ಮೈಸೂರು/ಬೆಂಗಳೂರು: ಕೆಲವು ದಿನಗಳ ಹಿಂದೆ ಹೊಂದಾಣಿಕೆ ರಾಜಕೀಯದಿಂದ (Adjustment Politics) ರಾಜ್ಯದಲ್ಲಿ ಬಿಜೆಪಿಗೆ ಸೋಲಾಯಿತು (BJP Politics) ಎಂದು ನೇರ ಆರೋಪ ಮಾಡಿದ್ದ ಮೈಸೂರು ಸಂಸದ ಪ್ರತಾಪ್‌ಸಿಂಹ (MP Pratapsimha) ಇದೀಗ ಮತ್ತೊಮ್ಮೆ ತಮ್ಮ ಪ್ರತಾಪ ತೋರಿಸಿದ್ದಾರೆ. ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja bommai) ಅವರನ್ನೇ ನೇರವಾಗಿ ಟಾರ್ಗೆಟ್ ಮಾಡಿ ಮಾತನಾಡಿದಂತೆ ಕಂಡುಬಂತು. ಇದನ್ನು ಚೆನ್ನಾಗಿಯೇ ಗ್ರಹಿಸಿದ ಕಾಂಗ್ರೆಸ್ ಕೂಡಾ ʻʻಜೋಶಿ, ಸಂತೋಷ್ ಅವರು ಪ್ರತಾಪ್ ಸಿಂಹ ಹೆಗಲ ಮೇಲೆ ಗನ್ನಿಟ್ಟು ಬೊಮ್ಮಾಯಿ ಎದೆಗೇ ಗುಂಡಿಟ್ಟಿದ್ದಾರೆʼʼ ಎಂದು ವ್ಯಾಖ್ಯಾನಿಸಿದೆ.
ಕಳೆದ ವಾರ ಪ್ರತಾಪಸಿಂಹ ನೀಡಿದ್ದ ಹೊಂದಾಣಿಕೆ ರಾಜಕೀಯದ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಕೂಡಾ ಧ್ವನಿಗೂಡಿಸಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕರೂ ಪ್ರತಿಕ್ರಿಯೆ ನೀಡಿ, ಇಂಥ ಬೀಸು ಹೇಳಿಕೆಯ ಬದಲು ಧಮ್ಮಿದ್ರೆ ಹೊಂದಾಣಿಕೆ ಮಾಡಿಕೊಂಡವರು ಯಾರು ಎನ್ನುವುದನ್ನು ನೇರವಾಗಿ ಹೇಳಿ, ಹೆಸರು ಹೇಳಿ ಎಂದು ಸವಾಲು ಹಾಕಿದ್ದರು.
ಈ ನಡುವೆ, ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮತ್ತೊಮ್ಮೆ ಈ ವಿಚಾರ ಎತ್ತಿದ ಪ್ರತಾಪಸಿಂಹ ಹೊಂದಾಣಿಕೆ ರಾಜಕೀಯ ಮಾಡಿದ್ದು ಯಾರು ಎನ್ನುವ ವಿಚಾರದಲ್ಲಿ ಪರೋಕ್ಷ ಸುಳಿವನ್ನು ಬಿಟ್ಟುಕೊಟ್ಟರು. ಬಿಎಸ್ ಯಡಿಯೂರಪ್ಪ ಅವರಿಗೆ ಹೋಲಿಕೆ ಮಾಡಿ ನಂತರ ಬಂದವರು, ನಂತರ ಬಂದವರು ಎಂದು ಪದೇಪದೆ ಹೇಳುವ ಮೂಲಕ ತನ್ನ ಟಾರ್ಗೆಟ್ ಬಸವರಾಜ ಬೊಮ್ಮಾಯಿ ಎಂದು ಪರೋಕ್ಷವಾಗಿ ಹೇಳಿದರು.
ಪ್ರತಾಪ್‌ಸಿಂಹ ಶುಕ್ರವಾರ ಹೇಳಿದ್ದೇನು?
ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಶಿವಮೊಗ್ಗದ ಹಿಂದು ಕಾರ್ಯಕರ್ತ ಹರ್ಷ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಠಿಣ ಕ್ರಮವನ್ನು ಕೈಗೊಳ್ಳಲಿಲ್ಲ ಎಂದು ಆಕ್ಷೇಪಿಸಿದರು.
