Site icon Vistara News

BJP Protest | ಪಾಕ್‌ ಸಚಿವ ಭುಟ್ಟೋ ವಿರುದ್ಧ ರಾಜ್ಯಾದ್ಯಂತ ಆಕ್ರೋಶ; ಕ್ಷಮೆಯಾಚನೆಗೆ ಒತ್ತಾಯ

ಬೆಂಗಳೂರು: ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ʻಕಟುಕʼ ಎಂದು ಹೇಳಿರುವುದಕ್ಕೆ ದೇಶಾದ್ಯಂತ ವ್ಯಾಪಕ ವಿರೋಧ, ಟೀಕೆಗಳು ವ್ಯಕ್ತವಾಗಿವೆ. ಈ ಹೇಳಿಕೆ ವಿರುದ್ಧ ಬಿಜೆಪಿ ಕಾರ್ಯಕರ್ತರು (BJP Protest) ಕೆಂಡಕಾರಿದ್ದು, ರಾಜ್ಯಾದ್ಯಂತ ಯುವ ಮೋರ್ಚಾ ಕಾರ್ಯಕರ್ತರು ತೀವ್ರವಾಗಿ ಪ್ರತಿಭಟಿಸಿದ್ದಾರೆ.

ಡಿಕೆಶಿ, ಭುಟ್ಟೋ ಹೇಳಿಕೆಗೆ ಬಿಜೆಪಿ ಕಿಡಿ
ಶಿವಮೊಗ್ಗದಲ್ಲೂ ಪ್ರತಿಭಟನೆ ಬಿಸಿ ಜೋರಾಗಿದ್ದು, ಪ್ರಧಾನಿ ಮೋದಿ ವಿರುದ್ಧದ ಬಿಲಾವಲ್ ಭುಟ್ಟೋ ಹೇಳಿಕೆಯನ್ನು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಖಂಡಿಸಿದ್ದು, ಉಗ್ರರ ಪರ ಡಿ.ಕೆ ಶಿವಕುಮಾರ್‌ ಹೇಳಿಕೆಗೂ ವಿರೋಧ ವ್ಯಕ್ತಪಡಿಸಲಾಗಿದೆ. ನಗರದ ಶಿವಪ್ಪನಾಯಕ ವೃತ್ತದಲ್ಲಿ ಕುಕ್ಕರ್ ಬ್ಲಾಸ್ಟ್‌ನ ರೂವಾರಿ ಶಾರಿಕ್‌ ಕೃತ್ಯವನ್ನು ಡಿಕೆಶಿ ಬೆಂಬಲಿಸಿದ್ದಾರೆಂದು ಆರೋಪಿಸಿದರು. ಇದು ವ್ಯಕ್ತಿಯ ಮಾನಸಿಕತೆ ಅಲ್ಲ, ಒಂದು ಪಕ್ಷ ಹಾಗೂ ಆ ದೇಶದ ಮಾನಸಿಕತೆ ಎಂದು ಟೀಕಿಸಿದರು. ಡಿ.ಕೆ. ಶಿವಕುಮಾರ್ ಶಾಸಕತ್ವವನ್ನು ರದ್ದುಪಡಿಸಿ, ಯುಎಪಿಎ ಕಾಯ್ದೆಯಡಿ ಬಂಧಿಸಲು ಒತ್ತಾಯಿಸಿದರು.

