ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಎಂಬುದು ಒಂದು ಜವಾಬ್ದಾರಿಯಾಗಿದೆ. ಇದನ್ನು ಕೇಳಿ ಪಡೆಯುವ ಹುದ್ದೆ ಅಲ್ಲ. ನಾನು ಅವರನ್ನು ಕೇಳಲು ಹೋಗುವುದಿಲ್ಲ. ಇದನ್ನು ದೊಡ್ಡವರು ನಿರ್ಧಾರ ಮಾಡುತ್ತಾರೆ. ಯಾರಿಗೆ, ಯಾವಾಗ, ಯಾವ ಹುದ್ದೆಯನ್ನು ಕೊಡಬೇಕು ಎಂಬುದು ವರಿಷ್ಠರಿಗೆ ಗೊತ್ತಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ (CT Ravi) ಹೇಳಿದರು. ಅವರು ಬಿಜೆಪಿ ರಾಜ್ಯಾಧ್ಯಕ್ಷ (BJP state president) ಹುದ್ದೆಗೆ ಆಯ್ಕೆಯಾಗಿದ್ದೀರಾ ಎಂಬ ಪ್ರಶ್ನೆಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಸಿ.ಟಿ. ರವಿ, ನನ್ನ ಮತ್ತು ಬಿಜೆಪಿ ಸಂಬಂಧ 35 ವರ್ಷಗಳದ್ದು. 1988ರಲ್ಲಿ ನಾನು ಬೂತ್ ಅಧ್ಯಕ್ಷನಾಗಿದ್ದೆ. ಅಲ್ಲಿಂದ ಇಲ್ಲಿಯವರೆಗೆ ಹಲವು ಹುದ್ದೆಗಳನ್ನು ಅಲಂಕರಿಸಿದ್ದೇನೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (Former Chief Minister BS Yediyurappa) ಅವರ ಜತೆ ನಾನು 35 ವರ್ಷಗಳಿಂದಲೂ ಒಡನಾಟವನ್ನು ಹೊಂದಿದ್ದೇನೆ. ಅವರಿಂದ ಹಲವಾರು ಸಂದರ್ಭದಲ್ಲಿ ಆಶೀರ್ವಾದ ಪಡೆಯುತ್ತಲೇ ಬಂದಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: Weather Report : ಕರಾವಳಿಯಲ್ಲಿ ಬಿರುಗಾಳಿ; ಕಡಲಿಗಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ
ದೆಹಲಿಗೆ ಬುಲಾವ್?
ಈ ನಡುವೆ ಸಿ.ಟಿ. ರವಿ ಅವರನ್ನು ದೆಹಲಿಗೆ ಕರೆಯಲಾಗಿದೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ವಿಸ್ತಾರ ನ್ಯೂಸ್ ಅವರನ್ನು ಪ್ರಶ್ನೆ ಮಾಡಿದಾಗ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ನನ್ನನ್ನು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಅಲ್ಲಿ ನನ್ನ ಕಚೇರಿಯನ್ನು ಖಾಲಿ ಮಾಡಲು ಹೊರಟಿರುವೆ. ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಸಂಬಂಧ ಈಗ ಎದ್ದಿರುವ ಊಹಾಪೋಹದ ಬಗ್ಗೆ ನಾನು ಯಾವುದೇ ಕಾರಣಕ್ಕೂ ಈ ಹಂತದಲ್ಲಿ ಏನನ್ನೂ ಹೇಳುವುದಿಲ್ಲ ಎಂದು ತಿಳಿಸಿದರು.
ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಟ್ಟ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ ಅವರು, ಯಾವ ಹುದ್ದೆಯೂ ಶಾಶ್ವತ ಅಲ್ಲ. ಹಲವು ಹುದ್ದೆಗಳಲ್ಲಿ ಸ್ಥಾನ ಕೊಟ್ಟಿದ್ದಾರೆ. ನಾನು ಯಾವಾಗಲೂ ಕಾರ್ಯಕರ್ತನಾಗಿದ್ದೇನೆ. ಆಗಲೂ ಮತ್ತು ಈಗಲೂ ನಾನು ಕಾರ್ಯಕರ್ತ. ಈಗಲೂ ಅದೇ ಸೇವಾಭಾವದಿಂದ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಪ್ರಧಾನಿಯವರೇ ಮಾತನಾಡಿ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಅವರು ಜನರ ಜತೆ ಯಾವತ್ತೂ ಸಂಪರ್ಕದಲ್ಲಿರುತ್ತಾರೆ. ಪ್ರಧಾನಿಯವರ 103ನೇ ಮನ್ ಕಿ ಬಾತ್ ಅನ್ನು ಕೇಳಿದೆವು. ಪ್ರಧಾನಿಯವರು ಯಾವತ್ತೂ ಮನ್ ಕಿ ಬಾತ್‌ನಲ್ಲಿ ರಾಜಕೀಯ ಮಾತನಾಡುವುದಿಲ್ಲ. ದೇಶ – ವಿದೇಶಗಳ ವಿಚಾರವನ್ನು ಮಾತನಾಡುತ್ತಾರೆ. ಪ್ರೇರಣೆ, ಮಾಹಿತಿ ಇದರಿಂದ ಸಿಗುತ್ತದೆ ಎಂದು ಹೇಳಿದ ಸಿ.ಟಿ. ರವಿ, ನೈಸ್ ಅಕ್ರಮ ಬಗ್ಗೆ ಸದನ ಸಮಿತಿ ವರದಿ ಕೊಟ್ಟಿದೆ. ಅರ್ಕಾವತಿ ರೀಡೂ ಅಕ್ರಮ ಬಗ್ಗೆಯೂ ವರದಿ ಕೊಡಲಾಗಿದೆ. ಅದರ ಮೇಲೆ ಸರ್ಕಾರ ತನಿಖೆ ಮಾಡಲಿ ಎಂದು ಹೇಳಿದರು.
ಹೊಂದಾಣಿಕೆ ಮಾಡಿಕೊಳ್ಳದ ರಾಜಕಾರಣಿ ಎಂಬ ಖ್ಯಾತಿ
ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯದ ಬಗ್ಗೆ ಹೆಚ್ಚಿನ ಮಾತುಗಳು ಕೇಳಿ ಬಂದಿದ್ದವು. ಆದರೆ, ಅದರ ಗೋಜಿಗೆ ಹೋಗದ ಹಿನ್ನೆಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸಿ.ಟಿ. ರವಿ ಸೋತಿದ್ದಾರೆ ಎಂಬ ವಿಚಾರ ಚರ್ಚೆಯಲ್ಲಿದೆ. ಈ ವಿಷಯ ಹೈಕಮಾಂಡ್ ಗಮನಕ್ಕೂ ಬಂದಿದೆ ಎನ್ನಲಾಗಿದೆ. ಇನ್ನು ರಾಜ್ಯ ಬಿಜೆಪಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯ ಹುಡುಕಾಟ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ರವಿ ಮಾಡಿದ್ದರು. ಅದರ ಭಾಗವಾಗಿ ಈಚೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಸಿ.ಟಿ. ರವಿ ಭೇಟಿ ಮಾಡಿದ್ದರು.
ಅಚ್ಚರಿ ಮೂಡಿಸಿದ್ದ ಬಿಎಸ್‌ವೈ ಜತೆಗಿನ ಭೇಟಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಜುಲೈ 19ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲೇ ಭೇಟಿಯಾಗಿ ಅಚ್ಚರಿ ಮೂಡಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈ ಇಬ್ಬರು ನಾಯಕರ ನಡುವೆ ಸಂಬಂಧಗಳು ಅಷ್ಟೇನೂ ಚೆನ್ನಾಗಿಲ್ಲ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಈ ಭೇಟಿ ಎಲ್ಲರಲ್ಲೂ ಕುತೂಹಲವನ್ನು ಮೂಡಿಸಿತ್ತು.