ಪಕ್ಷದ ಕಾರ್ಯಕರ್ತರ ಹಿತರಕ್ಷಣೆ, ಬಿಜೆಪಿ ಬಗ್ಗೆ ಒಲವಿಗೆ ಸಂಬಂಧಿಸಿ ಬಿಎಸ್‌ವೈಗೆ ಇದ್ದ ಛಲ ಉಳಿದ ನಾಯಕರಿಗೆ ಇರಲಿಲ್ಲ. ಬಿಎಸ್‌ವೈ ನಂತರ ಬಂದ ಮಹಾನ್ ನಾಯಕರಿಗೆ ಯಾವ ಛಲವೂ ಇರಲಿಲ್ಲ ಎಂದು ಹೇಳುವ ಮೂಲಕ ಬೊಮ್ಮಾಯಿಯನ್ನೇ ಪ್ರತಾಪ್ ಟಾರ್ಗೆಟ್ ಮಾಡಿದರು
ʻʻಬಿಎಸ್‌ವೈ ಅವರು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಮಾತುಗಳು ಹೇಳುತ್ತಿದ್ದರು. ಬಿಎಸ್‌ವೈ ಹೇಳಿದಷ್ಟು ದೃಢವಾಗಿದೆ ಉಳಿದ ನಾಯಕರು ಮಾತಾಡಲಿಲ್ಲ. ಇದೇ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರಿಗೆ ಬೇಸರವಾಗಿದೆʼʼ ಎಂದು ಪ್ರತಾಪ್‌ಸಿಂಹ ಹೇಳಿದರು.
ʻʻನಾನು ಅಧಿಕಾರಕ್ಕಾಗಿ ಅಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳುವುದಿಲ್ಲ. ನನಗೆ ನನ್ನ ಭವಿಷ್ಯದ ಬಗ್ಗೆ ಆಸೆ ಇಲ್ಲ, ಸದ್ಯದ ಚಿಂತೆ ಇಲ್ಲ. ಬಿಜೆಪಿ ಕಾರ್ಯಕರ್ತರು ನನ್ನ ಬಳಿ ಅಳಲು ತೋಡಿಕೊಳ್ತಾರೆ. ಕಾರ್ಯಕರ್ತರ ಅಳಲನ್ನು ನಾನು ಹೇಳಿಕೊಂಡಿದ್ದೇನೆʼʼ ಎಂದು ಹೇಳಿದ ಪ್ರತಾಪ್ ಸಿಂಹ ಅವರು, ನಮ್ಮ ಹೈಕಮಾಂಡ್ ಸ್ಟ್ರಾಂಗ್ ಇದೆ. ವಿಪಕ್ಷ ನಾಯಕರ ಆಯ್ಕೆ ವೇಳೆ ಉತ್ತಮ ನಿರ್ಧಾರ ಮಾಡುತ್ತದೆ ಎಂದರು.
ವಿಪಕ್ಷ ನಾಯಕನ ಆಯ್ಕೆಯ ಪ್ರಸ್ತಾಪವನ್ನೂ ಮಾಡುವ ಮೂಲಕ ಅದನ್ನು ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದರೆ ಪಕ್ಷಕ್ಕೆ ಹಾನಿಯಾಗುವುದೇ ಹೊರತು ಲಾಭವಿಲ್ಲ ಎನ್ನುವ ಸಂದೇಶವನ್ನೂ ಅವರು ರವಾನಿಸಿದ್ದಾರೆ.
ಪ್ರತಾಪ್ ಸಿಂಹ ಗರ್ಜನೆ ಹೇಗಿತ್ತು ಕೇಳಿ…
ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿತ್ತು
ಮುಖ್ಯಮಂತ್ರಿಯಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿತ್ತು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದರು.
ʻʻಯಡಿಯೂರಪ್ಪ ದೊಡ್ಡ ಪ್ರಯತ್ನ ಮಾಡಿ ಸರ್ಕಾರ ತಂದರು. ಯಡಿಯೂರಪ್ಪ ಸಿಎಂ ಆದ ಕೂಡಲೇ ಮಳೆ ಹೆಚ್ಚಾಗಿ ಪ್ರವಾಹ ಬಂತು. ಆ ಪರಿಸ್ಥಿತಿಯನ್ನು ಒಬ್ಬರೇ ನಿಭಾಯಿಸಿದರು. ನಂತರ ಕೋವಿಡ್ ಬಂತು. ಜನರ ಪ್ರಾಣ ಉಳಿಸಲು ಯಡಿಯೂರಪ್ಪ ಸರ್ಕಾರ ಸತತ ಪ್ರಯತ್ನ ಮಾಡಿತು. ಕಷ್ಟದ ಸಂದರ್ಭದಲ್ಲಿ ರಾಜ್ಯವನ್ನು ಕಾಪಾಡಿದರು. ಯಡಿಯೂರಪ್ಪ ಅವರು ಆದ ನಂತರ ಅಧಿಕಾರಕ್ಕೆ ಬಂದವರು ಮಾಡಿದ್ದೇನು? ಕಾರ್ಯಕರ್ತರ ಇಚ್ಚೆಗೆ ತಕ್ಕಂತೆ ನಡೆದು ಕೊಂಡ್ರಾ? ಯಡಿಯೂರಪ್ಪ ಅವರಿಂದ ಅಧಿಕಾರವನ್ನು ಪಡೆದು ಕೊಂಡ ಅತಿರಥ ಮಹಾರಥರು ಮಾಡಿದ್ದೇನು? ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಯಡಿಯೂರಪ್ಪ ಅವರ ಉತ್ಸಾಹ ಅವರ ನಂತರ ಬಂದವರಲ್ಲಿ ಯಾಕೆ ಕಾಣಲಿಲ್ಲ?ʼʼ ಎಂದು ಅವರು ಪ್ರಶ್ನಿಸಿದ್ದಾರೆ.
