Site icon Vistara News

Video:ಹಂಪಿ ಸೌಂದರ್ಯಕ್ಕೆ ಮನಸೋತ BJP ಅಧ್ಯಕ್ಷ ಜೆ.ಪಿ. ನಡ್ಡಾ: ₹50 ನೋಟಿನೊಂದಿಗೆ ಫೋಟೊಗೆ ಪೋಸ್‌ ನೀಡಿದ ಕುಟುಂಬ

jp nadda hampi

ಸದಾಕಾಲ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲೇ ಮುಳುಗಿರುವ ಬಿಜೆಪಿ(BJP) ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (J.P. Nadda) ಅವರು ತಮ್ಮ ಕುಟುಂಬದೊಡಗೂಡಿ ವಿಶ್ವವಿಖ್ಯಾತ ಹಂಪಿಯ ಸೌಂದರ್ಯವನ್ನು ಸವಿದರು, ಇತಿಹಾಸವನ್ನು ತಿಳಿದರು.

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಶನಿವಾರ ಹಾಗೂ ಭಾನುವಾರ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಆಯೋಜನೆಯಾಗಿತ್ತು. ಭಾನುವಾರ ಕಾರ್ಯಕಾರಿಣಿಗೆ ಆಗಮಿಸಿದ ನಡ್ಡಾ, ಸಭೆಯಲ್ಲಿ ಭಾಗವಹಿಸಿದರು. ಬರುವಾಗ ತಮ್ಮ ಪತ್ನಿ, ಇಬ್ಬರು ಪುತ್ರರು ಹಾಗೂ ಸೊಸೆಯನ್ನೂ ಕರೆತಂದಿದ್ದ ನಡ್ಡಾ, ಸೋಮವಾರ ಪೂರ್ತಿ ಹಂಪಿ ಟೂರ್‌ ಹಮ್ಮಿಕೊಂಡಿದ್ದರು.

ಬೆಳಗ್ಗೆಯೇ ವಿರೂಪಾಕ್ಷೇಶ್ವರ ದೇಸವಸ್ಥಾನಕ್ಕೆ ಆಗಮಿಸಿದ ನಡ್ಡಾ ಹಾಗೂ ಅವರ ಕುಟುಂಬದವರಿಗೆ ದೇವಸ್ಥಾನದ ಆನೆಯ ಮೂಲಕ ಮಾಲಾರ್ಪಣೆ ಮಾಡಿಸುವುದರ ಮೂಲಕ ಸ್ವಾಗತ ನೀಡಲಾಯಿತು. ವಿರೂಪಾಕ್ಷೇಶ್ವರನ ದರ್ಶಣ ಪಡೆದ ನಂತರ ಹಂಪಿ ವಿದ್ಯಾರಣ್ಯ ಪೀಠದ ಶ್ರೀ ವಿದ್ಯಾರಣ್ಯ ಸ್ವಾಮೀಜಿಯವರಿಂದ ವಿಜಯನಗರದ ಇತಿಹಾಸದ ಮಾಹಿತಿ ಪಡೆದರು. ನಂತರ ಉದ್ಯಾನ ನರಸಿಂಹ, ಉಗ್ರ ನರಸಿಂಹ, ಕಡಲೆಕಾಳು ಗಣೇಶ, ಸಾಸಿವೆ ಕಾಳು ಗಣೇಶ, ಕಮಲ ಮಹಲ್‌, ಮಹಾನವಮಿ ದಿಬ್ಬಗಳನ್ನು ವೀಕ್ಷಣೆ ಮಾಡಿದರು.

ಹೆಚ್ಚಿನ ಓದಿಗಾಗಿ | Virtual Tour: ದೆಹಲಿಯ PM ಸಂಗ್ರಹಾಲಯದಲ್ಲಿದೆ ಕನ್ನಡದ ʼನಮಸ್ತೆʼ

ಸಪ್ತಸ್ವರ ಕಂಬದ ಕಲ್ಪನೆ ಹಾಗೂ ಕೆತ್ತನೆಗೆ ಮಾರುಹೋದ ನಡ್ಡಾ ಕುಟುಂಬ, ಕಲ್ಲಿನ ರಥವನ್ನು ಅಪಾರವಾಗಿ ಮೆಚ್ಚಿದರು. ₹50 ನೋಟಿನಲ್ಲಿ ಕಲ್ಲಿನ ರಥದ ಚಿತ್ರವಿದೆ. ಕೈಯಲ್ಲಿ ₹50 ನೋಟು ಹಿಡಿದು ಕುಟುಂಬದವರು ಕಲ್ಲಿನ ರಥದೆದುರು ಫೋಟೊ ತೆಗೆದುಕೊಂಡರು. ನಡ್ಡಾ ಅವರಿಗೆ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ರಾಜ್ಯ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಸಾಥ್‌ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಡ್ಡಾ, ನಾನು ಪ್ರವಾಸ ಕೈಗೊಂಡ ಪ್ರದೇಶಗಳಲ್ಲೆಲ್ಲ ಈ ರೀತಿ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುತ್ತೇನೆ. ನಮ್ಮ ಪೂರ್ವಜರು ಎಷ್ಟು ಜ್ಞಾನಿಗಳಾಗಿದ್ದರು ಎನ್ನುವುದು ಇದರಿಂದ ತಿಳಿಯುತ್ತದೆ. ನಮ್ಮ ದೇಶ ಈ ಹಿಂದೆ ಎಷ್ಟು ವಿಕಸಿತವಾಗಿತ್ತು ಹಾಗೂ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವನ್ನು ಹೇಗೆ ಮುಂದಕ್ಕೆ ಕೊಡೊಯ್ಯಬೇಕು ಎನ್ನುವುದನ್ನು ತಿಳಿಯಲು ಇಂತಹ ಸ್ಥಳಗಳಿಗೆ ಆಗಮಿಸಬೇಕು ಎಂದರು.

ಹೆಚ್ಚಿನ ಓದಿಗಾಗಿ | ರಾಜ್ಯದಲ್ಲೀಗ 150+ ಜಪ: BJP, CONGRESS ನಡುವೆ JDS ನಡೆ ವಿಭಿನ್ನ

Exit mobile version