Site icon Vistara News

BJP Protest: ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದ ಬಿಜೆಪಿ; ವಿದ್ಯುತ್‌ ದರ ಏರಿಕೆ, ಹಾಲಿನ ಖರೀದಿ ದರ ಕಡಿತಕ್ಕೆ ಆಕ್ರೋಶ

BJP workers Protest

#image_title

ಬೆಂಗಳೂರು: ವಿದ್ಯುತ್‌ ದರ ಏರಿಕೆ, ಹಾಲಿನ ದರ ಕಡಿತ, ಗ್ಯಾರಂಟಿ ಯೋಜನೆಗಳಿಗೆ ಹಲವು ಷರತ್ತು ಅನ್ವಯ ಸೇರಿ ರಾಜ್ಯ ಸರ್ಕಾರ ವಿವಿಧ ನೀತಿ, ನಿರ್ಧಾರಗಳನ್ನು ವಿರೋಧಿಸಿ ರಾಜ್ಯದ ವಿವಿಧೆಡೆ ಬಿಜೆಪಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಗಿದೆ. ವಿವಿಧೆಡೆ ಬೀದಿಗಿಳಿದು ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ಷರತ್ತುಗಳಿಲ್ಲದೆ ಗ್ಯಾರಂಟಿ ಯೋಜನೆ ಜಾರಿ ಮಾಡಿ

ರಾಮನಗರ: ಗ್ಯಾರಂಟಿ ಯೋಜನೆಗಳಿಗೆ ವಿವಿಧ ಷರತ್ತುಗಳ ಹೇರಿಕೆ ವಿರೋಧಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಗರದ ಐಜೂರು ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಿಎಂ ಹಾಗೂ ಡಿಸಿಎಂ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಯಾವುದೇ ಷರತ್ತುಗಳ ಹಾಕದೇ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣಗೌಡ ಒತ್ತಾಯಿಸಿದರು.

ಕಾಂಗ್ರೆಸ್‌ ಸರ್ಕಾರಕ್ಕೆ ಧಿಕ್ಕಾರ ಕೂಗಿದ ಕಾರ್ಯಕರ್ತರು

ಮೈಸೂರು: ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾಂಗ್ರೆಸ್‌ ಸರ್ಕಾರಕ್ಕೆ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಕಾಂಗ್ರೆಸ್ 200 ಯೂನಿಟ್ ಉಚಿತ ವಿದ್ಯುತ್ ಭರವಸೆ ನೀಡಿತ್ತು. ಈಗ ಪ್ರತಿ ಯೂನಿಟ್‌ಗೆ 70 ಪೈಸೆ ಹೆಚ್ಚಳ ಮಾಡಿದೆ. ರೈತರಿಗೆ ನೀಡುತ್ತಿದ್ದು ಹಾಲಿನ ಪ್ರೋತ್ಸಾಹ ಧನ ಕಡಿತಗೊಳಿಸಿದೆ. ಬಿಟ್ಟಿ ಭಾಗ್ಯಗಳಿಗೆ ಹಣ ಹೊಂದಿಸಲು ಸಾರ್ವಜನಿಕರಿಗೆ ಬರೆ ಹಾಕುತ್ತಿದೆ. ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡುವುದಾಗಿ ಹೇಳಿದೆ. ಆದ್ದರಿಂದ ಕಾಂಗ್ರೆಸ್‌ ಸರ್ಕಾರ ತೊಲಗಬೇಕೆಂದು ಕಾರ್ಯಕರ್ತರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪರಾಜಿತ ಅಭ್ಯರ್ಥಿಗಳಾದ ಕವೀಶ್‌ಗೌಡ, ಸಂದೇಶ್ ಸ್ವಾಮಿ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ವಿಭಾಗೀಯ ಪ್ರಭಾರ ಮೈ.ವಿ.ರವಿಶಂಕರ್ ಸೇರಿ ಪ್ರಮುಖರು ಭಾಗಿಯಾಗಿದ್ದರು.

ಗೋ ಭಕ್ಷಕ ಸಿದ್ದರಾಮಯ್ಯ ಎಂದು ಆಕ್ರೋಶ

ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ | BJP Leaders Strike | Vistara News

ಕೋಲಾರ: ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ನಿರ್ಧಾರ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ನಗರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗೋ ಭಕ್ಷಕ ಸಿದ್ದರಾಮಯ್ಯ ಎಂದು ಕಾರ್ಯಕರ್ತರು ಧಿಕ್ಕಾರ ಕೂಗಿದರು. ಇದೇ ವೇಳೆ ಬಸ್ ನಿಲ್ದಾಣ ವೃತ್ತದಲ್ಲಿ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ | Free Electricity: ಹೊರಬಿತ್ತು ಗೃಹ ಜ್ಯೋತಿ ಮಾರ್ಗಸೂಚಿ; ಬಾಡಿಗೆದಾರನಿಗಿಲ್ಲ ಉಚಿತ ವಿದ್ಯುತ್‌?