ವಲಸಿಗ ಬೊಮ್ಮಾಯಿಯೇ ಟಾರ್ಗೆಟ್ ಎಂದ ಕಾಂಗ್ರೆಸ್
ಈ ಬೆಳವಣಿಗೆಗಳ ನಡುವೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿಯ ಕಾಲೆಳೆದಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಪ್ರತಾಪ್ ಸಿಂಹ ಅವರನ್ನು ಬಳಸಿಕೊಂಡು ಬೊಮ್ಮಾಯಿ ಅವರಿಗೆ ಗುಂಡಿಕ್ಕುತ್ತಿದ್ದಾರೆ ಎಂದು ಟ್ವೀಟ್ ಮಾಡಿದೆ.
ಲಿಂಗಾಯತ ಕಾರ್ಯಾಚರಣೆ ಪೂರ್ಣ ಎಂದ ಕಾಂಗ್ರೆಸ್
ಜೋಶಿ, ಸಂತೋಷ್ ಅವರು ಪ್ರತಾಪ್ ಸಿಂಹ ಹೆಗಲ ಮೇಲೆ ಗನ್ನಿಟ್ಟು ಶೂಟ್ ಮಾಡಿದ ಗುಂಡು ಬೊಮ್ಮಾಯಿ ಎದೆಗೆ ತಗುಲಿದೆ. ಸಿಎಂ ಆದರೂ ಬಿಜೆಪಿಯ ಗರ್ಭಗುಡಿಯ ಒಳಗೆ ಪ್ರವೇಶ ಪಡೆಯಲಾಗದ ವಲಸಿಗ ಬೊಮ್ಮಾಯಿಯವರೇ ಜೋಶಿ ಸಂತೋಷರ ಮುಂದಿನ ಟಾರ್ಗೆಟ್. ಬೊಮ್ಮಾಯಿಯವರನ್ನು ಮುಗಿಸಿದರೆ “ಟಾರ್ಗೆಟ್ ಲಿಂಗಾಯತ” ಕಾರ್ಯಾಚರಣೆ ಪೂರ್ಣಗೊಳಿಸಿದಂತಾಗುತ್ತದೆ
ಜೋಶಿ, ಸಂತೋಷ್ ಅವರುಗಳು @mepratap ಹೆಗಲ ಮೇಲೆ ಗನ್ನಿಟ್ಟು ಶೂಟ್ ಮಾಡಿದ ಗುಂಡು @BSBommai ಅವರ ಎದೆಗೆ ತಗುಲಿದೆ!
— Karnataka Congress (@INCKarnataka) June 16, 2023
ಸಿಎಂ ಆದರೂ ಬಿಜೆಪಿಯ ಗರ್ಭಗುಡಿಯ ಒಳಗೆ ಪ್ರವೇಶ ಪಡೆಯಲಾಗದ ವಲಸಿಗ ಬೊಮ್ಮಾಯಿಯವರೇ ಜೋಶಿ ಸಂತೋಷರ ಮುಂದಿನ ಟಾರ್ಗೆಟ್!
ಬೊಮ್ಮಾಯಿಯವರನ್ನು ಮುಗಿಸಿದರೆ "ಟಾರ್ಗೆಟ್ ಲಿಂಗಾಯತ" ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದಂತಾಗುತ್ತದೆ!… pic.twitter.com/Bz5ML4UdYY
ಇದನ್ನೂ ಓದಿ : Karnataka Politics : ಹೊಂದಾಣಿಕೆ ಆರೋಪದ ನಡುವೆಯೇ ಅಚ್ಚರಿ ಮೂಡಿಸಿದ ಶಾಮನೂರು- ಬೊಮ್ಮಾಯಿ ಗೌಪ್ಯ ಭೇಟಿ