ಶ್ರೀರಂಗಪಟ್ಟಣ: ‘ಸಿದ್ರಾಮಣ್ಣ- ನೀವು ಎಲ್ಲೇ ಚುನಾವಣೆಗೆ ನಿಂತರೂ ನಿಮ್ಮನ್ನು ಸೋಲಿಸಿಯೇ ಸಿದ್ಧ. ನಿಮ್ಮನ್ನು ನಿರುದ್ಯೋಗಿ ಮಾಡಲು ನಾವು ಬದ್ಧ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಸವಾಲೆಸೆದಿದ್ದಾರೆ. ʻʻಸಿದ್ದರಾಮಯ್ಯ ಅವರನ್ನು ಬಾದಾಮಿಯ ಜನ ಓಡಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದ್ದಾರೆ. ಕೋಲಾರದಲ್ಲಿ ಜಾಗ ಹುಡುಕುತ್ತಿದ್ದಾರೆ. ಮೈಸೂರಿಗೆ ಬರಬೇಡಿ ಹೇಳಿದ್ದಾರೆ. ಬಾದಾಮಿಯಲ್ಲಿ ಸಿದ್ರಾಮಣ್ಣ ಸ್ಪರ್ಧಿಸಿದರೆ ಜನರು ಇಡುಗಂಟು ಕಳಕೊಳ್ಳುವಂತೆ ಮಾಡುತ್ತಾರೆ. ಇದು ನಮ್ಮ ಸವಾಲುʼʼ ಎಂದು ಹೇಳಿದರು.
ಶ್ರೀರಂಗಪಟ್ಟಣದಲ್ಲಿ ಶುಕ್ರವಾರ ನಡೆದ ಜನ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಿದ್ರಾಮಣ್ಣಾ, ಟಿಪ್ಪು ಜಯಂತಿ ಮಾಡಿ ಈ ನಾಡಿನ ಜನರಿಗೆ ಅನ್ಯಾಯ ಮಾಡಿದ್ರಲ್ಲ ನೀವು? ಟಿಪ್ಪು ಜಯಂತಿ ಮಾಡಿ ಮತಾಂಧರಿಗೆ ಅವಕಾಶ ಮಾಡಿಕೊಟ್ರಲ್ಲ ನೀವು? ಟಿಪ್ಪು ಜಯಂತಿ ಮಾಡಿ ಈ ರಾಜ್ಯದಲ್ಲಿ ಹಿಂದೂ- ಮುಸ್ಲಿಮರನ್ನು ಒಡೆದ್ರಲ್ಲ ನೀವು?’ ಎಂದು ಪ್ರಶ್ನಿಸಿದರು.
ʻʻಈ ರಾಜ್ಯದಲ್ಲಿ ಜನನಾಯಕ, ಖಳ ನಾಯಕ ಮತ್ತು ಕಣ್ಣೀರ ನಾಯಕ ಎಂಬ 3 ಮಾದರಿಯ ನಾಯಕರಿದ್ದಾರೆ. ಜನರು ಅಧಿಕಾರ ಕೊಟ್ಟಾಗ ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮಿ, ಶಾಲಾ ಮಕ್ಕಳಿಗೆ ಸೈಕಲ್ ವಿತರಿಸಿದ ನಾಯಕ, ಹಾಲಿಗೆ ಬೆಂಬಲ ಬೆಲೆ ಮತ್ತಿತರ ಜನಪರ ಯೋಜನೆಗಳ ಮೂಲಕ ಜನರ ಕಣ್ಣೀರನ್ನು ಒರೆಸಿದವರು ಯಡಿಯೂರಪ್ಪನವರು. ರಾಜ್ಯದಲ್ಲಿ ಬೇಡವಾದ ಟಿಪ್ಪು ಜಯಂತಿ ಮಾಡಿ, ಹಿಂದೂ ಮುಸ್ಲಿಮರನ್ನು ಒಡೆದು ಹಾಕಿ, ಜನರ ಹತ್ಯೆಗೆ ಕಾರಣರಾದವರು ಸಿದ್ರಾಮಣ್ಣ. ಪಿಎಫ್‍ಐ ಚಟುವಟಿಕೆಗೆ ಬೆಂಗಾವಲಾಗಿ ನಿಂತು ಹಿಂದೂಗಳ ಹತ್ಯೆ ಮಾಡಿದ 2 ಸಾವಿರ ಜನ ಪಿಎಫ್‍ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿಸಿದವರು ಸಿದ್ರಾಮಣ್ಣʼʼ ಎಂದು ಟೀಕಿಸಿದರು.