ವಿದ್ಯುತ್‌ ದರ ಏರಿಕೆ ಆದೇಶ ವಾಪಸ್‌ ಪಡೆಯಿರಿ

ವಿಜಯನಗರ: ವಿದ್ಯುತ್ ಬಿಲ್ ದರ ಏರಿಕೆ ವಿರೋಧಿಸಿ ಹೊಸಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಡಾ. ಪುನೀತ್ ರಾಜ್‍ಕುಮಾರ್ ವೃತ್ತದಿಂದ, ತಹಸೀಲ್ದಾರ್‌ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದ ಕಾರ್ಯಕರ್ತರು, ಬೆಲೆ ಏರಿಕೆ ಆದೇಶ ವಾಪಸ್ ಪಡೆಯಬೇಕು ಎಂದು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಮಂಗಳೂರು, ಚಾಮರಾಜನಗರ, ಬೀದರ್‌ ಸೇರಿ ವಿವಿಧೆಡೆ ಪ್ರತಿಭಟನೆ

ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ | BJP Leaders Strike | Vistara News

ಹಾವೇರಿಯಲ್ಲಿ ಸಂಸದ ಶಿವಕುಮಾರ್ ಉದಾಸಿ ನೇತೃತ್ವದಲ್ಲಿ ಹೋರಾಟ

ಹಾವೇರಿ: ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಂಸದ ಶಿವಕುಮಾರ್ ಉದಾಸಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಗ್ಯಾರಂಟಿ ಯೋಜನೆಗಳಿಗೆ ಕಂಡಿಷನ್ ಹಾಕಿರುವುದಕ್ಕೆ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ವಿದ್ಯುತ್ ಬಿಲ್ ಏರಿಕೆಗೆ ಖಂಡನೆ ವ್ಯಕ್ತಪಡಿಸಿದರು.

ಕಾರಟಗಿಯಲ್ಲಿ ಪ್ರತಿಭಟನಾ ಮೆರವಣಿಗೆ

ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ | BJP Leaders Strike | Vistara News

ಕೊಪ್ಪಳ: ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ವಿದ್ಯುತ್ ದರ ಏರಿಕೆ, ಹಾಲಿನ ಖರೀದಿ ದರ ಕಡಿತ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವ ನಿರ್ಧಾರ ಖಂಡಿಸಿ ಮಾಜಿ ಶಾಸಕ ಬಸವರಾಜ ದಡೇಸೂಗೂರು ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಜೆಒಇ ಕಾರ್ಯಾಲಯದಿಂದ ಎಪಿಎಂಸಿವರೆಗೆ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ

ಚಿಕ್ಕಬಳ್ಳಾಪುರ: ವಿದ್ಯುತ್ ಬೆಲೆ ಏರಿಕೆ, ಹಾಲಿನ ಖರೀದಿ ದರ ಇಳಿಕೆ ವಿರೋಧಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ ಹಾಗೂ ಸೀಕಲ್ಲು ರಾಮಚಂದ್ರಗೌಡ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದೇ ವೇಳೆ ಗೋಹತ್ಯೆ ನಿಷೇಧ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯಬಾರದು ಎಂದು ಒತ್ತಾಯಿಸಿದರು.

ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟನೆಯ ದೃಶ್ಯ

ಧಾರವಾಡ ಡಿಸಿ ಕಚೇರಿ ಎದುರು ಪ್ರತಿಭಟನೆ

ಧಾರವಾಡ: ಗ್ಯಾರಂಟಿ ಯೋಜನೆಗಳಿಗೆ ಮಾನದಂಡ ಅಳವಡಿಕೆ ಹಾಗೂ ವಿದ್ಯುತ್ ದರ ಏರಿಕೆ ಖಂಡಿಸಿ ನಗರದ ಡಿಸಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿ- ಧಾರವಾಡ ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಇದನ್ನೂ ಓದಿ | 200 ಯುನಿಟ್‌ ಫ್ರೀ ಕೊಡಿ ಅನ್ನುವವರಿಗೆ ವಿವೇಕ ಇದೆಯಾ? ಈಗೆಷ್ಟು ಬಳಸ್ತಿದ್ದಾರೋ ಅಷ್ಟೇ ಬಳಸಬೇಕೆಂದ ಸಿದ್ದರಾಮಯ್ಯ

ಮಂಗಳೂರಿನಲ್ಲಿ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಹೋರಾಟ

ಮಂಗಳೂರು: ನಗರದ ಮಿನಿ ವಿಧಾನಸೌಧ ಮುಂಭಾಗ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಕಾರ್ಯಕರ್ತರು ಧಿಕ್ಕಾರ ಘೋಷಣೆ ಕೂಗಿದರು.

Exit mobile version