ಬೆಂಗಳೂರು: ಬಳ್ಳಾರಿಯಲ್ಲಿ ನವೆಂಬರ್ 20ರಂದು ನಡೆಯಲಿರುವ ಬಿಜೆಪಿ ಎಸ್‍ಟಿ ಮೋರ್ಚಾ ನವಶಕ್ತಿ ಸಮಾವೇಶಕ್ಕೆ ೧೦ ಲಕ್ಷ ಜನರನ್ನು ಸೇರಿಸಲು ಬಿಜೆಪಿ ಪ್ಲ್ಯಾನ್ ಮಾಡಿದೆ.
ಎಸ್‍ಟಿ ಮೋರ್ಚಾ ರಾಜ್ಯ ಅಧ್ಯಕ್ಷ ತಿಪ್ಪರಾಜು ಹವಾಲ್ದಾರ್ ಅವರು ಮಂಗಳವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಸಮಾವೇಶವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಉದ್ಘಾಟಿಸಲಿದ್ದಾರೆ. ಕೇಂದ್ರ ಸರಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಅರ್ಜುನ್ ಮುಂಡಾ ಅವರು ಭಾಗವಹಿಸುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಂಸದೀಯ ಮಂಡಳಿಯ ಸದಸ್ಯರೂ ಆದ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಕೇಂದ್ರ – ರಾಜ್ಯ ಸರಕಾರಗಳ ಸಚಿವರು, ಕೋರ್ ಕಮಿಟಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು. ಈ ಸಮಾವೇಶದಲ್ಲಿ ಸುಮಾರು 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ಎಲ್ಲ ಎಸ್‍ಟಿ ಸಮುದಾಯದವರು ಭಾಗವಹಿಸಿ ಮೀಸಲಾತಿ ಹೆಚ್ಚಳಕ್ಕೆ ಸಂತಸ ಸೂಚಿಸಿ ಸಮಾವೇಶವನ್ನು ವಿಜಯೋತ್ಸವದಂತೆ ಆಚರಿಸುವರು. 68ಕ್ಕೂ ಹೆಚ್ಚು ಬುಡಕಟ್ಟು ಕಲಾ ತಂಡಗಳು ಪಾಲ್ಗೊಳ್ಳಲಿವೆ ಎಂದ ಅವರು, ರಾಜ್ಯ ಸರಕಾರವು ಮೀಸಲಾತಿ ಕುರಿತಂತೆ ಸುಗ್ರೀವಾಜ್ಞೆ ಹೊರಡಿಸಿದ್ದು, ರಾಜ್ಯಪಾಲರ ಅಂಗೀಕಾರ ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
೬,೨೦೦ ಬಸ್, ೧೮ ಸಾವಿರ ಕ್ರೂಸರ್ ವ್ಯವಸ್ಥೆ
ಕೊಪ್ಪಳ, ರಾಯಚೂರು, ಯಾದಗಿರಿ, ಚಿತ್ರದುರ್ಗ, ಬಳ್ಳಾರಿ, ಹಳೆ ಮೈಸೂರು, ಮಧ್ಯ ಕರ್ನಾಟಕದ ಸುತ್ತಲಿನ ಪ್ರದೇಶಗಳಿಂದ 6 ಲಕ್ಷ ಜನರನ್ನು ನಿರೀಕ್ಷಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಈ ಸಮಾವೇಶಕ್ಕೆ 4 ಲಕ್ಷ ಜನರು ಬರಲಿದ್ದಾರೆ. 6,200 ಬಸ್ ವ್ಯವಸ್ಥೆ ಮಾಡಲಾಗಿದೆ. 15ರಿಂದ 18 ಸಾವಿರ ಕ್ರೂಸರ್ ವಾಹನ ವ್ಯವಸ್ಥೆ ಇದೆ. ಬಳ್ಳಾರಿಯಲ್ಲಿ 24 ಕಡೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ರಾಜ್ಯ ಉಪಾಧ್ಯಕ್ಷ ನಿರ್ಮಲ್‍ಕುಮಾರ್ ಸುರಾಣ ಹಾಗೂ ಪಕ್ಷದ ಪ್ರಮುಖರು, ಸಚಿವರು ಈ ಸಂಬಂಧ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ರಾಷ್ಟ್ರಪತಿಗಳನ್ನಾಗಿ ದ್ರೌಪದಿ ಮುರ್ಮು ಅವರ ಆಯ್ಕೆ, ರಾಜ್ಯದಲ್ಲಿ ಪ್ರತ್ಯೇಕ ಎಸ್‍ಟಿ ಸಚಿವಾಲಯ ರಚನೆ ಮತ್ತಿತರ ಕ್ರಮವನ್ನು ಅವರು ಅಭಿನಂದಿಸಿದರು. ಆದಿವಾಸಿ ಗೌರವ ದಿವಸ ಆಚರಣೆ ಮೂಲಕ ಆದಿವಾಸಿಗಳಿಗೆ ಗೌರವ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಮರ್ಪಿಸಿದರು.
ʻʻಬಿಜೆಪಿ ಮುಖಂಡರು ಮತ್ತು ಬಿಜೆಪಿ ಸರಕಾರವು ಮೀಸಲಾತಿ ಹೆಚ್ಚಳದ ವಿರೋಧಿಗಳು ಎಂಬ ಆಕ್ಷೇಪ ಮತ್ತು ಸುಳ್ಳು ಮಾಹಿತಿಯನ್ನು ಕಾಂಗ್ರೆಸ್ ಮುಖಂಡರು ಜನರ ಮನದಲ್ಲಿ ಬಿತ್ತಿದ್ದರು. ಮೂಗಿಗೆ ತುಪ್ಪ ಹಚ್ಚುವ ಕಾರ್ಯ ಮಾಡಿದ್ದರು. ಅದನ್ನು ಹೋಗಲಾಡಿಸುವ ಮಾದರಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರವು ಮೀಸಲಾತಿಯನ್ನು ಹೆಚ್ಚಿಸಿದೆ. ಇದು ಬಿಜೆಪಿಯ ಬದ್ಧತೆಗೆ ಸ್ಪಷ್ಟ ನಿದರ್ಶನ. ಇದು ನವಶಕ್ತಿಯನ್ನು ತುಂಬಿದೆʼʼ ಎಂದು ತಿಪ್ಪರಾಜು ಹವಾಲ್ದಾರ್ ಹೇಳಿದರು.
ʻʻಬಿಜೆಪಿ ನಮ್ಮ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿದೆ. ಮುಂದಿನ 2023ರ ಚುನಾವಣೆಯಲ್ಲಿ ಬಿಜೆಪಿಗೆ ನಾವೆಲ್ಲರೂ ನಮ್ಮ ಮತ ಹಾಕುವ ಮೂಲಕ ಆ ಪಕ್ಷದ ಋಣವನ್ನು ತೀರಿಸಲು ಬದ್ಧರಿದ್ದೇವೆ. ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವುದರಲ್ಲಿ ಸಂಶಯವಿಲ್ಲʼʼ ಎಂದು ನುಡಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ಎಸ್‍ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನರಸಿಂಹ ನಾಯ್ಕ ಮತ್ತು ಮಂಜುನಾಥ್ ಓಲೆಕಾರ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ | BJP Janasankalpa Yatre | ರಾಜ್ಯಕ್ಕೆ ಬಂಡೆ ಬೇಕಾಗಿಲ್ಲ, ಬಾಹುಬಲಿ ಬೊಮ್ಮಾಯಿ ಬೇಕಿದೆ: ಶ್ರೀರಾಮುಲು