ಬೆಂಗಳೂರು: ರಾಜ್ಯದ ಹಲವು ಕಡೆ ಬಿಜೆಪಿ ಟಿಕೆಟ್ (BJP Ticket) ಸಿಗಬಹುದು ಎಂಬ ವಿಶ್ವಾಸ ಇಟ್ಟುಕೊಂಡವರು, ಹಳೆಯ ಹುಲಿಗಳಿಗೆ ಮುಖಭಂಗವಾಗಿದೆ. ಟಿಕೆಟ್ ತಪ್ಪಿದ ಅಭ್ಯರ್ಥಿಗಳಿಗೆ ಈಗ ಕಾಂಗ್ರೆಸ್ ಬಲೆ ಬೀಸಿದೆ. ಇನ್ನು ಕೆಲವರು ತಾವಾಗಿಯೇ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ.
ಮಾಜಿ ಸಚಿವ ಲಕ್ಷ್ಮಣ ಸವದಿಗೆ ಕಾಂಗ್ರೆಸ್ ಗಾಳ ಬೀಸಿದೆ. ಬೆಳಗಾವಿಯಲ್ಲಿ ಅವರಿಗೆ ಟಿಕೆಟ್ ತಪ್ಪಿಸುವ ಪ್ರಯತ್ನ ನಡೆದ ಮೊದಲ ದಿನದಿಂದಲೂ ಡಿಕೆಶಿ ಆಪ್ತರಾದ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಿರಂತರ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್‌ಗೆ ಬರುವಂತೆ ಅಹ್ವಾನ ನೀಡಲಾಗಿದೆ. ಅಥಣಿ ಟಿಕೆಟ್ ಮಿಸ್ ಆಗಿರುವುದರಿಂದ ಸವದಿ ಕೈ ಸೇರ್ಪಡೆ ಇಂದು ಅಧಿಕೃತ ಘೋಷಣೆ ಸಾಧ್ಯತೆ ಇದೆ ಎನ್ನಲಾಗಿದೆ. ಗುರುವಾರ ನಿರ್ಧಾರ ಪ್ರಕಟಿಸುವುದಾಗಿ ಸವದಿ ಅವರು ಕೂಡ ಹೇಳಿದ್ದಾರೆ.
ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಹಾಲಿ ಶಾಸಕರಾದ ಶೇಖರ್‌ಗೆ ಪಕ್ಷ ಟಿಕೆಟ್ ತಪ್ಪಿಸಿದ್ದು, ಹೀಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ನಿರ್ಧಾರ ಮಾಡಿದ್ದಾರೆ. ಈ ನಡುವೆ ಕಾಂಗ್ರೆಸ್‌ನಿಂದಲೂ ಗೂಳಿಹಟ್ಟಿ ಶೇಖರ್‌ಗೆ ಆಫರ್ ಇದೆ. ಇಂದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಬಗ್ಗೆ ಗೂಳಿಹಟ್ಟಿ ನಿರ್ಧಾರ ಪ್ರಕಟಿಸಲಿದ್ದಾರೆ.
ಮಾಜಿ ಸಚಿವ ಆರ್. ಶಂಕರ್ ಬಿಜೆಪಿಗೆ ಗುಡ್ ಬೈ ಹೇಳಿ ಪಕ್ಷೇತರರಾಗಿ ಕಣಕ್ಕೆ ಇಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ರಾಣೇಬೆನ್ನೂರು ವಿಧಾನ ಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಆರ್ ಶಂಕರ್ ಅವರಿಗೆ ಟಿಕೆಟ್ ಸಿಗದೆ ಮತ್ತೆ ಅರುಣ್ ಕುಮಾರ್‌ಗೆ ನೀಡಿದ ಹಿನ್ನೆಲೆ ಬಂಡಾಯ ಅಭ್ಯರ್ಥಿಯಾಗಿ ಶಂಕರ್ ಕಣಕ್ಕೆ ಇಳಿಯಲಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ, ಜಯನಗರದಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಎನ್.ಆರ್ ರಮೇಶ್ ಅಭಿಮಾನಿಗಳಿಂದ ಪ್ರತಿಭಟನೆ. ನಡೆದಿದೆ. ಸಚಿವ ಆರ್. ಅಶೋಕ್ ಹಾಗೂ ವಿಜಯೇಂದ್ರ ವಿರುದ್ಧ ಜಯನಗರದ ಎನ್.ಆರ್ ರಮೇಶ್ ಮನೆ ಎದುರು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ವಿ.ಸೋಮಣ್ಣ ಅವರಿಗೆ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಆದರೆ ಗೋವಿಂದರಾಜನಗರದಲ್ಲಿ ಅಭಿಮಾನಿಗಳು ತಮಗೆ ಸೋಮಣ್ಣ ಬೇಕು ಎಂದು ಆಗ್ರಹಿಸಿದ್ದಾರೆ.
ಅಫಜಲಪುರದಲ್ಲಿ ಮಾಲೀಕಯ್ಯ ಗುತ್ತೆದಾರ್ ಅವರಿಗೆ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಸಹೋದರ ನಿತಿನ್ ಗುತ್ತೆದಾರ್ ತೊಡೆ ತಟ್ಟಿದ್ದಾರೆ. ಇವರು ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ.
ಇನ್ನೊಂದೆಡೆ ಟಿಕೆಟ್ ಕೈ ತಪ್ಪಿಸಿಕೊಂಡಿರುವ ಜಗದೀಶ್ ಶೆಟ್ಟರ್ ಅವರು ಕೂಡ ಮುನಿಸಿಕೊಂಡಿದ್ದು, ಇಂದು ವರಿಷ್ಠರನ್ನು ಭೇಟಿಯಾಗಲು ದೆಹಲಿಗೆ ತೆರಳುವ ನಿರ್ಧಾರ ಪ್ರಕಟಿಸಿದ್ದಾರೆ. ʼʼರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ ಬಂದ ಮೇಲೆ ನನ್ನ ನಿರ್ಧಾರ ಪ್ರಕಟ ಮಾಡುತ್ತೇನೆ. ವರಿಷ್ಠರಿಂದ ನನಗೆ ಸಕಾರಾತ್ಮಕ ಸ್ಪಂದನೆ ಸಿಗುವ ಭರವಸೆ ಇದೆʼʼ ಎಂದಿದ್ದಾರೆ.