ʻʻನಮ್ಮ ಪಕ್ಷದ ಹಿರಿಯ ನಾಯಕರು, ರೈತ ನಾಯಕ, ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯರಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದೆನು. ಸದಾ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುವ ಬಿ.ಎಸ್ ಯಡಿಯೂರಪ್ಪ ಅವರು ಉಪಾಹಾರದ ಸಮಯಕ್ಕೆ ಅವರ ನಿವಾಸಕ್ಕೆ ಹೋದಾಗ ನನ್ನ ಬೆಳಗ್ಗಿನ ಉಪಾಹಾರ ಮುಗಿಸಿದ್ದರೂ ಧವಲಗಿರಿಯ ದೋಸೆಯ ರುಚಿ ಸವಿಯುವವರೆಗೆ ಬಿಡಲಿಲ್ಲ. ವಿಧಾನಸಭಾ ಅಧಿವೇಶನದ ನಂತರ ಲೋಕಸಭಾ ಚುನಾವಣಾ ನಿಮಿತ್ತ ರಾಜ್ಯಾದಂತ್ಯ ಪ್ರವಾಸ ಮಾಡಿ ಕಾರ್ಯಕರ್ತರ ವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತೇನೆ ಎಂಬ ಅವರ ಪಕ್ಷದ ಮೇಲಿನ ಪ್ರೀತಿ ಮತ್ತು ಸಂಘಟನೆ ಮಾಡಬೇಕೆಂಬ ಛಲ ನನಗೆ ಇನ್ನಷ್ಟು ಸಂಘಟನಾತ್ಮಕ ಪ್ರವಾಸ ಮಾಡಬೇಕೆಂದು ಪ್ರೇರಣೆ ನೀಡಿತುʼʼ ಎಂದು ಸಿ.ಟಿ. ರವಿ ಅವರು ಬಿಎಸ್‌ವೈ ಭೇಟಿ ಬಳಿಕ ಬರೆದುಕೊಂಡಿದ್ದರು.
ವಿಜಯೇಂದ್ರ – ಶಾ ಭೇಟಿ ಏಕೆ?
ಸಿ.ಟಿ. ರವಿ ಅವರು ಬಿ.ಎಸ್.ವೈ ಅವರನ್ನು ಭೇಟಿ ಮಾಡಿರುವುದು, ಆಶೀರ್ವಾದ ಕೇಳಿರುವುದು, ಕಾಲಿಗೆ ಬಿದ್ದಿರುವುದು. ಹಾಗೂ ಈಗ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಟ್ಟಿರುವುದನ್ನು ಗಮನಿಸಿದರೆ ಕೇಂದ್ರ ನಾಯಕರು ಸಿ.ಟಿ. ರವಿ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯನ್ನು ಕೊಡುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: Karnataka Politics : ನಿಗಮ – ಮಂಡಳಿ ಮಧ್ಯದೊಳಗೆ ಶುರುವಾಗಿದೆ ಕೈ ಶಾಸಕರ ಲಾಬಿ!
ಹೀಗಾಗಿಯೇ ಈ ಹುದ್ದೆಯನ್ನು ಕೊಡುವ ಮುನ್ನ ಬಿ.ಎಸ್. ಯಡಿಯೂರಪ್ಪ ಅವರ ಕೃಪೆಗೆ ಪಾತ್ರರಾಗಿ ಬನ್ನಿ ಎಂಬ ಸೂಚನೆ ಕೊಟ್ಟಿರುವ ಭಾಗವಾಗಿ ಅವರು ಭೇಟಿ ಮಾಡಿದ್ದಾರೆಯೇ ಎಂಬ ಚರ್ಚೆ ಹುಟ್ಟಿಕೊಂಡಿದೆ. ಇದಕ್ಕೆ ಪೂರಕವಾಗಿಯೇ ಜುಲೈ 20ರಂದು ಬಿ.ವೈ. ವಿಜಯೇಂದ್ರ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರೆಸಿಕೊಂಡಿರಬಹುದು ಎಂಬ ರಾಜಕೀಯ ಮಾತುಗಳು ಹರಿದಾಡುತ್ತಿವೆ.