ಇತ್ತ ಪಾಕಿಸ್ತಾನ ವಿದೇಶಾಂಗ ಸಚಿವರ ಹೇಳಿಕೆಯು ಆ ದೇಶದ ಮಾನಸಿಕತೆಯನ್ನು ತೋರಿಸುತ್ತಿದೆ. ಬಿಲಾವಲ್ ಭುಟ್ಟೋ ಕೂಡಲೇ ಪ್ರಧಾನಿ ಮೋದಿ ಕ್ಷಮೆ ಕೇಳಬೇಕೆಂದು ಪ್ರತಿಭಟನಾಕಾರರ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಸೇರಿ ಕೆ.ಈ. ಕಾಂತೇಶ್, ಭಾನುಪ್ರಕಾಶ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

ಪ್ರತಿಕೃತಿಗೆ ಚಪ್ಪಲಿ ಏಟು, ದಹನ
ಪಾಕಿಸ್ತಾನದ ಸಚಿವ ಭುಟ್ಟೋ ಪ್ರತಿಕೃತಿಗೆ ಚಪ್ಪಲಿ ಏಟು ಕೊಟ್ಟು ಪ್ರತಿಕೃತಿಯನ್ನು ದಹನ ಮಾಡಲಾಯಿತು. ವಿಜಯನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನದ ಸಚಿವ ಭುಟ್ಟೋ ಜರ್ದಾರಿ ಮೋದಿ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ಕೂಡಲೇ ಕ್ಷಮೆಯಾಚಿಸಬೇಕೆಂದರು. ವಿಜಯನಗರದ ಹೊಸಪೇಟೆಯಲ್ಲಿಯೂ ಬಿಜೆಪಿ ಕಾರ್ಯಕರ್ತರು ಸೇರಿ ಪ್ರತಿಭಟನೆ ನಡೆಸಿದರು. ಬಿಜೆಪಿ ಮಹಿಳಾ ನಾಯಕಿ ಕವಿತಾ ಈಶ್ವರ್ ಸಿಂಗ್ ಸಾಥ್‌ ನೀಡಿದರು.

ಜನರ ದಿಕ್ಕು ತಪ್ಪಿಸಲು ಇಂತಹ ಹೇಳಿಕೆಗಳು
ರಾಯಚೂರಿನ ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಪಾಕ್ ಸಚಿವರ ಹೇಳಿಕೆಯನ್ನು ಖಂಡಿಸಿದರು. ಈ ಹೇಳಿಕೆಯನ್ನು ಪಕ್ಷಾತೀತವಾಗಿ ನಾವೆಲ್ಲರೂ ಖಂಡಿಸುತ್ತೇವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನಪ್ರಿಯತೆ ನೋಡಿ ಪಾಕ್ ಕಂಗಾಲಾಗಿದೆ. ಆರ್ಥಿಕ ಮತ್ತು ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಜನರ ದಿಕ್ಕು ತಪ್ಪಿಸಲು ಇಂತಹ ಹೇಳಿಕೆ ಕೊಡುತ್ತಿದ್ದಾರೆ. ಇಂತಹ ಹೇಳಿಕೆ ಕೊಟ್ಟರೆ ಮುಂದೆ ಪರಿಣಾಮ ನೆಟ್ಟಗೆ ಇರುವುದಿಲ್ಲ ಎಂದು ಶಾಸಕ ಶಿವರಾಜ್ ಪಾಟೀಲ್ ಕಿಡಿಕಾರಿದರು.

ಇತ್ತ ಧಾರವಾಡದ ವಿವೇಕಾನಂದ ವೃತ್ತದಲ್ಲಿ ಪಾಕಿಸ್ತಾನ ಧ್ವಜ ಹಾಗೂ ಪಾಕ್‌ ಮಂತ್ರಿ ಭುಟ್ಟೋ ಭಾವಚಿತ್ರ ತುಳಿದು‌ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಫುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.

ಕೊಪ್ಪಳದ ಬಸವೇಶ್ವರ ಸರ್ಕಲ್‌ನಲ್ಲೂ ಪಾಕಿಸ್ತಾನದ ವಿರುದ್ಧದ ಪ್ರತಿಭಟನೆ ಜೋರಾಗಿತ್ತು. ಬಿಲಾವಲ್ ಭುಟ್ಟೋ ಭಾವಚಿತ್ರಕ್ಕೆ ಉಗಿದ ಕಾರ್ಯಕರ್ತರು, ಬಳಿಕ ಪ್ರತಿಕೃತಿ ದಹಿಸಿ ಆಕ್ರೋಶವನ್ನು ಹೊರಹಾಕಿದರು. ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಳ್ಳಾರಿಯಲ್ಲೂ ಬಿಜೆಪಿ ಕಾರ್ಯಕರ್ತರು ಭುಟ್ಟೋ ಪ್ರತಿಕೃತಿ‌ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ರಾಯಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಪಾಕ್‌ ಮಂತ್ರಿಗೆ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

