೆಸಿದ್ದು ಬೇರೆ ಬೇರೆ ಸಂದೇಶಗಳನ್ನು ನೀಡಿತ್ತು. ಅಂತಿಮವಾಗಿ ಸೋಮಣ್ಣ ಅವರು ಚಾಮರಾಜ ನಗರ ಕ್ಷೇತ್ರದಲ್ಲಿ ರುದ್ರೇಶ್‌ ಅವರು ಕಾಂಗ್ರೆಸ್‌ಗೆ ಸಹಕಾರ ನೀಡಿ ಸೋಮಣ್ಣ ಅವರನ್ನು ಸೋಲಿಸಿದರು ಎಂಬ ಆಪಾದನೆಗಳೂ ಕೇಳಿಬಂದಿದ್ದವು.

ಇದನ್ನೂ ಓದಿ: MP Renukacharya : ಶಿಸ್ತು ಸಮಿತಿ ನೋಟಿಸ್‌ಗೆ ಉತ್ತರ ಕೊಡಲ್ಲ, ಬಿಜೆಪಿ ಬಿಡಲ್ಲ; ರೇಣುಕಾಚಾರ್ಯ ಸವಾಲು

12 ಜನರಿಗೆ ನೋಟಿಸ್‌ ನೀಡಲಾಯಿತೇ?

ಈ ನಡುವೆ ರಾಜ್ಯದಲ್ಲಿ ಚುನಾವಣೆಯ ಬಳಿಕ ನಾಯಕರ ವಿರುದ್ಧ ಬಹಿರಂಗವಾಗಿ ಮಾತನಾಡುವ ಮುಖಂಡರಲ್ಲಿ ಹಲವರಿಗೆ ನೋಟಿಸ್‌ ನೀಡಲಾಗಿದೆ. ಕೆಲವು ದಿನಗಳ ಹಿಂದೆ ಸಂಸದ ಪ್ರತಾಪ್‌ಸಿಂಹ ಸೇರಿದಂತೆ ಸುಮಾರು 10 ನಾಯಕರನ್ನು ಕರೆಸಿಕೊಂಡು ಎಚ್ಚರಿಕೆಯನ್ನು ನೀಡಲಾಗಿದೆ. ಆದರೆ ಈ ಹತ್ತು ಜನರಿಗೆ ಶಿಸ್ತು ಸಮಿತಿ ನೋಟಿಸ್‌ ನೀಡಿತ್ತೇ? ಸುಮ್ಮನೆ ಕರೆದು ಮಾತನಾಡಿಸಲಾಯಿತೇ ಎನ್ನುವುದು ಸ್ಪಷ್ಟವಿಲ್ಲ.

ಆದರೆ, ಶಿಸ್ತು ಸಮಿತಿಯಿಂದ ಬಹಿರಂಗ ನೋಟಿಸ್‌ ಪಡೆದ ಎಂ.ಪಿ. ರೇಣುಕಾಚಾರ್ಯ ಮಾತ್ರ, ತನಗೆ ಮಾತ್ರ ಯಾಕೆ ಬಹಿರಂಗ ನೋಟಿಸ್‌ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇದರ ಜತೆಗೆ ತಾವು ಯಾವ ನೋಟಿಸ್‌ಗೂ ಉತ್ತರ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೀಗ ಮತ್ತೊಬ್ಬ ಬಿ.ಎಸ್‌.ವೈ ಆಪ್ತರಿಗೆ ನೋಟಿಸ್‌ ನೀಡಿದಂತಾಗಿದ್ದು, ಇದು ಯಾವ ರೀತಿಯ ರಾಜಕೀಯ ಚರ್ಚೆ ಹುಟ್ಟು ಹಾಕುತ್ತದೆ ಎಂದು ಕಾದು ನೋಡಬೇಕಾಗಿದೆ.

Exit mobile version