Site icon Vistara News

BJP Ticket List: ಇಂದು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ? 150ಕ್ಕೂ ಹೆಚ್ಚು ಹೆಸರು ಫೈನಲ್

Shaha_Modi_Nada @ Himachal pradesh

ನವ ದೆಹಲಿ: ವಿಧಾನ ಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಸಂಬಂಧಿಸಿದಂತೆ ದೆಹಲಿಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ನಿನ್ನೆ ಸಭೆ ನಡೆದಿದ್ದು, 150ಕ್ಕೂ ಅಧಿಕ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಇಂದು ಯಾವುದೇ ಕ್ಷಣದಲ್ಲಾದರೂ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಘೋಷಿಸುವ ಸಾಧ್ಯತೆ ಇದೆ.

ಪ್ರಧಾನ ಮಂತ್ರಿ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ನೇತೃತ್ವದಲ್ಲಿ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಿನ್ನೆ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಯಿತು. 224 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿದೆ. 120ರಿಂದ 150 ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆ. ಮತ ತರುವ ವರ್ಚಸ್ಸು, ಆಂತರಿಕ ಸಮೀಕ್ಷೆಯ ಫಲಿತಾಂಶ ಆಧರಿಸಿ ಟಿಕೆಟ್ ಫೈನಲ್ ಮಾಡಲಾಗಿದೆ.

ಇದರಲ್ಲಿ ಅಚ್ಚರಿ ಅಭ್ಯರ್ಥಿಗಳಿಗೆ ಮನ್ನಣೆ ನೀಡಲಾಗಿದೆ. ಮಾದ್ಯಮ, ವಕೀಲ ವೃತ್ತಿ, ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡವರಿಗೂ ಈ ಬಾರಿ ಟಿಕೆಟ್ ನೀಡಲಾಗುತ್ತಿದೆ. ಗುಜರಾತ್ ಮಾದರಿಯಲ್ಲಿ ಕೆಲವು ಶಾಸಕರಿಗೆ ಖೊಕ್ ನೀಡಲಾಗುತ್ತಿದೆ. 10ಕ್ಕೂ ಅಧಿಕ ಶಾಸಕರಿಗೆ ಟಿಕೆಟ್ ಮಿಸ್ ಆಗಲಿದೆ. ವಿವಿಧ ವಲಯಗಳಲ್ಲಿ ದುಡಿದು ಪಕ್ಷದ ಸಿದ್ಧಾಂತದ ಪರ ಇದ್ದವರಿಗೆ ಮಣೆ ಹಾಕಲಾಗುತ್ತಿದೆ. ಎಂದು ಹೇಳಲಾಗಿದೆ.

ಸುರೇಶ್ ಕುಮಾರ್, ಮಾಡಾಳು ವಿರೂಪಾಕ್ಷಪ್ಪ, ಲಾಲಾಜಿ ಮೆಂಡನ್, ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್, ಮೂಡಿಗೆರೆ ಕುಮಾರಸ್ವಾಮಿ, ಬೋಪಯ್ಯ, ಕನಕಗಿರಿ ದಡೇಸಗೂರು, ಕಲಘಟಗಿ ಹಾಲಿ ಶಾಸಕ ನಿಂಬಣ್ಣನವರ್, ರಾಣೇಬೆನ್ನೂರು ಶಾಸಕ ಅರುಣ್ ಕುಮಾರ್, ಚಿತ್ರದುರ್ಗದ ತಿಪ್ಪಾರೆಡ್ಡಿಗೆ ಟಿಕೆಟ್‌ ಮಿಸ್‌ ಆಗಬಹುದು ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಕಟ್ಟಿ ಹಾಕುವುದೇ ಪ್ರಮುಖ

ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸೀಟ್‌ಗಳಲ್ಲಿ ಗೆಲುವು ಸಾಧಿಸಬೇಕಾದರೆ ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಕಟ್ಟಿ ಹಾಕುವುದು ಅಗತ್ಯ; ಜೊತೆಗೆ ಸೋಲಿನ ರುಚಿ ತೋರಿಸಬೇಕು ಎಂದು ಕಂಡುಕೊಂಡಿರುವ ಬಿಜೆಪಿ, ಆ ನಿಟ್ಟಿನಲ್ಲಿ ನಿರ್ಣಾಯಕ ತಂತ್ರ ಹೊಸೆಯಲಿದೆ.

ಸಿದ್ದರಾಮಯ್ಯನವರಿಗೆ ಅಹಿಂದ, ಅದರಲ್ಲೂ ಕುರುಬ ಮತ್ತು ಅಲ್ಪಸಂಖ್ಯಾತ ಮತಗಳನ್ನು ಹೆಚ್ಚಾಗಿ ಸೆಳೆಯುವ ಸಾಮರ್ಥ್ಯವಿದೆ. ಈ ಸಮುದಾಯದ ಮತಗಳು ಸುಮಾರು 80 ಕ್ಷೇತ್ರದಲ್ಲಿ ನಿರ್ಣಾಯಕವಾಗಿವೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ರಾಜ್ಯಾದ್ಯಂತ ಪ್ರಚಾರಕ್ಕೆ ಬ್ರೇಕ್ ಹಾಕಬೇಕು. ಸಿದ್ದರಾಮಯ್ಯ ತಮ್ಮ ಕ್ಷೇತ್ರಕ್ಕೇ ಸೀಮಿತರಾದರೆ ಇತರ ಕಡೆ ಕೈ ಅಭ್ಯರ್ಥಿಗಳಿಗೆ ಬೀಳುವ ಮತಗಳು ಕಡಿಮೆ ಆಗಲಿವೆ. ಹಾಗಾಗಿ ಸಿದ್ದು ಸ್ಪರ್ಧೆ ಮಾಡುವ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕೆ ಇಳಿಸಲು ಮೋದಿ ಚಿಂತಿಸಿದ್ದಾರೆ. ಹೀಗಾಗಿ ಸಿದ್ದು ಸ್ಪರ್ಧೆ ಘೋಷಣೆ ಆಗಿರುವ ವರುಣಾದಲ್ಲಿ ಬಿಜೆಪಿ ಅಭ್ಯರ್ಥಿ ಸಚಿವ ವಿ. ಸೋಮಣ್ಣನವರನ್ನು ಇಳಿಸಲು, ಸಿದ್ದು ಸ್ಪರ್ಧೆ ಮಾಡಬಹುದಾದ ಕೋಲಾರದಲ್ಲಿ ಮಾಜಿ ಸಚಿವ ಈಶ್ವರಪ್ಪನವರನ್ನು ಕಣಕ್ಕೆ ಇಳಿಸಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: BJP Foundation Day: ಪ್ರಜಾಪ್ರಭುತ್ವದ ಗರ್ಭದಿಂದ ಹುಟ್ಟಿದ ಪಕ್ಷ ಬಿಜೆಪಿ, 2024ರಲ್ಲಿ ನಮ್ಮ ಗೆಲುವು ನಿಶ್ಚಿತ: ಪ್ರಧಾನಿ ಮೋದಿ

Exit mobile version