ಬೀದರ್‌ನ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ ನಡೆಸಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರ ಪ್ರತಿಕೃತಿ ಸುಟ್ಟು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಾನಂದ ‌ಮಂಠಾಳಕರ್ ಸೇರಿದಂತೆ ಬಿಜೆಪಿ ಜಿಲ್ಲಾ ಮುಖಂಡರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಭುಟ್ಟೋ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ
ಕಾರವಾರದಲ್ಲಿ ನಗರದ ಸುಭಾಷ್ ವೃತ್ತದಲ್ಲಿ ಪಾಕ್ ಸಚಿವ ಭುಟ್ಟೋ ಅವಹೇಳನಕಾರಿ ಹೇಳಿಕೆ ಖಂಡಿಸಲಾಯಿತು. ಭಾವಚಿತ್ರ ಹಿಡಿದು ಧಿಕ್ಕಾರ ಕೂಗಿ ಭುಟ್ಟೋ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು.

ದಾವಣಗೆರೆಯ ಜಯದೇವ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪಾಕ್ ಸಚಿವ ಬಿಲಾವಲ್ ಭುಟ್ಟೋ ವಿರುದ್ಧ ಆಕ್ರೋಶ ಹೊರಹಾಕಿದ್ದು, ಜತೆಗೆ ಡಿಕೆಶಿ ಹೇಳಿಕೆಯನ್ನು ಖಂಡಿಸಲಾಯಿತು. ಭಯೋತ್ಪಾದಕರನ್ನು ಬೆಂಬಲಿಸಿದ ಡಿಕೆಶಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ದೇಶದಲ್ಲಿ ಭಯೋತ್ಪಾದಕರನ್ನು ಪೋಷಿಸುತ್ತಿರುವುದು ಕಾಂಗ್ರೆಸ್ ಎಂದು ಆಕ್ರೋಶ ಹೊರಹಾಕಿದರು. ಪಾಕ್ ಸಚಿವ ಭುಟ್ಟೋ ಹಾಗೂ ಡಿಕೆಶಿ ಭಾವಚಿತ್ರವನ್ನು ಕಾಲಲ್ಲಿ ತುಳಿದು, ಬೆಂಕಿ ಹಚ್ಚಿ ಕಿಡಿಕಾರಿದರು.

ಹೆದ್ದಾರಿ ತಡೆದು ಪ್ರತಿಭಟನೆ
ಮೋದಿ ವಿರುದ್ಧ ಬಿಲಾವಲ್ ಭುಟ್ಟೋ ಹೇಳಿಕೆ ಖಂಡಿಸಿ ಮಂಡ್ಯದಲ್ಲಿ ರಸ್ತೆಗಿಳಿದು ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಮಂಡ್ಯದ ಸಂಜಯ್ ವೃತ್ತದಲ್ಲಿ ಮಾನವ ಸರಪಳಿ ಮೂಲಕ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಿದ್ದಾರೆ. ಬಳಿಕ ಬಿಲಾವಲ್ ಭುಟ್ಟೋ ಭಾವಚಿತ್ರ ಸುಡಲಾಗಿದೆ.

ಇದನ್ನೂ ಓದಿ | BJP Protest | ಭುಟ್ಟೋ ʻಕಟುಕʼ ಹೇಳಿಕೆಗೆ ಬಿಜೆಪಿ ಕೆಂಡ; ಬೆಂಗಳೂರು ಸೇರಿ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ

Exit mobile version