ʻʻಸಿದ್ರಾಮಣ್ಣ ಗೋಹತ್ಯೆಗೆ ಬೆಂಗಾವಲಾಗಿ ನಿಂತವರು. ಸಿದ್ರಾಮಣ್ಣನ ಕಾಲಘಟ್ಟದಲ್ಲಿ 3ಸಾವಿರ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಠ್ಠಲ ಅರಭಾವಿ ಎಂಬ ರೈತರು ಬೆಳಗಾವಿ ಅಧಿವೇಶನ ನಡೆಯುತ್ತಿದ್ದಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ರೈತರ ಮನೆಗೆ ಹೋಗಿ ಪರಿಹಾರ ಕೊಡದ ಹಾಗೂ ಅವರ ಕುಟುಂಬದ ಕಣ್ಣೀರು ಒರೆಸದ ರಾಜಕಾರಣಿ ಸಿದ್ರಾಮಣ್ಣʼʼ ಎಂದು ಆಕ್ಷೇಪಿಸಿದರು.
ʻʻ24 ಹಿಂದೂ ಕಾರ್ಯಕರ್ತರ ಕೊಲೆ ಆದಾಗ ಸಿದ್ರಾಮಣ್ಣ ಕಣ್ಣೀರು ಹಾಕಿಲ್ಲ. ಸಿದ್ರಾಮಣ್ಣನ ಕಾಲಘಟ್ಟದಲ್ಲಿ ಎಲ್ಲೆಡೆ ಮರ್ಡರ್‌ಗಳು ಆಗುತ್ತಿದ್ದವು. ಆತಂಕವಾದಿಗಳ ವಿಜೃಂಭಣೆ, ಪಿಎಫ್‍ಐ ಹೆಸರಿನಲ್ಲಿ ಚಟುವಟಿಕೆ ಹೆಚ್ಚಾಗಿತ್ತು. ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್‍ಗೆ ಚೂರಿಯಿಂದ ಇರಿದರೆ ಅವರನ್ನು ಬಂಧಿಸಲು ತಾಕತ್ತಿರದ ಸಿಎಂ ಸಿದ್ರಾಮಣ್ಣʼʼ ಎಂದರು. ʻʻ ಇವತ್ತು ಪಿಎಫ್‍ಐ ನಿಷೇಧಿಸಿ ಮತಾಂಧರನ್ನು ಜೈಲಿಗಟ್ಟುವ ಕಾರ್ಯವನ್ನು ನರೇಂದ್ರ ಮೋದಿಜಿ ಸರಕಾರ ಮಾಡಿದೆʼʼ ಎಂದು ವಿವರಿಸಿದರು.
ʻʻಅಧಿಕಾರ ಇಲ್ಲದಾಗ ಕುಮಾರಣ್ಣ ಕಣ್ಣೀರು ಹಾಕಿ ಸ್ಥಾನಗಳನ್ನು ಗೆಲ್ಲುವಂತೆ ಮಾಡಿದವರು. ಮಂಡ್ಯದ ಜನರು ಕುಟುಂಬವಾದವನ್ನು ದೂರ ಇಟ್ಟು ಮುಂದೆ ರಾಷ್ಟ್ರೀಯವಾದದ ಪಕ್ಷ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆʼʼ ಎಂದು ವಿಶ್ವಾಸದಿಂದ ತಿಳಿಸಿದರು. ಸಿದ್ರಾಮಣ್ಣ ಮತ್ತು ಕುಮಾರಣ್ಣ 2018ರಲ್ಲಿ ಅಧಿಕಾರಕ್ಕಾಗಿ ಅನೈತಿಕ ಸಂಬಂಧ ಮಾಡಿದರು ಎಂದು ಟೀಕಿಸಿದರು.
ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಮಾಡುವ ತಾಕತ್ತಿದ್ದರೆ ಅದು ಯಡಿಯೂರಪ್ಪರ ನೇತೃತ್ವದ ಬೊಮ್ಮಾಯಿ ಸರಕಾರಕ್ಕೆ ಮಾತ್ರ ಸಾಧ್ಯ ಎಂದು ಕರ್ನಾಟಕದ ಜನತೆ ನಿಶ್ಚಯ ಮಾಡಿದ್ದಾರೆ. ಮೀಸಲಾತಿ ಹೆಚ್ಚಿಸಿ ಎಸ್‍ಸಿ, ಎಸ್‍ಟಿಗಳ ಕಣ್ಣೀರನ್ನು ಬೊಮ್ಮಾಯಿ ಒರೆಸಿದ್ದಾರೆ. ಅನೇಕ ಜನಪರ ಕಾರ್ಯಕ್ರಮಗಳನ್ನು ನಮ್ಮ ಪಕ್ಷ ಜಾರಿಗೊಳಿಸಿದ್ದು, ರೈತ ವಿದ್ಯಾನಿಧಿಯನ್ನು ಪ್ರಕಟಿಸಿದ ದೇಶದ ಏಕೈಕ ಸಿಎಂ ಬೊಮ್ಮಾಯಿ ಎಂದು ವಿವರಿಸಿದರು.
ʻʻಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ಮುಕ್ತವಾಗುವ ಕಾಲ ಬಂದಿದೆ.ಬಿಜೆಪಿ ಆಡಳಿತಕ್ಕೆ ದಿನಗಳು ಸನ್ನಿಹಿತವಾಗಿವೆ. ಮತಾಂಧ ಮತ್ತು ಹಿಂದೂಗಳ ಮತಾಂತರ ಮಾಡಿದ್ದ ಟಿಪ್ಪುವಿನ ಸಂಹಾರ ಮಾಡಿದ ನಾಡಿಗೆ ನಾನು ಬಂದಿದ್ದೇನೆʼʼ ಎಂದು ಹೇಳಿದ ಅವರು, ʻʻಟಿಪ್ಪು ಜಯಂತಿ ಮಾಡಿದ ಕುತಂತ್ರ ರಾಜಕಾರಣಿ ಇದೀಗ ಅತಂತ್ರ ಸ್ಥಿತಿಯಲ್ಲಿದ್ದಾರೆ. ಟಿಪ್ಪುವಿಗೆ ಸನ್ಮಾನ ಮಾಡಿದ್ದಕ್ಕೆ ಜನರ ಶಾಪ ಅವರಿಗೆ ತಟ್ಟುತ್ತಿದೆ. ಸ್ಪರ್ಧೆಗೆ ನಿಲ್ಲಲು ಸುರಕ್ಷಿತವಾದ ಒಂದೇ ಒಂದು ವಿಧಾನಸಭಾ ಕ್ಷೇತ್ರ ಅವರಿಗೆ ಸಿಗುತ್ತಿಲ್ಲʼʼ ಎಂದು ಗೇಲಿ ಮಾಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ರಾಜ್ಯದ ಸಚಿವ ಕೆ. ಗೋಪಾಲಯ್ಯ, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ರಾಜ್ಯ ಕಾರ್ಯದರ್ಶಿಗಳಾದ ಮುನಿರಾಜು ಗೌಡ, ಜಗದೀಶ್ ಹಿರೇಮನಿ, ಜಿಲ್ಲಾ ಅಧ್ಯಕ್ಷ ಉಮೇಶ್, ಮುಖಂಡ ಡಾ. ಸಿದ್ದರಾಮಯ್ಯ, ಜಿಲ್ಲಾ ಮತ್ತು ಮಂಡಲ ಮುಖಂಡರು ಉಪಸ್ಥಿತರಿದ್ದರು.